ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಂಸ್ಕೃತಿಕ ವೈಭವ

Last Updated 21 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಗಣೇಶ ಚತುರ್ಥಿಯ ಅಂಗವಾಗಿ ನಗರದ ವಿವಿಧ ಬಡಾವಣೆಗಳಲ್ಲಿ ಚಪ್ಪರಗಳು ತಲೆ ಎತ್ತಿ ವಿನಾಯಕ ಉತ್ಸವಗಳು ಎಲ್ಲ ಕಡೆ ವಿಜಂಭಿಸಿದವು. ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ, ಮೆರವಣಿಗೆಗಳಿಂದ ನಗರ ವರ್ಣರಂಜಿತವಾಗಿ ಬೆಳಗಿತು.
 
ಸಿದ್ಧ ಹಾಡುಗಳಲ್ಲದೆ ಸಂಗೀತ, ನತ್ಯ, ಹರಿಕಥೆಗಳಿಂದ ಚಪ್ಪರಗಳು ಮಾರ್ದನಿಗೊಂಡವು. ಅಂಥ ಸಂಘಗಳಲ್ಲಿ ಪ್ರತಿಷ್ಠಿತವಾದ  ವಿದ್ಯಾರಣ್ಯ ಯುವಕ ಸಂಘ, ನರಸಿಂಹರಾಜಾ ಕಾಲೋನಿಯ ಆಚಾರ್ಯ ಪಾಠಶಾಲೆ ಕಾಲೇಜಿನ ಕ್ರೀಡಾಂಗಣದಲ್ಲಿ ಗಣೇಶ ಉತ್ಸವವನ್ನು ವೈಭವವಾಗಿ ಆಚರಿಸಿತು.

ಗಣ್ಯ ಕಲಾವಿದರ ದೊಡ್ಡ ತಂಡವೇ ಹಾಡಿ, ನುಡಿಸಿ ದೊಡ್ಡ ಜನಸಂದಣಿಯನ್ನು ಆಕರ್ಷಿಸಿತು. ಜೊತೆಗೆ ಉದಯೋನ್ಮುಖ ಯುವ ಕಲಾವಿದರಿಗೂ ವೇದಿಕೆ ನೀಡಿದ್ದು ಅಭಿನಂದನೀಯ.

ಹಾಗೆ ವೇದಿಕೆ ಏರಿದ ವಿಜಯಶ್ರೀ ಸುಪರಿಚಿತ ವರ್ಣದೊಂದಿಗೆ ತನ್ನ ಗಾಯನ ಪ್ರಾರಂಭಿಸಿ, ಗಣೇಶನ ಮೇಲಿನ ಕೃತಿಗೆ ಕಿರುಸ್ವರ ಪ್ರಸ್ತಾರ ಸಹ ಮಾಡಿದರು. ಕೇಳುಗರಿಗೆ ಎಂದೂ ಪ್ರಿಯವಾದ `ಚಂದ್ರಚೂಡ ಶಿವ~ ಹಸನಾಗಿ ಹಾಡಿದರು.

ಒಳ್ಳೆಯ ಕಂಠ, ಹಿತಮಿತ ನಿರೂಪಣೆಗಳಿರುವ ವಿಜಯಶ್ರೀ ಪ್ರೌಢ ಶಿಕ್ಷಣ, ವೇದಿಕೆಯ ಅನುಭವಗಳಿಂದ ಒಳ್ಳೆಯ ಭವಿಷ್ಯ ರೂಪಿಸಿಕೊಳ್ಳಬಹುದು. ಪಿಟೀಲಿನಲ್ಲಿ ಡಾ. ಸಂಗೀತ ಹಾಗೂ ಮೃದಂಗದಲ್ಲಿ ಕಿರಣ್‌ಕುಮಾರ್ ನೆರವಾದರು.

ಘನವಾದ ಗಾಯನ
ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಶ್ರೀವಿದ್ಯಾ ಗಣಪತಿ ಸೇವಾ ಸಮಿತಿಯವರು 42 ವರ್ಷಗಳಿಂದ ಸಾಂಸ್ಕೃತಿಕ-ಧಾರ್ಮಿಕ ಉತ್ಸವಗಳನ್ನು ಆಚರಿಸಿಕೊಂಡು ಬರುತ್ತಿದ್ದಾರೆ.

ಇಲ್ಲಿ ಕಳೆದ ವಾರ ಹಾಡಿದ ಪಟ್ಟಾಭಿರಾಮ ಪಂಡಿತ್ ಅವರು ಕ್ಷಿಪ್ರವಾಗಿ ಖ್ಯಾತಿಯ ಶಿಖರವೇರುತ್ತಿರುವ ಕಲಾವಿದರು.

ಅವರು ಪ್ರಾರಂಭದಲ್ಲೆೀ ಮಾಡಿದ ನೆರವಲ್ `ಸಿದ್ದಯಕ್ಷ ಕಿನ್ನರಾದಿ~  ಹಾಗೂ ಸ್ವರ ಪ್ರಸ್ತಾರಗಳಿಂದ ಒಂದು ಚೇತೋಹಾರಿ ವಾತಾವರಣ ಸೃಷ್ಟಿಸಿದರು.

ತ್ಯಾಗರಾಜರ ಸುಪರಿಚಿತ ಕೀರ್ತನೆ `ತತ್ವಮೆರುಗ~ ನಾಗಾಲೋಟದಲ್ಲಿದ್ದರೂ ವಿರಳವಾಗಿ ಮೂಡಿ ರಂಜಿಸಿತು. ಇನ್ನೊಂದು ಜನಪ್ರಿಯ ಕೃತಿ `ಪರಮ ಪಾವನ~ ವಿಸ್ತರಿಸಿ, ಪೂರ್ಣತ್ವ ಕೊಟ್ಟರು. ವಿಳಂಬದಲ್ಲಿ ನಿರೂಪಿಸಿದ `ದೇವಿಬ್ರೋವ~ ಗಾಢಭಾವದಿಂದ ಹೊಮ್ಮಿದರೆ,  `ಮಾತಾಡ ಬಾರದೇನೋ~  ಐತಿಹಾಸಿಕವಾದುದು.
 
ಪಿಟೀಲಿನಲ್ಲಿ ಮೈಸೂರು ಶ್ರೀಕಾಂತ್ ಮಿಂಚಿದರೆ, ಲಯವಾದ್ಯಗಳಲ್ಲಿ ಎಚ್.ಎಸ್. ಸುಧೀಂದ್ರ ಮತ್ತು ಉಳ್ಳೂರು ಗಿರಿಧರ ಉಡುಪ ಕಾವು ತುಂಬಿದರು.

ಸಂಸ್ಮರಣೆ
ಹಿಂದಿನ ಗಣ್ಯ ಸಂಗೀತಗಾರರ ಸಂಸ್ಮರಣೆಗಳನ್ನು ಸಂಗೀತ ಕಛೇರಿಗಳ ಮೂಲಕ ನಡೆಸುವುದು ಸಾಮಾನ್ಯ. ಆದರೆ ಶ್ರೀರಾಮ ಲಲಿತಕಲಾ ಮಂದಿರದವರು ಒಂದು ಭಿನ್ನ ರೀತಿಯಲ್ಲಿ, ಸಾರ್ಥಕವಾದ ರೀತಿಯಲ್ಲಿ ದಿವಂಗತ ರಂಗನಾಯಕಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ಗಾಯಕಿ, ವೈಣಿಕಿ, ಬೋಧಕಿ, ಮೇಲಾಗಿ ಸಹೃದಯಿಯಾಗಿದ್ದ ಜಿ.ವಿ. ರಂಗನಾಯಕಮ್ಮ ಅವರ ನೆನಪಿನಲ್ಲಿ ಒಂದು ಸಂಗೀತ ಕಾರ್ಯಾಗಾರವನ್ನು ನಡೆಸಿದ್ದು ಅಭಿನಂದನೀಯ.

ಹಿರಿಯರಾದ ಪದ್ಮಭೂಷಣ ಡಾ. ಆರ್.ಕೆ. ಶ್ರೀಕಂಠನ್ ಗಣ್ಯ ವಾಗ್ಗೇಯಕಾರರ ರಚನೆಗಳಲ್ಲಿ ಕೆಲವನ್ನು ಕಲಿಸಿಕೊಟ್ಟರು. ಐವತ್ತಕ್ಕೂ ಹೆಚ್ಚು ಕಲಾವಿದರು, ವಿದ್ಯಾರ್ಥಿಗಳು ಕಾರ್ಯಾಗಾರದ ಪ್ರಯೋಜನ ಪಡೆದರು.

ಸಮಾರೋಪ ಸಮಾರಂಭದಲ್ಲಿ ಅಭ್ಯರ್ಥಿಗಳು ಕಾರ್ಯಾಗಾರದಲ್ಲಿ ಕಲಿತ ಕೃತಿಗಳನ್ನು ಹಾಡಿ ತೋರಿಸಿದರು. ತ್ಯಾಗರಾಜರ  `ಆನಂದಸಾಗರಮು~ (ರಾಗ ಗರುಡಧ್ವನಿ) ಮತ್ತು  `ಕನಲು ತಾಕನಿ  (ಕಲ್ಯಾಣವಸಂತ) ಎರಡೂ ಅಪರೂಪ ಕೃತಿಗಳೇ.

ಪಟ್ಟಣಂ ಸುಬ್ರಹ್ಮಣ್ಯ ಅಯ್ಯರ್ ಅವರ  `ಇದಿ ನ್ಯಾಯಮಾ~  ರಂಜನೀಯವಾದ ಮಾಳವಿ ರಾಗದಲ್ಲಿದ್ದರೆ, ಸ್ವಾತಿ ತಿರುನಾಳರ  `ಮಂದರಧರ~ವು ತೋಡಿ ರಾಗದಲ್ಲಿತ್ತು.

ಮೈಸೂರು ಸದಾಶಿವರಾಯರ  `ಪರಮಾದ್ಭುತಮೈನ~  ಹಳೆಯ ಮೈಸೂರಿನಲ್ಲಿ ಚಾಲ್ತಿಯಲ್ಲಿರುವುದೇ! ಕರಿಗಿರಿರಾಯರ `ನೆನರುಂಚರ~ ಮೋಹನ ರಾಗದಲ್ಲಿದ್ದರೆ, ದೀಕ್ಷಿತರ  `ಏಕಾಮ್ರನಾಥಾಯ~  ಮುಖಾರಿ ರಾಗದ ಉತ್ತಮ ರಚನೆಗಳಲ್ಲಿ ಒಂದು. ಕೊನೆಯಲ್ಲಿ ನಿರೂಪಿಸಿದ ಕಲಾವತಿ ರಾಗದ  `ಒಕಬಾರಿ ಜೂಡಗ~  ಇನ್ನೊಂದು ಹಸನಾದ ಕೃತಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT