ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯವಸ್ಥೆ ಬದಲಿಗೆ ಅಡ್ವಾಣಿ ಕರೆ

Last Updated 11 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಸಿತಾಬ್ದಿಯಾರ (ಬಿಹಾರ) (ಪಿಟಿಐ): `ದೇಶದಲ್ಲಿ ಭ್ರಷ್ಟಾಚಾರವನ್ನು ಹೋಗಲಾಡಿಸಲು ಬರೀ ಮುಖಂಡತ್ವ ಬದಲಿಸಿದರೆ ಸಾಲದು ಬದಲಿಗೆ ಇಡೀ ವ್ಯವಸ್ಥೆಯನ್ನೇ ಬದಲಿಸಬೇಕು~ ಎಂದು ಬಿಜೆಪಿಯ ರಾಷ್ಟ್ರೀಯ ನಾಯಕ ಎಲ್. ಕೆ.ಅಡ್ವಾಣಿ ಮಂಗಳವಾರ ಇಲ್ಲಿ ಕರೆ ನೀಡಿದರು.

38 ದಿನಗಳ ತಮ್ಮ `ಜನ ಚೇತನ ಯಾತ್ರೆ~ಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಚಾಲನೆ ನೀಡಿದ ಬಳಿಕ ಇಲ್ಲಿನ ಗಾಂಧಿ ಮೈದಾನದಲ್ಲಿ ಹಮ್ಮಿಕೊಂಡಿದ್ದ ಬಹಿರಂಗ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಜನರು ದೇಶದ ಸಾಮರ್ಥ್ಯದ ಬಗ್ಗೆ ವಿಶ್ವಾಸ ಕಳೆದುಕೊಂಡಿದ್ದಾರೆ, ಈ ಯಾತ್ರೆಯ ಮೂಲಕ ಜನರಲ್ಲಿ ದೇಶದ ಸಾಮರ್ಥ್ಯದ ಬಗ್ಗೆ ವಿಶ್ವಾಸ ಮೂಡಿಸಿದರೆ ಅದೇ ದೊಡ್ಡ ಸಾಧನೆಯಾಗುತ್ತದೆ ಎಂದು 84 ವರ್ಷದ ಅಡ್ವಾಣಿ ಹೇಳಿದರು.

ಯುಪಿಎ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಜನಜಾಗೃತಿ ಮೂಡಿಸುವುದರ ಜೊತೆಗೆ, ಜನ ಲೋಕಪಾಲ ಮಸೂದೆ ಜಾರಿ ಹಾಗೂ ವಿದೇಶಿ ಬ್ಯಾಂಕುಗಳಲ್ಲಿ ಇಟ್ಟಿರುವ ಕಪ್ಪು ಹಣವನ್ನು ವಾಪಸ್ ತರುವಂತೆ ಯಾತ್ರೆ ಒತ್ತಾಯಿಸಲಿದೆ ಎಂದು ಹೇಳಿದರು.

ಕಳೆದ 21 ವರ್ಷಗಳಲ್ಲಿ ಇದು ಅಡ್ವಾಣಿ ಅವರ ಆರನೇ ರಥಯಾತ್ರೆಯಾಗಿದೆ. `70ರ ದಶಕದಲ್ಲಿ ಕೇಂದ್ರದಲ್ಲಿನ ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯಲು ಜಯಪ್ರಕಾಶ್ ನಾರಾಯಣ್ ಅವರು ಎಡ ಪಕ್ಷಗಳನ್ನು ಹೊರತುಪಡಿಸಿ ಎಲ್ಲ ರಾಜಕೀಯ ಪಕ್ಷಗಳನ್ನೂ ಒಗ್ಗೂಡಿಸಿದ್ದರು, ದೇಶ ಈಗ ಸಹ ಅದೇ ಬಗೆಯ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಅದಕ್ಕಾಗಿ ಬರೀ ನಾಯಕತ್ವದ ಬದಲಾವಣೆಗೆ ಬದಲಾಗಿ ಇಡೀ ವ್ಯವಸ್ಥೆಯನ್ನೇ ಬದಲಾಯಿಸಬೇಕಾಗಿದೆ ಎಂದು ಅವರು ಹೇಳಿದರು.

ಜಯಪ್ರಕಾಶ್ ನಾರಾಯಣ್ ಅವರ ಸಾಧನೆಯೇ ಯಾತ್ರೆಗೆ ಪ್ರೇರಣೆ. ಶುದ್ಧ ರಾಜಕಾರಣ ಮತ್ತು ಉತ್ತಮ ಆಡಳಿತವೇ ಇದರ ಮುಖ್ಯ ಉದ್ದೇಶ ಎಂದು ಒತ್ತಿ ಹೇಳಿದರು.

ಸ್ವಾತಂತ್ರ್ಯ ಸಂಗ್ರಾಮ, ಜೆ.ಪಿ ಚಳವಳಿ ಸೇರಿದಂತೆ ಹಿಂದೆ ನಡೆದಿರುವ ಎಲ್ಲ ಆಂದೋಲನಗಳೂ ಜನಜಾಗೃತಿ ಮೂಡಿಸಿವೆ. ಸ್ವಾತಂತ್ರ್ಯ ಸಂಗ್ರಾಮ ಬ್ರಿಟಿಷರ ವಿರುದ್ಧವಾಗಿದ್ದರೆ, ಜೆ.ಪಿ ಚಳವಳಿ ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧವಾಗಿತ್ತು ಎಂದು ಸ್ಮರಿಸಿದರು.

21ನೇ ಶತಮಾನ ಭಾರತಕ್ಕೆ ಸೇರಿದ್ದು. ಆದ್ದರಿಂದ ವಿಶ್ವದಲ್ಲೇ ಭಾರತ ಪ್ರಥಮ ಸ್ಥಾನಕ್ಕೆ ಬರುವಂತೆ ಮಾಡಲು ನಾವೆಲ್ಲರೂ ಪಣ ತೊಡಬೇಕಾಗಿದೆ ಎಂದರು.

2005ರಲ್ಲಿ ಬಿಹಾರದಲ್ಲಿ ಎನ್‌ಡಿಎ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಮುಖ್ಯಮಂತ್ರಿ ನಿತೀಶ್ ಕುಮಾರ್ ಭಾರಿ ಬದಲಾವಣೆ ತಂದಿದ್ದಾರೆ ಎಂದು ಅವರು ಶ್ಲಾಘಿಸಿದರು.

 `ನಾನು ಒಂದು ಬಾರಿ ಕೋರಿದ್ದೆ, ಕೂಡಲೇ ಒಪ್ಪಿಕೊಂಡ ನಿತೀಶ್ ಯಾತ್ರೆಯನ್ನು ಉದ್ಘಾಟಿಸಿದ್ದಾರೆ~ ಎಂದು ಹೇಳಿದರು.

`ಜೆ.ಪಿ ಅವರ ಜನ್ಮದಿನ ಅವರ ಹುಟ್ಟೂರಿನಲ್ಲೇ ಯಾತ್ರೆ ಆರಂಭಿಸಿರುವುದು ಸಮಂಜಸವಾದ ಕ್ರಮ. ಜೆ.ಪಿ ಅವರು ಸಂಪೂರ್ಣ ಕ್ರಾಂತಿಗೆ ಕರೆ ನೀಡಿ ಚಳವಳಿ ಆರಂಭಿಸಿದಾಗ ಕಾಂಗ್ರೆಸ್‌ನ್ನು ಜನ ಅಧಿಕಾರದಿಂದ ಕೆಳಗಿಳಿಸುತ್ತಾರೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ~ ಎಂದು ನಿತೀಶ್ ಕುಮಾರ್ ಹೇಳಿದರು.

ಬಿಜೆಪಿ ಮುಖಂಡ ಮತ್ತು ಯಾತ್ರೆಯ ಸಂಚಾಲಕ ಅನಂತ ಕುಮಾರ್ ಮಾತನಾಡಿ, `ಜೆ.ಪಿ ಅವರ ಸಂಪೂರ್ಣ ಕ್ರಾಂತಿಯ ನಂತರ ನಡೆಯುತ್ತಿರುವ ಎರಡನೇ ಸಂಪೂರ್ಣ ಕ್ರಾಂತಿಯು ದೇಶವನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸಲಿದೆ~ ಎಂದು ಆಶಿಸಿದರು.

ಈಶಾನ್ಯ ರಾಜ್ಯಗಳು, ಅಂಡಮಾನ್ ನಿಕೊಬಾರ್ ದ್ವೀಪಗಳು, ಜಮ್ಮು, ಗುಜರಾತ್, ಉತ್ತರ ಪ್ರದೇಶ, ದಕ್ಷಿಣದ ರಾಜ್ಯಗಳು ಸೇರಿದಂತೆ 23 ರಾಜ್ಯಗಳು ಮತ್ತು ನಾಲ್ಕು ಕೇಂದ್ರಾಡಳಿತ ಪ್ರದೇಶಗಳಲ್ಲಿ ಯಾತ್ರೆ ಸಂಚರಿಸಲಿದೆ.
ನಿತೀಶ್ ಕುಮಾರ್, ಎಸ್.ಕೆ.ಮೋದಿ, ಸುಷ್ಮಾ ಸ್ವರಾಜ್ ಮತ್ತು ಅರುಣ್ ಜೇಟ್ಲಿ ಅವರ ಜತೆ ಪಟ್ನಾದಿಂದ ಹೆಲಿಕಾಪ್ಟರ್‌ನಲ್ಲಿ ಬಂದಿಳಿದ ಅಡ್ವಾಣಿ, ಜಯಪ್ರಕಾಶ್ ನಾರಾಯಣ್ ಅವರ ಪೂರ್ವಜರ ನಿವಾಸಕ್ಕೆ ಭೇಟಿ ನೀಡಿ ಜೆ.ಪಿ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.

ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದ ಮೇಲೆ 2011ರಲ್ಲಿ ಜೆ.ಪಿ ಅವರ ಹುಟ್ಟೂರಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿರುವ ಬಗ್ಗೆ ಅಡ್ವಾಣಿ ಅಚ್ಚರಿ ವ್ಯಕ್ತಪಡಿಸಿದರು. ನಿತೀಶ್ ನೇತೃತ್ವದ ಸರ್ಕಾರ ಈ ಊರಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಜೆ.ಪಿ ನಾಡಿಗೆ ಅವಮಾನ: ಜಯಪ್ರಕಾಶ್ ನಾರಾಯಣ್ ಅವರು ಬಿಜೆಪಿ ಸಿದ್ಧಾಂತಕ್ಕೆ ವಿರುದ್ಧವಾಗಿ ಇದ್ದುದರಿಂದ ಅಡ್ವಾಣಿ ಅವರ ರಥ ಯಾತ್ರೆಯು ಜೆ.ಪಿ ನಾಡಿಗೆ ಅವಮಾನ ಉಂಟು ಮಾಡಿದೆ ಎಂದು ಆರ್‌ಜೆಡಿ ಮುಖಂಡ ಲಾಲೂ ಪ್ರಸಾದ್ ಟೀಕಿಸಿದ್ದಾರೆ.

ಜನಜಾಗೃತಿ ಎನ್ನುವುದು ನೆಪ ಮಾತ್ರ, ಅಡ್ವಾಣಿ ಅವರಿಗೆ ಇನ್ನೂ ಮುಂಚೂಣಿ ನಾಯಕತ್ವದಲ್ಲಿ ಇರಬೇಕೆಂಬ ಮಹತ್ವಾಕಾಂಕ್ಷೆ ಇದೆ ಎಂದು ಅವರು ವ್ಯಂಗ್ಯವಾಡಿದ್ದಾರೆ.

ಏಕೈಕ ಗುರಿ: ಪ್ರಧಾನಿ ಆಗಬೇಕೆಂಬುದೇ ಅಡ್ವಾಣಿ ಜೀವನದ ಏಕೈಕ ಗುರಿಯಾಗಿದ್ದು, ಈ ನಿಟ್ಟಿನಲ್ಲಿ ರಥಯಾತ್ರೆಯಿಂದ ಅವರಿಗೆ ಯಾವುದೇ ಪ್ರಯೋಜನವಾಗದು ಎಂದು ಕಾಂಗ್ರೆಸ್ ನಾಯಕ ಅಶ್ವನಿ ಕುಮಾರ್ ವ್ಯಂಗ್ಯವಾಡಿದ್ದಾರೆ.

`ನೀವು ಎಷ್ಟು ರಥಯಾತ್ರೆಗಳನ್ನು ಬೇಕಾದರೂ ನಡೆಸಿ, ಆದರೆ ಜನ ನಿಮ್ಮ ಉದ್ದೇಶಗಳ ಬಗ್ಗೆ ಜಾಗೃತರಾಗಿದ್ದಾರೆ~ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ರಾಜ್ಯ ಸಚಿವರೂ ಆಗಿರುವ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT