ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇತನ ಪಾವತಿಗೆ ಕಾರ್ಮಿಕ ನ್ಯಾಯಾಲಯ ಆದೇಶ

Last Updated 18 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಕೊಪ್ಪಳ: ತುಂಗಭದ್ರಾ ಎಡದಂಡೆ ಕಾಲುವೆಗೆ ಸಂಬಂಧಿಸಿದಂತೆ ತಾಲ್ಲೂಕಿನ ಅಗಳಕೇರಾ ಉಪವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ 54 ಜನ ಟಾಸ್ಕ್‌ವರ್ಕ್ ನೌಕರರಿಗೆ ಬಾಕಿ ಇರುವ ಮೂರು ತಿಂಗಳ ವೇತನ ಪಾವತಿಸುವಂತೆ ಇಲ್ಲಿನ ಕಾರ್ಮಿಕ ಅಧಿಕಾರಿ ಮತ್ತು ವೇತನ ಪಾವತಿ ಕಾಯ್ದೆ-1936ರ ಅಡಿ ವಿಚಾರಣಾ ಪ್ರಾಧಿಕಾರಿಗಳ ನ್ಯಾಯಾಲಯ ಆದೇಶಿಸಿದೆ.

ಈ ತೀರ್ಪಿನಿಂದ ಒಂದು ವರ್ಷದಿಂದ ಬಾಕಿ ವೇತನಕಾಗಿ ಹೋರಾಟ ನಡೆಸುತ್ತಿದ್ದ ತುಂಗಭದ್ರಾ ಎಡದಂಡೆ ಟಾಸ್ಕ್ ವರ್ಕ್ಸ್ ನೌಕರರ ಸಂಘದ ಅಗಳಕೇರಾ ಘಟಕವು ನಡೆಸಿದ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ. ಅಲ್ಲದೇ, ಟಾಸ್ಕ್‌ವರ್ಕ್ಸ್ ನೌಕರರು ಇಲಾಖೆಯ ಸಿಬ್ಬಂದಿಯೇ ಅಲ್ಲ. ಅವರಿಗೆ ವೇತನ ಕೊಡುವ ಪ್ರಶ್ನೆಯೇ ಇಲ್ಲ ಎಂದು ಮುನಿರಾಬಾದ್‌ನಲ್ಲಿರುವ ತುಂಗಭದ್ರಾ ಯೋಜನೆಯ ನೀರಾವರಿ ಕೇಂದ್ರ ವಲಯ ಕಚೇರಿ ನಿಲುವು ತಳೆದಿತ್ತು.

ಬಾಕಿ ಇರುವ ವೇತನ ರೂ 7,50,375  ಹಾಗೂ ಪ್ರತಿಯೊಬ್ಬ ನೌಕರರಿಗೆ ರೂ 1,500  ಪರಿಹಾರ ಧನ ಸೇರಿದಂತೆ ಒಟ್ಟು ರೂ 8,33,122 ಗಳನ್ನು 30 ದಿನಗಳ ಒಳಗಾಗಿ ಸದರಿ ನ್ಯಾಯಾಲಯದಲ್ಲಿ ಠೇವಣಿ ಇಡುವಂತೆ ನೀರಾವರಿ ಕೇಂದ್ರ ವಲಯದ ಮುಖ್ಯ ಎಂಜಿನಿಯರ್ ಅವರಿಗೆ ಡಿ. 14ರಂದು ನೀಡಿರುವ ಆದೇಶದಲ್ಲಿ ಸೂಚಿಸಲಾಗಿದೆ. ಈ ಆದೇಶದ ಪ್ರತಿಯು `ಪ್ರಜಾವಾಣಿ'ಗೆ ಲಭ್ಯವಾಗಿದೆ.

ಅಗಳಕೇರಾ ನೌಕರರಲ್ಲದೇ, ಇದೇ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ತಾಲ್ಲೂಕಿನ ಕಿನ್ನಾಳ ಗ್ರಾಮದಲ್ಲಿರುವ ಹಿರೇಹಳ್ಳ ಯೋಜನಾ ಉಪವಿಭಾಗದ 30 ಜನ ಟಾಸ್ಕ್ ನೌಕರರಿಗೆ ರೂ 5.49 ಲಕ್ಷ, ವಡ್ಡರಹಟ್ಟಿಯಲ್ಲಿರುವ ಉಪವಿಭಾಗ ಸಂಖ್ಯೆ 1ರ 92 ಜನ ನೌಕರರಿಗೆ ರೂ 14.13 ಲಕ್ಷ ಹಾಗೂ ವಡ್ಡರಹಟ್ಟಿ ಉಪವಿಭಾಗ ಸಂಖ್ಯೆ 31ರ 74 ಜನ ನೌಕರರಿಗೆ ರೂ 11.31 ಲಕ್ಷ ಪಾವತಿಸುವಂತೆಯೂ ನ್ಯಾಯಾಲಯವು ಆದೇಶಿಸಿದೆ.

ವಿವರ: ತುಂಗಭದ್ರಾ ಎಡದಂಡೆ ಕಾಲುವೆಯಿಂದ ಹಾಗೂ ಕಿನ್ನಾಳ ಗ್ರಾಮದಲ್ಲಿರುವ ಹಿರೇಹಳ್ಳ ಜಲಾಶಯದಿಂದ ರೈತರ ಹೊಲಗಳಿಗೆ ನೀರು ಹರಿಸುವ ಕಾರ್ಯಕ್ಕಾಗಿ ಈ ನೌಕರರನ್ನು ನೇಮಕ ಮಾಡಿಕೊಳ್ಳಲಾಗಿದೆ. ಈ ನೌಕರರಿಗೆ 2011ರ ನವೆಂಬರ್, ಡಿಸೆಂಬರ್ ಹಾಗೂ 2012ರ ಜನವರಿ ತಿಂಗಳ ವೇತನ ನೀಡಿರಲಿಲ್ಲ.

ವೇತನ ನೀಡದ ನೀರಾವರಿ ಕೇಂದ್ರ ವಲಯದ ಅಧಿಕಾರಿಗಳ ನಿಲುವನ್ನು ಪ್ರಶ್ನಿಸಿ ತುಂಗಭದ್ರಾ ಎಡದಂಡೆ ಟಾಕ್ಸ್‌ವರ್ಕ್ ನೌಕರರ ಸಂಘ ಸದಸ್ಯರು ನಗರದಲ್ಲಿರುವ ಕಾರ್ಮಿಕ ಅಧಿಕಾರಿ ಮತ್ತು ವೇತನ ಪಾವತಿ ಕಾಯ್ದೆ-1936ರ ಅಡಿ ವಿಚಾರಣಾ ಪ್ರಾಧಿಕಾರಿಗಳ ನ್ಯಾಯಾಲಯದ ಮೊರೆ ಹೋಗಿದ್ದರು. ಅಲ್ಲದೇ, ಬಾಕಿ ವೇತನ ಪಾವತಿಗೆ ಸಂಬಂಧಿಸಿದಂತೆ ಈವರೆಗೆ ಹತ್ತಕ್ಕೂ ಹೆಚ್ಚು ಸಂಧಾನ ಸಭೆಗಳನ್ನು ನಡೆಸಿ ಅರ್ಜಿದಾರರ ಮತ್ತು ಪ್ರತಿವಾದಿಗಳ ಅಹವಾಲನ್ನು ನ್ಯಾಯಾಲಯ ಆಲಿಸಿತ್ತು.

ಸದರಿ ನೌಕರರು ಇಲಾಖೆಯ ನೌಕರರಲ್ಲ. ಆದರೆ, ಈ ನೌಕರರಿಗೆ ಏಜೆನ್ಸಿಗಳ ಮೂಲಕ ವೇತನ ಪಾವತಿಸಲಾಗುತ್ತದೆ ಎಂದು ನೀರಾವರಿ ಇಲಾಖೆ ಅಧಿಕಾರಿಗಳು ನ್ಯಾಯಾಲಯಕ್ಕೆ ತಿಳಿಸಿದ್ದರು. ಆದರೆ, ತಮ್ಮ ವಾದಕ್ಕೆ ಪುರಾವೆಯಾಗಿ ಅಧಿಕಾರಿಗಳು ಯಾವುದೇ ದಾಖಲೆಗಳನ್ನು ಸಲ್ಲಿಸದೇ ಇರುವುದನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿದೆ. ಕಾರ್ಮಿಕ ಕಾಯ್ದೆ ಪ್ರಕಾರ, ಕಾರ್ಮಿಕರಿಗೆ ವೇತನ ಪಾವತಿಸುವ ಹೊಣೆಗಾರಿಕೆ ಮೂಲ ಮಾಲೀಕರಾದ ನೀರಾವರಿ ಇಲಾಖೆಯದ್ದೇ ಎಂದು ಕಾರ್ಮಿಕ ಅಧಿಕಾರಿ ಹಾಗೂ ವೇತನ ಪಾವತಿ ವಿಚಾರಣಾ ಪ್ರಾಧಿಕಾರಿಯಾಗಿರುವ ಕೆ.ಸಿ.ಮುಸಿಯಪ್ಪ ಅಭಿಪ್ರಾಯಪಟ್ಟಿದ್ದಾರೆ.

ಸಂತಸ:  ನ್ಯಾಯಾಲಯದ ಈ ತೀರ್ಪನ್ನು ಸ್ವಾಗತಿಸಿರುವ ಸಂಘದ ಅಧ್ಯಕ್ಷ ಆರ್.ಪಂಪಾಪತಿ, ತುಂಗಭದ್ರಾ ಎಡದಂಡೆ ಮಾತ್ರವಲ್ಲ, ಬಲದಂಡೆ ಕಾಲುವೆಗಳ ವ್ಯಾಪ್ತಿಯಲ್ಲಿನ ನೌಕರರಿಗೂ ಈ ಆದೇಶದಿಂದ ಲಾಭವಾಗಲಿದೆ ಎಂದರು.

ಏಜೆನ್ಸಿಗಳ ಹೆಸರಿನಲ್ಲಿ ನೀರಾವರಿ ಇಲಾಖೆ ಅಧಿಕಾರಿಗಳು ಕೋಟ್ಯಂತರ ರೂಪಾಯಿ ಲೂಟಿ ಮಾಡಿದ್ದಾರೆ. ಈ ಕುರಿತಂತೆ ಸಮಗ್ರ ತನಿಖೆಗೆ ಒತ್ತಾಯಿಸಿ ಶೀಘ್ರವೇ ಲೋಕಾಯುಕ್ತರಿಗೆ ದೂರು ಸಲ್ಲಿಸಲಾಗುವುದು ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT