ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪುಟ ಸಭೆಯಲ್ಲಿ ಆಕ್ಷೇಪ; ಮಂಜೂರಿಗೆ ತಡೆ

Last Updated 13 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಒಟ್ಟು 132 ಎಕರೆ ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿದ ಖಾಸಗಿ ಸಂಸ್ಥೆಗೇ 71 ಎಕರೆ ಜಮೀನನ್ನು ಮಂಜೂರು ಮಾಡುವ ಪ್ರಯತ್ನಕ್ಕೆ ಶುಕ್ರವಾರ ಸಚಿವ ಸಂಪುಟ ಸಭೆಯಲ್ಲಿ ಕೆಲ ಸಚಿವರು ತೀವ್ರ ಆಕ್ಷೇಪ ವ್ಯಕ್ತಪಡಿಸಿ, ತಡೆಯೊಡ್ಡಿದ ಪ್ರಸಂಗ ನಡೆದಿದೆ.

ರಾಮನಗರ ಜಿಲ್ಲೆ, ಬಿಡದಿ ಹೋಬಳಿಯ ಬಿಲ್ಲಕೆಂಪನಹಳ್ಳಿ ಮತ್ತು ಶ್ಯಾನಮಂಗಲ ಗ್ರಾಮದ ವಿವಿಧ ಸರ್ವೆ ನಂಬರ್‌ಗಳಲ್ಲಿನ ಒಟ್ಟು 132.26 ಎಕರೆ ಸರ್ಕಾರಿ ಜಾಗ ಇದ್ದು ಅದನ್ನು ಚಾಮುಂಡೇಶ್ವರಿ ಬಿಲ್ಡ್ ಟೆಕ್ ಎಂಬ ಸಂಸ್ಥೆ ಒತ್ತುವರಿ ಮಾಡಿದೆ. ಈ ಜಾಗದಲ್ಲಿ ಈಗಲ್‌ಟನ್ ಗಾಲ್ಫ್  ಗ್ರಾಮ ಯೋಜನೆ ಜಾರಿ ಮಾಡುವ ಉದ್ದೇಶ ಇದೆ ಎನ್ನಲಾಗಿದೆ.

ಒತ್ತುವರಿ ತೆರವಿಗೆ ಸರ್ಕಾರ ಪ್ರಯತ್ನಿಸಿದಾಗ ಅದನ್ನು ಈ ಸಂಸ್ಥೆ ಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಹೈಕೋರ್ಟ್ ಸರ್ಕಾರದ ಪರವೇ ಆದೇಶ ನೀಡಿತ್ತು. ಅದನ್ನು ಆ ಸಂಸ್ಥೆ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಆ ಸಂದರ್ಭದಲ್ಲಿ  ಮಾರುಕಟ್ಟೆ ಮೌಲ್ಯ ಪಡೆದು ಒತ್ತುವರಿ ಜಮೀನನ್ನು ಸದರಿ ಸಂಸ್ಥೆಗೆ ಬಿಟ್ಟುಬಿಡಲು ಸಾಧ್ಯವೇ ಎಂಬುದರ ಬಗ್ಗೆ ಪರಿಶೀಲಿಸುವಂತೆ ಸೂಚಿಸಿತ್ತು.

ಇದನ್ನೇ ಮಾನದಂಡ ಮಾಡಿಕೊಂಡು 132 ಎಕರೆಯಲ್ಲಿ 71.16 ಎಕರೆ ಜಮೀನನ್ನು ಸದರಿ ಸಂಸ್ಥೆಗೆ ಬಿಟ್ಟುಕೊಡುವುದೇ ಸೂಕ್ತ ಎಂದು ಕಂದಾಯ ಇಲಾಖೆ ತನ್ನ ಅಭಿಪ್ರಾಯದಲ್ಲಿ ತಿಳಿಸಿದೆ. ಉಳಿದ ಜಮೀನನ್ನು ವಾಪಸು ಪಡೆಯಬೇಕೆಂದೂ ಸೂಚಿಸಲಾಗಿದೆ. ಈ ಸಂಬಂಧ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಯವರು ಸುಪ್ರೀಂಕೋರ್ಟ್‌ಗೆ ಪ್ರಮಾಣ ಪತ್ರ ಕೂಡ ಸಲ್ಲಿಸಿದ್ದು, ಇದು ಸಚಿವರಾದ ಜಗದೀಶ ಶೆಟ್ಟರ್, ಎಸ್.ಎ.ರಾಮದಾಸ್ ಸೇರಿದಂತೆ ಇತರರನ್ನು ಕೆರಳಿಸಿತು.

ಸಂಪುಟ ಸಭೆಯ ಗಮನಕ್ಕೆ ತರದೇ ಸರ್ಕಾರಿ ಜಮೀನು ಮಂಜೂರು ಮಾಡುವ ಬಗ್ಗೆ ಸುಪ್ರೀಂಕೋರ್ಟ್‌ನಲ್ಲಿ ಪ್ರಮಾಣ ಪತ್ರ ಸಲ್ಲಿಸಿದ್ದು ಏಕೆ? ಇದಕ್ಕೆ ಯಾರ ಅನುಮತಿ ಪಡೆಯಲಾಗಿತ್ತು? ಎಲ್ಲಿದೆ ಆ ಪ್ರಮಾಣ ಪತ್ರ ಎಂದು ಅಧಿಕಾರಿಗಳನ್ನೂ ತರಾಟೆಗೆ ತೆಗೆದುಕೊಂಡರು ಎನ್ನಲಾಗಿದೆ.

`ಯಾವುದೇ ಕಾರಣಕ್ಕೂ ಒತ್ತುವರಿದಾರರಿಗೆ ಜಮೀನು ನೀಡಬಾರದು. ಒಮ್ಮೆ ಹೀಗೆ ಮಾಡಿದರೆ ಪದೇ ಪದೇ ಅದನ್ನೇ ಮಾಡಬೇಕಾಗುತ್ತದೆ. ಇದು ಒಳ್ಳೆಯ ಸಂಪ್ರದಾಯ ಅಲ್ಲ~ ಎಂದು ಶೆಟ್ಟರ್ ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ರಾಮದಾಸ್ ಕೂಡ ಧ್ವನಿಗೂಡಿಸಿದರು. `ಕೋಟ್ಯಂತರ ರೂಪಾಯಿ ಬೆಲೆಬಾಳುವ ಜಮೀನನ್ನು ಈ ರೀತಿ ವಿಲೇವಾರಿ ಮಾಡುವುದು ಸರಿಯಲ್ಲ~ ಎಂದೂ ಆಕ್ಷೇಪಿಸಿದರು.

ವಿರೋಧ ಹೆಚ್ಚಾದ ತಕ್ಷಣ ಎಚ್ಚೆತ್ತುಕೊಂಡ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು `ಸದ್ಯಕ್ಕೆ ಈ ವಿಷಯ ಕುರಿತು ತೀರ್ಮಾನ ತೆಗೆದುಕೊಳ್ಳುವುದು ಬೇಡ. ನಂತರದ ದಿನಗಳಲ್ಲಿ ಪರಿಶೀಲಿಸೋಣ~ ಎಂದು ಈ ವಿಷಯವನ್ನು ಮುಂದೂಡಿದರು ಎಂದು ಗೊತ್ತಾಗಿದೆ.

ವಿದ್ಯುತ್ ಖರೀದಿ: 2013ರವರೆಗೂ ವಿದ್ಯುತ್ ಖರೀದಿ ಮಾಡಲು ಕೆ.ಇ.ಆರ್.ಸಿ ಸಲಹೆ ಮಾಡಿದ್ದು, ಇದಕ್ಕೆ ಎಷ್ಟು ಮೊತ್ತ ಖರ್ಚು ಮಾಡಬೇಕು ಎಂಬುದರ ಬಗ್ಗೆ ಇಂಧನ ಸಚಿವೆ ಶೋಭಾ ಕರಂದ್ಲಾಜೆ ಅವರು ಸಂಪುಟ ಸಭೆಗೆ ಸೂಕ್ತ ಮಾಹಿತಿ ನೀಡಲಿಲ್ಲ ಎನ್ನಲಾಗಿದೆ.

ಹಣಕಾಸಿನ ವಿವರಗಳು ಇಲ್ಲದೆ ಮಾಧ್ಯಮಗಳಿಗೆ ವಿವರಣೆ ನೀಡಲು ಕಷ್ಟ. ಹೀಗಾಗಿ ಎಷ್ಟು ಮೊತ್ತದ ವಿದ್ಯುತ್ ಖರೀದಿ ಮಾಡಬೇಕಾಗುತ್ತದೆ ಎಂಬುದರ ಬಗ್ಗೆ ಮಾಹಿತಿ ನೀಡುವಂತೆ ಸಚಿವ ವಿ.ಎಸ್.ಆಚಾರ್ಯ ಕೇಳಿದರು.
ಇದಕ್ಕೆ ಅವರು ಯಾವುದೇ ಮಾಹಿತಿ ನೀಡಲಿಲ್ಲ ಎಂದು ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT