ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಭ್ರಮದ ಕೈಲ್ ಪೊಳ್ದ್ ಆಚರಣೆ

Last Updated 11 ಸೆಪ್ಟೆಂಬರ್ 2011, 19:00 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಕೊಡವ ಸಮಾಜದಲ್ಲಿ `ಕೈಲ್ ಪೊಳ್ದ್~ ಹಬ್ಬವನ್ನು ಭಾನುವಾರ ಸಂಭ್ರಮದಿಂದ ಆಚರಿಸಲಾಯಿತು. ಕೊಡವ ಭಾಷೆಯಲ್ಲಿ `ಕೈಲ್~ ಎಂದರೆ ಆಯುಧ, `ಪೊಳ್ದ್~ ಎಂದರೆ ಪೂಜೆ. ಆಯುಧಗಳಿಗೆ ಪೂಜೆ ಸಲ್ಲಿಸುವುದೇ ಈ ಹಬ್ಬದ ವಿಶೇಷ.

ಕೊಡವರು ಮೂಲತಃ ಕೃಷಿಕರು. ಹಿಂದಿನ ಕಾಲದಲ್ಲಿ ಬೇಟೆಯಾಡುವುದಕ್ಕೆ ಕೊಡವರು ಕೋವಿ-ಕತ್ತಿ ಉಪಯೋಗಿಸುತ್ತಿದ್ದರು. ಕಕ್ಕಡ ಮಾಸದಲ್ಲಿ ಮಾತ್ರ ಆಯುಧಗಳನ್ನು ಮುಟ್ಟದೆ ತಮ್ಮ ಮನೆಯ ಆಯುಧ ಕೋಣೆಗಳಲ್ಲಿಡುತ್ತಿದ್ದರು.

ಕೃಷಿ ಚಟುವಟಿಕೆಗಳು ಮುಗಿದ ನಂತರ ಈ ಆಯುಧಗಳಿಗೆ ಪೂಜೆ ಸಲ್ಲಿಸುವ ಮೂಲಕ ಅವುಗಳನ್ನು ಹೊರತೆಗೆಯಲಾಗುತ್ತದೆ. ಕನ್ನಿಕೋಂಬರೆಯಿಂದ (ಆಯುಧ ಕೋಣೆ) ಹೊರತೆಗೆದ ಆಯುಧಗಳನ್ನು ಶ್ರದ್ಧಾ-ಭಕ್ತಿಯಿಂದ ಪೂಜಿಸಲಾಗುತ್ತದೆ.

ಕೈಲ್ ಮುಹೂರ್ತದ ನಂತರ ಕೋವಿ-ಕತ್ತಿಗಳು ಬಳಕೆಯಾದರೆ, ಅಲ್ಲಿಯವರೆಗೆ ಗದ್ದೆ ವ್ಯವಸಾಯದಲ್ಲಿ ಬಳಕೆಯಾಗುತ್ತಿದ್ದ ನೇಗಿಲು, ನೊಗ, ಗುದ್ದಲಿ ಇತ್ಯಾದಿ ವ್ಯವಸಾಯ ಉಪಕರಣಗಳಿಗೆ ವಿದಾಯ.

ಮುಂದಿನ ವರ್ಷದ ಕೃಷಿ ಚಟುವಟಿಕೆಗಳವರೆಗೆ ಈ ವ್ಯವಸಾಯ ಉಪಕರಣಗಳಿಗೆ ವಿರಾಮ. ಕೊಡಗಿನ ಬೇರೆ ಬೇರೆ ಭಾಗಗಳಲ್ಲಿ ವಿವಿಧ ದಿನಗಳಂದು ಈ `ಕೈಲ್ ಪೊಳ್ದ್~ ಆಚರಿಸಲಾಗುತ್ತದೆ. ಇನ್ನು ಕಡಂಬಿಟ್ಟು, ಪಂದಿಕರಿ (ಹಂದಿ ಮಾಂಸ) ಕೈಲ್ ಮುಹೂರ್ತದ ವಿಶೇಷ ಭಕ್ಷ್ಯ. ಮದ್ಯ ಸೇವನೆಗೂ ಮಹತ್ವ.

ಬೆಂಗಳೂರಿನ ವಿವಿಧ ಕೊಡವ ಸಂಘಗಳು ಒಟ್ಟಾಗಿ ಸೇರಿ ಭಾನುವಾರ ಸಂಭ್ರಮದಿಂದ `ಕೈಲ್ ಪೊಳ್ದ್~ ಆಚರಿಸಿದವು. ಹಬ್ಬದ ಅಂಗವಾಗಿ ವಿವಿಧ ಕ್ರೀಡಾ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಬೆಳಿಗ್ಗೆ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪುಲಿಯಂಡ ಕೆ. ಸುಬ್ಬಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಕೊಡಗು ಜಿ.ಪಂ. ಅಧ್ಯಕ್ಷ ಶಾಂತೆಯಂಡ ರವಿಕುಶಾಲಪ್ಪ ಹಾಗೂ ನಗರದ ಪೂರ್ವ ಸಂಚಾರ ವಿಭಾಗದ ಡಿಸಿಪಿ ಬಿದ್ದಾಟಂಡ ಎ. ಮುತ್ತಣ್ಣ ಅತಿಥಿಗಳಾಗಿ ಭಾಗವಹಿಸಿದ್ದರು.

ಬಿದ್ದಾಟಂಡ ಎ. ಮುತ್ತಣ್ಣ ಮಾತನಾಡಿ, `ಕೊಡವ ಸಮುದಾಯದ ಯುವಕರು ಸಾಹಿತ್ಯ ಹಾಗೂ ಸಂಸ್ಕೃತಿ ಎರಡರಲ್ಲೂ ಆಸಕ್ತಿ ವಹಿಸಿಕೊಳ್ಳಬೇಕು. ಅಲ್ಲದೆ, ಶಿಕ್ಷಣಕ್ಕೂ ಒತ್ತು ನೀಡುವ ಮೂಲಕ ಸರ್ಕಾರಿ ಉದ್ಯೋಗ ಗಿಟ್ಟಿಸಿಕೊಳ್ಳಲು ಪ್ರಯತ್ನಿಸಬೇಕು~ ಎಂದು ಕರೆ ಅವರು ನೀಡಿದರು.

ಕೊಡಗು ಜಿ.ಪಂ. ಅಧ್ಯಕ್ಷ ಶಾಂತೆಯಂಡ ರವಿಕುಶಾಲಪ್ಪ, `ಕೊಡಗಿನ ಮೂಲ ಸಮಸ್ಯೆಗಳನ್ನು ಸರ್ಕಾರದ ಮಟ್ಟದಲ್ಲಿ ಇತ್ಯರ್ಥಪಡಿಸಲು ಬೆಂಗಳೂರಿನಲ್ಲಿ ನೆಲೆಸಿರುವ ಸಮುದಾಯದವರು ಅಗತ್ಯ ಸಹಕಾರ ನೀಡಬೇಕು~ ಎಂದು ಕೋರಿದರು.

ಪುಲಿಯಂಡ ಕೆ. ಸುಬ್ಬಯ್ಯ ಮಾತನಾಡಿ, `ಕೊಡವ ಜನಾಂಗದ ಸಂಸ್ಕೃತಿ, ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಲು ಜನಾಂಗ ಶ್ರಮಿಸಬೇಕು~ ಎಂದು ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಶಿಕ್ಷಣ ಸೇರಿದಂತೆ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 42 ಮಂದಿ ಗಣ್ಯರನ್ನು ಸನ್ಮಾನಿಸಲಾಯಿತು. ಇದಕ್ಕೂ ಮುನ್ನ ಮೌಂಟ್ ಕಾರ್ಮೆಲ್ ಕಾಲೇಜಿನ ಮೈದಾನದಲ್ಲಿ ಕೊಡವ ಬಾಂಧವರು ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಕೊಡವರ ಸಾಂಪ್ರದಾಯಿಕ ದಿರಿಸಿನಲ್ಲಿ ಪಾಲ್ಗೊಂಡಿದ್ದ ಕೊಡವರು ಗಮನಸೆಳೆದರು.

ವಿವೇಕನಗರ, ಮಾರುತಿ ಸೇವಾನಗರ, ಯಲಹಂಕ, ಜಯನಗರ, ಕೆ.ಆರ್.ಪುರಂ ಹಾಗೂ ಮತ್ತಿಕೆರೆ ಕೊಡವ ಸಂಘಗಳು `ಕೈಲ್ ಪೊಳ್ದ್~ ಹಬ್ಬದಲ್ಲಿ ಪಾಲ್ಗೊಂಡಿದ್ದವು. ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಚೆಪ್ಪುಡಿರ ಎಂ. ಸುಬ್ಬಯ್ಯ, ಗೌರವ ಕಾರ್ಯದರ್ಶಿ ಕುಕ್ಕೆರ ಬಿ. ಜಯ ಚಿಣ್ಣಪ್ಪ ಮತ್ತಿತರರು ಉಪಸ್ಥಿತರಿದ್ದರು.
ಮಾಳೆಯಂಡ ಈರಪ್ಪ ಆಯುಧ ಪೂಜೆ ನೆರವೇರಿಸಿದರು. ಮಲ್ಲೇಂಗಡ ಎಸ್. ಮುತ್ತಣ್ಣ ಹಾಗೂ ಕೇಚೆಟ್ಟಿರ ಎ. ಕುಶಾಲಪ್ಪ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT