ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತೋಷ್ ಹೆಗ್ಡೆ ಬೋಧಿಸಿದ ತೃಪ್ತಿ ಪಾಠ

Last Updated 14 ಅಕ್ಟೋಬರ್ 2011, 5:30 IST
ಅಕ್ಷರ ಗಾತ್ರ

ಮೈಸೂರು:  `ಆಸೆ ಇರಲಿ, ದುರಾಸೆ ಬೇಡ. ದುರಾಸೆಯಿಂದ ಗಳಿಸಿದ ಸಂಪತ್ತಿನಿಂದ ತಾತ್ಕಾಲಿಕ ತೃಪ್ತಿ ಮಾತ್ರ ಸಿಗುತ್ತದೆ. ನ್ಯಾಯ ಮಾರ್ಗದಿಂದ ಗಳಿಸಿದ ಹಣದಿಂದ ಜೀವನ ಪೂರ ಸಂತೃಪ್ತಿ ಇರುತ್ತದೆ. ಆದ್ದರಿಂದ ಆಸೆ ಇರಲಿ, ದುರಾಸೆ ಹೋಗಲಿ. ಅನ್ಯಾಯ ಮಾರ್ಗ ಬಿಡಿ, ನ್ಯಾಯ ಮಾರ್ಗ ಹಿಡಿಯಿರಿ~-

 ಹೀಗೆ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಸಮಾಜ ಮತ್ತು ಯುವ ಸಮೂಹಕ್ಕೆ `ತೃಪ್ತಿ ಪಾಠ~ ವನ್ನು ಬೋಧಿಸಿದರು.

ಸಂದರ್ಭ: ಮೈಸೂರು ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರ ಮತ್ತು ಸಹಕಾರ ಅಧ್ಯಯನ ವಿಭಾಗವು ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ಏರ್ಪಡಿದ್ದ ಡಾ.ಆರ್.ಬಾಲಸುಬ್ರಹ್ಮಣ್ಯಂ ಅವರ `ಭ್ರಷ್ಟಾಚಾರವೆಂಬ ರೋಗವು: ಮನುಷ್ಯರೆಂಬ ನಾವು~ ಕೃತಿ ಬಿಡುಗಡೆ ಮತ್ತು `ಭಾರತದಲ್ಲಿ ಭ್ರಷ್ಟಾಚಾರ~ ಉಪನ್ಯಾಸ ಕಾರ್ಯಕ್ರಮ.

ಸಂತೋಷ್ ಹೆಗ್ಡೆ 30 ನಿಮಿಷಗಳಷ್ಟು ಉಪನ್ಯಾಸ ನೀಡಿದರು. ನಂತರದ 30 ನಿಮಿಷ ಸಂವಾದ ನಡೆಸಿದರು. ಈ ಅವಧಿಯಲ್ಲಿ ಆಗಾಗ ಸಂದರ್ಭಕ್ಕೆ ತಕ್ಕಂತೆ `ತೃಪ್ತಿ ಜೀವನ~ಕ್ಕೆ ಸಂಬಂಧಿಸಿದ ಸ್ವಾರಸ್ಯಕರ ನಿದರ್ಶನಗಳನ್ನು ಹೇಳುತ್ತಲೇ ಸಭಾಂಗಣದಲ್ಲಿ ಸೇರಿದ್ದ ಸಾವಿರದಷ್ಟು ವಿದ್ಯಾರ್ಥಿಗಳ ಮನಗೆದ್ದರು. ಕೆಲವೊಂದು  ಸ್ಯಾಂಪಲ್ ಇಲ್ಲಿವೆ.

ಆಸೆ ಇರಬೇಕು, ದುರಾಸೆ ದೊಡ್ಡ ರೋಗ. ಅದರಿಂದ ಎಷ್ಟು ಗಳಿಸಿದರೂ ತೃಪ್ತಿ ಇರುವುಲ್ಲ. ಈ ರೋಗಕ್ಕೆ ಇರುವ ಏಕೈಕ ಚಿಕಿತ್ಸೆ ಜೈಲು! ದುರಾಸೆ ಕಾರಣಕ್ಕಾಗಿ ಮನುಷ್ಯ ಮಾನವೀಯತೆಯನ್ನೇ ಮರೆಯುತ್ತಿದ್ದಾನೆ. ಮೊದಲ ತೃಪ್ತಿಯ ಅರ್ಥ ತಿಳಿಯಬೇಕು. ನ್ಯಾಯ ಮಾರ್ಗದಿಂದ ಗಳಿಸಿದ ಸಂಪತ್ತಿನಲ್ಲಿ ತೃಪ್ತಿ ಇರುತ್ತದೆ. ಅನ್ಯಾಯ ಮಾರ್ಗದಲ್ಲಿ ಗಳಿಸಿದ ಸಂಪತ್ತಿನಿಂದ ತಾತ್ಕಾಲಿಕ ತೃಪ್ತಿ ಸಿಗುತ್ತದೆ. ಆದ್ದರಿಂದ ಎಲ್ಲರೂ ಬದುಕು ಪೂರ ತೃಪ್ತಿಯಿಂದ ಇರುವುದನ್ನು ಕಲಿಯಬೇಕು. ಯಾರೇ ಆಗಲಿ ಕಾನೂನು ಪ್ರಕಾರ ಎಷ್ಟೇ ಹಣ, ಆಸ್ತಿಯನ್ನು ಸಂಪಾದಿಸಲಿ, ತಪ್ಪಿಲ್ಲ. ಆದರೆ ಅನ್ಯಮಾರ್ಗದಿಂದ ಸಂಪಾದಿಸವುದು ಪಾಪ.
***
ಇಡೀ ಭೂಲೋಕದಲ್ಲಿ ನನಗೆ ಇರುವುದು ಒಂದೇ ಒಂದು ಫ್ಲಾಟ್ ಮಾತ್ರ. ಏಕೆಂದರೆ ನನ್ನ ಆದಾಯದಲ್ಲಿ ಇದಕ್ಕಿಂತ ಹೆಚ್ಚು ಆಸ್ತಿ ಮಾಡಲು ಸಾಧ್ಯವಾಗಿಲ್ಲ. ನಾನು ಬೇರೆ ಬೇರೆ ಕಡೆ ಕೆಲಸ ಮಾಡಿದ್ದೇನೆ. ಆದರೆ ಎಲ್ಲಿಯೂ ಸೈಟ್ ಮಾಡಬೇಕು ಅನಿಸಲಿಲ್ಲ. ಏಕೆಂದರೆ ನನಗೆ ಅದರ ಅಗತ್ಯವಿರಲಿಲ್ಲ. ಇಲ್ಲಿಯವರೆಗೂ ನಾನು ನನ್ನ ವೃತ್ತಿಯಿಂದ ಬಂದ ಹಣದಿಂದ ಜೀವನ ನಡೆಸಿದ್ದೇನೆ. ಈಗ ನಿವೃತ್ತಿ ವೇತನದಿಂದ ಜೀವಿಸುತ್ತಿದ್ದೇನೆ. ಇಷ್ಟನ್ನು ಹೊರತು ಪಡಿಸಿ ಬೇರೆ ಆದಾಯವಿಲ್ಲ. ಆದರೂ ತೃಪ್ತಿಯಿಂದ ಇದ್ದೇನೆ. ನಮ್ಮದು ಮಧ್ಯಮ ವರ್ಗ. ನಮ್ಮ ತಂದೆ ನಮಗೆ ಹೊಟ್ಟೆತುಂಬ ಊಟ, ಮೈತುಂಬ ಬಟ್ಟೆ ಹಾಗೂ ಶಿಕ್ಷಣ ಕೊಟ್ಟರು. ನನ್ನ ಬಾಲ್ಯ ಮತ್ತು ಯೌವನದಲ್ಲಿ ಯಾವುದೇ ವಸ್ತುಗಳಿಗೆ ಆಸೆ ಪಡಲಿಲ್ಲ. ಮನೆಯ ವಾತಾವರಣವೂ ಹಾಗೆಯೇ ಇತ್ತು.
***
ನಾನು ಈ ಕಾರ್ಯಕ್ರಮಕ್ಕೆ ಬರಲು ಕುಲಪತಿ ಪ್ರೊ.ವಿ.ಜಿ.ತಳವಾರ್ ಕಾರು ಕಳುಹಿಸಿಕೊಡುವು  ದಾಗಿ ಹೇಳಿದರು. ನಾನು ಅದನ್ನು ನಿರಾಕರಿಸಿ ಬಸ್ಸಿನಲ್ಲಿ ಬಂದೆ. ಈಗ ರೈಲಿನಲ್ಲಿ ಹೋಗುತ್ತೇನೆ. ಬಸ್ಸಿನ ಪ್ರಯಾಣ ಚೆನ್ನಾಗಿತ್ತು. ಬಸ್ಸು ಮತ್ತು ರೈಲು ಎರಡೂ ಪ್ರಯಾಣದ ವೆಚ್ಚವೂ ನನ್ನದೇ ಆಗಿದೆ. ಯಾರಿಂದಲೂ ಒಂದು ಪೈಸೆಯನ್ನು ಪಡೆದುಕೊಂಡಿಲ್ಲ.
***
ಸಂತೋಷ್ ಹೆಗ್ಡೆ  ತಮ್ಮ ಉಪನ್ಯಾಸದಲ್ಲಿ ಭ್ರಷ್ಟಾಚಾರದ ಮೂಲಕ, ಪರಿಹಾರವನ್ನು ತುಸು ಹಾಸ್ಯ, ವ್ಯಂಗ್ಯ, ಕಟುಮಾತುಗಳ ಮೂಲಕವೇ ಹೇಳಿದರು. ಯುವ ಸಮೂಹ ಹೆಗ್ಡೆಯವರ ಪಾಠಕ್ಕೆ ಫುಲ್‌ಖುಷ್ ಆಗಿತ್ತು.
ವಿಸ್ಮಯ ಪ್ರಕಾಶನ ಪ್ರಕಟಿಸಿರುವ ಸ್ವಾಮಿ ವಿವೇಕಾನಂದ ಯೂತ್‌ಮೂವ್‌ಮೆಂಟ್ ಸಂಸ್ಥಾಪಕ ಡಾ.ಆರ್. ಬಾಲಸುಬ್ರಹ್ಮಣ್ಯಂ ಅವರ `ಭ್ರಷ್ಟಾಚಾರವೆಂಬ ರೋಗವು: ಮನುಷ್ಯರೆಂಬ ನಾವು~ ಕೃತಿಯನ್ನು ನ್ಯಾ.ಸಂತೋಷ್ ಹೆಗ್ಡೆ ಬಿಡುಗಡೆ ಮಾಡಿದರು.

ಪ್ರೊ.ವಿ.ಜಿ.ತಳವಾರ್ ಅಧ್ಯಕ್ಷತೆ ವಹಿಸಿದ್ದರು. ಅರ್ಥಶಾಸ್ತ್ರ ಮತ್ತು ಸಹಕಾರ ಅಧ್ಯಯನ ವಿಭಾಗದ ಅಧ್ಯಕ್ಷ ಪ್ರೊ.ಎ.ಆರ್.ವಿಶ್ವನಾಥ್, ಪ್ರಕಾಶಕ ಹಾಲತಿ ಸೋಮಶೇಖರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT