ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಕರ್ಮ ಸಮುದಾಯ ಅಭಿವೃದ್ಧಿಗೆ ಬದ್ಧ

Last Updated 6 ಫೆಬ್ರುವರಿ 2012, 9:30 IST
ಅಕ್ಷರ ಗಾತ್ರ

ಉಡುಪಿ: ವಿವಿಧತೆಯಲ್ಲಿ ಏಕತೆಯನ್ನು ಕಾಣುವ ನಮ್ಮ ರಾಷ್ಟ್ರದಲ್ಲಿ ವಿಶ್ವಕರ್ಮ ಸಮುದಾಯ ಅನಾದಿಕಾಲದಿಂದಲೂ ನಮ್ಮ ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ತನ್ನದೇ ಆದ ಕೊಡುಗೆಗಳನ್ನು ನೀಡುತ್ತ ಬಂದಿದ್ದು, ದೇಶಕಟ್ಟುವ ಕಾಯಕ ಮಾಡಿದ ಈ ಸಮಾಜದ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಹಾಗೂ ಈ ಸಮಾಜದ ಎಲ್ಲ ಬೇಡಿಕೆಗಳನ್ನೂ ಹಂತ ಹಂತವಾಗಿ ಈಡೇರಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಇಲ್ಲಿ ಭರವಸೆ ನೀಡಿದರು.

ವಿಶ್ವಕರ್ಮ ಒಕ್ಕೂಟದ ಬೆಳ್ಳಿಹಬ್ಬದ ಪ್ರಯುಕ್ತ ಭಾನುವಾರ ಕಲ್ಸಂಕದ ರಾಯಲ್ ಗಾರ್ಡನ್ಸ್‌ನಲ್ಲಿ ಆಯೋಜಿಸಿದ್ದ ವಿಶ್ವಕರ್ಮ ಸಮ್ಮೇಳನವನ್ನು ಶಿಲ್ಪಿ ಲಕ್ಷ್ಮಿನಾರಾಯಣ ಆಚಾರ್ಯ ನಿರ್ಮಿಸಿದ್ದ ಬ್ರಹ್ಮರಥದ ಮಾದರಿ ಆಕರ್ಷಕ ಮರದ ರಥವನ್ನು ಎಳೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಪರಂಪರಾಗತವಾಗಿ ತಮ್ಮ ಸಾಂಪ್ರದಾಯಿಕ ಕುಲಕಸುಬಾಗಿರುವ ಚಿನ್ನದ ಕೆಲಸವನ್ನು ನಂಬಿಕೊಂಡು ಜೀವನ ಸಾಗಿಸುವ ಸುಮಾರು 2.5 ಲಕ್ಷ ಕುಟುಂಬಗಳು ನಮ್ಮ ರಾಜ್ಯದಲ್ಲಿವೆ. ತಮ್ಮ ಸಾಂಪ್ರದಾಯಿಕ ಚಿನ್ನದ ಕುಸುರಿ ಕೆಲಸ, ವೃತ್ತಿ ನಿಷ್ಠೆಗಳಿಂದ ಇವರು ಪ್ರಸಿದ್ಧರು. ಸಮಾಜದ ಸೌಂದಯ್ಯ ಪ್ರಜ್ಞೆ ಹೆಚ್ಚಿಸುವ ಕುಶಲಕರ್ಮಿಗಳು ಇವರು ಎಂದು ಸಿಎಂ ಬಣ್ಣಿಸಿದರು.

ತಾವು ಮುಖ್ಯಮಂತ್ರಿಯಾಗಿ ಇಲ್ಲಿಯವರೆಗೆ ನಡೆದು ಬರಲು ವಿಶ್ವಕರ್ಮ ಸಮುದಾಯ ಮಾಡಿದ ಸಹಾಯ ಎಷ್ಟು ಕಾರಣ ಎನ್ನುವುದನ್ನು ಇದೇ ಸಂದರ್ಭದಲ್ಲಿ ಸಿಎಂ ಹೇಳಿಕೊಂಡರು. 1991ರಲ್ಲಿ ತಾವು ಪುತ್ತೂರಿನಲ್ಲಿ ಚುನಾವಣೆಗೆ ನಿಂತಾಗ 42 ಸಾವಿರ ಮತ ಪಡೆದು ಸೋಲುಣ್ಣಬೇಕಾಯಿತು. ಆ ಸಂದರ್ಭದಲ್ಲಿ ವಿಶ್ವಕರ್ಮ ಸಮುದಾಯದ ಅಧ್ಯಕ್ಷರೊಬ್ಬರು ಕಣ್ಣೀರು ಹಾಕಿದ್ದರು.

ಮುಂದಿನ ಸಲ ನೀವು ಸ್ಪರ್ಧಿಸಿ ಖಂಡಿತ ಗೆಲ್ಲಿಸಿಕೊಡುತ್ತೇವೆ ಎಂದರು. ಅದರಂತೆ 1995ರಲ್ಲಿ ತಾವು ಪುತ್ತೂರಿನಲ್ಲಿ ಗೆಲುವು ಸಾಧಿಸಲು ಈ ಸಮಾಜದ ಕಾರ್ಯಕರ್ತರ ಪರಿಶ್ರಮ ಕಾರಣವಾಗಿತ್ತು. ಅಂದಿನ ಗೆಲುವು ತಮ್ಮನ್ನು ಇಲ್ಲಿಯವರೆಗೆ ತಂದು ನಿಲ್ಲಿಸಿದೆ, ಹೀಗಾಗಿ ಈ ಸಮುದಾಯಕ್ಕೆ ತಮ್ಮ ಕೃತಜ್ಞತೆ ಯಾವಾಗಲೂ ಸಲ್ಲುತ್ತದೆ ಎಂದರು.

ಶಿಲ್ಪಕಲಾ ಅಕಾಡೆಮಿಗೆ ರೂ.1 ಕೋಟಿ ಅನುದಾನ:
ರಾಜ್ಯದಲ್ಲಿ ಶಿಲ್ಪಕಲೆ ಮತ್ತು ಗುರುಕುಲ ಸ್ಥಾಪನೆಗೆ ಹೆಚ್ಚಿನ ಒತ್ತು ನೀಡಬೇಕು ಎನ್ನುವ ಉದ್ದೇಶದಿಂದ ಸರ್ಕಾರ ಈಗಾಗಲೇ ರೂ.5 ಕೋಟಿ ಅನುದಾನ ನೀಡಿದೆ. ಆದರೆ ಈ ಭಾಗಕ್ಕೆ ಅನುದಾನ ದೊರಕಿಲ್ಲ ಎನ್ನುವ ಮಾತು ಕೇಳಿ ಬಂದಿದೆ. ಪ್ರಸ್ತುತ ಶಿಲ್ಪಕಲಾ ಅಕಾಡೆಮಿಗೆ ರೂ.1 ಕೋಟಿ ಅನುದಾನವನ್ನು ತತ್‌ಕ್ಷಣವೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ನೀಡಿ ಸೋಮವಾರವೇ ಅದನ್ನು ಶಿಲ್ಪಕಲಾ ಅಕಾಡೆಮಿಗೆ ಹಸ್ತಾಂತರಿಸಿ ಅದನ್ನು ಸೂಕ್ತವಾಗಿ ಖರ್ಚು ಮಾಡುವ ಬಗ್ಗೆ ಮುಕ್ತ ಸ್ವಾತಂತ್ರ್ಯ ನೀಡಲಾಗುವುದು ಎಂದು ಮುಖ್ಯಮಂತ್ರಿ ಅವರು ಭರವಸೆ ನೀಡಿದರು.

 ಶೇ 1ರ ಬಡ್ಡಿದರಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಸಾಲ ನೀಡುವ ವ್ಯವಸ್ಥೆಯಾಗಬೇಕು, ಪ್ರತ್ಯೇಕ ನಿಗಮ ಮಂಡಳಿ ರಚಿಸಬೇಕು ಎನ್ನುವುದು ಸೇರಿದಂತೆ ಹಲವು ಬೇಡಿಕೆಗಳ ಪಟ್ಟಿಯನ್ನು ತಮಗೆ ನೀಡಲಾಗಿದೆ. ಮನವಿ ಪತ್ರದಲ್ಲಿ ಸಲ್ಲಿಸಿದ ಬೇಡಿಕೆಗಳೆಲ್ಲವೂ ಈಡೇರಿಸಲು ಸಾಧ್ಯವಾಗುವಂತಿದ್ದು, ಶೀಘ್ರವೇ ಅವುಗಳನ್ನು ಈಡೇರಿಸಲಾಗುವುದು.

ಆದರೆ ವಿಧಾನಮಂಡಲ ಅಧಿವೇಶನ ನಡೆಯುತ್ತಿರುವ ಕಾರಣ ಯಾವುದೇ ಹೊಸ ಯೋಜನೆಗಳನ್ನು ನಾವು ಈ ವೇದಿಕೆಯಲ್ಲಿ ಪ್ರಕಟಿಸುವುದಿಲ್ಲ, ಬದಲಿಗೆ ಈ ಒಕ್ಕೂಟದ ಮುಖಂಡರು ಅಧಿವೇಶನದ ಬಳಿಕ ಬೆಂಗಳೂರಿಗೆ ಬಂದು ತಮ್ಮಂದಿಗೆ ಚರ್ಚಿಸಿದಲ್ಲಿ ಅಗತ್ಯವಾದ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.

ಆನೆಗೊಂದಿ ಸಂಸ್ಥಾನದ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ ಮಾತನಾಡಿ, ಕರಾವಳಿ ಭಾಗದಲ್ಲಿ ಎರಡು ಸಾಗರ ಸಂಗಮವಾಗಿದೆ, ಒಂದು ಜಲಸಾಗರ, ಇನ್ನೊಂದು ವಿಶ್ವಕರ್ಮ ಬ್ರಾಹ್ಮಣರ ಜನಸಾಗರ ಇಲ್ಲಿ ಸೇರಿದೆ. ಯಾವುದೇ ಒಕ್ಕೂಟಕ್ಕೆ ಸಂಘಟನೆ ಅತಿಮುಖ್ಯ. ಸಂಘಟನೆ ಬಲವಾಗಿ ಇಲ್ಲದೇ ಇದ್ದಲ್ಲಿ ಬೆಲೆ ಇಲ್ಲ. ಇಂಥದ್ದೊಂದು ಅಭೂತಪೂರ್ವ ಜನಸಾಗರ ಇಲ್ಲಿ ಸೇರಿರುವುದರಿಂದ ಈ ಸಮುದಾಯಕ್ಕೆ ಇನ್ನಷ್ಟು ಬಲ ಬಂದಂತಾಗಿದೆ ಎಂದರು.

ಮನವಿ ಪತ್ರ ಸಲ್ಲಿಕೆ: ತಮ್ಮ ಹಲವು ಬೇಡಿಕೆಗಳ ಮನವಿ ಪತ್ರವನ್ನು ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಯಿತು. ಚಿತ್ರಕಲಾ ಮತ್ತು ವಸ್ತುಪ್ರದರ್ಶನದ ಮಳಿಗೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ವಿ.ಎಸ್.ಆಚಾರ್ಯ ಉದ್ಘಾಟಿಸಿದರು. ಗುರು ಸುಜ್ಞಾನಮೂರ್ತಿ ಸ್ವಾಮೀಜಿ ಆಶೀರ್ವಚನ ನೀಡಿದರು.

ಒಕ್ಕೂಟದ ಅಧ್ಯಕ್ಷ ಅಲೆವೂರು ಯೋಗೀಶ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಸಚಿವ ಕೃಷ್ಣ ಜಿ.ಪಾಲೇಮಾರ್, ಶಾಸಕರಾದ ರಘುಪತಿ ಭಟ್, ಲಾಲಾಜಿ ಮೆಂಡನ್, ಉದ್ಯಮಿ ಪ್ರಮೋದ್ ಮಧ್ವರಾಜ್, ನಗರಸಭೆ ಅಧ್ಯಕ್ಷ ಕಿರಣ್ ಕುಮಾರ್, ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷ ಡಾ.ಜಿ.ಜ್ಞಾನಾನಂದ, ಗೌರವಾಧ್ಯಕ್ಷ ಎಸ್.ವಿ.ಆಚಾರ್ಯ, ಉಪಾಧ್ಯಕ್ಷ ಯು.ಕೆ.ಎಸ್.ಆಚಾರ್ಯ, ಗೋಪಾಲಕೃಷ್ಣ ಆಚಾರ್ಯ, ದಿನೇಶ್ ಆಚಾರ್ಯ ಪಡುಬಿದ್ರಿ, ಜನಾರ್ದನ ಆಚಾರ್ಯ ಮತ್ತಿತರರಿದ್ದರು.

`ಸಮ್ಮೇಳನಕ್ಕೆ ಬಾರದಿದ್ದರೆ ಆಭಾಸವಾಗುತ್ತಿತ್ತು~
ವಿಶ್ವಕರ್ಮ ಸಮ್ಮೇಳನಕ್ಕೆ ಭಾನುವಾರ ಜನಸಾಗರವೇ ಹರಿದುಬಂದಿತ್ತು. ಬಿಳಿ ಅಂಗಿ,ಲುಂಗಿ, ಕೊರಳಿಗೆ ಶಾಲು ಹಾಕಿಕೊಂಡಿದ್ದ ಜನರೇ ಎಲ್ಲಡೆ ಕಾಣುತ್ತಿದ್ದರು. ಪುರುಷರು-ಮಹಿಳೆಯರು ಸೇರಿ ಸುಮಾರು  40-50 ಸಾವಿರ ಜನರಿಂದ ಕಿಕ್ಕಿರಿದಿದ್ದ ಈ ಸಮ್ಮೇಳನವನ್ನು ಕಂಡು ಸಂಭ್ರಮಿಸಿದ ಮುಖ್ಯಮಂತ್ರಿ `ಇಂಥದ್ದೊಂದು ಬೃಹತ್ ಸಮಾವೇಶವನ್ನು ಈ ಭಾಗದಲ್ಲಿ ಕಂಡೇ ಇರಲಿಲ್ಲ~ ಎಂದರು.

`ಕೆಲಸ ಕಾರ್ಯಗಳ ಒತ್ತಡದಿಂದ ನಾನು ಈ ಸಮ್ಮೇಳನಕ್ಕೆ ಬಾರದೇ ಇರಲು ನಿರ್ಧರಿಸಿ ಸಚಿವ ಆಚಾರ್ಯರಿಗೆ ನೀವೇ ನಿಭಾಯಿಸಿದರಾಗದೇ ಎಂದು ಕೇಳಿದ್ದೆ. ಆದರೆ ಅವರು ನೀವು ಬಾರದೇ ಇದ್ದರೆ ನಂತರ ಪಶ್ಚಾತ್ತಾಪ ಪಡುತ್ತೀರಿ ಎಂದು ತಮಗೆ ಹೇಳಿದರು. ಈಗ ಇಲ್ಲಿಗೆ ಬಂದಿದ್ದು ಎಷ್ಟು ಖುಷಿ ನೀಡಿದೆ ಎಂದರೆ ಒಂದು ವೇಳೆ ಬಾರದೇ ಇದ್ದಿದ್ದರೆ ಆಭಾಸವಾಗುತ್ತಿತ್ತು, ಜತೆಗೆ ಈ ಸಮಾಜಕ್ಕೆ ಎಷ್ಟು ದೊಡ್ಡ ಅನ್ಯಾಯ ಮಾಡುತ್ತಿದ್ದೆ ಎಂದು ಅನ್ನಿಸುತ್ತಿತ್ತು~ ಎಂದು ಸದಾನಂದ ಗೌಡರು ತಿಳಿಸಿದರು.

ಇದೇ ಸಂದರ್ಭದಲ್ಲಿ ಉಡುಪಿಯ ನಿತ್ಯಾನಂದ ಆಚಾರ್ಯ ರಚಿಸಿದ  ಡಿವಿಎಸ್ ಅವರ `ರಜತೋದ್ಭವ ಮುಖ್ಯಮಂತ್ರಿ~ ಬೆಳ್ಳಿಯ ಪ್ರತಿಕೃತಿಯನ್ನು ನೀಡಿ ಗೌರವಿಸಲಾಯಿತು. ಈ ಕಾಣಿಕೆಯನ್ನು ಬೆಂಗಳೂರಿನಲ್ಲಿ ತಮ್ಮ ಗೃಹ ಕಚೇರಿಯಲ್ಲಿ ಇಡುವುದಾಗಿ ಸಿಎಂ ಅವರು ಹರ್ಷದಿಂದ ನುಡಿದರು.

`ಗೋಹತ್ಯಾ ನಿಷೇಧ ಕಾಯಿದೆ ಜಾರಿ ಶೀಘ್ರ~
ರಾಜ್ಯದಲ್ಲಿ ಗೋಹತ್ಯಾ ನಿಷೇಧ ಕಾಯಿದೆ ಶೀಘ್ರವೇ ಜಾರಿಗೆ ಬರಲಿದೆ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರು ಇಲ್ಲಿ ತಿಳಿಸಿದರು. ಹಿಂದೂ ರಾಷ್ಟ್ರದ ಪರಂಪರೆಯಂತೆ ಮತಾಂತರ, ಗೋಹತ್ಯೆ, ಭಯೋತ್ಪಾದನೆ ಪಿಡುಗನ್ನು ತೊಡೆದುಹಾಕಬೇಕು ಎನ್ನುವುದು ನಮ್ಮ ಸರ್ಕಾರದ ನಿಲುವಾಗಿದೆ ಎಂದರು.

ಈಗಾಗಲೇ ನಮ್ಮ ಸರ್ಕಾರದ ಮಂಡಿಸಿದ `ಗೋಹತ್ಯಾ ನಿಷೇಧ ಕಾನೂನು~ ರಾಜ್ಯಪಾಲರಿಂದ ರಾಷ್ಟ್ರಪತಿಯವರ ಬಳಿಗೆ ತೆರಳಿ ಅಂಕಿತಕ್ಕಾಗಿ ಕಾಯುತ್ತಿದೆ. ಅಲ್ಲಿ ಕೂಡ ಶೀಘ್ರವೇ ಈ ಮಸೂದೆಗೆ ಅಂಕಿತ ಬೀಳುವ ಸೂಚನೆ ಸಿಕ್ಕಿದೆ. ಕೇವಲ ಒಂದು ವಾಕ್ಯದ ಬದಲಾವಣೆಗೆ ಸೂಚನೆ ಬಂದಿದೆ. ಅದನ್ನು ರಾಜ್ಯ ಸರ್ಕಾರದ ಮಾಡಿ ಕಳುಹಿಸಿದರೆ ಈ ಮಸೂದೆಗೆ ಶೀಘ್ರವೇ ಅಂಕಿತ ಬೀಳಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT