ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದಕ್ಕೆ ಭಾಷ್ಯ: ಇಲ್ಲಿದೆ ಸಾಕ್ಷಿ

Last Updated 16 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಜಗತ್ತಿನಲ್ಲಿ ಇದುವರೆಗೆ ದೊರೆತಿರುವ ಅತ್ಯಂತ ಪ್ರಾಚೀನ ವಾಙ್ಮಯ ಸಮೂಹ ವೇದ. ಆದರೆ ವೇದಕ್ಕೆ ಸರಿಯಾಗಿ ಅರ್ಥ ವಿವರಣೆ ಮತ್ತು ಭಾಷ್ಯ ಬರೆದು ಭವಿಷ್ಯಕ್ಕೆ ಅದನ್ನು ಕಾಯ್ದಿರಿಸುವ ಕೆಲಸ ಇದುವರೆಗೂ ಎಲ್ಲಿಯೂ ನಡೆದಿರಲಿಲ್ಲ. ಹೀಗಾಗಿ ಹಿಂದೆ ನಾಲ್ಕೂ ವೇದಗಳು ಸೇರಿ ಒಂದು ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿದ್ದ ವೇದ ಮಂತ್ರಗಳು ನಶಿಸಿ ಹೋಗುತ್ತಾ ಇಂದು 20 ಸಾವಿರಕ್ಕೆ ಬಂದು ತಲುಪಿವೆ. ಇವು ಮತ್ತೂ ನಶಿಸಿ ಹೋಗುವ ಮೊದಲು ಎಚ್ಚೆತ್ತುಕೊಂಡು ವೇದಗಳ ಸಂರಕ್ಷಣೆ, ವೇದಗಳಿಗೆ ಭಾಷ್ಯ, ವೇದಗಳು ಸಾರುವ ಅರ್ಥಗಳನ್ನು ಜನಸಾಮಾನ್ಯರಿಗೆ ತಿಳಿಸುವ ಕೆಲಸ ಮಾಡುತ್ತಿದೆ ಜಯನಗರ 4ನೇ ಬ್ಲಾಕ್‌ನಲ್ಲಿರುವ ಶ್ರೀ ಅರಬಿಂದೊ ಕಪಾಲಿಶಾಸ್ತ್ರಿ ವೇದ ಸಂಸ್ಕೃತಿ ಸಂಸ್ಥೆ (SAKSI). ’ಸಾಕ್ಷಿ’ ಎಂದೇ ಈ ಸಂಸ್ಥೆಯ ಹೆಸರು ಪ್ರಸಿದ್ಧಿಯಾಗಿದೆ.

ಅಮೆರಿಕದ ಫರ್ಡ್ಯೂ ವಿಶ್ವವಿದ್ಯಾಲಯದಲ್ಲಿ ಎಲೆಕ್ಟ್ರಿಕಲ್ ಮತ್ತು ಕಂಪ್ಯೂಟರ್ ಎಂಜಿನಿಯರಿಂಗ್ ವಿಭಾಗದ ಪ್ರೊಫೆಸರ್ ಆಗಿದ್ದ ಡಾ. ಆರ್. ಎಲ್. ಕಶ್ಯಪ್ ಅವರು (73) ವೇದವನ್ನು ಮುಂದಿನ ಪೀಳಿಗೆಗೂ ಕಾಪಾಡಲು ‘ಸಾಕ್ಷಿ’ಯಾಗಿ ನಿಂತವರು. ಅಮೆರಿಕದಲ್ಲಿ 35 ವರ್ಷ ಸೇವೆ ಸಲ್ಲಿಸಿ ಗಳಿಸಿದ ದುಡ್ಡನ್ನೆಲ್ಲ ವೇದಕ್ಕೆ ಭಾಷ್ಯ ಬರೆಯುವುದಕ್ಕೇ ತೊಡಗಿಸಿದ ಮಹಾನ್ ಧಾರಾಳಿ ಅವರು. ಜಯನಗರದ ಅವರ ಮನೆಯೇ ‘ಸಾಕ್ಷಿ’ ಕಚೇರಿ.

ಸಾವಿರಾರು ವೇದ ಭಾಷ್ಯ ಪುಸ್ತಕಗಳು ಇಲ್ಲಿಂದ ದೇಶ, ವಿದೇಶದ ನಾನಾ ಭಾಗಗಳಿಗೆ ಹೋಗಿವೆ. ಕಶ್ಯಪ್ ಅವರು ಬರೆದ ವೇದಕ್ಕೆ ಸಂಬಂಧಿಸಿದ 350ಕ್ಕೂ ಅಧಿಕ ಇಂಗ್ಲಿಷ್ ಕೃತಿಗಳು, ಆರು ಭಾಷೆಗಳಲ್ಲಿ ಭಾಷಾಂತರಗೊಂಡ ಕೃತಿಗಳ ಭವ್ಯ ದರ್ಶನ ಇಲ್ಲಿ ಲಭ್ಯ. ಕನ್ನಡದಲ್ಲಿ ಇದುವರೆಗೆ 52 ಪುಸ್ತಕಗಳು ಪ್ರಕಟವಾಗಿವೆ ಮತ್ತು 12 ಸಿ.ಡಿ.ಗಳು ಹೊರಬಂದಿವೆ. ಇಲ್ಲಿನ ಧ್ಯಾನಮಂದಿರ ವಾಹನ ದಟ್ಟಣೆಯ ರಸ್ತೆಯ ಬದಿಯಲ್ಲಿ ಇದ್ದೂ ಕಾಡಿನ ನಡುವಿನ ಪ್ರಶಾಂತತೆಯನ್ನು ನೀಡುವ ಮೌನ ಮಂದಿರ.

ವೇದಕ್ಕೆ ಇಲ್ಲಿಯ ತನಕ ನಿಜವಾದ ಭಾಷ್ಯವೇ ಬಂದಿಲ್ಲ. ಆಚಾರ್ಯ ಆನಂದತೀರ್ಥ, ಸ್ವಾಮಿ ರಾಘವೇಂದ್ರ, ಸ್ವಾಮಿ ದಯಾನಂದ ಸರಸ್ವತಿ ಮೊದಲಾದವರು ವೇದಕ್ಕೆ ಆಧ್ಯಾತ್ಮಕ ಭಾಷ್ಯ ನೀಡುವ ಪ್ರಯತ್ನ ಮಾಡಿದ್ದಾರೆ. ಆದರೆ ವೇದದ ನಿಜಾರ್ಥವನ್ನು ಮರೆಮಾಚುವ ವ್ಯಾಖ್ಯಾನ ಪರಂಪರೆಯನ್ನು ತಡೆಯುವಲ್ಲಿ ಸಂಪೂರ್ಣ ಯಶಸ್ವಿಯಾಗಲಿಲ್ಲ. ಇದನ್ನು ಗಮನಿಸಿದ ಶ್ರೀ ಅರಬಿಂದೊ ಅವರು ಸತತ ಅಧ್ಯಯನದ ಬಳಿಕ ವೇದಗಳ ಅಂತರಾರ್ಥ ಹೊರಗೆಡಹುವ ಸುಳಿವು ಪಡೆದುಕೊಂಡರು. ವೇದಕ್ಕೆ ಬಾಹ್ಯ ಅರ್ಥಕ್ಕಿಂತ ಮಿಗಿಲಾದ ರಹಸ್ಯ ಅರ್ಥ ಇರುವುದನ್ನು ಅವರು ತೋರಿಸಿಕೊಟ್ಟರು.

ಅರಬಿಂದೊ ಅವರ ಅನುಯಾಯಿ ಟಿ.ವಿ. ಕಪಾಲಿಶಾಸ್ತ್ರಿ ಅವರು ‘ಸಿದ್ಧಾಂಜನ’ ಭಾಷ್ಯ ಬರೆದರು. ಜನಸಾಮಾನ್ಯರಿಗೆ ಅರಬಿಂದೊ ಅವರ ವೇದ ಚಿಂತನೆಯ ಮಹತ್ವವನ್ನು ಅರ್ಥ ಮಾಡಿಸುವ ಉದ್ದೇಶ ಕಪಾಲಿಶಾಸ್ತ್ರಿಗಳದ್ದಾಗಿತ್ತು. ವೇದ ಹೇಳುವುದು ಅಂತರ್ಯಜ್ಞ ಮತ್ತು ಅಂತರಂಗ ಉಪಾಸನೆಯನ್ನೇ ಎಂಬುದನ್ನು ಪ್ರಾಜ್ಞರಿಗೆ ಮನವರಿಕೆ ಮಾಡಿಸಲು ಕಪಾಲಿಶಾಸ್ತ್ರಿಗಳು ಶ್ರಮಿಸಿದರು. ಆದರೆ ಅವರಿಂದ ಎಲ್ಲಾ ವೇದ ಮಂತ್ರಗಳಿಗೂ ಭಾಷ್ಯ ಬರೆಯುವುದು ಸಾಧ್ಯವಾಗಲಿಲ್ಲ. ಅವರ ಚಿಂತನೆಯ ಹಾದಿಯಲ್ಲೇ ಸಾಗಿರುವ ಕಶ್ಯಪ್ ದೇಶದಲ್ಲಿ ಯಾರೂ ಮಾಡಿರದ ಮಹಾನ್ ಕಾರ್ಯವನ್ನು ಮಾಡಿ ಬಹುತೇಕ ಮುಗಿಸಿದ್ದಾರೆ. ಈಗಾಗಲೇ ಋಗ್ವೇದದ ಎಲ್ಲಾ 10552 ಮಂತ್ರಗಳಿಗೆ ಮತ್ತು ಯಜುರ್ವೇದದ ಎಲ್ಲಾ ಏಳು ಕಾಂಡಗಳಿಗೆ ಇಂಗ್ಲಿಷ್‌ನಲ್ಲಿ ಭಾಷ್ಯ ಬರೆದು ಮುಗಿಸಿದ್ದಾರೆ. ಇದೀಗ ಸಾಮವೇದ ಮತ್ತು ಅಥರ್ವವೇದಗಳಿಗೆ ಭಾಷ್ಯ ಬರೆಯುತ್ತಿದ್ದು, ಆ ಸಾಹಸದಲ್ಲೂ ಕೊನೆಯ ಹಂತಕ್ಕೆ ಬಂದಿದ್ದಾರೆ. ಜತೆಗೆ ವೇದಗಳನ್ನು ಅಂತರಾರ್ಥವನ್ನು ಸರಳವಾಗಿ ತಿಳಿಸಲು ಹಲವಾರು ಕಿರು ಹೊತ್ತಿಗೆಗಳನ್ನು ಹೊರತಂದಿದ್ದಾರೆ.

ಕಶ್ಯಪ್ ಅವರ ಇಂಗ್ಲಿಷ್‌ನಲ್ಲಿರುವ ವೇದ ಭಾಷ್ಯಗಳನ್ನು ಸಂಪೂರ್ಣವಾಗಿ ಕನ್ನಡ ಮತ್ತು ಇತರ ಭಾಷೆಗಳಿಗೆ ಭಾಷಾಂತರ ಮಾಡುವ ಕಾರ್ಯ ಪ್ರಗತಿಯಲ್ಲಿದೆ. ಆರ್. ವಿ. ಜಹಗೀರ್‌ದಾರ್ ಅವರು ‘ಸಾಕ್ಷಿ’ಯ ನಿರ್ದೇಶಕರು ಮಾತ್ರವಲ್ಲ, ವೇದ ಭಾಷ್ಯಗಳನ್ನು ಕನ್ನಡಕ್ಕೆ ಭಾಷಾಂತರಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

ಪುಸ್ತಕ ಪ್ರಕಟಣೆ ಮಾತ್ರವಲ್ಲದೆ ಕಶ್ಯಪ್ ಮಾರ್ಗದರ್ಶನದಲ್ಲಿ ‘ಸಾಕ್ಷಿ’ ವತಿಯಿಂದ ಹತ್ತಾರು ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿವೆ. ವೇದ ಜ್ಞಾನ ಕಾರ್ಯಾಗಾರಗಳು, ಉಪನ್ಯಾಸ, ವೇದ ತರಗತಿ, ವೇದ ಬಾಗಿನ, ವೇದ ವಾಹಿನಿ, ವಿದ್ವಾಂಸರಿಗೆ ಗೌರವ, ವೇದ ಸುರಭಿ, ಅರೋ ವೇದ ಇವುಗಳಲ್ಲಿ ಮುಖ್ಯವಾದವು. ವೇದ ಶಿಕ್ಷಣ ಮತ್ತು ಪ್ರಸಾರದ ಸಂಚಾರಿ ಘಟಕವಾದ ವೇದ ವಾಹಿನಿ ವಾಹನವು ರಾಜ್ಯದ ಎಲ್ಲೆಡೆ ಸಂಚರಿಸುತ್ತ ವೇದದ ಬಗ್ಗೆ ಜ್ಞಾನ ಪಸರಿಸುವ ಕಾರ್ಯ ನಡೆಸುತ್ತಿದೆ. ವೇದ ಜ್ಞಾನ ಕುರಿತ ಪ್ರಕಟಣೆಗಳನ್ನು ಮನೆ ಬಾಗಿಲಿಗೇ ತಲುಪಿಸುವ ಮಹತ್ವಾಕಾಂಕ್ಷೆ ಇದರ ಹಿಂದೆ ಇದೆ.

ಸದ್ಯ ಮೂರು ತಿಂಗಳಿಗೊಮ್ಮೆ ಬೆಂಗಳೂರಿನಲ್ಲಿ ವೇದ ಜ್ಞಾನ ಕಾರ್ಯಾಗಾರ ನಡೆಯುತ್ತಿದೆ (ಅ.24ರಂದು ಭಾರತೀಯ ವಿದ್ಯಾಭವನದದಲ್ಲಿ ಇಂತಹ ಒಂದು ಕಾರ್ಯಾಗಾರ ನಡೆಯಲಿದೆ). ಇದನ್ನು ತಿಂಗಳಿಗೊಮ್ಮೆ ಮಾಡುವ ಯೋಜನೆ ಕಶ್ಯಪ್ ಅವರದ್ದು. ಪ್ರತಿ ಸೋಮವಾರ ಸಂಜೆ ‘ಸಾಕ್ಷಿ’ ಕಾರ್ಯಾಲಯದಲ್ಲಿ ಕಶ್ಯಪ್ ಅವರಿಂದ ಆಧ್ಯಾತ್ಮಿಕ ಅರ್ಥ ವಿವರಣೆ, ಪ್ರತಿ ಬುಧವಾರ ಉಪನಿಷತ್ ಜ್ಞಾನ ಕುರಿತು ತರಗತಿಗಳು ಹಾಗೂ ಪ್ರತಿ ಶನಿವಾರ ಸ್ವರ ಸಹಿತ ವೇದಮಂತ್ರ ಪಠಣ ಕಲಿಸುವ ತರಗತಿಗಳು ನಡೆಯುತ್ತವೆ.

ವೇದದ ಅಂತರಾರ್ಥ ವಿವರಿಸಿ ಆದನ್ನು ಆಸಕ್ತರಿಗೆ ತಿಳಿಸಲು ಕೃತಿಗಳು, ಕಾರ್ಯಾಗಾರಗಳು ಮತ್ತು ಸಂಚಾರಿ ವಾಹನಗಳ ಮೂಲಕ ಶ್ರಮಿಸುತ್ತಿರುವ ಡಾ. ಕಶ್ಯಪ್ ಮತ್ತು ‘ಸಾಕ್ಷಿ’ ತಂಡದ ಪ್ರಯತ್ನ ನಿಜಕ್ಕೂ ಅನನ್ಯ.

ಮಾಹಿತಿಗೆ ಸಂಪರ್ಕಿಸಿ 22456315, 9008833886 ಸಂಪರ್ಕಿಸಬಹುದು.ಇ ಮೇಲ್ info@veda.com ವೆಬ್‌ಸೈಟ್ www.vedah.com
 g ಎಂ.ಜಿ. ಬಾಲಕೃಷ್ಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT