ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೆನೆಜುವೆಲಾ: ಖ್ಯಾತ ಕಿರುತೆರೆ ನಟಿ ಹತ್ಯೆ

ದರೋಡೆ ಯತ್ನಕ್ಕೆ ಪ್ರತಿರೋಧ
Last Updated 8 ಜನವರಿ 2014, 19:30 IST
ಅಕ್ಷರ ಗಾತ್ರ

ಕರಾಕಸ್‌ (ಎಪಿ): ವೆನೆಜುವೆಲಾದ ಮಾಜಿ ಸುಂದರಿ ಮತ್ತು ಖ್ಯಾತ ಕಿರುತೆರೆ ನಟಿ ಹಾಗೂ ಆಕೆಯ ವಿಚ್ಛೇದಿತ ಪತಿ­ಯನ್ನು ಅವರ ಐದು ವರ್ಷದ ಮಗಳ ಎದುರಲ್ಲೇ ದರೋಡೆಕೋರರು ಹತ್ಯೆ ಮಾಡಿದ್ದಾರೆ. ಘಟನೆಯಲ್ಲಿ ಮಗಳು ಗಾಯಗೊಂಡಿದ್ದಾಳೆ.

ದುಷ್ಕರ್ಮಿಗಳು ನಡೆಸಿದ್ದ ದರೋಡೆ ಯತ್ನಕ್ಕೆ ಮೋನಿಕಾ ಸ್ಪಿಯರ್‌ (29) ಹಾಗೂ ಐರ್ಲೆಂಡ್‌ ಮೂಲದ ಹೆನ್ರಿ ಥಾಮಸ್‌  ಬೆರ್ರಿ (39) ಅವರು ಪ್ರತಿರೋಧ ತೋರಿದ ಸಂದರ್ಭದಲ್ಲಿ ಹತ್ಯೆಗೀಡಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ವೆನೆಜುವೆಲಾದ ಪ್ರಮುಖ ಬಂದರು ಪ್ಯುರ್ಟೊ ಕ್ಯಾಬೆಲ್ಲೊ ಸಮೀಪದ ರಸ್ತೆಯಲ್ಲಿ ಮಂಗಳವಾರ ರಾತ್ರಿ ಈ ಘಟನೆ ನಡೆದಿದೆ ಎಂದು ಪ್ರಾಸಿಕ್ಯೂಟರ್‌ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.

ಮೋನಿಕಾ ಪುತ್ರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯ ಸ್ಥಿರ­ವಾಗಿದೆ ಹೇಳಿಕೆ ತಿಳಿಸಿದೆ.

ಪರಸ್ಪರ ವಿಚ್ಛೇದನ ಪಡೆದಿದ್ದ ಹೊರತಾಗಿಯೂ ಮೋನಿಕಾ ಹಾಗೂ ಹೆನ್ರಿ ಅನ್ಯೋನ್ಯವಾಗಿದ್ದರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಮೂವರು ಪ್ರಯಾಣಿಸುತ್ತಿದ್ದ ಕಾರು ಮಾರ್ಗ ಮಧ್ಯೆ ಹಾಳಾಗಿತ್ತು. ದುರಸ್ತಿಗೆ ಕಾರನ್ನು ತೆಗೆದುಕೊಂಡು ಹೋಗುವ ಟ್ರಕ್‌ಗೆ ಕಾಯುತ್ತಿದ್ದಾಗ ದುಷ್ಕರ್ಮಿ­ಗಳು ದಾಳಿ ನಡೆಸಿದ್ದಾರೆ.

ಮೋನಿಕಾ ಅವರು 2004ರಲ್ಲಿ ವೆನೆಜುವೆಲಾ ಸುಂದರಿ ಪಟ್ಟ ಅಲಂಕರಿಸಿದ್ದರು. ಅಮೆರಿಕ ಮೂಲದ  ಟೆಲಿಮುಂಡೊ ನೆಟ್‌ವರ್ಕ್‌ ನಿರ್ಮಿಸಿದ್ದ ಹಲವು ಧಾರಾವಾಹಿಗಳಲ್ಲಿ ಅವರು ಅಭಿನಯಿಸಿದ್ದರು.

ವೆನೆಜುವೆಲಾ ಮತ್ತು ಅಮೆರಿಕದ ನಡುವೆ ಆಗಾಗ ಪ್ರಯಾಣಿಸುತ್ತಿದ್ದ ಮೋನಿಕಾ ರಜಾ ದಿನಗಳನ್ನು ಕಳೆ­ಯು­ವುದಕ್ಕಾಗಿ ವೆನೆಜುವೆಲಾಕ್ಕೆ ಬಂದಿದ್ದರು.

ಅತಿ ಹೆಚ್ಚು ಪ್ರಮಾಣದಲ್ಲಿ ನಡೆಯುವ ಹತ್ಯೆಗಳು ಮತ್ತು ಹಿಂಸಾತ್ಮಾಕ ಅಪರಾಧ ಕೃತ್ಯಗಳಿಗೆ ವೆನೆಜುವೆಲಾ ಜಗತ್ತಿನಲ್ಲೇ ಕುಖ್ಯಾತಿ ಪಡೆದಿದೆ. ಹಾಗಾಗಿ ಆ ರಾಷ್ಟ್ರದಲ್ಲಿ ಕತ್ತಲಾಗುತ್ತಿದ್ದಂತೆಯೇ ಮನೆಯಿಂದ ಹೊರಗಡೆ ಹೋಗಲು ಜನರು ಹೆದರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT