ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಶಿಕ್ಷಕರು ಸುಜ್ಞಾನ ಸಾಮ್ರಾಜ್ಯದ ಅನಭಿಷಿಕ್ತ ದೊರೆಗಳು'

Last Updated 6 ಸೆಪ್ಟೆಂಬರ್ 2013, 8:49 IST
ಅಕ್ಷರ ಗಾತ್ರ

ಬೀಳಗಿ: `ಶಿಕ್ಷಕರಾದವರು ಮಗುವಿಗೆ ಜ್ಞಾನದ ಹಸಿವನ್ನು ನೀಗಿಸಿ ಮರು ಜನ್ಮ ನೀಡುತ್ತಾರೆ. ಜಾತಿ, ಮತ, ಪಂಥಗಳ ಅಜ್ಞಾನದ ಕತ್ತಲೆಯನ್ನು ಜ್ಞಾನದ ದೀವಿಗೆಯ ಮೂಲಕ ಹೊಡೆದೋಡಿಸುವ ಶಿಕ್ಷಕರು ಸುಜ್ಞಾನ ಸಾಮ್ರಾಜ್ಯದ ಅನಭಿಷಿಕ್ತ ದೊರೆಗಳು' ಎಂದು ಮಧುರಖಂಡಿ  ಬಸವಜ್ಞಾನ ಗುರುಕುಲದ ಶರಣ ಈಶ್ವರ ಮಂಟೂರ ಬಣ್ಣಿಸಿದರು.

ತಾಲ್ಲೂಕು ಶಿಕ್ಷಕ ದಿನೋತ್ಸವ ಸಮಿತಿ, ಜಿಲ್ಲಾ ಪಂಚಾಯ್ತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿ ಸಹಯೋಗದಲ್ಲಿ ಗುರುವಾರ ಇಲ್ಲಿನ ಶ್ರೆ ಸಿದ್ಧೇಶ್ವರ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಿದ್ದ ಡಾ.ಸರ್ವಪಲ್ಲಿ ರಾಧಾಕೃಷ್ಣನ್‌ರ 126 ನೇ  ಜಯಂತಿ ಹಾಗೂ ಶಿಕ್ಷಕ ದಿನೋತ್ಸವ ಸಮಾರಂಭದಲ್ಲಿ ಉಪನ್ಯಾಸ ಅವರು ನೀಡಿದರು.

ಶಿಕ್ಷಕರೆಂದರೆ ಕೇವಲ ನೌಕರದಾರರಲ್ಲ. ಮಗುವಿಗೆ ತಿಳಿಯುವಂತೆ ತಿಳಿಸುವದು ಬೋಧನೆಯಾಗುತ್ತದೆಂದು ಹೇಳಿದರು.  ಶಿಕ್ಷಕ ವಿದ್ಯಾರ್ಥಿಗಳಿಗೆ ಒಮ್ಮೆ ಮಾಡಿದ ಬೋಧನೆ ಒಬ್ಬನಿಂದ ಇನ್ನೊಬ್ಬನಿಗೆ, ಜನಾಂಗದಿಂದ ಜನಾಂಗಕ್ಕೆ ನಿರಂತರವಾಗಿ ಪ್ರವಹಿಸುತ್ತಿರುವುದರಿಂದ ಶಿಕ್ಷಕ ನಿಜಕ್ಕೂ ಅಮರ ಎಂದರು.

ಶಾಸಕ ಜೆ.ಟಿ.ಪಾಟೀಲ ಅಧ್ಯಕ್ಷತೆ ವಹಿಸಿ,   ಕಾರ್ಯಕ್ರಮ ಉದ್ಘಾಟಿಸಿದರು.
ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಯಲ್ಲಪ್ಪ ಹಳ್ಳೂರ, ಉಪಾಧ್ಯಕ್ಷೆ ಇಂದ್ರಾಬಾಯಿ ಬಿರಾದಾರ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಎಚ್‌ಆರ್ ನಿರಾಣಿ ಅತಿಥಿಗಳಾಗಿದ್ದರು. ಗ್ರೇಡ್2ತಹಶೀಲ್ದಾರ್ ಸಿಟಿ ಢವಳಗಿ ಉಪಸ್ಥಿತರಿದ್ದರು. ಮಹಾದೇವ ಹಾದಿಮನಿ ಸ್ವಾಗತಿಸಿದರು. ಶಿಕ್ಷಕ ದಿನೋತ್ಸವ ಸಮಿತಿ ಅಧ್ಯಕ್ಷ,ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಆರ್‌ಸಿ ಕಮತ ಪ್ರಾಸ್ತಾವಿಕವಾಗಿ ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಂಜಿ ದಾಸರ ವಂದಿಸಿದರು ಎಸ್‌ಎನ್ ಶಿರೋಳ, ಕೆಬಿ ಬಾಳಾಗೋಳ ನಿರ್ವಹಿಸಿದರು.

ಸನ್ಮಾನ: ಇದೇ ಸಂದರ್ಭದಲ್ಲಿ 7ಜನ ನಿವೃತ್ತ, 20ಜನ ಪ್ರತಿಭಾನ್ವಿತ ಶಿಕ್ಷಕರು ಹಾಗೂ ಪ್ರತಿಭಾನ್ವಿತ 12ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

`ಶಿಕ್ಷಕ ದೇಶದ ಬೆನ್ನೆಲಬು'
ಬನಹಟ್ಟಿ:   `ದೇಶಕ್ಕೆ ಮಾದರಿಯಾಗಬಲ್ಲ ವಿದ್ಯಾರ್ಥಿ ಸಮೂಹ ನಿರ್ಮಾಣ ಮಾಡಬೇಕಾದುದು ಶಿಕ್ಷಕರ ಕರ್ತವ್ಯ' ಎಂದು ಸ್ಥಳೀಯ ಜನತಾ ಶಿಕ್ಷಣ ಸಂಘದ ಚೇರಮನ್ ಎಂ.ಜಿ. ಕೆರೂರ ತಿಳಿಸಿದರು.

ಗುರುವಾರ ಸ್ಥಳೀಯ ತಮ್ಮಣ್ಣಪ್ಪ ಚಿಕ್ಕೋಡಿ ಕಾಲೇಜಿನಲ್ಲಿ ಶಿಕ್ಷಕ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳು ಹಮ್ಮಿಕೊಂಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ನಿವೃತ್ತ ಪ್ರಾಚಾರ್ಯರಾದ ಡಾ. ಎಸ್.ಎಸ್. ಹೂಲಿ ಮತ್ತು ಪ್ರೊ. ಎನ್.ಎನ್. ಸಾಂಗ್ಲಿ ಅವರನ್ನು ಸನ್ಮಾನಿಸಲಾಯಿತು. ಪ್ರಾಚಾರ್ಯ ಡಾ.ಎಸ್.ಬಿ. ಸುಗ್ಗಮದ, ವಿದ್ಯಾರ್ಥಿಗಳಾದ ಮಾಧುರಿ ಸೋರಗಾವಿ, ಪ್ರಶಾಂತ ಹನಗಂಡಿ ಮತ್ತು ಪ್ರಿಯಾಂಕಾ ವಾಗ್ಮೋರೆ ಶಿಕ್ಷಕ ದಿನಾಚರಣೆ ಮಹತ್ವ ಕುರಿತು ಮಾತನಾಡಿದರು.

`ಕಾಯಕ ನಿಷ್ಠೆ ಇರಲಿ'
ಬಾದಾಮಿ: `ಪ್ರಾಮಾಣಿಕತೆ ಮತ್ತು ನಿಷ್ಠೆಯಿಂದ ಮಕ್ಕಳಿಗೆ ವಿದ್ಯೆಯನ್ನು ಧಾರೆಯೆರೆಯಬೇಕು' ಎಂದು ಶಾಸಕ ಬಿ.ಬಿ. ಚಿಮ್ಮನಕಟ್ಟಿ ಹೇಳಿದರು.

ಇಲ್ಲಿನ ಹೇಮರಡ್ಡಿ ಸಮುದಾಯ ಭವನದಲ್ಲಿ ಜಿಲ್ಲಾ ಪಂಚಾಯ್ತಿ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಶ್ರಯದಲ್ಲಿ ಗುರುವಾರ ಜರುಗಿದ ಡಾ.ರಾಧಾಕೃಷ್ಣನ್  ಜಯಂತಿ ಮತ್ತು ಶಿಕ್ಷಕರ ದಿನೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
`ಡಾ. ಎಸ್.ರಾಧಾಕೃಷ್ಣನ್ ಆದರ್ಶಗಳನ್ನು ಶಿಕ್ಷಕರು ಅರಿತುಕೊಳ್ಳಬೇಕು.  ರಾಷ್ಟ್ರದ ಪ್ರಗತಿಗೆ ಸಹಕಾರಿಯಾಗುವಂತಹ ವಿದ್ಯಾರ್ಥಿಗಳನ್ನು ರೂಪಿಸಬೇಕು' ಎಂದರು.

ಜಿಲ್ಲಾ ಪಂಚಾಯ್ತಿ ಸದಸ್ಯರಾದ ಡಾ. ಎಂ.ಜಿ. ಕಿತ್ತಲಿ, ಎಫ್.ಆರ್. ಪಾಟೀಲ, ಎನ್.ಎಸ್. ಬೊಮ್ಮನಗೌಡರ ಅತಿಥಿಗಳಾಗಿದ್ದರು.
ಡಾ.ಎಸ್. ರಾಧಾಕೃಷ್ಣನ್ ರಾಷ್ಟ್ರಕ್ಕೆ ಸಲ್ಲಿಸಿದ ಸೇವೆ ಮತ್ತು ಶಿಕ್ಷಕರ ಪವಿತ್ರ ಕರ್ತವ್ಯ ಕುರಿತು ಲಾಲಹುಸೇನ ಕಂದಗಲ್ ಉಪನ್ಯಾಸ ನೀಡಿದರು.

ತಾ.ಪಂ.ಅಧ್ಯಕ್ಷ ಆಸಂಗೆಪ್ಪ ನಕ್ಕರಗುಂದಿ, ಉಪಾಧ್ಯಕ್ಷೆ ಸವಿತಾ ದಂಡನ್ನವರ, ತಾ.ಪಂ. ಸದಸ್ಯೆ ಗೀತಾ ಅಪ್ಪನ್ನವರ, ಎಂ.ಡಿ. ಯಲಿಗಾರ, ಎಸ್.ಡಿ. ಜೋಗಿನ, ಸಂಗಣ್ಣ ಜಾಬಣ್ಣವರ ಮತ್ತಿತರ ಗಣ್ಯರು ಮತ್ತು ಶಿಕ್ಷಕರ ಸಂಘದ ಅಧ್ಯಕ್ಷರು ಇದ್ದರು.
ಮೆರವಣಿಗೆ: ಇದೇ ಸಂದರ್ಭದಲ್ಲಿ ನಿವೃತ್ತ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಶಿಕ್ಷಕರನ್ನು ಸನ್ಮಾನಿಸಲಾಯಿತು. ನಗರದ ಮುಖ್ಯ ಬೀದಿಯಲ್ಲಿ ವಾದ್ಯ ವೈಭವದೊಂದಿಗೆ ಡಾ.ಎಸ್.ರಾಧಾಕೃಷ್ಣನ್ ಅವರ ಭಾವ ಚಿತ್ರದ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು.

`ವೃತ್ತಿ ಗೌರವ ಕುಂದದಿರಲಿ'
ಹುನಗುಂದ: `ಈ ಕ್ಷೇತ್ರ ಪ್ರತಿನಿಧಿಸಿದ ಕಂಠಿ, ನಾಡಗೌಡ ಮತ್ತು ಕಾಶಪ್ಪನವರ ಶಿಕ್ಷಕರ ಕಲ್ಯಾಣಕ್ಕೆ ನಿರಂತರ ಶ್ರಮಿಸಿದ್ದು ಸ್ಮರಣಾರ್ಹ. ಶಿಕ್ಷಕರು ತಮ್ಮ  ಕರ್ತವ್ಯ ಕ್ರಿಯಾಶೀಲತೆ, ಪ್ರಾಮಾಣಿಕತೆ ಮತ್ತು ನಿಷ್ಠೆಯಲ್ಲಿ ಕೊರತೆ ತೋರಬಾರದು' ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.

ತಾಲ್ಲೂಕು ಮಟ್ಟದ ಶಿಕ್ಷಕ ದಿನಾಚರಣೆ ಕಾರ್ಯಕ್ರಮ ಅಧ್ಯಕ್ಷತೆ ಅವರು ಮಾತನಾಡಿದರು. ವಿಶೇಷ ಉಪನ್ಯಾಸ ನೀಡಿದ ಹುನ್ನೂರ ಸ.ಪ್ರಥಮ ದರ್ಜೆ ಕಾಲೇಜು ಸಹಾಯಕ ಪ್ರಾಧ್ಯಾಪಕ ವೈ.ವೈ. ಕೊಕ್ಕನವರ, ಇಂದಿನ ಸಂದರ್ಭದಲ್ಲಿ ಶಿಕ್ಷಕರ ವೃತ್ತಿ ಸಾಧ್ಯತೆ ಹಾಗೂ ಸವಾಲುಗಳ ಬಗ್ಗೆ ಗಂಭೀರ ಚಿಂತನೆ ನಡೆಯಬೇಕು ಎಂದರು.

ಕೂಡಲಸಂಗಮ ಬಸವಜಯ ಮೃತ್ಯುಂಜಯ ಸ್ವಾಮಿಗಳು ಉದ್ಘಾಟಿಸಿದರು. ಡಾ.ಮಹಾಂತ ಸ್ವಾಮಿಗಳು, ಗುರುಮಹಾಂತ ಸ್ವಾಮಿಗಳು,  ಸಾನಿಧ್ಯ ವಹಿಸಿದ್ದರು. ಜಿಪಂ ಸದಸ್ಯ ಮಹಾಂತೇಶ ನರಗುಂದ, ತಾಪಂ ಅಧ್ಯಕ್ಷೆ ಶಂಕ್ರಮ್ಮ ಭಜಂತ್ರಿ, ವಕೀಲ ಎಂ.ಎಲ್.ಶಾಂತಗೇರಿ, ರಾಜು ಬಾದವಾಡಗಿ, ತಹಶೀಲ್ದಾರ್ ಪಂಪನಗೌಡ ಮೇಲ್ಸೀಮೆ, ತಾಪಂ ಇಒ ಆರ್.ವಿ. ತೋಟದ, ವಿವಿಧ ಶಿಕ್ಷಕ ಸಂಘಗಳ ಅಧ್ಯಕ್ಷರು ಮತ್ತು ನೌಕರರ ಅಧ್ಯಕ್ಷ ಬಿ.ಡಿ. ಕಂದಕೂರ ಉಪಸ್ಥಿತರಿದ್ದರು.
  ಬಿಇಒ ವಸಂತ ರಾಠೋಡ ಸ್ವಾಗತಿಸಿದರು. ಬಿಆರ್‌ಸಿಒ ಲಲಿತಾ ಹೊಸಪ್ಯಾಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂ.ಎಸ್. ದಾಸಪ್ಪನವರ ಮತ್ತು ಎಸ್.ಎಸ್. ಪೂಜಾರ ನಿರೂಪಿಸಿದರು. ಜಿ.ಎಸ್. ಕೊಟಗಿ ಸಂದೇಶ ಓದಿದರು. ವಿ.ಬಿ. ಜೀರಗಿ ವಂದಿಸಿದರು.
ಇದೇ ಸಂದರ್ಭದಲ್ಲಿ ನಿವೃತ್ತ 20 ಶಿಕ್ಷಕರನ್ನು ಸತ್ಕರಿಸಲಾಯಿತು.  

`ಶಿಕ್ಷಕ ವೃತ್ತಿ ಅತ್ಯಂತ ಪವಿತ್ರ'
ಕೂಡಲಸಂಗಮ: ಶಿಕ್ಷಕರ ವೃತ್ತಿ ಅತ್ಯಂತ ಪವಿತ್ರವಾದ ವೃತ್ತಿ ಅಂತಹ ಪವಿತ್ರವಾದ ವೃತ್ತಿಗೆ ಯಾವುದೇ ರೀತಿಯ ಬಾಧಕಗಳು ಬರದ ಹಾಗೆ ನೋಡಿಕೊಳ್ಳಬೇಕಾದ ಕಾರ್ಯ ಶಿಕ್ಷಕರ ಮೇಲೆ ಇದೆ. ಸರ್ವಪಲ್ಲಿ ರಾಧಾಕೃಷ್ಣರ ಜೀವನ ಆದರ್ಶಗಳು ಇಂದಿನ ಯುವ ಜನಾಂಗಕ್ಕೆ, ವಿದ್ಯಾರ್ಥಿಗಳಿಗೆ ಅವಶ್ಯ ಇದ್ದು ಅವುಗಳನ್ನು ಬಿತ್ತರಿಸುವಂತಹ ಕಾರ್ಯವನ್ನು ಶಿಕ್ಷಕರು, ಪಾಲಕರು, ಮಠಾಧೀಶರು ಮಾಡಬೇಕು ಎಂದು ಬೆಂಗಳೂರು ಬಸವ ಮಂಟಪದ ಜ್ಞಾನೇಶ್ವರಿ ಮಾತಾಜಿ ಹೇಳಿದರು.

ಕೂಡಲಸಂಗಮ ಬಸವ ಧರ್ಮ ಪೀಠದ ಸಿದ್ದರಾಮೇಶ್ವರ ಶರಣದ ಧಾಮದಲ್ಲಿ ಬಸವ ಭಾರತಿ ಕಿರಿಯ ಪ್ರಾಥಮಿಕ ಶಾಲೆ, ಬಸವ ಕೃಪಾ ಅನಾಥಾಲಯ, ಸ್ವಾಮಿ ಲಿಂಗಾನಂದ ಉಚಿತ ಪ್ರಸಾದ ನಿಲಯದ ಸಹಯೋಗದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ದೆಹಲಿ ಬಸವ ಮಂಟಪದ ಚನ್ನಬಸವಾನಂದ ಸ್ವಾಮೀಜಿ ಸಮಾರಂಭದ ಮುಖ್ಯ ಅತಿಥಿಯಾಗಿ,  ಸಮಾರಂಭದ ಸಾನಿಧ್ಯ ವಹಿಸಿ ಕೂಡಲಸಂಗಮ ಬಸವ ಧರ್ಮ ಪೀಠದ ಮಹಾದೇಶ್ವರ ಸ್ವಾಮೀಜಿ ಮಾತನಾಡಿದರು.

ಸಮಾರಂಭದಲ್ಲಿ ಬಸವ ಧರ್ಮ ಪೀಠದ ವ್ಯವಸ್ಥಾಪಕ ಚಂದ್ರಶೇಖರ, ಚನ್ನಬಸವೇಶ್ವರ ಪುಸ್ತಕ ಬಂಡಾರದ ನಿತ್ಯಾನಂದ, ಅಕ್ಕಮಹಾದೇವಿ ವಸತಿ ಗೃಹದ ಸಿದ್ದವೀರಪ್ಪ, ಬಸವ ಭಾರತಿ ಕಿರಿಯ ಪ್ರಾಥಮಿಕ ಶಾಲೆಯ ಕವಿತಾ, ಯಶೋದಾ, ಬಸವ ಕೃಪಾ ಅನಾಥಾಲಯದ ಮಹಾಂತೇಶ ಎಮ್ಮಿ, ಸ್ವಾಮಿ ಲಿಂಗಾನಂದ ಉಚಿತ ಪ್ರಸಾದ ನಿಲಯದ ಸಂಗಮೇಶ ಎಮ್ಮಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT