ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಷಯಸಮುದ್ರ ಇಸಾಮುದ್ರ ಆದ ಬಗೆ...

Last Updated 23 ಫೆಬ್ರುವರಿ 2012, 8:05 IST
ಅಕ್ಷರ ಗಾತ್ರ

ಇದು `ಸಿದ್ಧರು ನೆಲಸಿದ್ದ ನಾಡು, ದೇವರುಗಳ ನೆಲೆಬೀಡು~ ಎನ್ನುವ ಖ್ಯಾತಿ ಪಡೆದ ಪುಟ್ಟ ಗ್ರಾಮ ಇಸಾಮುದ್ರ.
ಭರಮಸಾಗರ ಹೋಬಳಿ ಕೇಂದ್ರದಿಂದ ದೊಣ್ಣೇಹಳ್ಳಿ ಮಾರ್ಗದಲ್ಲಿ 5 ಕಿ.ಮೀ. ದೂರ ಸಾಗಿದರೆ  ಸುಮಾರು 400 ಮನೆಗಳು. 2,000ಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಈ ಪುಟ್ಟಗ್ರಾಮ ಸಿಗುತ್ತದೆ.

ಇಲ್ಲಿದ್ದ ಹಳೆಯ ಗ್ರಾಮ ನಶಿಸಿ ಹೋಗಿದ್ದು, ಅದರ ಜತೆಗೆ (ಹೊರಜಗತ್ತಿಗೆ) ಇಂದಿನ ತಲೆಮಾರಿಗೆ ತಿಳಿಯದ ಅನೇಕ ಐತಿಹಾಸಿಕ ಸಂಗತಿಗಳು ಕಾಲಚಕ್ರದಡಿಯಲ್ಲಿ ಹುದುಗಿಹೋಗಿವೆ ಎನ್ನುತ್ತಾರೆ ಗ್ರಾಮದ ಹಿರಿಯರಾದ ಯೋಗೇಶ್ವರಪ್ಪ.

ಅಚ್ಚರಿ ಎನಿಸುವಂತೆ ಗ್ರಾಮದ ವಿಸ್ತೀರ್ಣ, ಜನಸಂಖ್ಯೆಯ ಲೆಕ್ಕಾಚಾರಕ್ಕೆ ತಾಳೆಯಾಗದ ರೀತಿ ಇಲ್ಲಿ ನೂರ ಒಂದು ಲಿಂಗು, ಅಸಂಖ್ಯ ದೇವಸ್ಥಾನಗಳು ಇವೆ ಎನ್ನುತ್ತಾರೆ ಗ್ರಾಮಸ್ಥರು. ಅವರ ಮಾತಿಗೆ ಪುರಾವೆ ಒದಗಿಸುವಂತೆ ಅನೇಕ ದೇವಸ್ಥಾನಗಳು ಈಗಾಗಲೇ ಕಣ್ಮರೆಯಾಗಿ ಭೂಗರ್ಭದಲ್ಲಿ ಹುದುಗಿಹೋಗಿ, ಇನ್ನೂ ಕೆಲವು ಅವಸಾನದ ಅಂಚಿನಲ್ಲಿದ್ದರೂ, ಈಗಲೂ ಕೂಡ ಅಸಂಖ್ಯ ದೇವಸ್ಥಾನಗಳು ಕಣ್ಣಿಗೆ ಗೋಚರವಾಗುತ್ತವೆ.
ಇಲ್ಲಿರುವ ದೇವಾಲಯಗಳಲ್ಲಿ ಶಿವನಿಗೆ ಸೇರಿದ ದೇವಸ್ಥಾನಗಳದ್ದೇ ಸಿಂಹ ಪಾಲು.
 
ಸಿದ್ಧೇಶ್ವರ, ಕಲ್ಲೇಶ್ವರ, ಭೋಗೇಶ್ವರ, ಗುರುಸಿದ್ದೇಶ್ವರ, ಹಾಲಸಿದ್ದೇಶ್ವರ, ರಾಮೇಶ್ವರ, ಆದಿಬಸವೇಶ್ವರ, ಸಪ್ಪೆ ಬಸವೇಶ್ವರ, ಕಂತೇಲಿಂಗೇಶ್ವರ, ಮೈಲಾರಲಿಂಗೇಶ್ವರ, ಚನ್ನಕೇಶ್ವರ, ಚಂದ್ರಮೌಳೇಶ್ವರ, ಕೋಡಿಸಿದ್ದೇಶ್ವರ, ಕೇಶವ, ಗಣೇಶ, ಆಂಜನೇಯ, ವೀರಭದ್ರ, ಗುರುಸ್ವಾಮಿ ಮಠ, ಗೌರಿ, ಗೌಳಮ್ಮ, ಉಡಸಲಮ್ಮ, ಮಾರಮ್ಮ, ಕೋಟೆಚೌಡಮ್ಮ, ಸೊಲೇಮಾರಮ್ಮ, ಗೌರಸಂದ್ರಮಾರಮ್ಮ, ದುರ್ಗಮ್ಮ, ಪ್ಲೇಗಮ್ಮ, ಕೊಳಹಾಳಮ್ಮ, ಬಳೆಗಾರಮ್ಮ ಹೀಗೆ ಇಲ್ಲಿರುವ ದೇವರುಗಳ ಹೆಸರಿನ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. 

 ಗ್ರಾಮದ ಹೆಸರಿನ ಹಿನ್ನೆಲೆ

ಗ್ರಾಮದ ಮೂಲ ಹೆಸರಿನೊಂದಿಗೆ ಅನೇಕ ಇತಿಹಾಸದ ಘಟನೆಗಳು ತಳಕು ಹಾಕಿಕೊಂಡಿವೆ. ಹಿಂದಿನ ಕಾಲದಲ್ಲಿ ಚಿತ್ರದುರ್ಗದ ಪಾಳೆಗಾರರು, ಮೈಸೂರು ಸಂಸ್ಥಾನದ ರಾಜರು ವಿಜಯನಗರಕ್ಕೆ(ಹಂಪಿ) ತೆರಳುತ್ತಿದ ಸಂದರ್ಭದಲ್ಲಿ ಮಾರ್ಗ ಮಧ್ಯೆ ಈ ಗ್ರಾಮದಲ್ಲಿ ಕೆಲ ಕಾಲ ತಂಗುತ್ತಿದ್ದರೂ. ಇದು ಮರಾಠರ ನಕಾಶೆಯಲ್ಲಿನ ದಾರಿಯಾಗಿತ್ತು. ಆ ಸಮಯದಲ್ಲಿ ರಾಜಕೀಯ ಸೇರಿದಂತೆ ಇತರೆ ವಿದ್ಯಾಮಾನಗಳ ಬಗ್ಗೆ ಇಲ್ಲಿ ಮಾಹಿತಿ ಸಂಗ್ರಹಿಸುತ್ತಿದ್ದ ಕಾರಣಕ್ಕೆ ಈ ಗ್ರಾಮ ವಿಷಯಸಮುದ್ರ ಎನ್ನುವ ಹೆಸರಿನಿಂದ ಕರೆಯಲ್ಪಡುತ್ತಿತ್ತು.

ಬ್ರಿಟಿಷ್ ಅಧಿಕಾರಿಗಳು ಕೂಡ ಇಲ್ಲಿ ಭೇಟಿ ನೀಡಿ ವಿಷಯ ಸಂಗ್ರಹಿಸುತ್ತಿದ್ದರು. ಕಾಲಕ್ರಮೇಣ ವಿಷಯಸಮುದ್ರ ಎನ್ನುವ ಹೆಸರು ಜನರ ನಾಲಿಗೆಯಲ್ಲಿ `ಇಷ್ಯಾಮುದ್ರ~ ಎಂದಾಗಿ ತದನಂತರ ಇಸಾಮುದ್ರ ಎಂದಾಗಿದೆ.

ವಿವಿಧ ರಾಜರುಗಳು, ಉನ್ನತ ಅಧಿಕಾರಿಗಳು ಭೇಟಿ ನೀಡುತ್ತಿದ್ದ ಮಹತ್ವದ ಸ್ಥಳವಾದ ಕಾರಣ ಹಿಂದೆ ಗ್ರಾಮದ ಸುತ್ತ ಕೋಟೆ ಮಾದರಿ ಬೃಹತ್ ರಕ್ಷಾಣ ಗೋಡೆಗಳನ್ನು ನಿರ್ಮಿಸಿ ಬತೇರಿಗಳ ಮೇಲೆ ಕಾವಲಿನ ವ್ಯವಸ್ಥೆ ಮಾಡಲಾಗಿತ್ತು.
 
60ರ ದಶಕದವರೆಗೂ ಹಿಂದಿನ ಪರಂಪರೆಯಂತೆ ಗ್ರಾಮದಲ್ಲಿ ನಿತ್ಯ ಸರದಿಯಂತೆ ಪ್ರತಿ ಮನೆಯವರು ಪಹರೆ ಕಾಯುವ ವ್ಯವಸ್ಥೆ ಪಾಲಿಸಿಕೊಂಡು ಬರಲಾಗುತ್ತಿದ್ದು, ಈಗ ಅದು ನಿಂತು ಹೋಗಿದೆ. ಆ ದಿನಗಳಲ್ಲಿ ಕೋಟೆ  ಚೌಡಮ್ಮನಿಗೇ  ಪ್ರಥಮ ಪೂಜೆ ಸಲ್ಲಿಸಲಾಗುತ್ತಿತ್ತು ಎಂದು ತಿಳಿಸುತ್ತಾರೆ ಗ್ರಾಮದ ಅಜ್ಜಣ್ಣ, ಯೋಗೇಶ್ವರಪ್ಪ.

ಅವರ ಮಾತಿಗೆ ಅವಸಾನದ ಅಂಚಿನಲ್ಲಿರುವ ಕೋಟೆಗೋಡೆಗಳು, ಕೋಟೆಚೌಡಮ್ಮನ ದೇವಸ್ಥಾನ ಸಾಕ್ಷಿ ಒದಗಿಸುತ್ತವೆ. ಇದು ಸಿದ್ದರು ನೆಲಸಿದ್ದ ರುದ್ರನ ಭೂಮಿಯಾದ ಕಾರಣ ಇಲ್ಲಿ ವಾಮಾಚಾರ, ದುಷ್ಟಶಕ್ತಿಗಳ ಆಟ ನಡೆಯುವುದಿಲ್ಲ ಎನ್ನುತ್ತಾರೆ ದೊಡ್ಡಮನಿ ಚನ್ನಬಸಪ್ಪ.

 ಮುಜರಾಯಿ ಇಲಾಖೆಗೆ ಸೇರಿದ ಇಲ್ಲಿನ ಅನೇಕ ದೇವಸ್ಥಾನಗಳು ನಿರ್ಲಕ್ಷ್ಯಕ್ಕೊಳಗಾಗಿ ಅವಸಾನದ ಅಂಚಿಗೆ ತಲುಪಿವೆ. ಅವುಗಳ ಅಭಿವೃದ್ಧಿಗೆ ಇಲಾಖೆ ಸೂಕ್ತ ಕ್ರಮಕೈಗೊಳ್ಳಬೇಕಿದೆ. ಇತಿಹಾಸ ಸಂಶೋಧಕರು ಇತ್ತ ಗಮನ ಹರಿಸಿ ಇಲ್ಲಿನ ದೇವಸ್ಥಾನ, ಶಿಲಾಶಾಸನಗಳ ಬಗ್ಗೆ ಅಧ್ಯಯನ ನಡೆಸಿದರೆ ಇಲ್ಲಿ ಹೆಚ್ಚು ದೇವಸ್ಥಾನಗಳಿರಲು ಏನು ಕಾರಣ, ರಾಜರ ಕಾಲದಲ್ಲಿ ಗ್ರಾಮಕ್ಕಿದ್ದ ಪ್ರಾಮುಖ್ಯತೆ ಸೇರಿದಂತೆ ಇಲ್ಲಿನ ಗತಿಸಿದ ಇತಿಹಾಸದ ಮೇಲೆ ಹೊಸಬೆಳಕು ಚೆಲ್ಲಬಹುದಾಗಿದೆ ಎನ್ನುತ್ತಾರೆ ಇಲ್ಲಿನ ಆರಾಧ್ಯ ದೈವ ಸಿದ್ದೇಶ್ವರ ದೇವಸ್ಥಾನದ ಕನ್ವೀನರ್ ಡಿ.ಎಸ್. ರುದ್ರಮುನಿ.

ಗ್ರಾಮದ ಜನಸಂಖ್ಯೆಗೆ ಅನುಗುಣವಾಗಿ ಕುಡಿಯುವ ನೀರಿಗಾಗಿ `ಓವರಹೆಡ್ ಟ್ಯಾಂಕ್~, ವ್ಯವಸ್ಥಿತ ರಸ್ತೆ, ಚರಂಡಿಗಳನ್ನು ನಿರ್ಮಿಸಬೇಕು. ಪ್ರಮುಖವಾಗಿ ಇಲ್ಲಿ ಪಶುಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಗ್ರಾಮೀಣ ಸಾರಿಗೆ ಸೌಲಭ್ಯ,  ಬ್ಯಾಂಕ್, ಸಮುದಾಯ ಭವನದ ಅಗತ್ಯವಿದೆ.

ಕೆರೆ ಏರಿ, ತೂಬುಗಳು ದುರ್ಬಲಗೊಂಡಿದ್ದು, ಮಳೆಗಾಲದಲ್ಲಿ ಶೇಖರಗೊಂಡ ನೀರು ಪೋಲಾಗುತ್ತಿದೆ. ರಾಜಕಾಲುವೆಗಳು ಹೇಳ ಹೆಸರಿಲ್ಲದಂತೆ ಮಾಯವಾಗಿದ್ದು ಕೆರೆ ಅಭಿವೃದ್ಧಿಗೆ ಸೂಕ್ತ ಕ್ರಮ ಕೈಗೊಳ್ಳುವ ಅಗತ್ಯವಿದೆ ಎನ್ನುತ್ತಾರೆ ಗ್ರಾಮಸ್ಥರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT