ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕ ವೃತ್ತಿಯ ಘನತೆ ಹೆಚ್ಚಿಸಿದ ವಾಲಿ

ಇಂದು ಶಿಕ್ಷಕರ ದಿನಾಚರಣೆ, ಮಕ್ಕಳ ಬಾಳು ಬೆಳಗುವ ಗುರುಗಳ ಸ್ಮರಣೆ
Last Updated 5 ಸೆಪ್ಟೆಂಬರ್ 2013, 6:40 IST
ಅಕ್ಷರ ಗಾತ್ರ

ಗದಗ: `ಗುರುವಿನ ಗುಲಾಮನಾಗುವ ತನಕ ದೊರೆಯದೆನಗೆ ಮುಕುತಿ' ಎಂದು ಪುರಂದರದಾಸರು ಹೇಳಿದ ಹಾಗೆ ಮೊದಲು ಗುರು ಹುಡುಕಿ ವಿದ್ಯಾರ್ಜನೆ ಪ್ರಾರಂಭಿಸಬೇಕು.

ಸೆ. 5 ಶಿಕ್ಷಕರ ದಿನಾಚರಣೆ. ಭವಿಷ್ಯದ ಪ್ರಜೆಗಳನ್ನು ರೂಪಿಸುವ ಜವಾಬ್ದಾರಿ ಶಿಕ್ಷಕರದ್ದು. ದೇಶದ ಎರಡನೇ ರಾಷ್ಟ್ರಪತಿ ಆಗಿದ್ದ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವನ್ನು `ಶಿಕ್ಷಕರ ದಿನ'ವನ್ನಾಗಿ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಶಿಕ್ಷಕರ ಸೇವೆಯನ್ನು ಗೌರವಿಸಲು ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.

ಈ ಬಾರಿ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಗದಗ ಜಿಲ್ಲೆಯ ಮುಳಗುಂದ ತಾಲ್ಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ.2ರ ಮುಖ್ಯ ಶಿಕ್ಷಕ ವಿ.ವಿ.ವಾಲಿ ಅವರಿಗೆ ಸಂದಿದೆ. ವಾಲಿ ಅವರ ಸೇವೆಯನ್ನು ಗುರುತಿಸಿ ಸಂಘ ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿವೆ. ಮುಳಗುಂದ ಶಾಲಾ ಮಕ್ಕಳಲ್ಲಿ ತಂದ ಸುಧಾರಣೆಗೆ ಈ ಬಾರಿ ವಾಲಿ ಅವರಿಗೆ ರಾಜ್ಯ ಪ್ರಶಸ್ತಿಯ ಹೆಗ್ಗಳಿಕೆ. 

ನಡೆದು ಬಂದ ಹಾದಿ: ಮುಳಗುಂದ ಗ್ರಾಮದ ವಾಲಿ ರೈತ ಕುಟುಂಬದಲ್ಲಿ ಜನಿಸಿದರು. ತಂದೆ, ತಾಯಿ ಅನಕ್ಷರಸ್ಥರಾದರೂ  ಮಗನಿಗೆ ಶಿಕ್ಷಣ ಕೊಡಿಸಿದರು. ವಾಲಿ ಅವರು ಪ್ರಾಥಮಿಕ, ಪ್ರೌಢಶಿಕ್ಷಣವನ್ನು ಹುಟ್ಟೂರಿನಲ್ಲಿಯೇ ಪೂರೈಸಿದರು. ಶಿರಹಟ್ಟಿಯಲ್ಲಿ ಟಿಎಸ್‌ಎಚ್ ಮಾಡಿದರು. ವಿದ್ಯೆ ಕಲಿಸಿದ ಗುರು, ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಎಂ.ಎಂ.ಮರಿದೇವರ ಮಠ ಅವರ ಮಾರ್ಗದರ್ಶನದಂತೆ ಶಿಕ್ಷಕ ವೃತ್ತಿ ಆಯ್ಕೆ ಮಾಡಿಕೊಂಡರು.

1979ರಲ್ಲಿ ಸಹ ಶಿಕ್ಷಕರಾಗಿ ಹಾವೇರಿ ಜಿಲ್ಲೆ ಹಾವೇರಿ ತಾಲ್ಲೂಕಿನ ಬೆಂಚಿಹಳ್ಳಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ತಮ್ಮ ವೃತ್ತಿ ಆರಂಭಿಸಿದರು. ಸಮೂಹ ಸಂಪನ್ಮೂಲ ವ್ಯಕ್ತಿಯಾಗಿ, ಮುಳಗುಂದ ಪಟ್ಟಣ ಪಂಚಾಯಿತಿಯಲ್ಲಿ ಸಾಕ್ಷರತೆ ಸಂಯೋಜಕರಾಗಿ, ಶಿರಹಟ್ಟಿ ತಾಲ್ಲೂಕಿನ ದೇವಿ ಹೊಸೂರು ಮಾದರಿ ಶಾಲೆ, ನೀಲಗುಂದ ಮತ್ತು ಬಸಾಪುರ ಶಾಲೆಗಳಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. 34 ವರ್ಷಗಳ ಸೇವೆಗೆ ಕೊನೆಗೂ ರಾಜ್ಯ ಪ್ರಶಸ್ತಿ ಅವರ ಮುಡಿಗೇರಿದೆ.

ಅಕ್ಷರಸ್ಥರನ್ನಾಗಿಸಿದ ಕೀರ್ತಿ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ.2 ಅನ್ನು ಮಾದರಿ ಶಾಲೆಯನ್ನಾಗಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಹನ್ನೇರಡು ವರ್ಷಗಳ ಕಾಲ ಮುಳಗುಂದ ಶಾಲೆಯಲ್ಲಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡರು. ತಂದೆ ಸ್ಮರಣಾರ್ಥ ಶಾಲೆಯಲ್ಲಿ ಕುಡಿಯುವ ನೀರಿನ ಟ್ಯಾಂಕ್ ನಿರ್ಮಿಸಿದರು.

ಎರಡು ವರ್ಷದ ಹಿಂದೆಯಷ್ಟೇ ಮುಖ್ಯ ಶಿಕ್ಷಕರಾಗಿ ಇದೇ ಶಾಲೆಗೆ ವರ್ಗಗೊಂಡ ಬಳಿಕ ಸಾಕಷ್ಟು ಸುಧಾರಣೆ ಮಾಡಿದ್ದಾರೆ. ಶಾಲೆಯಿಂದ ಹೊರಗುಳಿದಿದ್ದ ಮಕ್ಕಳನ್ನು ಚಿಣ್ಣರ ಅಂಗಳದಲ್ಲಿ ಸೇರ್ಪಡೆಗೊಳಿಸಿ ಮುಖ್ಯವಾಹಿನಿಗೆ ತರಲು ಶ್ರಮಿಸಿದ್ದಾರೆ.  ಈಗ ಶಾಲೆಯಲ್ಲಿರುವ ಮಕ್ಕಳ ಸಂಖ್ಯೆ 245 (1ರಿಂದ 7ನೇ ತರಗತಿ).

2003ರಲ್ಲಿ ಶಾಲೆಯ 73 ಮಕ್ಕಳನ್ನು ರಾಷ್ಟ್ರಪತಿ ಭವನಕ್ಕೆ ಕರೆದೊಯ್ದು ಅಂದಿನ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಜತೆ ವೈಜ್ಞಾನಿಕ ಸಂವಾದ ನಡೆಸಿದ್ದು ಮರೆಯಲಾರದ ಘಟನೆ. ಮುಳುಗುಂದ ಪಟ್ಟಣ ಪಂಚಾಯಿತಿಯಲ್ಲಿ ಸಾಕ್ಷರತೆ ಸಂಯೋಜಕರಾಗಿ 200 ಮಂದಿಯನ್ನು ಅಕ್ಷರಸ್ಥರನ್ನಾಗಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.

ಸಂದ ಪ್ರಶಸ್ತಿ: ಶಿಕ್ಷಣ ಕ್ಷೇತ್ರದಲ್ಲಿ ವಾಲಿ ಸಲ್ಲಿಸಿದ ಸೇವೆ ಗುರುತಿಸಿ ಸಂಘ ಸಂಸ್ಥೆಗಳು  ಪ್ರಶಸ್ತಿ  ನೀಡಿ ಗೌರವಿಸಿವೆ. ಜಿಲ್ಲಾ ಪ್ರಶಸ್ತಿ, ಭಾರತ ಸೇವ ದಳ ಪ್ರಶಸ್ತಿ, ವಚನ ಕಮ್ಮಟ ಪ್ರಶಸ್ತಿ ಸಂದಿವೆ.

ರಾಷ್ಟ್ರ ಪ್ರಶಸ್ತಿ ಪಡೆಯುವ ಗುರಿ
`ಪ್ರಶಸ್ತಿ ಬಂದಿರುವುದು ಸಂತಸದ ಜತೆಗೆ ಜವಾಬ್ದಾರಿ ಹೆಚ್ಚಿಸಿದೆ. ವಿದ್ಯೆ ಕಲಿಸಿದ ಗುರು ಮರಿದೇವರ ಮಠ ಅವರಿಗೆ ರಾಜ್ಯ ಪ್ರಶಸ್ತಿ ಬಂದ ಸಂದರ್ಭದಲ್ಲಿ ಶಿಕ್ಷಕನಾಗಿ ಸೇವೆ ಆರಂಭಿಸಿದೆ. ಈಗಲೂ ನೆನಪಿದೆ ಆಗ ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದರು.

ಗುರುವಿನಂತೆ ರಾಜ್ಯ ಪ್ರಶಸ್ತಿ ಪಡೆಯಬೇಕೆಂಬ ಕನಸು ನನಸಾಗಿದೆ. ರಾಷ್ಟ್ರ ಪ್ರಶಸ್ತಿ ಪಡೆಯಬೇಕೆಂಬ ಗುರಿ ಇದೆ' ಎನ್ನುತ್ತಾರೆ ವಾಲಿ.ಸೆ. 5ರಂದು ಶಿವಮೊಗ್ಗಾದಲ್ಲಿ ನಡೆಯುವ ಶಿಕ್ಷಕರ ದಿನಾಚರಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ವಾಲಿ ಅವರ ಶಿಕ್ಷಣ ಸೇವೆ ಮುಂದುವರೆಯಲ್ಲಿ ಎಂಬುದು ಗ್ರಾಮದ ಜನರ ಆರೈಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT