ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಹಾಪುರ: ಭರವಸೆ ಮೂಡಿಸಿದ ಶೇಂಗಾ ಬೆಳೆ

Last Updated 22 ಫೆಬ್ರುವರಿ 2012, 6:35 IST
ಅಕ್ಷರ ಗಾತ್ರ

ಶಹಾಪುರ: ಕೃಷ್ಣಾಅಚ್ಚುಕಟ್ಟು ಪ್ರದೇಶದಲ್ಲಿ ದಶಕದ ಹಿಂದೆ ರೈತರು ಹೆಚ್ಚಾಗಿ ಶೇಂಗಾ ಬೆಳೆಯನ್ನು ನೆಚ್ಚಿನ ಬೆಳೆಯಾಗಿಸಿಕೊಂಡಿದ್ದರು.  ಕಾಲ ಕ್ರಮೇಣ ಬೆಳೆ ಪದ್ಧತಿ ಉಲ್ಲಂಘನೆಯ ಮೋಜಿಗೆ ಹೋದ ರೈತರು ಬತ್ತ ಬೆಳೆಗೆ ಶರಣಾದರು. ಅತ್ಯಧಿಕ ರಸಗೊಬ್ಬರ ಬಳಕೆ, ರೋಗದ ಬಾಧೆ ಜೊತೆಗೆ ವಾತಾವರಣದಲ್ಲಿನ ಏರುಪೇರಿನಿಂದ ಶೇಂಗಾ ಬೆಳೆಗೆ ಕುತ್ತು ಬಂದಿತ್ತು. ಅದರಲ್ಲಿ ಧಾರಣೆಯ ಜೂಜಾಟದಿಂದ ರೈತ ಸೋತು ಪರ್ಯಾಯ ಬೆಳೆಗಳತ್ತ ವಾಲಿದ.

ಪ್ರಸಕ್ತ ವರ್ಷದ ಮುಂಗಾರು ಮುನಿಸಿದ ಕಾರಣ ಬೇಸಿಗೆ ಬೆಳೆಗೆ ನೀರು ಕಾಲುವೆಯಲ್ಲಿ ಸಮರ್ಪಕವಾಗಿ ದೊರೆಯುವುದಿಲ್ಲ ಎಂಬ ವಾಸನೆ ಅರಿತು ತುಸು ಕೆಂಪು ಮಿಶ್ರಿತ ಜಮೀನುಗಳ ಪ್ರದೇಶದಲ್ಲಿ ರೈತರು ಶೇಂಗಾ ಬಿತ್ತನೆ ಮಾಡಿದರು.
 
ನೀರಿನ ಕೊರತೆಯ ಆತಂಕದಲ್ಲಿ ಕಾಲ ಕಳೆಯುವದರಲ್ಲಿ ಬೇಸಿಗೆ ಹಂಗಾಮಿಗೆ ಬಹುತೇಕವಾಗಿ ಮೇಲ್ಭಾಗದ ರೈತರು ಬತ್ತ ನಾಟಿಗೆ ಗುಡ್‌ಬೈ ಹೇಳಿದರು. ಸಂಕಷ್ಟದಲ್ಲಿಯೂ ಸಂಭ್ರಮ ಎನ್ನುವಂತೆ ಅದುವೇ ವರವಾಗಿ ಶೇಂಗಾ ಬೆಳೆಗೆ ಸಮರ್ಪಕವಾಗಿ ನೀರು ದೊರಕಿದ್ದರಿಂದ ಉತ್ತಮ ಬೆಳೆ ಬಂದಿದೆ ಎನ್ನುತ್ತಾರೆ ರೈತ ಧರ್ಮಣ್ಣ.

ಸದ್ಯ ಹೆಚ್ಚಿನ ಪ್ರದೇಶದಲ್ಲಿ ಶೇಂಗಾ ಬೆಳೆ ಕೈಗೆ ಬಂದಿದೆ. ಬೆಳೆ ಕೀಳುವ ಕಾರ್ಯ ಸಾಗಿದೆ. ಇಳುವರಿಯೂ ಸದ್ಯ ಪ್ರತಿ ಎಕರೆಗೆ 6ರಿಂದ8 ಚೀಲ ಬರುತ್ತಿದೆ. ಧಾರಣೆಯೂ 4,000 ಮೇಲ್ಪಟ್ಟಿದೆ. ಬಿತ್ತನೆ ಮಾಡುವಾಗ ಬೀಜವು ದುಬಾರಿ ಹೊರತುಪಡಿಸಿ ಖರ್ಚು ಕೂಡಾ ತುಸು ಕಡಿಮೆ ಎನ್ನುವಂತೆ ಎಕರೆಗೆ 2ರಿಂದ3ಸಾವಿರ ಬಂದಿದೆ.

ರಾಸಾಯನಿಕ ಗೊಬ್ಬರದ ಬಳಕೆಯೂ ಕಡಿಮೆ. ಸಮಧಾನದ ಸಂಗತಿಯೆಂದರೆ ರೋಗದ ಬಾಧೆ ಅಷ್ಟೊಂದು ಈ ಬಾರಿ ಕಾಣಿಸಲಿಲ್ಲ. ಬೆಂಕಿರೋಗ ಹಾಗೂ ಇನ್ನಿತರ ರೋಗ ಬರಲಿಲ್ಲ ಎನ್ನುವುದು ರೈತ ಮಲ್ಲಪ್ಪನ ಸಮಧಾನ.

ಜಾನುವಾರು: ಶೇಂಗಾದ ಮೇವು (ಒಟ್ಟು) ಜಾನುವಾರುಗಳಿಗೆ ಉತ್ತಮ ಆಹಾರವಾಗುತ್ತದೆ. ಲಭ್ಯವಿದ್ದಷ್ಟು ಸಂಗ್ರಹಿಸಿಕೊಂಡು ಜೋಪಾನದಿಂದ ಬೇಸಿಗೆಯ ದಿನಗಳಲ್ಲಿ ಎತ್ತು ಹಾಗೂ ಹೋರಿಗಳಿಗೆ ಮೇವಿನ ಬರವನ್ನು ಇಂಗಿಸುವ ಆಹಾರವು ಹೌದು.

ಕೃಷಿ ವಿಜ್ಞಾನಿಗಳು ತುಸು ಶೇಂಗಾ ಬೆಳೆಗಳ ಬಗ್ಗೆ ವೈಜ್ಞಾನಿಕ ಮಾಹಿತಿ ಹಾಗೂ ಸಲಹೆಗಳನ್ನು ನೀಡುವುದರ ಜೊತೆಯಲ್ಲಿ ಶೇಂಗಾ ಬೆಳೆಯುವಂತೆ ಪ್ರೋತ್ಸಾಹ ನೀಡುವುದು ಅವಶ್ಯಕವಾಗಿದೆ. ಭೀಮರಾಯನಗುಡಿ ಕೃಷಿ ವಿಜ್ಞಾನಿಗಳು ಬರುವ ದಿನಗಳಲ್ಲಿ ಇದರ ಬಗ್ಗೆ ಪ್ರಚಾರ ನೀಡುತ್ತಾರೋ ಎಂದು ಕಾದು ನೊಡಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT