ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿನ್‌ಗೆ ರವಿಶಾಸ್ತ್ರಿ ಕಿವಿಮಾತು: ದಾಖಲೆಯ ಮೈಲಿಗಲ್ಲು ಮರೆತು ಆಡಿ

Last Updated 19 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬ್ರಿಸ್ಬೇನ್ (ಪಿಟಿಐ): ಶತಕಗಳ ಶತಕದ ಮೈಲಿಗಲ್ಲು ಮರೆತು ತಮ್ಮ ನೈಜ ಆಟ ಪ್ರದರ್ಶಿಸುವಂತೆ ಸತತ ವೈಫಲ್ಯ ಕಾಣುತ್ತಿರುವ ಸಚಿನ್ ತೆಂಡೂಲ್ಕರ್‌ಗೆ ಮಾಜಿ ಆಟಗಾರ ಹಾಗೂ ವೀಕ್ಷಕ ವಿವರಣೆಗಾರ ರವಿಶಾಸ್ತ್ರಿ ಕಿವಿಮಾತು ಹೇಳಿದ್ದಾರೆ.

`ಸಚಿನ್ ಫಾರ್ಮ್ ಕಳೆದುಕೊಂಡಿದ್ದಾರೆ ಎಂದು ಹೇಳಿದರೆ ತಪ್ಪಾಗುತ್ತದೆ. ಆದರೆ ಅವರು ದಾಖಲೆಯ ಮೈಲಿಗಲ್ಲು ಮರೆತು ತಮ್ಮ ನೈಜ ಪ್ರದರ್ಶನ ತೋರಬೇಕು, ಆಕ್ರಮಣಕಾರಿ ಆಟಕ್ಕೆ ಮುಂದಾಗಬೇಕು~ ಎಂದು ಶಾಸ್ತ್ರಿ `ಸಿಡ್ನಿ ಮಾರ್ನಿಂಗ್ ಹೆರಾಲ್ಡ್~ಗೆ ತಿಳಿಸಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಮೆಲ್ಬರ್ನ್ ಹಾಗೂ ಸಿಡ್ನಿ ಟೆಸ್ಟ್ ಪಂದ್ಯಗಳಲ್ಲಿ ಅರ್ಧ ಶತಕದ ಗಡಿ ದಾಟಿದ ಮೇಲೆ ಸಚಿನ್ ತಮ್ಮ ಬ್ಯಾಟಿಂಗ್‌ನಲ್ಲಿ ಕೆಲ ಬದಲಾವಣೆ ಮಾಡಿಕೊಂಡಿದ್ದರು ಎಂದು ಅವರು ನುಡಿದಿದ್ದಾರೆ. `ಮೆಲ್ಬರ್ನ್‌ನಲ್ಲಿ ಅಂದಿನ ದಿನದ ಆಟ ಮುಗಿಯಲು ಎರಡು ಎಸೆತಗಳು ಬಾಕಿ ಇದ್ದವು. ಈ ಸಂದರ್ಭದಲ್ಲಿ ಅವರು ತುಂಬಾ ರಕ್ಷಣಾತ್ಮಕವಾಗಿ ಆಡಲು ಮುಂದಾದರು. ಇದರರ್ಥ ಒಮ್ಮೆಲೇ ಅವರು ತಮ್ಮ ಬ್ಯಾಟಿಂಗ್‌ನಲ್ಲಿ ಬದಲಾವಣೆ ಮಾಡಿಕೊಂಡರು. ಪರಿಣಾಮ ವಿಕೆಟ್ ಒಪ್ಪಿಸಬೇಕಾಯಿತು~ ಎಂದರು.

`ಸಚಿನ್ ಹೋದಲೆಲ್ಲಾ ಶತಕಗಳ ಶತಕದ್ದೇ ಮಾತು. ಅದು ಭಾರತ ಇರಬಹುದು, ಆಸ್ಟ್ರೇಲಿಯಾ ಆಗಿರಬಹುದು, ಮತ್ತೊಂದು ದೇಶ ಇರಬಹುದು. ಸಚಿನ್ ತಮ್ಮ ಆಸೆಯನ್ನು ವ್ಯಕ್ತಪಡಿಸದೇ ಇರಬಹುದು. ಅದನ್ನು ಅವರು ಒಪ್ಪಿಕೊಳ್ಳದೇ ಇರಬಹುದು. ಆದರೆ ಸಚಿನ್ ಕೂಡ ಒಬ್ಬ ಮನುಷ್ಯ. ಅವರ ಮನಸ್ಸಿನಲ್ಲಿ ಈ ಸಾಧನೆ ಮಾಡಬೇಕು ತುಡಿತ ಖಂಡಿತ ಇರುತ್ತದೆ~ ಎಂದೂ ಅವರು ಹೇಳಿದ್ದಾರೆ.

`ನಿಜ, ಸಚಿನ್ ಬಹು ದೊಡ್ಡ ಸಾಧನೆಯ ಹಾದಿಯಲ್ಲಿದ್ದಾರೆ. ನಮ್ಮ ಕಾಲದಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಶತಕಗಳ ಶತಕ ಮಾಡಿದ್ದರೆ ಅದೊಂದು ಶ್ರೇಷ್ಠ ಸಾಧನೆ. ಅಂಥದರಲ್ಲಿ ಸಚಿನ್ ಸಾಧನೆ ಅದ್ಭುತ. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನೂರು ಶತಕ ದಾಖಲಿಸುವುದು ತಮಾಷೆಯ ಮಾತಲ್ಲ. ಈ ದಾಖಲೆಯನ್ನು ಸದ್ಯಕ್ಕೆ ಮುರಿಯಲು ಯಾರಿಗೂ ಸಾಧ್ಯವಿಲ್ಲ~ ಎಂದು ರವಿಶಾಸ್ತ್ರಿ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT