ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರಳ ಚಿತ್ರಕ್ಕೆ, ಸುವರ್ಣದ ಚೌಕ್ಕಟ್ಟು

Last Updated 7 ಜುಲೈ 2012, 19:30 IST
ಅಕ್ಷರ ಗಾತ್ರ

ಡಾ.ರಾಜ್‌ಕುಮಾರ್; ವ್ಯಕ್ತಿತ್ವದ ಹಿಂದಿರುವ ವ್ಯಕ್ತಿ
ಲೇ: ಪುನೀತ್ ರಾಜ್‌ಕುಮಾರ್/ಪ್ರಕೃತಿ ಎನ್.ಬನವಾಸಿ
ಪು: 258; ಬೆ: ರೂ. 2250
ಪ್ರ: ಪಾರ್ವತಮ್ಮ ಪ್ರಕಾಶನ, ಬೆಂಗಳೂರು

ಪುನೀತ್ ರಾಜ್‌ಕುಮಾರ್ ಅವರು ತಮ್ಮ ತಂದೆ ಡಾ. ರಾಜ್‌ಕುಮಾರ್ ಅವರ ಬಗ್ಗೆ ಪುಸ್ತಕವೊಂದನ್ನು ಬರೆದು ಪ್ರಕಟಿಸುವುದಾಗಿ, ಕೆಲವು ವರ್ಷಗಳಿಂದ ಹೇಳುತ್ತಾ ಬಂದಿದ್ದರು. ಅದೀಗ ಸಾಕಾರಗೊಂಡಿದ್ದು `ಡಾ. ರಾಜ್‌ಕುಮಾರ್: ವ್ಯಕ್ತಿತ್ವದ ಹಿಂದಿರುವ ವ್ಯಕ್ತಿ~ ಹೆಸರಿನಲ್ಲಿ ಪ್ರಕಟವಾಗಿದೆ.

ಪುನೀತ್ ಅವರಿಗೆ ಹೆಗಲೆಣೆಯಾಗಿ ನಿಂತು ಲಿಖಿತ ನಿರೂಪಣೆಗೆ ಸಹಕಾರ ನೀಡಿದ ಕಾರಣದಿಂದಾಗಿ ಪ್ರಕೃತಿ ಎನ್. ಬನವಾಸಿಯವರೂ ಈ ಪುಸ್ತಕದ ಲೇಖಕರಲ್ಲೊಬ್ಬರಾಗಿದ್ದಾರೆ.

`ವ್ಯಕ್ತಿತ್ವದ ಹಿಂದಿರುವ ವ್ಯಕ್ತಿ~ ಎಂಬ ಉಪಶೀರ್ಷಿಕೆ ಖಂಡಿತ ಆಕರ್ಷಕವಾಗಿದೆ. ಆದರೆ ವ್ಯಕ್ತಿ ಮತ್ತು ವ್ಯಕ್ತಿತ್ವ ಎರಡನ್ನೂ ಬೇರ್ಪಡಿಸುವುದು ಹೇಗೆ ಮತ್ತು ಅದು ಸರಿಯೇ ಎಂಬ ಪ್ರಶ್ನೆಯೂ ಇಲ್ಲಿ ಹುಟ್ಟುತ್ತದೆ.
 
ಯಾಕೆಂದರೆ ವ್ಯಕ್ತಿಯನ್ನು ನಾವು ಅಳೆಯುವುದೇ ವ್ಯಕ್ತಿತ್ವದ ಮೂಲಕ. ವ್ಯಕ್ತಿ ಮತ್ತು ವ್ಯಕ್ತಿತ್ವಗಳು ಅಂತರ್‌ಸಂಬಂಧಿ ಸಂಗತಿಗಳು. ಒಂದು ರೀತಿಯಲ್ಲಿ ಬೇರ್ಪಡಿಸಲಾಗದ ಘಟಕಗಳು, ಹೀಗಿದ್ದರೂ ಅಧ್ಯಯನದ ಸಲುವಾಗಿ ಪ್ರತ್ಯೇಕಿಸಿಕೊಂಡು ನೋಡಿ, ಆನಂತರ ಸಂಬಂಧ ಕಲ್ಪಿಸಿ ವ್ಯಕ್ತಿಚಿತ್ರ ಕಟ್ಟಲು ಸಾಧ್ಯವಿದೆ.
 
ಪುನೀತ್ ಪುಸ್ತಕವು ಸಂಪೂರ್ಣವಾಗಿ ಒಳಗಿನವರು ನೋಡಿದ `ರಾಜ್‌ಕುಮಾರ್~ ಅವರನ್ನು ಕಟ್ಟಿಕೊಡುವುದರಿಂದ ಈ ರೀತಿಯ ಅಧ್ಯಯನಕ್ಕೊಂದು ಸಮರ್ಥನೆ ಸಿಗಬಹುದು. ಸರಿ, ತಪ್ಪು, ಸ್ಪಷ್ಟನೆ, ಸಮರ್ಥನೆಗಳು ಏನೇ ಇರಲಿ, ಈ ಪುಸ್ತಕವು ಮನೆಯೊಳಗಿನ ಮನುಷ್ಯನನ್ನು ವ್ಯಕ್ತಿಯೆಂದೂ ಅದರಾಚೆಗೆ ಬೆಳೆದ ರೂಪಕವನ್ನು ವ್ಯಕ್ತಿತ್ವವೆಂದೂ ಪರಿಗಣಿಸಿದೆ.

ಡಾ. ರಾಜ್‌ಕುಮಾರ್ ಅವರದು ಮನೆಯಾಚೆಗಷ್ಟೇ ಅಲ್ಲ, ಸಿನಿಮಾರಂಗದಾಚೆಗೂ ಬೆಳೆದ ವ್ಯಕ್ತಿತ್ವ. ಸಿನಿಮಾರಂಗದಲ್ಲಿ ಅವರೊಬ್ಬ ಅತ್ಯದ್ಭುತ ಕಲಾವ್ಯಕ್ತಿತ್ವವುಳ್ಳವರು. ಸಿನಿಮಾದಾಚೆಗೆ, ಅದಕ್ಕಿಂತ ಹಿಂದೆ ರಂಗಭೂಮಿ ವ್ಯಕ್ತಿತ್ವವನ್ನು ಗಳಿಸಿಕೊಂಡವರು. ಸಿನಿಮಾಗಳಲ್ಲಿ ಮತ್ತು ಆಚೆಗೆ ನೈತಿಕ ಮೌಲ್ಯಗಳ ವ್ಯಕ್ತಿತ್ವವಾದವರು; ಜೊತೆಗೆ ಕನ್ನಡಪರ ಹೋರಾಟದ ವ್ಯಕ್ತಿತ್ವವನ್ನು ರೂಢಿಸಿಕೊಂಡವರು.
 
ಮುಖ್ಯವಾಗಿ ಸಾಮಾಜಿಕ ವ್ಯವಸ್ಥೆಯ ಜಡನಿಷೇಧಗಳ ಆಚೆಗೆ ಒಂದು ಸಾಂಸ್ಕೃತಿಕ ವ್ಯಕ್ತಿತ್ವವಾಗಿ ಸ್ವಯಂರೂಪುಗೊಂಡವರು. ಅಂದರೆ, ಜಾತಿ, ಶೈಕ್ಷಣಿಕ ಮತ್ತು ಆರ್ಥಿಕ ಮಿತಿಗಳನ್ನು ಮೀರಿ ಶ್ರದ್ಧೆ, ಸಂಕಲ್ಪ, ಪ್ರತಿಭೆ ಮತ್ತು ನಡವಳಿಕೆಗಳಿಂದ ವಿಶೇಷ ವ್ಯಕ್ತಿತ್ವವಾದವರು.

ಪ್ರಬಲ ಜಾತಿಯ ಒತ್ತಾಸೆಯಿಲ್ಲದೆ, ಶೈಕ್ಷಣಿಕ ಬೆಂಬಲವಿಲ್ಲದೆ, ಆರ್ಥಿಕ ಶಕ್ತಿಯಿಲ್ಲದೆ ಈ ದೇಶದಲ್ಲಿ ಒಬ್ಬ ಸಾಮಾನ್ಯ, ಅಸಾಮಾನ್ಯನಾಗುವುದು ಬಹುದೊಡ್ಡ ಸಾಮಾಜಿಕ ರೂಪಕ. ಈ ಕಾರಣಕ್ಕಾಗಿಯೇ ಡಾ. ರಾಜ್‌ಕುಮಾರ್ ಅವರನ್ನು ನನ್ನಂಥವರು ಗೌರವಿಸುವುದು. ಇದು ಕೇವಲ ಒಬ್ಬ ವ್ಯಕ್ತಿಗೆ ತೋರಿಸುವ ಗೌರವ ಅಲ್ಲ. ವಿಷಮ ಸಾಮಾಜಿಕ ಸನ್ನಿವೇಶದಲ್ಲಿ ಬೆಳೆದ ವ್ಯಕ್ತಿತ್ವಕ್ಕೆ ತೋರುವ ಮನ್ನಣೆ.

ಹೀಗೆ ಬಾಹ್ಯದಲ್ಲಿ ಹಾಸು ಹೊಕ್ಕಾಗಿರುವ ಡಾ. ರಾಜ್‌ಕುಮಾರ್ ವ್ಯಕ್ತಿತ್ವಕ್ಕೆ ಹೊರತಾಗಿ, ಒಬ್ಬ ತಂದೆಯಾಗಿ, ಅಣ್ಣನಾಗಿ, ಪತಿಯಾಗಿ, ಮಾವನಾಗಿ, ತಾತನಾಗಿ, ಸ್ನೇಹಿತನಾಗಿ- ಹೀಗೆ, ಅಪ್ಪಟ ಮನುಷ್ಯ ಸಂಬಂಧಗಳ ನೆಲೆಯಲ್ಲಿ ಅವರು ಹೇಗಿದ್ದರೆಂದು ನಿರೂಪಿಸುವುದು ಪುನೀತ್ ಪುಸ್ತಕದ ಆಶಯ. ಇದನ್ನೇ ಅವರು `ವ್ಯಕ್ತಿ~ ಎಂದು ಗುರುತಿಸಿದ್ದಾರೆ.

ಇಲ್ಲಿ `ವ್ಯಕ್ತಿತ್ವ~ವನ್ನು ಸಾಮಾಜಿಕ-ಸಾರ್ವಜನಿಕ ರೂಪವೆಂದೂ `ವ್ಯಕ್ತಿ~ಯನ್ನು ವೈಯಕ್ತಿಕ ಸಂಬಂಧಗಳ ನೆಲೆಯೆಂದೂ ಪರಿಗಣಿಸಲಾಗಿದೆ. ಅಂದರೆ `ವ್ಯಕ್ತಿ~- ವೈಯಕ್ತಿಕ; `ವ್ಯಕ್ತಿತ್ವ~- ಸಾರ್ವಜನಿಕ. `ವ್ಯಕ್ತಿ~- ಆಂತರಿಕ, `ವ್ಯಕ್ತಿತ್ವ~- ಬಾಹ್ಯ. ಆದರೆ ವ್ಯಕ್ತಿ ಮತ್ತು ವ್ಯಕ್ತಿತ್ವಗಳಿಗೆ ಸಂಬಂಧ ಇದ್ದೇ ಇರುತ್ತದೆ. ಇಲ್ಲದಿದ್ದರೆ ಒಂದು `ಸತ್ಯ~ವಾಗುತ್ತದೆ; ಇನ್ನೊಂದು ಸುಳ್ಳಾಗುತ್ತದೆ. ಎರಡೂ ಸತ್ಯವಾಗುವುದೇ ನಿಜ ವ್ಯಕ್ತಿತ್ವ. ಡಾ. ರಾಜ್ ಅಂತಹ ನಿಜ ವ್ಯಕ್ತಿತ್ವವೇ ಆಗಿದ್ದಾರೆ.

ಹಾಗೆ ನೋಡಿದರೆ ವೈಯಕ್ತಿಕ ಮನುಷ್ಯ ಸಂಬಂಧಗಳ `ವ್ಯಕ್ತಿ~ಯನ್ನು ಶೋಧಿಸುವ ಕ್ರಿಯೆಯೂ ವ್ಯಕ್ತಿತ್ವ ಶೋಧವೇ ಆಗುತ್ತದೆ. ಯಾಕೆಂದರೆ ಮನುಷ್ಯ ಸಂಬಂಧಗಳು ಸಾಮಾಜಿಕ ವ್ಯವಸ್ಥೆಯೊಂದರ ಫಲಿತಗಳೇ ಆಗಿರುತ್ತವೆ ಮತ್ತು ನಿಜವಾದ ಮನುಷ್ಯ ಸಂಬಂಧಿಯಾಗುವುದು ಒಂದು ವ್ಯಕ್ತಿತ್ವವೇ ಆಗಿರುತ್ತದೆ.

ಇನ್ನೂ ಬಿಡಿಸಿ ಹೇಳುವುದಾದರೆ ತಂದೆ, ತಾಯಿ,ಅಣ್ಣ, ತಂಗಿ, ಇತ್ಯಾದಿ ಸಂಬಂಧಗಳೆಲ್ಲ ಒಂದು ನಿರ್ದಿಷ್ಟ ಸಾಮಾಜಿಕ ವ್ಯವಸ್ಥೆಯು ಹುಟ್ಟುಹಾಕಿದ ರೂಪಗಳಾಗಿವೆ ಮತ್ತು ಈ ಸಂಬಂಧಗಳನ್ನು ಭಾವುಕರಾಗಿ ಬದುಕುವುದು ನಮ್ಮ ಸಮಾಜದ ಒಂದು ಆದರ್ಶ ವ್ಯಕ್ತಿತ್ವವಾಗುತ್ತದೆ. ಪುನೀತ್ ಅವರ ಪುಸ್ತಕ ಈ `ವ್ಯಕ್ತಿತ್ವ~ವನ್ನೇ `ವ್ಯಕ್ತಿ~ ಎಂಬ ನೆಲೆಯಲ್ಲಿ ನಿರೂಪಿಸುತ್ತದೆ.

ಈ ಪುಸ್ತಕವನ್ನು `ಜೀವನ ಚರಿತ್ರೆ~ ಎಂದೂ ಕರೆಯಲಾಗಿದೆ. (ಪುಟ-ಜ್ಡಿ, `ಈ ಜೀವನ ಚರಿತ್ರೆಯ ಬಗ್ಗೆ~) ಆದರೆ ಜೀವನ ಚರಿತ್ರೆಯ ಮಾದರಿಯನ್ನಾಗಲಿ, ಸಮಗ್ರ ಮಾಹಿತಿಯನ್ನಾಗಲಿ ಈ ಪುಸ್ತಕವು ಒಳಗೊಂಡಿಲ್ಲ. ಇದು ರಾಜ್‌ಕುಮಾರ್ ಅವರ ಚಲನಚಿತ್ರ ಬದುಕನ್ನು ನಿರೂಪಿಸುವ ಚರಿತ್ರೆಯಲ್ಲ.

ಅವರ ಹೋರಾಟದ ಬದುಕಿನ ಚರಿತ್ರೆಯಲ್ಲ. ಹುಟ್ಟು, ಬೆಳವಣಿಗೆ, ಸಾಧನೆಗಳ ಸಾಂಪ್ರದಾಯಿಕ ಜೀವನ ಚರಿತ್ರೆಯಲ್ಲ. ಕೇವಲ ಮನುಷ್ಯನನ್ನು ಮನುಷ್ಯ ಸಂಬಂಧಗಳ ಮೂಲಕ ಕಾಣುವ ಅಂತರಂಗದ ಪಯಣ. `ಹೊರಗಿನವರಿಗೆ~ ಸಾಧ್ಯವಾಗದ ಹಾಗೂ ದಕ್ಕದ ಅನೇಕ ವಿಸ್ಮಯಕಾರಿ ವಿವರಗಳನ್ನು `ಒಳಗಿನವರು~ ಈ ಪುಸ್ತಕದಲ್ಲಿ ದಾಖಲಿಸಿದ್ದಾರೆ.

ಪುನೀತ್ ಅವರು ಎಲ್ಲರ ಭಾವವಲಯದ ಭಾಷೆಯಾಗಿ ಈ ಪುಸ್ತಕವನ್ನು ರೂಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹೇಳುವುದಾದರೆ, ಇಲ್ಲಿರುವುದು `ಒಳಗಿನ ನೋಟ~. ಆದರೆ ಒಳಗಿನ ನೋಟವೆಲ್ಲ `ಒಳನೋಟ~ವಾಗುವುದಿಲ್ಲ. ಆಗಬಹುದು; ಆಗದೆಯೂ ಇರಬಹುದು. ಯಾಕೆಂದರೆ ಒಳನೋಟಗಳಿಗೆ ಒಳಗಿನವರು ಅಥವಾ ಹೊರಗಿನವರು ಎಂಬ ಮಿತಿಯಿರುವುದಿಲ್ಲ.

ಅದು ಸಾಪೇಕ್ಷ ಮತ್ತು ಅವರವರ ಸೂಕ್ಷ್ಮತೆಯ ಫಲ. ಈ ಪುಸ್ತಕವು `ಒಳನೋಟ~ಗಳಿಗಿಂತ ಹೆಚ್ಚಾಗಿ ಒಳಗಿನವರ ನೋಟಗಳಿಂದ ತುಂಬಿಕೊಂಡಿದೆ. ಆ ಕಾರಣದಿಂದಲೂ ಇದು ಮುಖ್ಯವಾಗುತ್ತದೆ. ಯಾಕೆಂದರೆ, ರಾಜ್‌ಕುಮಾರ್ ಅವರು ತಮ್ಮ ಕುಟುಂಬದ ಸದಸ್ಯನಾಗಿ ಹೇಗಿದ್ದರು ಎಂಬುದನ್ನು ಒಳಗಿನವರು ಮಾತ್ರವೇ ಹೇಳಲು ಸಾಧ್ಯ. ಆದ್ದರಿಂದ ಅದನ್ನು ಅಕ್ಷರ ರೂಪದಲ್ಲಿ ಸಾಧ್ಯವಾಗಿಸಿದ ಪುನೀತ್ ಅವರನ್ನು ಅಭಿನಂದಿಸಲೇಬೇಕು.

ಇಂಥದೊಂದು ಪುಸ್ತಕವನ್ನು ತರಬೇಕೆಂಬುದು ಪುನೀತ್ ಅವರ ಮಹದಾಸೆಯಾಗಿದ್ದರೂ ಅವರಿಗೆ ಮಹತ್ವಾಕಾಂಕ್ಷೆಗಳಿಲ್ಲ. ಅವರ ಮಾತುಗಳಲ್ಲೇ ಇದು ವ್ಯಕ್ತವಾಗುತ್ತದೆ: `ಯಾವ ಘನೋದ್ದೇಶ ಅಥವಾ ಮಹತ್ವದ ಉದ್ದೇಶವೂ ಇಲ್ಲದೆ ಒಬ್ಬ ಮಗ ತನ್ನ ತಂದೆಗೆ ನೀಡಬಹುದಾದ ವಿನಮ್ರವಾದ ಶ್ರದ್ಧಾಂಜಲಿ ಅರ್ಪಿಸುವ ಉದ್ದೇಶದಿಂದ ಅಪ್ಪಾಜಿಯ ಬಗ್ಗೆ ಎಲ್ಲವನ್ನೂ ಇನ್ನೂ ಹೆಚ್ಚಿನ ಜನರೊಂದಿಗೆ ಹಂಚಿಕೊಳ್ಳಲು ಬಯಸಿದೆ....

ನಟನಾಗಿದ್ದಕ್ಕಿಂತ ಹೆಚ್ಚಾಗಿ ಒಬ್ಬ ಮನುಷ್ಯನಾಗಿ, ತಂದೆಯಾಗಿ, ಅಪ್ಪಾಜಿಯ ಪರಿಚಯ ಇದಾಗುತ್ತದೆ~. ಪುನೀತ್ ಅವರ ಈ ಮಾತುಗಳು ಪುಸ್ತಕದ ಸ್ವರೂಪಕ್ಕೆ ಅನುಗುಣವಾಗಿವೆ. ಇದ್ದದ್ದನ್ನು ಇದ್ದಂತೆ ಹೇಳುತ್ತವೆ. ಆದ್ದರಿಂದ ಇದನ್ನು ಕ್ರಮಬದ್ಧ ಜೀವನ ಚರಿತ್ರೆ ಎಂದು ಪರಿಗಣಿಸುವಂತಿಲ್ಲ. `ಜೀವನ ಚರಿತ್ರೆ~ ಎಂಬ ಪದವನ್ನು ಅಕಸ್ಮಾತ್ ಬಳಸಿದಂತೆ ಕಾಣುತ್ತದೆ!

ಈ ಪುಸ್ತಕದಲ್ಲಿ ಏಳು ಪ್ರಧಾನ ಅಧ್ಯಾಯಗಳಿವೆ:
1. `ಅಪ್ಪಾಜಿಯ ಛಾಯೆಯಲ್ಲಿ~ ಅಧ್ಯಾಯವು ಸಹೃದಯಿ ತಂದೆಯನ್ನೂ ನೇಪಥ್ಯದಲ್ಲಿ ತಾಯಿ ನೀಡಿದ ಒತ್ತಾಸೆಯನ್ನು ಆಪ್ತವಾಗಿ ನಿರೂಪಿಸುವುದರ ಜೊತೆಗೆ ಜೀವನ ಚಕ್ರದ ಕೆಲವು ವಿವರಗಳನ್ನೂ ಉಪಯುಕ್ತವಾಗುವಂತೆ ದಾಖಲಿಸಲಾಗಿದೆ. `ನಮ್ಮದೇ ಪ್ರಪಂಚದೊಳಗೆ~ ಎಂಬ ಉಪ ಅಧ್ಯಾಯ ಆತ್ಮೀಯವಾಗಿದೆ.

2. `ವ್ಯಕ್ತಿತ್ವದ ಹಿಂದಿರುವ ವ್ಯಕ್ತಿ~- ಎಂಬ ಅಧ್ಯಾಯದಲ್ಲಿ ಎಲ್ಲೆಲ್ಲೂ ಸ್ನೇಹಿತರೇ, ಅಪ್ಪಾಜಿ ಮತ್ತು ಕನ್ನಡ ಚಿತ್ರರಂಗ, ಸರಳತೆಯ ಸಾಕಾರಮೂರ್ತಿ ಎಂಬ ಉಪ ಅಧ್ಯಾಯಗಳಿವೆ.
 
`ಎಲ್ಲೆಲ್ಲೂ ಸ್ನೇಹಿತರೇ~ ಸೊಗಸಾಗಿ ಮೂಡಿಬಂದಿದೆ. ಕನ್ನಡವಲ್ಲದೆ ಇತರೆ ಭಾಷೆಯ ಚಿತ್ರರಂಗದ ಪ್ರಮುಖರನ್ನು ಒಳಗೊಂಡಂತೆ ಪ್ರಮುಖರೂ ಪ್ರಸಿದ್ಧರೂ ಅಲ್ಲದವರ ಜೊತೆಯೂ ಸ್ನೇಹವನ್ನು ಉಳಿಸಿಕೊಂಡು ಬೆಳೆದ ರಾಜ್‌ಕುಮಾರ್ ಅವರ ಮನೋಧರ್ಮವನ್ನು ನೇರವಾಗಿ ನಿರೂಪಿಸಲಾಗಿದೆ.

ಅಂತೆಯೇ `ಸರಳತೆಯ ಸಾಕಾರಮೂರ್ತಿ~- ಶೀರ್ಷಿಕೆಯೇ ಹೇಳುವಂತೆ ರಾಜ್ ಅವರ ಸರಳತೆಯ ಮತ್ತಷ್ಟು ಮಾಹಿತಿಗಳಿಂದ ತುಂಬಿದೆ. `ಅಪ್ಪಾಜಿ-ಕನ್ನಡ ಚಿತ್ರರಂಗ~ ಭಾಗವು ಇವತ್ತಿನ ಕನ್ನಡ ಚಿತ್ರರಂಗದಂತೆ ಸ್ವಲ್ಪ ಪೇಲವವಾಗಿದೆ!

3. `ಆತ್ಮೀಯರ ಅಂತರಾಳದಿಂದ~ ಅಧ್ಯಾಯವು ಈ ಗ್ರಂಥದ ಆಶಯಕ್ಕೆ ನ್ಯಾಯ ಸಲ್ಲಿಸಿದೆ. ಪಾರ್ವತಮ್ಮ ರಾಜ್‌ಕುಮಾರ್, ವರದರಾಜ್, ನಾಗಮ್ಮ, ಶಿವರಾಜಕುಮಾರ್, ಗೀತಾ ಶಿವರಾಜಕುಮಾರ್, ಲಕ್ಷ್ಮಿ ಗೋವಿಂದರಾಜು, ರಾಘವೇಂದ್ರ ರಾಜ್‌ಕುಮಾರ್, ಮಂಗಳ ರಾಘವೇಂದ್ರ ರಾಜ್‌ಕುಮಾರ್, ಪೂರ್ಣಿಮಾ ರಾಮ್‌ಕುಮಾರ್, ರಾಜ್ ಮೊಮ್ಮಕ್ಕಳು ಇವರೆಲ್ಲರ ಮಾತುಗಳನ್ನು ಈ ಅಧ್ಯಾಯದಲ್ಲಿ ನಿರೂಪಿಸಲಾಗಿದೆ.

ಒಳಗಿನವರ ಒಳಗಿನ ನೋಟವನ್ನು ಈ ಅಧ್ಯಾಯವು ಅನಾವರಣಗೊಳಿಸುತ್ತದೆ. ಆತ್ಮೀಯತೆ, ಗೌರವ, ಅಂತಃಕರಣಗಳು ಆಯಾ ಸಂದರ್ಭಕ್ಕನುಗುಣವಾಗಿ ಅಕ್ಷರರೂಪ ತಾಳಿವೆ. ಚಿ. ಉದಯಶಂಕರ್ ಅಂಥವರ ಮಾತುಗಳಲ್ಲದೆ, ರಾಜ್‌ಭಂಟ `ಚೆನ್ನ~, ಚಾಲಕ ಹನುಮಂತು, ಕುಂಟಾರವಿ- ಇಂಥವರ ಅನಿಸಿಕೆಗಳೂ ದಾಖಲಾಗಿರುವುದು ರಾಜ್‌ಕುಮಾರ್ ತರತಮ ಭಾವವಿಲ್ಲದೆ ಆತ್ಮೀಯರನ್ನಾಗಿಸಿಕೊಂಡ ರೀತಿಗೆ ತಕ್ಕ ಉದಾಹರಣೆಯಾಗಿದೆ.

4. `ಅಪ್ಪಾಜಿಯ ಅನೇಕ ಮುಖಗಳು~ ಅಧ್ಯಾಯದಲ್ಲಿ ರಾಜ್‌ಕುಮಾರ್ ಅವರ ಬಾಲ್ಯದ ತುಂಟತನದಿಂದ ಹಿಡಿದು ಅವರು ಆಹಾರದೊಂದಿಗೆ ಇಟ್ಟುಕೊಂಡ `ಅನುಬಂಧ~ದವರೆಗೆ ಬರಹಗಳಿವೆ. ಪಾರ್ವತಮ್ಮನವರ ನೇತೃತ್ವದಲ್ಲಿ ಮೈಸೂರಲ್ಲಿ ಕ್ರಿಯಾಶೀಲವಾಗಿರುವ ಬೀದಿಗೆ ಬಿದ್ದ ಹೆಣ್ಣು ಮಕ್ಕಳ ಆಶ್ರಯಧಾಮ `ಶಕ್ತಿಧಾಮ~ ಕುರಿತ ಮಾಹಿತಿ ರಾಜ್‌ಕುಟುಂಬದ ಸಮಾಜ ಸೇವೆಯ ಸಂಕೇತವಾಗಿ ಮೂಡಿ ಬಂದಿದೆ. ಅಂತೆಯೇ ರಾಜ್‌ಕುಮಾರ್ ಪ್ರತಿಷ್ಠಾನದ ವಿವರಗಳೂ ಇವೆ.

5. `ಆತ್ಮಕತೆ~ ಅಧ್ಯಾಯವು ಚಿ. ದತ್ತುರಾಜ್ ಅವರು ನಿರೂಪಿಸಿದ ಬಹುವರ್ಷಗಳ ಹಿಂದಿನ `ಕಥಾನಾಯಕನ ಕತೆ~ಯ ಆಯ್ದ ಭಾಗಗಳ ಸಂಕ್ಷಿಪ್ತ ರೂಪ. ಈ ಆತ್ಮಕತೆಯು ಮೂಡಿದ ಬಗೆಯನ್ನು ಕುರಿತು ದತ್ತುರಾಜ್ ದಾಖಲಿಸಿದ ಸಂಗತಿಗಳು ಹೊಸದಾಗಿವೆ.

6. `ಸಂಕ್ಷಿಪ್ತ ರೂಪದಲ್ಲಿ ಅಪ್ಪಾಜಿ~ ಅಧ್ಯಾಯದಲ್ಲಿ ರಾಜ್ ಅವರಿಗೆ ಸಂದ ಪ್ರಶಸ್ತಿ ಹಾಗೂ ವಿವಿಧ ಮನ್ನಣೆಗಳ ಮಾಹಿತಿಯಿದೆ; ಪ್ರಖ್ಯಾತಿಯ ನೆಲೆಯನ್ನು ನಿರೂಪಿಸುವ ಅಧ್ಯಾಯವಿದು. ರಾಜ್ ಅವರ `ಮುಕ್ತಕಗಳು~ ಎಂದು ಕೆಲವೇ ಕೆಲವು ಉಕ್ತಿಗಳನ್ನು ಕೊಡಲಾಗಿದೆ. ಉಕ್ತಿಗಳೇ ಮುಕ್ತಕಗಳು ಎಂದು ಇಲ್ಲಿ ಹೇಳಬೇಕಾಗಿದೆ.

7. `ಚಿತ್ರ ಪಟ್ಟಿ~ಯ ಕೊನೆಯ ಅಧ್ಯಾಯವು ತನಗೆ ತಾನೇ ಉಪಯುಕ್ತವಾದುದು. ಡಾ. ರಾಜ್‌ಕುಮಾರ್ ಅವರು ಅಭಿನಯಿಸಿದ ಚಿತ್ರಗಳ ಹೆಸರು, ಅದರ ಒಂದು ಸ್ಥಿರ ಚಿತ್ರ, ಇವುಗಳ ಜೊತೆಗೆ ರಾಜ್ ಅವರ ಈ ಚಿತ್ರವು ಒಟ್ಟು ಕನ್ನಡ ಚಿತ್ರರಂಗದ ಎಷ್ಟನೇ ಚಿತ್ರವೆಂಬುದನ್ನು ನಮೂದಿಸಿರುವುದು ಒಂದು ಉಪಯುಕ್ತ ಮಾಹಿತಿಯಾಗಿದೆ.
 
ರಾಜ್ ಅವರ 150ನೇ ಚಿತ್ರ ಕನ್ನಡದ 409ನೇ ಚಿತ್ರವಾಗಿತ್ತೆಂಬ ಮಾಹಿತಿಯನ್ನು ನೋಡಿದರೆ, ರಾಜ್ ಅವರ ಪ್ರಾಬಲ್ಯವಷ್ಟೇ ಅಲ್ಲ, ಚಿತ್ರರಂಗದ ಬೆಳವಣಿಗೆಗೆ ಅವರು ನೀಡಿದ ಕೊಡುಗೆಯೂ ಅರಿವಾಗುತ್ತದೆ.

ಸುಮಾರು 1750ರಷ್ಟು ಸ್ಥಿರಚಿತ್ರಗಳನ್ನು ಬಳಸಿರುವುದು ಪುಸ್ತಕದ ಒಂದು ವಿಶೇಷ (ಕೆಲವು ಅಪರೂಪದ ಚಿತ್ರಗಳ ಬಗ್ಗೆ ಅಡಿ ಮಾಹಿತಿಯ ಅಗತ್ಯವಿತ್ತು).
ಒಟ್ಟಾರೆ, ಏಳು ಪ್ರಧಾನ ಅಧ್ಯಾಯಗಳಲ್ಲಿ ಹರಡಿಕೊಂಡಿರುವ ವಿವರಗಳಲ್ಲಿ ರಾಜ್‌ಕುಮಾರ್ ಅವರನ್ನು ವ್ಯಕ್ತಿಯಾಗಿ ಕಾಣುವ ಹಂಬಲವಿದ್ದರೂ ವ್ಯಕ್ತಿತ್ವದ ವಿವರ - ವ್ಯಾಖ್ಯಾನಗಳನ್ನು ಕೈಬಿಡಲು ಸಾಧ್ಯವಾಗಿಲ್ಲ.
 
ವ್ಯಕ್ತಿ ಮತ್ತು ವ್ಯಕ್ತಿತ್ವ ಎರಡೂ ಒಂದೇ ಆಗುವ ಒಟ್ಟು ಪ್ರಕ್ರಿಯೆಯ ಫಲವಿದು. ಈ ನಿಟ್ಟಿನಲ್ಲಿ ಕೆಲವರ ಅನಿಸಿಕೆಗಳನ್ನು ಉದಾಹರಿಸಬಹುದು. ಶಿವರಾಜ್‌ಕುಮಾರ್ ಹೇಳುತ್ತಾರೆ: `ಅಪ್ಪಾಜಿ ನಮಗೆ ಮುತ್ತುರಾಜ್ ತರಹ ಜೀವನದಲ್ಲಿ ಬದ್ಕೋದು ಹಾಗೂ ಪರದೆಯ ಮೇಲೆ ಡಾ. ರಾಜ್‌ಕುಮಾರ್ ತರಹ ಮೆರೆಯೋದು ತೋರಿಸಿಕೊಟ್ಟರು~- ಹೀಗೆ ಹೇಳಿದ ಉಸಿರಲ್ಲೇ, `ನಾವ್ಯಾರೂ ರಾಜ್‌ಕುಮಾರ್ ಆಗಲು ಸಾಧ್ಯವಿಲ್ಲ~ ಎಂದು ಸರಿಯಾಗಿಯೇ ಹೇಳಿದ್ದಾರೆ. ಇವರ ಮಾತುಗಳಲ್ಲಿ ಮುತ್ತುರಾಜ್ ಎಂಬ `ವ್ಯಕ್ತಿ~ ಮತ್ತು ರಾಜ್‌ಕುಮಾರ್ ಎಂಬ `ವ್ಯಕ್ತಿತ್ವ~ ಒಟ್ಟಿಗೇ ಇರುವುದನ್ನು ಕಾಣಬಹುದು.

ಪಾರ್ವತಮ್ಮನವರು `ಈ ಜೀವನ ಚರಿತ್ರೆಯು ನನ್ನ ಯಜಮಾನರು ವ್ಯಕ್ತಿಯಾಗಿ ಮಾತ್ರವಲ್ಲ, ಓರ್ವ ಮಹಾನ್ ಮಾನವರಾಗಿ ಏನಾಗಿದ್ದರು ಎಂಬುದನ್ನು ಸಮರ್ಥವಾಗಿ ಬಿಂಬಿಸುತ್ತದೆ~ ಎಂದು ಹೇಳಿರುವ ಮಾತಿನಲ್ಲೂ ವ್ಯಕ್ತಿತ್ವದ ಛಾಯೆಯಿದೆ. ಪುನೀತ್ ಅವರು ರಾಜ್ ಅವರನ್ನು ಕುರಿತು `ಅವರು ಇತರರೊಂದಿಗೆ ನಗುತ್ತಿದ್ದರೇ ವಿನಹ ಇತರರನ್ನು ಕಂಡು ಅಲ್ಲ~ ಎಂದು ಹೇಳಿರುವ ಅಭಿಪ್ರಾಯದಲ್ಲೂ ವ್ಯಕ್ತಿ - ವ್ಯಕ್ತಿತ್ವಗಳ ಅಭಿನ್ನ ಕಲ್ಪನೆಯಿದೆ.

ಈ ಪುಸ್ತಕದಲ್ಲಿ ಮೂಡಿರುವ ಕೆಲವು ಪ್ರಸಂಗಗಳು ನಿಜಕ್ಕೂ ಮನನೀಯವಾಗಿವೆ. ರಾಜ್‌ಕುಮಾರ್ ಅವರು ಎಲ್ಲರನ್ನೂ ಸಮಾನರಾಗಿ ಕಾಣುತ್ತಿದ್ದರೆಂಬುದಕ್ಕೆ ನಿದರ್ಶನವಾಗಿ ಪುನೀತ್ ಅವರು ಹೇಳುವ ಒಂದು ಪ್ರಸಂಗವನ್ನು ಇಲ್ಲಿ ಹೆಸರಿಸಬಹುದು.

ಒಮ್ಮೆ ದೆಹಲಿ ಪ್ರಯಣಕ್ಕೆ ಹೊರಟಾಗ ತಮಗೆ ಮತ್ತು ಪಾರ್ವತಮ್ಮನವರಿಗೆ ವಿಮಾನದಲ್ಲಿ `ಎಕ್ಸಿಕ್ಯುಟಿವ್ ಕ್ಲಾಸ್~ನಲ್ಲಿ, ತಮ್ಮ ಭಂಟ ಚನ್ನ ಅವರಿಗೆ `ಎಕಾನಮಿ ಕ್ಲಾಸ್~ನಲ್ಲಿ ಸ್ಥಳವನ್ನು ಕಾದಿರಿಸಿದ್ದರಿಂದ ಬೇಸರಗೊಂಡ ರಾಜ್ ಅವರು ದೆಹಲಿ ತಲುಪುವವರೆಗೆ ಅನೇಕ ಸಾರಿ ಚನ್ನನ ಹತ್ತಿರ ಬಂದು, ಕೂತು ಮಾತಾಡಿಸುತ್ತಲೇ ಇದ್ದರಂತೆ.

ಇನ್ನೊಂದು ಕಡೆ ಗೀತಾ ಶಿವರಾಜ್‌ಕುಮಾರ್ ಅವರು ರಾಜ್ ಅವರು ನಾಯಕಿಯೊಬ್ಬರ ಜೊತೆ ಆತ್ಮೀಯವಾಗಿ ಯುಗಳ ಗೀತೆ ಹಾಡುವ ಚಿತ್ರೀಕರಣ ನೋಡಿ ಅದನ್ನು ಕಲ್ಪಿಸಿಕೊಳ್ಳಲಾಗದೆ ಕಣ್ಣೀರು ಹಾಕಿದ್ದನ್ನು ಮುಗ್ಧವಾಗಿ ನಿರೂಪಿಸುತ್ತಾರೆ. ಶಿವರಾಜ್‌ಕುಮಾರ್ ಅವರ ಕಾಲ್‌ಶೀಟ್ ಕೇಳಲು ಬಂದವರಿಂದ ವಿವರವಾಗಿ ಕತೆ ಕೇಳುವ ಪದ್ಧತಿಯನ್ನು ರಾಜ್‌ಕುಮಾರ್ ಮತ್ತು ವರದರಾಜ್ ಅವರು ಪಾಲಿಸುತ್ತ ಬಂದಿದ್ದರು.

ಅವರಿಗೆ ಕತೆ ಹಿಡಿಸದಿದ್ದಾಗ ಹೇಗೆ ಪ್ರತಿಕ್ರಿಯಿಸುತ್ತಿದ್ದರು. ಅದೂ ಮೌನ ಪ್ರತಿಕ್ರಿಯೆಯೇ! ಗೀತಾ ಅವರು ಹೇಳುತ್ತಾರೆ: `ಕತೆ ಕೇಳುವಾಗ ನಡುವೆ ಅಪ್ಪಣ್ಣ (ವರದರಾಜ್) ಎದ್ದು ಮಹಡಿಗೆ ಬಂದರೆ, ಐದಾರು ನಿಮಿಷದ ನಂತರ ಅಪ್ಪಾಜಿಯೂ (ರಾಜ್‌ಕುಮಾರ್) ಹಿಂಬಾಲಿಸಿದರೆ ಕತೆ ಮುಳುಗುತ್ತೆಂದೇ ಅರ್ಥ~ - ಇಂತಹ ಕೆಲವು ಅಪರೂಪದ ಅಂಶಗಳಿಂದ ಈ ಪುಸ್ತಕವು ಅಲ್ಲಲ್ಲೇ ಆಸಕ್ತಿ ಮೂಡಿಸುತ್ತದೆ. `ಇನ್ನಷ್ಟು ವಿಶೇಷ ಸಂಗತಿಗಳು~ ಎಂಬ ಭಾಗ ತುಂಬಾ ಉಪಯುಕ್ತವಾಗಿದೆ.

ಕ್ರಮಬದ್ಧತೆಯ ಕೊರತೆ, ಪುನರಾವರ್ತನೆಯ ಭಾವವಲಯದಿಂದ ತುಂಬಿದ್ದರೂ ಪುನೀತ್ ಅವರ ಪ್ರಯತ್ನ ಶ್ಲಾಘನೀಯವಾದುದು. ತನ್ನ ತಂದೆಯವರ ಬಗ್ಗೆ ಆಕರ್ಷಣೀಯ ಪುಸ್ತಕ ತರಬೇಕೆಂಬ ಅವರ ಆಕಾಂಕ್ಷೆ ಮತ್ತು ಅದನ್ನು ಕಾರ್ಯರೂಪಕ್ಕಿಳಿಸಿದ ಪುನೀತ್ ಸಂಕಲ್ಪವನ್ನು ಮೆಚ್ಚಲೇಬೇಕು. ಪುನೀತ್ ಜೊತೆಗೆ ಶ್ರಮವಹಿಸಿದ ಪ್ರಕೃತಿ ಬನವಾಸಿಯವರನ್ನೂ ನೆನೆಯಬೇಕು.
 
ಆದರೆ ಇನ್ನಷ್ಟು ಎಚ್ಚರ ವಹಿಸಿದ್ದರೆ ಸಣ್ಣಪುಟ್ಟ ದೋಷಗಳನ್ನು ತಪ್ಪಿಸಬಹುದಿತ್ತು. ಉದಾಹರಣೆಗೆ- 35ನೇ ಪುಟದ ಪ್ರಕಾರ, ರಾಜ್ ಅವರು ಸಿಂಗನೂರಲ್ಲಿ ಹುಟ್ಟುತ್ತಾರೆ. ಪುಟ 227ರ ಪ್ರಕಾರ ತಾಳವಾಡಿಯಲ್ಲಿ ಹುಟ್ಟುತ್ತಾರೆ! ಕನ್ನಡದ ಜಾಯಮಾನಕ್ಕೆ ಒಗ್ಗದ ಮತ್ತು ಅಗತ್ಯವಿಲ್ಲದ ಪದಪ್ರಯೋಗಗಳನ್ನೂ ಮಾಡಲಾಗಿದೆ.
 
ಡಾ. ರಾಜ್‌ಕುಮಾರ್ ಟ್ರಸ್ಟ್‌ಗೆ `ಡಾ. ರಾಜ್‌ಕುಮಾರ್ ನ್ಯಾಸ~ ಎಂದು ಕರೆದು ಶೀರ್ಷಿಕೆ ಕೊಡಲಾಗಿದೆ. `ನ್ಯಾಸ~ ನಮ್ಮ ಜಾಯಮಾನದ ಪದವಲ್ಲ. ಯೋಗ ಗುರುವಿಗೆ ಶ್ರೇಷ್ಠ ಶಿಷ್ಯರಾಗಿದ್ದನ್ನು `ಕರ್ಮಠ ಶಿಷ್ಯ~ ಎಂದು ಹೆಸರಿಸಲಾಗಿದೆ. ಶ್ರೇಷ್ಠ ಎನ್ನುವುದೇ ಬೇರೆ, ಕರ್ಮಠ ಎನ್ನುವುದೇ ಬೇರೆ.

ಜಡವಾದ, ಚಲನಹೀನ ಮನೋಧರ್ಮವನ್ನು `ಕರ್ಮಠ~ ಎನ್ನಬಹುದು. ಮೊಮ್ಮಕ್ಕಳ ಮಾತುಗಳಿಗೆ `ಪುನೀತ್ ಧ್ವನಿಯಲ್ಲಿ ಎಂದು ಸ್ಪಷ್ಟನೆ ನೀಡಲಾಗಿದೆ. ಮತ್ತೊಂದು ಕಡೆ `ಮತ್ತಷ್ಟು ಧ್ವನಿಗಳು~ ಎಂಬ ಉಪಶೀರ್ಷಿಕೆಯಿದೆ. `ಮಾತುಗಳಲ್ಲಿ~ ಎಂಬುದಕ್ಕೆ `ಧ್ವನಿಯಲ್ಲಿ~, `ಧ್ವನಿಗಳು~ ಎಂದು ಕರೆಯುವ ಅಗತ್ಯವಿರಲಿಲ್ಲ. ಅದು ಅರ್ಥಪೂರ್ಣವಲ್ಲ.

ಕೆಲವು ವಾಕ್ಯಗಳು ಇಂಗ್ಲಿಷ್‌ನಲ್ಲಿ ಯೋಚನೆ ಮಾಡಿ ಕನ್ನಡದಲ್ಲಿ ಬರೆದಂತಿವೆ. `ಹಕ್ಕುಗಳು: ಲೇಖಕರಿಗೆ ಸೇರಿವೆ~ ಎಂದು ಸುಲಭವಾಗಿ ಹೇಳಬಹುದಾಗಿದ್ದನ್ನು `ಈ ಪುಸ್ತಕದೊಡನೆ ಗುರುತಿಸಿಕೊಳ್ಳುವ ಹಕ್ಕು ಲೇಖಕರಿಗಿದೆ~ ಎಂದು ನಮೂದಿಸಿರುವುದು ನನ್ನ ಮಾತಿಗೊಂದು ಚಿಕ್ಕ ಉದಾಹರಣೆ.
 
`ಎನ್.ಟಿ.ಆರ್. ತರಹ ಅಪ್ಪಾಜಿ ಹಾಗೂ ನಾಗೇಶ್ವರರಾವ್ ಸಹ ಕ್ರಮವಾಗಿ ಹನ್ನೆರಡು ಕನ್ನಡ ಹಾಗೂ ತೆಲುಗು ಚಿತ್ರಗಳಲ್ಲಿ ಒಂದನ್ನೊಂದು ಪ್ರತಿಬಿಂಬಿಸುವ ಪಾತ್ರಗಳನ್ನು ಮಾಡಿದರು~ ಎಂಬ ಜಟಿಲವಾಕ್ಯ ಇನ್ನೊಂದು ಉದಾಹರಣೆ.

ಒಬ್ಬರು ಒಂದು ಭಾಷೆಯಲ್ಲಿ ಮಾಡಿದ ಪಾತ್ರವನ್ನು ಇನ್ನೊಬ್ಬರು ಇನ್ನೊಂದು ಭಾಷೆಯಲ್ಲಿ ಮಾಡಿದರು ಎಂದು ಹೇಳುವುದು ಈ ವಾಕ್ಯದ ಉದ್ದೇಶವಿರಬೇಕೆಂದು ಕಾಣುತ್ತದೆ. ಪಾತ್ರಗಳನ್ನೂ ಮೀರಿದ್ದವು (ಪುಟ ್ಡಜಿ) ಎಂದು ಸದುದ್ದೇಶದಿಂದಲೇ ಹೇಳಿದ್ದರೂ ನಿಜಜೀವನಕ್ಕೆ ಪಾತ್ರ, ನಟನೆ ಎಂಬ ಪದಗಳು ಹೊಂದುವುದಿಲ್ಲ. ಯಾಕೆಂದರೆ ನಿಜ ಜೀವನದ ಮನುಷ್ಯ ಸಂಬಂಧಗಳ ಸಹಜ ಅಭಿವ್ಯಕ್ತಿಯು ಅಭಿನಯವಲ್ಲ.

ಹೀಗೆ ಹೆಸರಿಸಬಹುದಾದ, ನನಗೆ ಸರಿಯಲ್ಲವೆಂದು ಕಂಡ ಸಂಗತಿಗಳ ನಡುವೆಯೂ ಈ ಪುಸ್ತಕದ ಮಹತ್ವಕ್ಕೆ ಧಕ್ಕೆಯಾಗುವುದಿಲ್ಲ. ಡಾ. ರಾಜ್‌ಕುಮಾರ್ ಅವರ ಬಗ್ಗೆ ಈಗಾಗಲೇ 65ಕ್ಕೂ ಹೆಚ್ಚು ಪುಸ್ತಕಗಳು ಬಂದಿದ್ದು ಅವುಗಳಿಗಿಂತ ವಿಭಿನ್ನವಾಗಿ, ವಿಶಿಷ್ಟವಾಗಿ, ಕಾಣುವಂತೆ ಪುನೀತ್ ಅವರು ಈ ಪುಸ್ತಕವನ್ನು ರೂಪಿಸಿದ್ದಾರೆ.
 
ಅತ್ಯಂತ ಶ್ರೀಮಂತವಾಗಿ ಕಂಗೊಳಿಸುವ ಪುಸ್ತಕವನ್ನು ಕೊಟ್ಟಿದ್ದಾರೆ. ಪುಸ್ತಕಕ್ಕೆ ಬಳಸಿದ ಕಾಗದ, ರಕ್ಷಾ ಪುಟ, 1750ರಷ್ಟು ಸ್ಥಿರಚಿತ್ರಗಳು ಪುಸ್ತಕದ ಬಾಹ್ಯ ವಿನ್ಯಾಸಕ್ಕೆ ಶ್ರೀಮಂತಿಕೆಯ ಮೆರುಗು ತಂದಿದೆ. ಪುಸ್ತಕದ ಅಂತರಂಗವಾದ ವಸ್ತುವಿನ್ಯಾಸವು ಡಾ. ರಾಜ್‌ಕುಮಾರ್ ಅವರ ಸರಳತೆಗೆ ಅನುಗುಣವಾಗಿ ಸರಳವಾಗಿದೆ.

ಅಂತರಂಗದ ಸರಳತೆ ಬಹಿರಂಗದ ಶ್ರೀಮಂತಿಕೆ ಈ ಪುಸ್ತಕದ ಒಟ್ಟು ವಿನ್ಯಾಸವಾಗಿದೆ. ಹೀಗೆ ಹೇಳುವಾಗ ಮುದ್ದಣ್ಣ ಕವಿಯ `ಶ್ರೀರಾಮಾಶ್ವಮೇಧ~ ಕೃತಿಯನ್ನು ಕುರಿತು ಪ್ರೊ. ಎಸ್. ವಿ. ರಂಗಣ್ಣನವರು ಮಾಡಿದ ಸೂತ್ರಬದ್ಧ ವ್ಯಾಖ್ಯಾನವು ನೆನಪಿಗೆ ಬರುತ್ತದೆ. ಮುದ್ದಣ್ಣನ ಕೃತಿಯಲ್ಲಿರುವ ಮುದ್ದಣ - ಮನೋರಮೆಯ ಸಲ್ಲಾಪವನ್ನು ರಂಗಣ್ಣನವರು `ಸುವರ್ಣದ ಚೌಕಟ್ಟು~ ಎಂದು ಭಾವಿಸಿ ಮುಖ್ಯಕಥಾವಸ್ತುವನ್ನು ಸಾಮಾನ್ಯ ಚಿತ್ರವೆಂದು ಭಾವಿಸುತ್ತಾರೆ.

`ಸಾಮಾನ್ಯ ಚಿತ್ರಕ್ಕೆ ಸುವರ್ಣದ ಚೌಕಟ್ಟು~ ಎಂದು ಒಂದೇ ವಾಕ್ಯದಲ್ಲಿ ವ್ಯಾಖ್ಯಾನಿಸುತ್ತಾರೆ. ಪ್ರೊ. ಎಸ್. ವಿ. ರಂಗಣ್ಣನವರನ್ನು ನೆನೆಯುತ್ತಾ, ನಾನು ಡಾ. ರಾಜ್‌ಕುಮಾರ್ ಅವರನ್ನು ಕುರಿತ ಈ ಕೃತಿಯನ್ನು `ಸರಳ ಚಿತ್ರಕ್ಕೆ ಸುವರ್ಣದ ಚೌಕಟ್ಟು~ ಎಂದು ಹೆಸರಿಸುತ್ತೇನೆ; ಇದು ವ್ಯಾಖ್ಯಾನವೂ ಹೌದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT