ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾಧಿಗಳಿಗೆ ಧಕ್ಕೆ; ಜಮಖಂಡಿ ಬಂದ್

Last Updated 9 ಫೆಬ್ರುವರಿ 2011, 12:05 IST
ಅಕ್ಷರ ಗಾತ್ರ

ರುದ್ರಭೂಮಿಯಲ್ಲಿ ದುಷ್ಕೃತ್ಯ: ಒಬ್ಬನ ಬಂಧನ
ಜಮಖಂಡಿ: ದುಷ್ಕರ್ಮಿಗಳು ಹಿಂದೂ ಸಮಾಜದ ರುದ್ರಭೂಮಿಯಲ್ಲಿನ ಕೆಲವು ಸಮಾಧಿಗಳನ್ನು ಭಗ್ನಗೊಳಿಸಿದ ಘಟನೆಯಿಂದಾಗಿ ಮಂಗಳವಾರ ಉದ್ವಿಗ್ನ ವಾತಾವರಣ ಉಂಟಾಗಿತ್ತು. ಘಟನೆಯನ್ನು ಖಂಡಿಸಿ, ಹಿಂದೂ ಪರ ಸಂಘಟನೆಗಳು ಮಂಗಳವಾರ ‘ಜಮಖಂಡಿ ಬಂದ್’ಗೆ ಕರೆ  ನೀಡಿದ್ದರು.ಸೋಮವಾರ ರಾತ್ರಿಯೇ ನಡೆದ ಈ ದುಷ್ಕೃತ್ಯ ಕುರಿತು ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರ ಗಮನಕ್ಕೆ ಮಂಗಳವಾರ ಬೆಳಿಗ್ಗೆ ಬಂದಾಕ್ಷಣ, ಕಾರ್ಯಕರ್ತರು ಜಮಖಂಡಿ ಬಂದ್‌ಗೆ ಕರೆ ನೀಡಿದರು. ನೂರಾರು ಕಾರ್ಯಕರ್ತರು ಬೈಕ್ ಮೇಲೆ ನಗರದಾದ್ಯಂತ ಸುತ್ತಾಡಿ ಬಂದ್‌ಗೆ ಸ್ಪಂದಿಸಲು ಮನವಿ ಮಾಡಿದರು.

ಬಂದ್ ಕರೆಯ ಹಿನ್ನೆಲೆಯಲ್ಲಿ ಅಂಗಡಿ ಮುಂಗಟ್ಟುಗಳು, ವ್ಯಾಪಾರ ಮಳಿಗೆಗಳು, ಹೋಟೆಲ್ಲುಗಳು ತಕ್ಷಣ ಮುಚ್ಚಿದ್ದವು. ಬಸ್ ಸಂಚಾರ ಕೂಡ ಕೆಲಕಾಲ ಸ್ಥಗಿತಗೊಂಡಿತ್ತು.ಹಿಂದೂ ರುದ್ರಭೂಮಿಯಲ್ಲಿ ಕೆಲವು ಸಮಾಧಿಗಳನ್ನು ನೆಲಸಮ ಮಾಡಲಾಗಿದೆ. ಅಲ್ಲಿ ಹಾಕಲಾಗಿದ್ದ ಸಿಮೆಂಟ್ ಬೆಂಚ್‌ಗಳನ್ನು ನೆಲಕ್ಕೆ ಉರುಳಿಸಲಾಗಿದೆ.ತಹಸೀಲ್ದಾರ ಸಿದ್ದು ಹುಲ್ಲೋಳಿ ಮತ್ತು ನಗರಸಭೆ ಪೌರಾಯುಕ್ತ ಎಸ್.ಎಸ್. ಜಯಧರ, ಸಿಬ್ಬಂದಿ ಸಹಾಯದಿಂದ ಭಗ್ನಗೊಳಿಸಿದ ಸಮಾಧಿಗಳನ್ನು ಮತ್ತು ಬೆಂಚ್‌ಗಳನ್ನು ತಾತ್ಕಾಲಿಕವಾಗಿ ಸರಿಪಡಿಸಿದರು.

ಹಿಂದೂ ರುದ್ರಭೂಮಿ ಧ್ವಂಸ ಘಟನೆ ಕುರಿತು ಹಿಂದೂ ಪರ ಸಂಘಟನೆಗಳು ಇಲ್ಲಿನ ಕಂದಾಯ ಉಪವಿಭಾಗಾಧಿಕಾರಿಗಳ ಕಾರ್ಯಾಲಯದ ಆವರಣದಲ್ಲಿ ಬಹಿರಂಗ ಸಭೆ ನಡೆಸಿದರು.
ಎಂಎಲ್‌ಸಿ ಜಿ.ಎಸ್. ನ್ಯಾಮಗೌಡ ಮಾತನಾಡಿ, ಹಿಂದೂ ರುದ್ರಭೂಮಿಯಲ್ಲಿ ನಡೆದ ಧ್ವಂಸ ಘಟನೆ ಪೂರ್ವ ನಿಯೋಜಿತ ಎಂದು ದೂರಿದರು. ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ಎಸ್. ಸಿಂಧೂರ ಮಾತನಾಡಿ, ಪ್ರಚೋದನಕಾರಿ ಹೇಳಿಕೆ ನೀಡಿ ಉದ್ವಿಗ್ನ ವಾತಾವರಣ ನಿರ್ಮಣಕ್ಕೆ ಅವಕಾಶ ಕೊಡುವುದಿಲ್ಲ. ಆದರೆ ದುಷ್ಕರ್ಮಿಗಳನ್ನು ಬಂಧಿಸಲು ನಿರ್ಲಕ್ಷ್ಯ ತಾಳಿದರೆ ಉಗ್ರ ಹೋರಾಟ ರೂಪಿಸಬೇಕಾಗುತ್ತದೆ ಎಂದರು.

ಬಸವರಾಜ ಬೂದಿಹಾಳ ಮಾತನಾಡಿ, ಹಿಂದೂ ರುದ್ರಭೂಮಿಯಲ್ಲಿ ನಡೆಯುವ ಕಾನೂನು ಬಾಹಿರ ಚಟುವಟಿಕೆಗಳನ್ನು ತಡೆಗಟ್ಟಲು ಆಗ್ರಹಿಸಿದರು.ತಹಸೀಲ್ದಾರ ಸಿದ್ದು ಹುಲ್ಲೋಳಿ ಅವರಿಗೆ ಮನವಿ ಸಲ್ಲಿಸಿ ಘಟನೆಗೆ ಕಾರಣರಾದ ದುಷ್ಕರ್ಮಿಗಳನ್ನು ಬಂಧಿಸಲು ಆಗ್ರಹಿಸಿದರು.  ಹಿಂದೂ ರುದ್ರಭೂಮಿಯಲ್ಲಿ ಮಲಮೂತ್ರ ವಿಸರ್ಜನೆ ನಿಷೇಧಿಸಬೇಕು, ಕಾವಲು ಹಾಕಬೇಕು, ಭದ್ರವಾದ ರಕ್ಷಣಾ ಗೋಡೆ ನಿರ್ಮಿಸಬೇಕು, ಅತಿಕ್ರಮಣ ತೆರವುಗೊಳಿಸಬೇಕು, ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂಬ ಬೇಡಿಕೆಗಳನ್ನೂ ಅವರು ಈ ಸಂದರ್ಭದಲ್ಲಿ ಮುಂದಿಟ್ಟರು.

ನಿವೃತ್ತ ಡಿವೈಎಸ್ಪಿ ಪಿ.ಎನ್.ಪಾಟೀಲ, ನಗರಸಭೆ ಅಧ್ಯಕ್ಷ ಶ್ರೀಶೈಲ ರಾಂಬಳ್ಳಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಪ್ಪಾಸಾಹೇಬ ಗಡಾದ, ಎಪಿಎಂಸಿ ಮಾಜಿ ಅಧ್ಯಕ್ಷ ಸುರೇಶಗೌಡ ಪಾಟೀಲ, ಉಮೇಶ ಆಲಮೇಲಕರ, ನಗರಸಭೆ ಸದಸ್ಯರಾದ ನರಸಿಂಹ ನಾಯಿಕ, ಉದಯ ಮಂಕಣಿ, ಶ್ರೀಶೈಲ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.
ಪೊಲೀಸ್  ವಶಕ್ಕೆ: ಹಿಂದೂ ರುದ್ರಭೂಮಿಯಲ್ಲಿ ಸಮಾಧಿ ಭಗ್ನಗೊಳಿಸಿದ ಘಟನೆಗೆ ಕಾರಣ ಎನ್ನಲಾದ ಶಂಕಿತ ದುಷ್ಕರ್ಮಿಯೊಬ್ಬನನ್ನು ವಶಕ್ಕೆ ತೆಗೆದುಕೊಂಡಿರುವುದಾಗಿ  ನಗರ ಪೊಲೀಸ್ ಠಾಣೆಯ ಪಿಎಸ್‌ಐ  ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT