ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶತಮಾನದ ಸಂಭ್ರಮಕ್ಕೆ ಕವಿದಿದೆ ಮಂಕು

Last Updated 3 ಜೂನ್ 2013, 10:51 IST
ಅಕ್ಷರ ಗಾತ್ರ

ವಿಜಾಪುರ: ಸರ್ ಎಂ.ವಿಶ್ವೇಶ್ವರಯ್ಯ ಅವರ ಕನಸಿನ ಕೂಸಾದ ಭೂತನಾಳ ಕೆರೆ ನೀರು ಪೂರೈಕೆ ಯೋಜನೆಗೆ ಈಗ ನೂರು ವರ್ಷ. ಈ ಕೆರೆ ವರ್ಷಪೂರ್ತಿ ಬತ್ತಿ ಬರಿದಾಗಿರುವುದರಿಂದ ಶತಮಾನೋತ್ಸವ ಸಂಭ್ರಮಕ್ಕೆ ಮಂಕು ಕವಿದಿದೆ.

ಈ ಕೆರೆ ಒಮ್ಮೆ ತುಂಬಿದರೆ 18 ತಿಂಗಳ ಕಾಲ ವಿಜಾಪುರ ನಗರದ ಶೇ 35ರಷ್ಟು ಪ್ರದೇಶಕ್ಕೆ ನೀರು ಪೂರೈಸಬಹುದು. ನಗರ ಸಮೀಪದ ಪ್ರಮುಖ ಜಲ ಮೂಲ ಇದು. ಆದರೆ, ಕೆರೆ ಬತ್ತಿರುವುದರಿಂದ ಏಪ್ರಿಲ್ 2012ರಿಂದ ಇಲ್ಲಿಂದ ನೀರು ಪಡೆಯುವುದನ್ನು ಸ್ಥಗಿತಗೊಳಿಸಲಾಗಿದೆ.

1901ರಿಂದ 1910ರ ಅವಧಿಯಲ್ಲಿ ಮಳೆಯ ಕೊರತೆಯಿಂದ ನಗರದ ತಾಜ್‌ಬಾವಡಿ ಮತ್ತು ಕೆಲವೇ ಕೆಲುವು ಬಾವಿಗಳನ್ನು ಹೊರತು ಪಡಿಸಿ ಬಹುತೇಕ ಬಾವಿಗಳು ಬತ್ತಿದ್ದವು. ನೀರಿನ ಹಾಹಾಕಾರ ಉಂಟಾಗಿತ್ತು. ಈ ಸಮಸ್ಯೆ ನಿವಾರಣೆಗೆ ನಗರಸಭೆ ಸರ್ ಎಂ.ವಿಶ್ವೇಶ್ವರಯ್ಯ ಅವರ ಮೊರೆ ಹೋಗಿತ್ತು.

ನಗರ ಸಭೆ ಹಾಗೂ ಸರ್ಕಾರದ ಮನವಿಯ ಮೇರೆಗೆ 1907ರ ಡಿಸೆಂಬರ್ ತಿಂಗಳಲ್ಲಿ ನಗರಕ್ಕೆ ಆಗಮಿಸಿದ್ದ `ಸರ್. ಎಂ.ವಿ', ವಿಜಾಪುರಕ್ಕೆ ಪರ್ಯಾಯ ನೀರು ಪೂರೈಕೆ ಯೋಜನೆ ಕುರಿತು ಸಮೀಕ್ಷೆ ನಡೆಸಿದರು. 1907ರ ಡಿಸೆಂಬರ್ 23ರಂದು ವಿಶ್ವೇಶ್ವರಯ್ಯ ನೇತೃತ್ವದಲ್ಲಿ ನಗರಸಭೆಯ ವಿಶೇಷ ಸಭೆ ನಡೆದು, ಅವರ ಸಲಹೆಯಂತೆ ಭೂತನಾಳ ಬಳಿ ಹೊಸ ಕೆರೆ ನಿರ್ಮಿಸುವ ನಿರ್ಧಾರಕ್ಕೆ ಬರಲಾಯಿತು.

ವಿಶ್ವೇಶ್ವರಯ್ಯ ಅವರು ರೂಪಿಸಿದ ಯೋಜನೆಗೆ ಸರ್ಕಾರ 1908ರಲ್ಲಿ ಮಂಜೂರಾತಿ ನೀಡಿತು. ಒಟ್ಟು ರೂ 6,81,956 ಯೋಜನಾ ಮೊತ್ತದ ಯೋಜನೆ ಅದಾಗಿತ್ತು. ರೂ 2 ಲಕ್ಷವನ್ನು ಸರ್ಕಾರ ಅನುದಾನದ ರೂಪದಲ್ಲಿ ಹಾಗೂ ರೂ 3.68ಲಕ್ಷ ಸಾಲದ ರೂಪದಲ್ಲಿ ಬಿಡುಗಡೆ ಮಾಡಿತು.

ಭೂತನಾಳ ಬಳಿ ಬೃಹತ್ ಕೆರೆ ತೋಡುವ ಹಾಗೂ ಬದು ನಿರ್ಮಾಣ ಕಾಮಗಾರಿ 1911ರಲ್ಲಿ ಪೂರ್ಣಗೊಂಡಿತು. ಭೂತನಾಳ ಕೆರೆ ಬಳಿಯೇ ನೀರೆತ್ತುವ ಜಾಕ್‌ವೆಲ್‌ನ್ನು 1913ರಲ್ಲಿ ನಿರ್ಮಿಸಲಾಯಿತು (ಇಡೀ ಯೋಜನೆ  7.2.1914ರಿಂದ ಕಾರ್ಯಾರಂಭ ಮಾಡಿತು).
ಭೂತನಾಳ ಕೆರೆಯ ಅಚ್ಚುಕಟ್ಟು ಪ್ರದೇಶ 120 ಎಕರೆಯಾಗಿದ್ದು, ನಾಲ್ಕು ನಾಲೆಗಳು ಸೇರುತ್ತವೆ. ಕೆರೆಯ ಒಡ್ಡಿನ ಉದ್ದ 3100 ಅಡಿ. 140.36 ಮಿಲಿಯನ್ ಕ್ಯೂಬಿಕ್ ಅಡಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಕೆರೆಯ ನೀರನ್ನು ಅಲ್ಲಿಯೇ ಶುದ್ಧೀಕರಿಸಿ ಪೂರೈಸಲು ಸ್ಯಾಂಡ್ ಫಿಲ್ಟರ್ ಬೆಡ್, ಕ್ಲೋರಿನೇಷನ್ ಪ್ಲಾಂಟ್ ನಿರ್ಮಿಸಲಾಯಿತು. ನಿರಂತರ ನೀರು ಪೂರೈಕೆಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಎಣ್ಣೆ ಯಂತ್ರಗಳನ್ನು (ಆಯಿಲ್ ಎಂಜಿನ್) ಅಳವಡಿಸಲಾಯಿತು. ಈ ಎಣ್ಣೆ ಯಂತ್ರಗಳು ಪ್ರತಿ ಗಂಟೆಗೆ 1.30 ಲಕ್ಷ ಗ್ಯಾಲನ್ ನೀರು ಎತ್ತುವ ಸಾಮರ್ಥ್ಯ ಹೊಂದಿದ್ದವು.

ಇದರ ಜೊತೆಗೆ 240 ಅಶ್ವಶಕ್ತಿಯ ಎರಡು, 175 ಅಶ್ವಶಕ್ತಿಯ ಒಂದು ವಿದ್ಯುತ್ ಪಂಪ್‌ಸೆಟ್ ಜೋಡಿಸಲಾಗಿತ್ತು. ಈ ಮೂರು ಯಂತ್ರಗಳು 2.50 ಲಕ್ಷ ಗ್ಯಾಲನ್ ನೀರನ್ನು ಪ್ರತಿ ಗಂಟೆಗೆ ಎತ್ತುವ ಸಾಮಥ್ಯ ಹೊಂದಿವೆ. ಈ ಯಂತ್ರದ ಮನೆಯನ್ನು 1913ರಲ್ಲಿ ನಿರ್ಮಿಸಲಾಯಿತು. ಆಯಿಲ್ ಟ್ಯಾಂಕ್, ಉಗ್ರಾಣ, ಕೆಲಸಗಾರರಿಗೆ ವಸತಿ ಗೃಹಗಳನ್ನು ಇಲ್ಲಿ ನಿರ್ಮಿಸಲಾಗಿದ್ದು, ಈ ಎಲ್ಲ ಕಟ್ಟಡಗಳು ಈಗಲೂ ಸುಸ್ಥಿತಿಯಲ್ಲಿವೆ.

ಭೂತನಾಳ ಕೆರೆಯಿಂದ ನಿತ್ಯ 10 ಎಂಎಲ್‌ಡಿ (ದಶಲಕ್ಷ ಲೀಟರ್) ನೀರನ್ನು ಪಡೆದು, ಕೆಎಚ್‌ಬಿ ಕಾಲೊನಿ (15 ಲಕ್ಷ ಲೀಟರ್), ಸೋಲಾಪುರ ರಸ್ತೆ (10 ಲಕ್ಷ ಲೀಟರ್), ಬಿಎಲ್‌ಡಿಇಯ (15 ಲಕ್ಷ ಲೀಟರ್) ಮೇಲ್ಮಟ್ಟದ ಟ್ಯಾಂಕ್‌ಗಳಿಗೆ ತುಂಬಿ, ಅಲ್ಲಿಂದ  ಕೆ.ಸಿ. ನಗರ, ಕೆ.ಎಚ್.ಬಿ. ಕಾಲೊನಿ, ಎಸ್ಪಿ ಕಚೇರಿ ಹಿಂಭಾಗದ ಪ್ರದೇಶ, ಗ್ಯಾಂಗ್‌ಬಾವಡಿ, ಭಾವಸಾರ ನಗರ, ಶಕ್ತಿ ನಗರ, ಮಂಜುನಾಥ ನಗರ, ಶಹಾಪೂರ ಅಗಸಿ, ಪೊಲೀಸ್ ಪರೇಡ್ ಮೈದಾನ ಪ್ರದೇಶ, ಚಾಲುಕ್ಯ ನಗರ, ಆದರ್ಶ ನಗರ, ಕಾಸೀಮಕೇರಿ ತಾಂಡಾ, ಆಶ್ರಮ, ಆನಂದ ನಗರ, ಎಸ್.ಎಸ್. ಹೈಸ್ಕೂಲ್ ರಸ್ತೆ, ಇಂಡಿ ರಸ್ತೆ, ಶಹಾಪೇಟಿ ಮತ್ತಿತರ ಬಡಾವಣೆಗಳಿಗೆ ಪೂರೈಸಲಾಗುತ್ತಿತ್ತು.

ಶೇ 35ರಷ್ಟು ಪ್ರದೇಶಕ್ಕೆ ನೀರು: ವಿಜಾಪುರ ನಗರಕ್ಕೆ ನಿತ್ಯ 40ರಿಂದ 45 ದಶಲಕ್ಷ ಲೀಟರ್ (ಎಂ.ಎಲ್.ಡಿ) ನೀರಿನ ಅಗತ್ಯವಿದ್ದು,  ಭೂತನಾಳ ಕೆರೆ ಹಾಗೂ ಕೊಲ್ಹಾರ ಹತ್ತಿರದ ಕೃಷ್ಣಾ ನದಿಯ ಎರಡು ಯೋಜನೆಗಳು ನಗರಕ್ಕೆ ನೀರು ಪೂರೈಸುವ ಮೂಲಗಳು.
`ಭೂತನಾಳ ಕೆರೆಯಿಂದ ನೀರು ಪಡೆಯುವುದನ್ನು ಮಧ್ಯದಲ್ಲಿ ನಿಲ್ಲಿಸಲಾಗಿತ್ತು. 2007ರಿಂದ ಪೂರ್ಣ ಪ್ರಮಾಣದಲ್ಲಿ ನೀರು ಪಡೆಯಲಾಗುತ್ತಿದೆ. 2009ನೇ ಸಾಲಿನಲ್ಲಿ ಈ ಕೆರೆ ಭರ್ತಿಯಾಗಿ ಉಕ್ಕಿ ಹರಿದಿತ್ತು. ಈ ಕೆರೆ ಒಮ್ಮೆ ಭರ್ತಿಯಾದರೆ ವಿಜಾಪುರದ ಶೇ.35ರಷ್ಟು ಪ್ರದೇಶಕ್ಕೆ 18 ತಿಂಗಳವರೆಗೆ ನೀರು ಪೂರೈಸಬಹುದು' ಎನ್ನುತ್ತಾರೆ ನಗರಸಭೆ ಅಧಿಕಾರಿಗಳು.

`ಕೆರೆಯಲ್ಲಿ 5ರಿಂದ 6 ಅಡಿಗಿಂತ ಹೆಚ್ಚು ನೀರಿದ್ದರೆ ಮಾತ್ರ ಅದನ್ನು ಪಡೆಯಲು ಸಾಧ್ಯ. ನೀರಿನ ಕೊರತೆಯಿಂದ ಏಪ್ರಿಲ್ 2012ರಿಂದ ಇಲ್ಲಿಂದ ನೀರು ಪಡೆಯುವುದನ್ನು ನಿಲ್ಲಿಸಲಾಗಿದೆ. ಅಕ್ಟೋಬರ್ ತಿಂಗಳಲ್ಲಿ ಕೆರೆಗೆ ಒಂದೂವರೆ ಅಡಿ ನೀರು ಬಂದರೂ ಅದನ್ನು ಪಂಪ್ ಮಾಡಲು ಸಾಧ್ಯವಾಗಲಿಲ್ಲ. ಮಳೆಯಾಗಿ ಕೆರೆಗೆ ನೀರು ಬರುವುದನ್ನು ಕಾಯುತ್ತಿದ್ದೇವೆ' ಎನ್ನುತ್ತಾರೆ ಜಲಮಂಡಳಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಆರ್.ಎನ್. ಹಜೇರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT