ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಗಂಧ ಎಣ್ಣೆ ಅಭಾವ

Last Updated 17 ಜನವರಿ 2012, 19:30 IST
ಅಕ್ಷರ ಗಾತ್ರ

ಕರ್ನಾಟಕದ ಪರಂಪರೆಯ ಪ್ರತೀಕವಾದ ಮೈಸೂರಿನ ಗಂಧದೆಣ್ಣೆ ಕಾರ್ಖಾನೆಗೆ ಈಗ ಸಂಕಷ್ಟದ ದಿನಗಳು. ರಾಜ್ಯದ ಅರಣ್ಯಗಳಲ್ಲಿನ ಶ್ರೀಗಂಧದ ಮರಗಳು ಖಾಲಿಯಾಗಿರುವುದು ಕಾರ್ಖಾನೆ ಪ್ರಗತಿಗೆ ದೊಡ್ಡ ತೊಡಕಾಗಿದೆ. ರಾಜ್ಯ ಸರ್ಕಾರಿ ಸ್ವಾಮ್ಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತಕ್ಕೆ (ಕೆಎಸ್‌ಡಿಎಲ್)  ಈ ಕಾರ್ಖಾನೆ ಗಂಧದ ಎಣ್ಣೆ ಪೂರೈಸುತ್ತದೆ.
 
ಅರಣ್ಯದಲ್ಲಿ ನಿಲ್ಲದ ಶ್ರೀಗಂಧದ ಹನನ, ಕಠಿಣ ಕಾನೂನು, ಶ್ರೀಗಂಧ ಬೆಳೆಸುವ ಮಾಹಿತಿ ಕೊರತೆ, ಜನರ ನಿರಾಸಕ್ತಿ ಎಲ್ಲವೂ ಸೇರಿಕೊಂಡು ಕಳೆದ ಎರಡು ದಶಗಳಿಂದ ರಾಜ್ಯದಲ್ಲಿ ಶ್ರೀಗಂಧ ಸಿಗದಂತಾಗಿದೆ. ಶ್ರೀಗಂಧ ಬೆಳೆಯುವ ಪ್ರದೇಶಗಳಾದ ಮೈಸೂರು, ಚಾಮರಾಜನಗರ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲೇ ಇದು ಅಪರೂಪವಾಗಿದೆ.

ಪರ್ಯಾಯ ಮಾರ್ಗ ಕಂಡುಕೊಳ್ಳದ ಪರಿಣಾಮ ಈಗ ಅನುಭವಿಸಬೇಕಿದೆ.
ಸಾಂಸ್ಕೃತಿಕ ನಗರಿಗೆ ಮೈಸೂರಿಗೆ ಹೊಂದಿಕೊಂಡಿರುವ ಶ್ರೀಗಂಧದೆಣ್ಣೆ ಕಾರ್ಖಾನೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಸರ್ ಎಂ. ವಿಶ್ವೇಶ್ವರಯ್ಯ ಅವರ ಅಪರಿಮಿತ ಆಸಕ್ತಿಯಿಂದ 1917ರಲ್ಲಿ ಕಾರ್ಯಾರಂಭ ಮಾಡಿತು.
 
ಇದಕ್ಕೂ ಮುನ್ನ ಮಹಾರಾಜರು ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನಲ್ಲಿ ಶ್ರೀಗಂದಿಂದ ಎಣ್ಣೆ ತೆಗೆಯುವ ಪ್ರಯೋಗ ನಡೆಸಲು ಸೂಚನೆ ನೀಡಿದ್ದರು. ಅಲ್ಲಿಯೇ ಕಾರ್ಖಾನೆ ಶುರುವಾಯಿತು. ಬಳಿಕ ಮೈಸೂರಿನ 37 ಎಕರೆ ವಿಶಾಲ ಪ್ರದೇಶದಲ್ಲಿ ಕಾರ್ಖಾನೆ ತಲೆ ಎತ್ತಲು ಮಹಾರಾಜರು ಅನುವು ಮಾಡಿಕೊಟ್ಟರು.

ತನ್ನ ಪರಿಶುದ್ಧತೆ, ಪರಿಮಳಕ್ಕೆ ಹೆಸರಾದ ಮೈಸೂರಿನ ಗಂಧದೆಣ್ಣೆ ವಿಶ್ವದಲ್ಲೇ ಪ್ರಸಿದ್ಧಿ ಪಡೆದಿದೆ. ಗಂಧದೆಣ್ಣೆ ತಯಾರಾಗುವ ಮುನ್ನ ಹಲವು ರಾಸಾಯನಿಕ ಕ್ರಿಯೆಗೆ ಒಳಪಡುತ್ತದೆ. ಗಂಧದ ಮರದ ತುಂಡುಗಳಿಂದ ಆವಿಯ ಬಟ್ಟಿ ಯಂತ್ರದಲ್ಲಿ ಎಣ್ಣೆ ಇಳಿಸುವ ವಿಧಾನ ಈ ಕಾರ್ಖಾನೆಯ ವಿಶಿಷ್ಟ ತಂತ್ರಗಾರಿಕೆ. ಕಾರ್ಖಾನೆ ಆರಂಭದ ದಿನಗಳಲ್ಲಿ ಗಂಧದೆಣ್ಣೆ ವಿದೇಶಗಳಿಗೆ ರಫ್ತುಗೊಂಡಿತು.

ರಾಜ್ಯದಲ್ಲಿ ಶ್ರೀಗಂಧ ಹೇರಳವಾಗಿದ್ದ ಕಾಲದಲ್ಲಿ ಶಿವಮೊಗ್ಗ ಘಟಕವೂ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿತ್ತು. ಮೈಸೂರು, ಶಿವಮೊಗ್ಗ ಘಟಕಗಳು ಬೇಡಿಕೆ ಪೂರೈಸಲು ಶಕ್ತವಾಗಿದ್ದವು. ಕೆಲವು ವರ್ಷಗಳ ಹಿಂದೆ ಶಿವಮೊಗ್ಗ ಘಟಕ ಸ್ಥಗಿತಗೊಂಡಿತು. ಆ ನಂತರ ಮೈಸೂರು ವಿಭಾಗದ ಮೇಲಿನ ಅವಲಂಬನೆ ಹೆಚ್ಚಾಯಿತು.

ಕೆಎಸ್‌ಡಿಎಲ್ ಉತ್ಪಾದಿಸುವ 12ಕ್ಕೂ ಹೆಚ್ಚು ಉತ್ಪನ್ನಗಳಿಗೆ ಮೈಸೂರು ವಿಭಾಗದಿಂದ ಎಣ್ಣೆ ಸರಬರಾಜು ಆಗುತ್ತದೆ. ಇದಕ್ಕಾಗಿ ಪ್ರತಿ ವರ್ಷ 1600- 1800 ಕೆ.ಜಿ. ಗಂಧದೆಣ್ಣೆಯ ಅವಶ್ಯವಿದೆ. ಇಷ್ಟು ಪ್ರಮಾಣದ ಬೇಡಿಕೆ ಪೂರೈಸಲು ಅಂದಾಜು 60- 70 ಟನ್ ಶ್ರೀಗಂಧದ ತುಂಡುಗಳು ಬೇಕು. ರಾಜ್ಯದಲ್ಲಿ ಈ ಪ್ರಮಾಣದ ಪೂರೈಸುವ ಮೂಲಗಳಿಲ್ಲ.
 
ಇರುವ ಮೂಲ ಒಟ್ಟುಗೂಡಿಸಿದರೆ 10 ಟನ್ ಸಹ ದಾಟದು. ಕಳ್ಳ ಸಾಗಣೆ ವೇಳೆ ಅರಣ್ಯ ಇಲಾಖೆಗೆ ವಶಪಡಿಸಿಕೊಳ್ಳುವ ಗಂಧದ ತುಂಡು, ಮನೆ, ಜಮೀನುಗಳಲ್ಲಿ ರೈತರು ಬೆಳೆದ ಶ್ರೀಗಂಧವೇ ಕಾರ್ಖಾನೆಗೆ ಆಧಾರವಾಗಿವೆ. ಈ ಎಲ್ಲವುಗಳಿಂದ ಸಂಗ್ರವಾಗುವ ಕಟ್ಟಿಗೆ ಬಕಾಸುರನ ಹೊಟ್ಟೆಗೆ ಅರೆ ಕಾಸಿನ ಮಜ್ಜಿಗೆಯಂತಾಗಿವೆ.

ಕಾರ್ಖಾನೆ ಅಸ್ತಿತ್ವ ಉಳಿಸಿಕೊಳ್ಳಲು ಹೊರ ರಾಜ್ಯಗಳತ್ತ ಮುಖಮಾಡಿದೆ. ತಮಿಳುನಾಡು, ಕೇರಳ ಹಾಗೂ ಆಂಧ್ರ ಪ್ರದೇಶಗಳಿಂದ ಶ್ರೀಗಂಧದ ತುಂಡುಗಳ ಖರೀದಿ ಪ್ರತಿ ವರ್ಷ ನಡೆಯುತ್ತಿದೆ. ಕೇರಳದಲ್ಲಿ ಶ್ರಿಗಂಧ ಬೆಳೆಯಲು ಪ್ರೋತ್ಸಾಹವಿದ್ದು, ಅಲ್ಲಿನ ಅರಣ್ಯ ಹಾಗೂ ರೈತರ ಜಮೀನುಗಳಲ್ಲಿ ಹೇರಳವಾಗಿ ಬೆಳೆಯಲಾಗುತ್ತದೆ.
 
ತಮಿಳುನಾಡಿನಲ್ಲಿ ಶ್ರೀಗಂಧದ ಮರದ ತುಂಡುಗಳ ಸಂಗ್ರಹ ಹೆಚ್ಚಾಗಿದೆ. ಪ್ರತಿ ವರ್ಷ ತಮಿಳುನಾಡು, ಕೇರಳ ಸರ್ಕಾರಗಳು ಹರಾಜು ಪ್ರಕ್ರಿಯೆ ನಡೆಸುತ್ತವೆ. ಇದರಲ್ಲಿ ಕೆಎಸ್‌ಡಿಎಲ್ ಆಡಳಿತ ಮಂಡಳಿ ಭಾಗವಹಿಸಿ ಕೂಗಿದಷ್ಟು ಬೆಲೆ ನೀಡಿ ಶ್ರೀಗಂಧ ಖರೀದಿಸುತ್ತದೆ. ಈಗ ಮಹಾರಾಷ್ಟ್ರ ಸರ್ಕಾರದ ಜತೆಗೆ ಒಪ್ಪಂದ ಸಹ ಮಾಡಿಕೊಂಡಿದೆ.

ಸಡಿಲ ಕಾಯ್ದೆ
ಈ ನಡುವೆ ರಾಜ್ಯ ಸರ್ಕಾರ ಸಹ ನೇರವಾಗಿ ರೈತರಿಂದ ಶ್ರೀಗಂಧ ಖರೀದಿ ಮಾಡಲು ಅನುಮತಿ ನೀಡಿದೆ. ರೈತರೇ ನೇರವಾಗಿ ಸಾಬೂನು ಕಾರ್ಖಾನೆಗೆ ಶ್ರೀಗಂಧದ ಮಾರಾಟಕ್ಕೆ ಅನುಕೂಲವಾಗಲು ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಹಿಂದೆ ಶ್ರೀಗಂಧ ಯಾವುದೇ ಸ್ಥಳದಲ್ಲಿ ಇದ್ದರೂ ಅದು ಸರ್ಕಾರಕ್ಕೆ ಸೇರಿದ ಸ್ವತ್ತಾಗಿತ್ತು.
 
ಆದರೆ, ಈಗ ಕರ್ನಾಟಕ ಅರಣ್ಯ (ತಿದ್ದುಪಡಿ) ಕಾಯ್ದೆ 2001 ಸೆಕ್ಷನ್ 108 ಪ್ರಕಾರ ಅದು ಯಾರ ಜಮೀನಿನಲ್ಲಿ ಇರುತ್ತದೆಯೋ ಅವರಿಗೆ ಸೇರುತ್ತದೆ. ಅಲ್ಲದೇ, ಕೆಎಸ್‌ಡಿಎಲ್ ಬೆಳೆಗಾರರೊಂದಿಗೆ ತ್ರಿಪಕ್ಷೀಯ ಒಪ್ಪಂದ ಜಾರಿಗೊಳಿಸಿದೆ. ಈ ಒಪ್ಪಂದ ರೈತ, ಅರಣ್ಯ ಇಲಾಖೆ ಒಳಗೊಳ್ಳುತ್ತದೆ. ಶೇ 50ರ ರಿಯಾಯಿತಿ ದರದಲ್ಲಿ ರೈತರಿಗೆ ಸಸಿಗಳನ್ನು ನೀಡಲಾಗುತ್ತದೆ. ಕೊಯ್ಲಿಗೆ ಬಂದ ಸಸಿಗಳನ್ನು ಅಂದಿನ ಮಾರುಕಟ್ಟೆ ದರಕ್ಕೆ ಖರೀದಿ ಮಾಡಲಾಗುತ್ತದೆ. 

 ಶ್ರೀಗಂಧ ಬೆಳೆಯುವ ರೈತರಿಗೆ ರಾಷ್ಟ್ರೀಕೃತ ಬ್ಯಾಂಕ್ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ಗಳು ಗರಿಷ್ಠ ್ಙ 30ಲಕ್ಷ ವರೆಗೆ ಸಾಲ ನೀಡುತ್ತವೆ. ಕರ್ನಾಟಕ ರಾಜ್ಯ ಔಷಧೀಯ ಸಸ್ಯಗಳ ಪ್ರಾಧಿಕಾರ ಒಂದು ಎಕರೆಗೆ  ್ಙ 30 ಸಾವಿರ ಸಹಾಯಧನ ನೀಡುತ್ತಿದೆ.

ಖಾಸಗಿ ಕಂಪೆನಿಗಳ ಆವರಣದಲ್ಲಿ ಶ್ರಿಗಂಧದ ಸಸಿಗಳನ್ನು ಬೆಳೆಸುವ ಪದ್ಧತಿ ಮಧ್ಯಪ್ರದೇಶ. ರಾಜಸ್ತಾನ, ಗುಜರಾತ್ ರಾಜ್ಯಗಳಲ್ಲಿ ಜಾರಿಯಲ್ಲಿದೆ. ಕರ್ನಾಟಕದಲ್ಲೂ ಇದು ಜಾರಿಗೆ ಬಂದರೆ ದೊಡ್ಡ ಖಾಸಗಿ ಕಂಪೆನಿಗಳ ಆವರಣದಲ್ಲಿ ಶ್ರಿಗಂಧ ನಳನಳಿಸಲಿದೆ.

ಇಷ್ಟೆಲ್ಲ ಕಾರ್ಯಕ್ರಮಗಳ ನಡುವೆಯೂ ಕರ್ನಾಟಕದಲ್ಲಿ ಉಂಟಾದ ಶ್ರೀಗಂಧದ ಅಭಾವ ಮೈಸೂರಿನ ಗಂಧದೆಣ್ಣೆ ಕಾರ್ಖಾನೆ ಭವಿಷ್ಯದ ಬಗ್ಗೆ ಆತಂಕ ಮೂಡಿಸುತ್ತದೆ.

ಶ್ರೀಗಂಧ ಬೆಳೆಸಲು ಯೋಜನೆ
ಹೊರಗಿನ ಅವಲಂಬನೆ ಜತೆಗೆ ಕೆಎಸ್‌ಡಿಎಲ್ ಹಲವು ಕಾರ್ಯಕ್ರಮಗಳ ಮೂಲಕ ರಾಜ್ಯದಲ್ಲಿ ಶ್ರಿಗಂಧ ಕೃಷಿಗೆ ಪ್ರೋತ್ಸಾಹಿಸುತ್ತಿದೆ. ಅರಣ್ಯ ಇಲಾಖೆ ಸಹಯೋಗದಲ್ಲಿ `ಹೆಚ್ಚು ಶ್ರಿಗಂಧ ಬೆಳೆಯಿರಿ~, `ಶ್ರೀಗಂಧ ಬೆಳೆದು ಸಿರಿವಂತರಾಗಿ~  ಯೋಜನೆ ಜಾರಿಗೊಳಿಸಿದೆ. ಇದರನ್ವಯ ರೈತರಿಗೆ ಉತ್ಕೃಷ್ಟವಾದ ಶ್ರಿಗಂಧದ ಸಸಿಗಳನ್ನು ವಿತರಿಸುತ್ತಿದೆ.

ಬೆಂಗಳೂರು, ಶಿವಮೊಗ್ಗ ಹಾಗೂ ಮೈಸೂರು ವಿಭಾಗಗಳಲ್ಲಿ ಇದಕ್ಕಾಗಿ ನರ್ಸರಿಗಳನ್ನು ಸ್ಥಾಪಿಸಲಾಗಿದೆ. ್ಙ 12ಕ್ಕೆ ಒಂದು ಸಸಿ ಮಾರಾಟ ಮಾಡುತ್ತಿದೆ. ಹೀಗೆ ನೀಡಿದ ಸಸಿಗಳನ್ನು ಮರಳಿ ಪಡೆಯುವ ಒಪ್ಪಂದ ಮಾಡಿಕೊಳ್ಳುತ್ತದೆ. ಒಂದು ಸಸಿ ಮರವಾಗಲು 15- 20 ವರ್ಷಗಳ ಅವಧಿ ಬೇಕು. ಆಗಿನ ಮಾರುಕಟ್ಟೆ ದರಕ್ಕೆ ಖರೀದಿ ನಡೆಯುತ್ತದೆ.

ಮೈಸೂರು ಕಾರ್ಖಾನೆ ಆವರಣದಲ್ಲಿ ಸುಸಜ್ಜಿತ ನರ್ಸರಿಗೆ ವ್ಯವಸ್ಥೆ ಮಾಡಲಾಗಿದೆ. 2005ರಿಂದ ಈವರೆಗೆ ಲಕ್ಷಕ್ಕೂ ಹೆಚ್ಚಿನ ಸಸಿಗಳನ್ನಿ ಇಲ್ಲಿ ಮಾರಾಟ ಮಾಡಲಾಗಿದೆ. ಇವುಗಳ ಮರು ಖರೀದಿ ವಾಗ್ದಾನ ಸಹ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT