ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೃತ್ತಿಪರ ಶಿಕ್ಷಣ ಹೊಸ ಕಾಯ್ದೆ ವಿರೋಧಿಸಿ ಪ್ರತಿಭಟನೆ

Last Updated 19 ಡಿಸೆಂಬರ್ 2013, 8:27 IST
ಅಕ್ಷರ ಗಾತ್ರ

ಬಾಗಲಕೋಟೆ: ಕರ್ನಾಟಕ ವೃತ್ತಿಪರ ಶಿಕ್ಷಣ ಸಂಸ್ಥೆಗಳ (ಪ್ರವೇಶ ನಿಯಂತ್ರಣ ಮತ್ತು ಶುಲ್ಕ ನಿಗದಿ) ಕಾಯ್ದೆಯನ್ನು ಜಾರಿಗೊಳಿಸದಂತೆ ಆಗ್ರಹಿಸಿ ಎಬಿವಿಪಿ ನೇತೃತ್ವದಲ್ಲಿ ಬುಧವಾರ ನಗರದಲ್ಲಿ ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ವಿದ್ಯಾಗಿರಿಯ ಬಸವೇಶ್ವರ ಎಂಜಿನಿ­ಯ­ರಿಂಗ್ ಕಾಲೇಜು ವೃತ್ತದಿಂದ ಜಿಲ್ಲಾ­ಡಳಿತ ಭವನದ ವರೆಗೆ ಪ್ರತಿಭಟನಾ ಜಾಥಾ ನಡೆಸಿದ ವಿದ್ಯಾರ್ಥಿಗಳು, ಕಾಯ್ದೆ ಜಾರಿಗೊಳಿಸಲು ಉದ್ದೇಶಿಸಿ­ರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿದರು.

ಬಡ ವಿದ್ಯಾರ್ಥಿಗಳಿಗೆ ಮಾರಕವಾಗಿ­ರುವ ಹಾಗೂ ಸಾಮಾಜಿಕ ನ್ಯಾಯ­ವನ್ನು ಕಿತ್ತುಕೊಳ್ಳುವ ವಿದ್ಯಾರ್ಥಿ ವಿರೋಧಿ ಕಾಯ್ದೆಯನ್ನು ಯಾವುದೇ ಕಾರಣಕ್ಕೂ ಜಾರಿಗೊಳಿಸಬಾರದು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದರು.

ವಾಮಮಾರ್ಗಗಳ ಮೂಲಕ ಖಾಸಗಿ ಕಾಲೇಜುಗಳು ಲಕ್ಷಾಂತರ ರೂಪಾಯಿಗೆ ಸೀಟು ಮಾರಾಟ ಮಾಡಿಕೊಳ್ಳುತ್ತಿವೆ. ಇಂತಹ ಸಂದರ್ಭ­ದಲ್ಲಿ ಸರ್ಕಾರ ಕಾಯ್ದೆ ಜಾರಿಗೊಳಿಸಿ­ದರೆ ಖಾಸಗಿ ಕಾಲೇಜುಗಳು ಕಾನೂನು ಬದ್ಧವಾಗಿ ವಿದ್ಯಾರ್ಥಿಗಳಿಂದ ಹಣ ಕೊಳ್ಳೆಹೊಡೆಯಲು ಅನುಕೂಲವಾಗಲಿದೆ ಎಂದು ಆರೋಪಿಸಿದರು.

ಕಾಮೆಡ್-ಕೆಗೆ ಪ್ರವೇಶ ಪರೀಕ್ಷೆ ನಡೆಸುವ ಅಧಿಕಾರ ನೀಡಲಾಗಿದ್ದು, ಇದರಿಂದ ಪರೀಕ್ಷಾ ವ್ಯವಸ್ಥೆಯೇ ಹಾಳಾಗಲಿದೆ. ಸರ್ಕಾರದ ಕೋಟಾ­ದಲ್ಲಿ ಶೇ 45 ಎಂಜಿನಿಯ­ರಿಂಗ್, ಶೇ 40 ಮೆಡಿಕಲ್, ಶೇ 35 ದಂತ ವೈದ್ಯಕೀಯ ಕಾಲೇಜುಗಳ ಸೀಟುಗಳು ಖಾಸಗಿಯವರಿಗೆ ಹಸ್ತಾಂತರ­ವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಸರ್ಕಾರಿ ಮತ್ತು ಅನುದಾನಿತ ಕಾಲೇಜು­ಗಳಲ್ಲಿ 21 ಎಂಜಿನಿಯರಿಂಗ್ ಮತ್ತು 10 ಮೆಡಿಕಲ್ ಕಾಲೇಜುಗಳಿಗೆ ಮಾತ್ರ ಸರ್ಕಾರದ ಸಿಇಟಿ ಪರೀಕ್ಷೆ ಅನ್ವಯವಾಗಲಿದೆ. ಸಿಇಟಿಯಲ್ಲಿ ಮೊದಲ ರ್‍್ಯಾಂಕ್  ಪಡೆದ ವಿದ್ಯಾರ್ಥಿ ಪ್ರತಿಷ್ಠಿತ ಕಾಲೇಜುಗಳಲ್ಲಿ ಸೀಟು ಪಡೆಯಲು ಅನಿವಾರ್ಯವಾಗಿ ಲಕ್ಷಾಂತರ ರೂಪಾಯಿ ಶುಲ್ಕ ಭರಿಸ­ಬೇಕಾ­ಗುತ್ತದೆ. ಯಾವುದೇ ಅನುದಾನ ರಹಿತ ಕಾಲೇಜುಗಳು ಶುಲ್ಕ ನೀತಿ ಮತ್ತು ಸೀಟು ಹಂಚಿಕೆಯಲ್ಲಿ ಸರ್ಕಾರದ ನಿಯಂತ್ರಣಕ್ಕೆ ಒಳಪಡುವು­ದಿಲ್ಲ ಎಂದು ಹೇಳಿದರು.

ರಾಜ್ಯದ ಖಾಸಗಿ ಅನುದಾನ ರಹಿತ ಕಾಲೇಜುಗಳಲ್ಲಿ ಸರ್ಕಾರಿ ಕೋಟಾದ ಒಂದೇ ಒಂದು ಸೀಟುಗಳು ಇರುವು­ದಿಲ್ಲ. ಖಾಸಗಿ ಕಾಲೇಜುಗಳಿಗೆ ಪ್ರವೇಶ ಪಡೆಯಲು ವಿದ್ಯಾರ್ಥಿಗಳು ಕಡ್ಡಾಯ­ವಾಗಿ ಕಾಮೆಡ್-ಕೆ ನಡೆಸುವ ಪರೀಕ್ಷೆ­ಗಳನ್ನು ಬರೆಯಬೇಕಾಗುತ್ತದೆ. ಸರ್ಕಾರದ ನೂತನ ಸಿಇಟಿಯ ಕಾಯ್ದೆ ಜಾರಿಗೆಯಿಂದ ವಿದ್ಯಾರ್ಥಿಗಳಿಗೆ ಸಾಕಷ್ಟು ಅನಾನುಕೂಲತೆಯಾಗಲಿದೆ ಎಂದು ಆರೋಪಿಸಿದರು.

ನೂತನ ಕಾಯ್ದೆ ಜಾರಿಗೊಳಿಸದಂತೆ ಆಗ್ರಹಿಸಿ ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರಗೌಡ ಅವರಿಗೆ ವಿದ್ಯಾರ್ಥಿಗಳು ಮನವಿ ಸಲ್ಲಿಸಿದರು.
ಎಬಿವಿಪಿ ನಗರ ಕಾರ್ಯದರ್ಶಿ ಶ್ರೀಧರ ನಾಗರಬೆಟ್ಟ, ಮಹೇಶ್ವರಿ ಬದ್ರಶೆಟ್ಟಿ, ವಿರೇಂದ್ರಗೌಡ ಪಾಟೀಲ, ರಂಜಿತ್ ಕುಲಕರ್ಣಿ, ಬಸನಗೌಡ ಪಾಟೀಲ, ಸುಭಾಷಿಣಿ, ಶ್ರೀದೇವಿ, ರಾಹುಲ್ ಸಾರೋದೆ ಮತ್ತಿತರರ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಮನವಿ ಸಲ್ಲಿಕೆ
ಜಮಖಂಡಿ:
ರಾಜ್ಯ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಕರ್ನಾಟಕ ವೃತ್ತಿಪರ ಶಿಕ್ಷಣ ಸಂಸ್ಥೆಗಳ ಪ್ರವೇಶ ನಿಯಂತ್ರಣ ಮತ್ತು ಶುಲ್ಕ ನಿಗದಿ ಕಾಯ್ದೆ 2006ನ್ನು ವಿರೋಧಿಸಿ ಎಬಿವಿಪಿ ನಗರ ಘಟಕದ ಕಾರ್ಯ­ಕರ್ತರು ಬುಧವಾರ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಕಂದಾಯ ಉಪ­ವಿಭಾಗಾ­ಧಿಕಾರಿ­ಗಳ ಕಾರ್ಯಾಲಯದ ಉಪ­ತಹಶೀಲ್ದಾರ್‌ ಎಸ್‌.ಬಿ. ಅನ್ಸಾರಿ ಮೂಲಕ ವೃತ್ತಿಶಿಕ್ಷಣ ಪ್ರವೇಶ ಕಾಯ್ದೆ ಜಾರಿ ವಿರೋಧಿಸಿ ಮನವಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT