ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಮಟ್ಟದಲ್ಲಿ ಕೀರ್ತಿ ಗಳಿಸಿದ ಯುವ ಸಂಶೋಧಕರು

Last Updated 30 ಮೇ 2012, 19:30 IST
ಅಕ್ಷರ ಗಾತ್ರ

ತಂತ್ರಜ್ಞಾನ ಬೆಳೆದಷ್ಟೂ ಅದಕ್ಕೆ ಹೊಸ ಸವಾಲುಗಳು ಎದುರಾಗುತ್ತಲೇ ಇರುತ್ತವೆ. ಈ ಸವಾಲುಗಳಿಗೆ ಪರಿಹಾರ ಹುಡುಕುವುದೂ ಮತ್ತೊಂದು ಸವಾಲು. ಇಂತಹ ಹಲವು ಸವಾಲು-ಸಮಸ್ಯೆಗಳಿಗೆ ಅಸ್ತಿತ್ವದಲ್ಲಿರುವ ತಂತ್ರಜ್ಞಾನದ ಮೂಲವನ್ನೇ ಕೆದಕಿ ಪರಿಹಾರ ಕಂಡುಹಿಡಿಯುವಲ್ಲಿ ಯಶಸ್ವಿಯಾದ ನೂರಾರು ಯುವ ಅನ್ವೇಷಕರಿದ್ದಾರೆ.ಅವರಲ್ಲಿ ವಿಶ್ವಮಟ್ಟದಲ್ಲಿ ಕೀರ್ತಿ ಗಳಿಸಿದ ಕೆಲ ಯುವ ಸಂಶೋಧಕರ ಮಾಹಿತಿ ಇಲ್ಲಿದೆ...
_____________________________________________________

ಫಾನ್ ಯಂಗ್

ಗಾಯ ಅಥವಾ ಕಾಯಿಲೆಗಳಿಂದ ರಕ್ತನಾಳಗಳು ಹಾನಿಗೊಳಗಾಗುವುದು ಸಹಜ. ಇದು ವ್ಯಕ್ತಿಯ ಜೀವಕ್ಕೆ ಅಪಾಯ ತಂದೊಡ್ಡುವ ಸಾಧ್ಯತೆ ಅಧಿಕ. ಇಂತಹ ಸಮಸ್ಯೆಯನ್ನು ಎದುರಿಸಲು ಈ ಹಿಂದೆ ಜೀವಕೋಶದೊಳಗೆ ಜೈವಿಕ ಅಂಶಗಳನ್ನು ಉತ್ಪಾದಿಸಬಲ್ಲ ಪ್ರೋಟೀನ್‌ಗಳನ್ನು ಸಾಗಿಸಲು ವಿಜ್ಞಾನಿಗಳು ವೈರಸ್‌ಗಳನ್ನು ಅವಲಂಬಿಸಿದ್ದರು.

ಆದರೆ ಈ ವಿಧಾನದಿಂದ ವ್ಯಕ್ತಿಯ ದೇಹ ಮತ್ತಷ್ಟು ಹಾನಿಗೊಳಗಾಗುವ ಸಂಭವವೂ ಇರುತ್ತಿತ್ತು. ಈ ಕ್ಲಿಷ್ಟಕರ ಸಮಸ್ಯೆಗೆ ಪರಿಹಾರ ನೀಡಿದ್ದು ಸ್ಟಾನ್‌ಫೋರ್ಡ್‌ನ ಬಯೊಎಂಜಿನಿಯರಿಂಗ್ ಮತ್ತು ಆರ್ಥೊಪೆಡಿಕ್ ಸರ್ಜರಿ ವಿಭಾಗದ ಪ್ರೊಫೆಸರ್ ಫಾನ್ ಯಂಗ್. ಈಕೆ ಅಭಿವೃದ್ಧಿ ಪಡಿಸಿದ್ದು ದೇಹದಲ್ಲೇ ರಕ್ತನಾಳಗಳು ತಮ್ಮನ್ನು ತಾವು ಸರಿಪಡಿಸಿಕೊಳ್ಳಲು ಸಾಧ್ಯವಾಗುವಂತಹ  ವಿಧಾನವನ್ನು.

ಅವರ ತಂತ್ರಜ್ಞಾನದಲ್ಲಿ, ಪ್ರಯೋಗಾಲಯದಲ್ಲಿ ರಕ್ತನಾಳಗಳ ಬೆಳವಣಿಗೆಯನ್ನು ಉತ್ತೇಜಿಸುವ ಪ್ರೋಟೀನ್‌ಅನ್ನು ಉತ್ಪಾದಿಸಲು ಜೀವಕೋಶಗಳನ್ನು ಮರು ಪ್ರೋಗ್ರಾಮಿಂಗ್ ಮಾಡಲಾಗುತ್ತದೆ. ಬಳಿಕ ಆ ಕೋಶಗಳನ್ನು ದೇಹದ ತೊಂದರೆಗೆ ತುತ್ತಾದ ಭಾಗಕ್ಕೆ ಸೇರಿಸಲಾಗುತ್ತದೆ.

ಇಲ್ಲಿ ಅವರು ವೈರಸ್‌ಗಳ ಬದಲು ಜೈವಿಕ ವಿಘಟನೀಯ ಪಾಲಿಮರ್‌ಗಳನ್ನು ಬಳಸಿದರು. ಏಕೆಂದರೆ ಈ ಪಾಲಿಮರ್‌ಗಳು ಬಳಕೆ ನಂತರ ಸಹಜವಾಗಿಯೇ ಕ್ಷೀಣಿಸುತ್ತವೆ. ಈ ಚಿಕಿತ್ಸೆ ವೈರಾಣು ವಿಧಾನಗಳಿಗಿಂತ ಹೆಚ್ಚು ಸುರಕ್ಷಿತ. ಹೃದಯಾಘಾತ, ಪಾರ್ಶ್ವವಾಯು ಮದುಮೇಹ ಹುಣ್ಣಿನಂತಹ ಕಾಯಿಲೆಗಳಿಂದ ಉಂಟಾಗಬಹುದಾದ ರಕ್ತನಾಳದ ಹಾನಿಗಳ ಚಿಕಿತ್ಸೆಗೆ ಈ ತಂತ್ರಜ್ಞಾನ ಬಳಸಬಹುದು ಎನ್ನುವುದು ಯಂಗ್ ಹೇಳಿಕೆ.

ಐಶ್ವರ್ಯಾ ರತನ್

ಹಾಳೆ ಅಥವಾ ನೋಟ್‌ಬುಕ್‌ಗಳಲ್ಲಿ ಬರೆಯುವ ವಿಷಯಗಳು ಡಿಜಿಟಲ್ ಪರದೆ ಮೇಲೆ ಮೂಡುವಂತಾದರೆ? ನಿಜ. ಇಂತದ್ದೊಂದು ವಿಶಿಷ್ಟ ತಂತ್ರಜ್ಞಾನ ಗ್ರಾಮೀಣ ಭಾಗದ ಸಣ್ಣ ಹಣಕಾಸು ಸಂಸ್ಥೆಗಳಿಗೆ ವರದಾನವಾಗಿ ಬಂದಿದೆ. ಅಂದಹಾಗೆ ಈ ಉಪಕರಣವನ್ನು ಆವಿಷ್ಕರಿಸಿದ್ದಾಕೆ ಐಶ್ವರ್ಯಾ ರತನ್ ಎಂಬ ಯುವತಿ.

ಮೈಕ್ರೋಸಾಫ್ಟ್ ರಿಸರ್ಚ್ ಇಂಡಿಯಾದ ಉದ್ಯೋಗಿ ಐಶ್ವರ್ಯಾಗೆ ಜನರಿಗೆ

ಸಹಕಾರಿಯಾಗುವ ಉಪಕರಣವೊಂದನ್ನು ಕಂಡುಹಿಡಿಯಬೇಕೆಂಬ ಬಯಕೆಯಿತ್ತು. ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ಕಾರ್ಯನಿರ್ವಹಿಸುತ್ತಿರುವ ಸಣ್ಣ ಹಣಕಾಸು ಸಂಸ್ಥೆಗಳಲ್ಲಿ ಲೆಕ್ಕಪತ್ರ ಕಾಯ್ದುಕೊಳ್ಳುವುದು ಬಹುದೊಡ್ಡ ಸಮಸ್ಯೆಯಾಗಿರುವುದು ಐಶ್ವರ್ಯಾ ಗಮನಕ್ಕೆ ಬಂದಿತು.

ಗಣಕೀಕೃತಗೊಳ್ಳದ ಈ ಸಣ್ಣ ಹಣಕಾಸು ಸಂಸ್ಥೆಗಳಲ್ಲಿ ಇನ್ನೂ ಲೆಡ್ಜರ್ ಮೇಲೆಯೇ ಲೆಕ್ಕಗಳನ್ನು ದಾಖಲಿಸುವ ಪರಿಪಾಠವಿದೆ. ಇದರಿಂದ ಎದುರಾಗುವ ಸಮಸ್ಯೆಗಳೂ ಅನೇಕ. ಅದನ್ನು ಗಮನದಲ್ಲಿಟ್ಟುಕೊಂಡ ಐಶ್ವರ್ಯಾ ಮನದಲ್ಲಿ ಮೊಳಕೆಯೊಡೆದದ್ದು ಕಾಗದದ ಮೇಲೆ ಮೂಡಿಸುವ ದಾಖಲೆಗಳನ್ನು ತತ್‌ಕ್ಷಣವೇ ಡಿಜಿಟಲ್ ಸ್ವರೂಪಕ್ಕೆ ಪರಿವರ್ತಿಸುವ ಉಪಕರಣದ ಆವಿಷ್ಕಾರ.

ಲೆಡ್ಜರ್‌ಅನ್ನು ಸ್ಲೇಟ್ ಆಕಾರದ ಈ ಉಪಕರಣದ ಮೇಲಿಟ್ಟುಕೊಂಡು ಎಂದಿನಂತೆ ಲೆಕ್ಕಗಳನ್ನು ದಾಖಲಿಸಿದರೆ ಸಾಕು. ಅಂಕೆಗಳನ್ನು ಗ್ರಹಿಸುವ ಉಪಕರಣ ಅದನ್ನು ಪರದೆ ಮೇಲೆ ಮೂಡಿಸುವುದು ಮಾತ್ರವಲ್ಲ; ಸರಿ ತಪ್ಪುಗಳನ್ನೂ ಗುರುತಿಸಬಲ್ಲದು. ಇಂತದ್ದೊಂದು ವಿಶಿಷ್ಟ ಆವಿಷ್ಕಾರ ಮಾಡಿದ ಗೌರವಾರ್ಥ ಐಶ್ವರ್ಯಾಗೆ ಯಾಲೆ ವಿಶ್ವವಿದ್ಯಾನಿಲಯದ ಮೈಕ್ರೋಸೇವಿಂಗ್ಸ್ ಆ್ಯಂಡ್ ಪೇಮೆಂಟ್ಸ್ ಇನ್ನೋವೇಷನ್ ಇನಿಷಿಯೇಟಿವ್‌ನ ನಿರ್ದೇಶಕಿ ಸ್ಥಾನವೂ ಅರಸಿ ಬಂದಿತು.

ಬ್ರಿಯಾನ್ ಜೆರ್ಕಿ

ರೋಬೋಟ್‌ಗಳನ್ನು ತಯಾರಿಸುವವರು ತಮ್ಮದೇ ಮಾದರಿಯ ಭಾಷೆಯನ್ನು ಅದಕ್ಕೆ ಬಳಸುತ್ತಾರೆ. ಅಂದರೆ ಎಲ್ಲಾ ರೋಬೋಟ್‌ಗಳಿಗೂ ಏಕಸ್ವರೂಪದ ಭಾಷೆ ಇರುವುದಿಲ್ಲ. ಹೀಗಾಗಿ ರೋಬೋಟ್ ಕಾರ್ಯಾಚರಣೆ ಬಳಸುವವರು ಆ ವ್ಯವಸ್ಥೆಯನ್ನಿಟ್ಟುಕೊಂಡು ಹೊಸ ಸಾಫ್ಟ್‌ವೇರ್ ರಚಿಸಬೇಕಾಗಿತ್ತು ಅಥವಾ ಕಂಪೆನಿಯಿಂದ ಆ ಸಾಫ್ಟ್‌ವೇರನ್ನು ಕೊಳ್ಳಬೇಕಿತ್ತು. ಆದರದು ಪರಿವರ್ತಿಸಲು ಅತಿ ಕಷ್ಟಕರವಾದದ್ದಾಗಿತ್ತು.

ಈ ಸಮಸ್ಯೆಗೆ ಪರಿಹಾರ ಕಂಡು ಹಿಡಿದದ್ದು ಬ್ರಿಯಾನ್ ಜೆರ್ಕಿ. ಎಲ್ಲರಿಗೂ ಸುಲಭವಾಗಿ

ಲಭ್ಯವಾಗುವಂತಹ ಪ್ಲೇಯರ್ ಮತ್ತು ಆರ್‌ಓಎಸ್ ಎಂಬ ಎರಡು ವಿಧಾನಗಳನ್ನು ಅಭಿವೃದ್ಧಿಪಡಿಸಿದರು. ರೋಬೋಟ್ ನಿಯಂತ್ರಣಕ್ಕೆ ಬಳಸುವ ಮೂಲ ಸಾಫ್ಟ್‌ವೇರ್ ಗುಣಮಟ್ಟವನ್ನು ಹೆಚ್ಚಿಸಿದನು.
 
ಈ ಎರಡೂ ವಿಧಾನಗಳನ್ನು ಪ್ರಪಂಚದ ಸಾವಿರಾರು ಕಂಪೆನಿಗಳು, ವಿಶ್ವವಿದ್ಯಾನಿಲಯಗಳು ಮತ್ತು ಸರ್ಕಾರಿ ಸಂಸ್ಥೆಗಳು ಅಳವಡಿಸಿಕೊಂಡವು.ಎಕ್ಸ್‌ಟೆನ್ಸಿವ್ ರೊಬೋಟಿಕ್ಸ್ ಪರಿಣಿತಿ ಹೊಂದಿರದ ಸಾಹಸೋದ್ಯಮಿಗಳಿಗೆ ಹೊಸ ಕಮರ್ಷಿಯನ್ ಅಪ್ಲಿಕೇಷನ್‌ಗಳನ್ನು ರೋಬೋಟ್‌ಗಾಗಿ ಸೃಷ್ಟಿಸಲು ಈ ಸಾಫ್ಟ್‌ವೇರ್ ಸಹಕಾರಿಯಾಗುತ್ತದೆ ಎನ್ನುವುದು ಜೆರ್ಕಿ ಅಭಿಪ್ರಾಯ. ವ್ಯಾಪಾರ, ವ್ಯವಹಾರದಲ್ಲಿ ರೋಬೋಟ್‌ಗಳ ಪ್ರಯೋಜನದ ಬಗ್ಗೆ ತಿಳಿವಳಿಕೆಯುಳ್ಳ ಜನರಿಗೆ ಸಹಾಯ ಮಾಡುವುದು ತಮ್ಮ ಗುರಿ ಎನ್ನುತ್ತಾರೆ ಜೆರ್ಕಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT