ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಗಟು ಹಣದುಬ್ಬರ ಶೇ 7.23ಕ್ಕೆ

Last Updated 14 ಮೇ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಹಾಲು, ತರಕಾರಿ, ಬೇಳೆಕಾಳು  ಮತ್ತು ಮಾಂಸದ ಬೆಲೆ ಹೆಚ್ಚಿದ ಹಿನ್ನೆಲೆಯಲ್ಲಿ ಆಹಾರ ಪದಾರ್ಥಗಳ `ಸಗಟು ದರ ಸೂಚ್ಯಂಕ~ ಆಧರಿಸಿದ ಹಣದುಬ್ಬರ ದರ (ಡಬ್ಲ್ಯುಪಿಐ), ಅರ್ಥಶಾಸ್ತ್ರಜ್ಞರ ಲೆಕ್ಕಾಚಾರಗಳನ್ನು ತಲೆಕೆಳಗೆ ಮಾಡಿ ಏಪ್ರಿಲ್‌ನಲ್ಲಿ ಶೇ 7.23ಕ್ಕೆ ಮುಟ್ಟಿದೆ. ಸರ್ಕಾರ ಏಪ್ರಿಲ್ ತಿಂಗಳ `ಡಬ್ಲುಪಿಐ~ ಪಟ್ಟಿಯನ್ನು ಸೋಮವಾರ  ಪ್ರಕಟಿಸಿದೆ.

ಆದರೆ, ಇದೇ ಅವಧಿಯಲ್ಲಿ ಈರುಳ್ಳಿ ಮತ್ತು ಹಣ್ಣಿನ ಧಾರಣೆಯಲ್ಲಿ ಅಲ್ಪ ಇಳಿಕೆಯಾಗಿದೆ. ಮಾರ್ಚ್‌ನಲ್ಲಿ  `ಡಬ್ಲ್ಯುಪಿಐ~ ಶೇ 6.89ರಷ್ಟಿತ್ತು. 2011ರ ಏಪ್ರಿಲ್‌ನಲ್ಲಿ ಶೇ 9.74ರಷ್ಟಿತ್ತು.

ಒಂದು ತಿಂಗಳ ಅಂತರದಲ್ಲಿ (ಮಾರ್ಚ್-ಏಪ್ರಿಲ್) ತರಕಾರಿಗಳು ಶೇ 60.97ರಷ್ಟು ತುಟ್ಟಿಯಾಗಿವೆ. ಬೇಳೆಕಾಳು ಶೇ 11.29ರಷ್ಟು ಏರಿಕೆ ಕಂಡಿವೆ. ಹಾಲು ಶೇ 15.51ರಷ್ಟು ಮತ್ತು ಆಲೂಗೆಡ್ಡೆ ಬೆಲೆ ಶೇ 53.44ರಷ್ಟು ಹೆಚ್ಚಳವಾಗಿದೆ. ಮೊಟ್ಟೆ, ಮಾಂಸ ಮತ್ತು ಮೀನಿನ ಬೆಲೆಯೂ ಶೇ 17ರಷ್ಟು ಹೆಚ್ಚಿದೆ.

ಮಾರ್ಚ್‌ನಲ್ಲಿ ಶೇ 10.66ರಷ್ಟಿದ್ದ ಒಟ್ಟಾರೆ ಹಣದುಬ್ಬರ ದರ, ಏಪ್ರಿಲ್‌ನಲ್ಲಿ ತುಸುವಷ್ಟೇ ತಗ್ಗಿ ಶೇ 10.49ಕ್ಕೆ ಬಂದಿದೆ. ಈರುಳ್ಳಿ ಧಾರಣೆ ಶೇ (ಮೈನಸ್) 12.11ರಷ್ಟು ಇಳಿಕೆಯಾಗಿದೆ. ತಯಾರಿಕಾ ಕ್ಷೇತ್ರದ ಸರಕುಗಳ ಹಣದುಬ್ಬರ ಪ್ರಮಾಣ ಶೇ 4.87ರಿಂದ ಶೇ 5.12ಕ್ಕೆ ಏರಿದೆ. ಒಟ್ಟಾರೆ ಪ್ರಾಥಮಿಕ ಸರಕುಗಳ(ಅಗತ್ಯ ಸಾಮಗ್ರಿ) ದರದಲ್ಲಿ ಶೇ 9.71ರಿಂದ ಶೇ 9.62ಕ್ಕೆ ತುಸು ಇಳಿಕೆಯಾಗಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ಅವಧಿಯಲ್ಲಿ ತಯಾರಿಕಾ ಕ್ಷೇತ್ರದ ಉತ್ಪನ್ನಗಳು ಮತ್ತು ಕಬ್ಬಿಣ ಶೇ 17.98ರಷ್ಟು ತುಟ್ಟಿಯಾಗಿವೆ. ಖಾದ್ಯ ತೈಲದ ಬೆಲೆಯೂ ಶೇ 11ರಷ್ಟು ಹೆಚ್ಚಿದೆ. ತಂಬಾಕು ಉತ್ಪನ್ನಗಳು ಮತ್ತು ಪ್ರಾಥಮಿಕ ಲೋಹಗಳ ಬೆಲೆ ಕ್ರಮವಾಗಿ ಶೇ 9.48 ಮತ್ತು ಶೇ 10.72ರಷ್ಟು ಏರಿಕೆಯಾಗಿವೆ.

ಎಣ್ಣೆಕಾಳು, ನಾರಿನ ಅಂಶ ಒಳಗೊಂಡ ಆಹಾರೇತರ ಸರಕುಗಳ ಹಣದುಬ್ಬರ ಪ್ರಮಾಣ ಮಾರ್ಚ್‌ಗೆ ಹೋಲಿಸಿದರೆ ಏಪ್ರಿಲ್‌ನಲ್ಲಿ ಶೇ 1.61ರಷ್ಟು ಹೆಚ್ಚಿದೆ. ಇಂಧನ ಮತ್ತು ತೈಲಗಳ ಹಣದುಬ್ಬರ ತುಸು ಏರಿಕೆ ಕಂಡು ಶೇ 11.03ಕ್ಕೆ ಮುಟ್ಟಿದೆ.

ಮುಖ್ಯವಾಗಿ ಪೂರೈಕೆ ಕ್ಷೇತ್ರದಲ್ಲಿನ ಲೋಪವೇ ಈಗಿನ ಹಣದುಬ್ಬರ ಪ್ರಮಾಣಕ್ಕೆ ಪ್ರಮುಖ ಕಾರಣ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಸುಧಾರಣೆ ಅಗತ್ಯ
`ಹಣದುಬ್ಬರ ನಿಯಂತ್ರಿಸಲು ಕೃಷಿ ಮಾರುಕಟ್ಟೆ ವ್ಯವಸ್ಥೆಯಲ್ಲಿ ಸಾಂಸ್ಥಿಕ ಸುಧಾರಣೆ ತರುವ ಅಗತ್ಯ ಇದೆ~ ಎಂದು ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅಭಿಪ್ರಾಯಪಟ್ಟಿದ್ದಾರೆ.

ಪೂರೈಕೆ ಭಾಗದಲ್ಲಿನ ಲೋಪಗಳನ್ನು ಸರಿಪಡಿಸಲು ದಾಸ್ತಾನು ಸೌಲಭ್ಯ ಅಭಿವೃದ್ಧಿಪಡಿಸುವುದೂ ಸೇರಿದಂತೆ ಹಲವು ರೀತಿಯ ಆಮೂಲಾಗ್ರ ಬದಲಾವಣೆ ತರಬೇಕಿದೆ ಎಂದರು.

ಏಪ್ರಿಲ್‌ನ `ಡಬ್ಲ್ಯುಪಿಐ~ ಅಂಕಿ-ಅಂಶ ಕುರಿತು ಸೋಮವಾರ ಪ್ರತಿಕ್ರಿಯಿಸಿದ ಅವರು, ಅಗತ್ಯ ವಸ್ತುಗಳ ಬೆಲೆ ಏರಿಕೆ ತಡೆಯಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ. ಇದಕ್ಕೆ ಸಂಬಂಧಿಸಿದಂತೆ ರಾಜ್ಯಗಳ ಜತೆ ಮಾತುಕತೆ ನಡೆಸಲಾಗುವುದು ಎಂದರು.

ಕೃಷಿ ಮಾರುಕಟ್ಟೆ ಸುಧಾರಣೆ ರಾಜ್ಯಗಳ ವಿಷಯ. ಕೃಷಿ ಉತ್ಪನ್ನಗಳ ಪೂರೈಕೆ ಮತ್ತು ಮಾರಾಟ ನಿಯಂತ್ರಿಸಲು ಹಲವು ರಾಜ್ಯಗಳು ತಮ್ಮದೇ ಆದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ ಕಾಯ್ದೆ (ಎಪಿಎಂಸಿ) ಹೊಂದಿವೆ.

ಆದರೆ, ಇದರಲ್ಲಿ ಇನ್ನೂ ಅನೇಕ ಸುಧಾರಣೆಗಳು ಆಗಬೇಕಿವೆ. ಈ ಹಿನ್ನೆಲೆಯಲ್ಲಿ ಸರ್ಕಾರ     `ಮಾದರಿ ಎಪಿಎಂಸಿ ಮಸೂದೆ~ಯನ್ನು ರಾಜ್ಯಗಳಿಗೆ ನೀಡಿದೆ. ಆದರೆ, ಕೇವಲ 16 ರಾಜ್ಯಗಳು ಮಾತ್ರ ಕೇಂದ್ರ ನೀಡಿದ ಮಾದರಿಗೆ ಅನುಗುಣವಾಗಿ ತಮ್ಮ `ಎಪಿಎಂಸಿ~ ನೀತಿಯಲ್ಲಿ ತಿದ್ದುಪಡಿ ಮಾಡಿಕೊಂಡಿವೆ ಎಂದರು.

ಆರ್‌ಬಿಐ: ಹೆಚ್ಚಿದ ಒತ್ತಡ
ಹಣದುಬ್ಬರದ ಮಿತಿ ಹೆಚ್ಚಿರುವುದರಿಂದ ಭಾರತೀಯ ರಿಸರ್ವ್  ಬ್ಯಾಂಕ್  (ಆರ್‌ಬಿಐ) ಮತ್ತೆ ಬಿಗಿ ವಿತ್ತೀಯ ನೀತಿಯತ್ತ ಗಮನ ಹರಿಸುವ ಸಾಧ್ಯತೆ ಇದೆ ಎಂದು ಪ್ರಧಾನಿ ಆರ್ಥಿಕ ಸಲಹಾ ಸಮಿತಿ (ಪಿಎಂಇಎಸಿ) ಹೇಳಿದೆ.

ಏಪ್ರಿಲ್‌ನ ಹಣದುಬ್ಬರ ಅಂಕಿ -ಅಂಶಗಳು ಅಹಿತಕರ ಮಟ್ಟದಲ್ಲಿರುವುದರಿಂದ `ಆರ್‌ಬಿಐ~ ಮುಂದಿನ ಹಣಕಾಸು ಪರಾಮರ್ಶೆಯ ವೇಳೆ ಅಲ್ಪಾವಧಿ ಬಡ್ಡಿ ದರದಲ್ಲಿ (ರೆಪೊ ಮತ್ತು ರಿವರ್ಸ್ ರೆಪೊ ದರ) ಮತ್ತೆ ಏರಿಕೆ ಮಾಡಬಹುದು ಎಂದು ಸಲಹಾ ಸಮಿತಿ ಅಧ್ಯಕ್ಷ ಸಿ. ರಂಗರಾಜನ್ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT