ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಗರ:ಅಕ್ರಮ ಮದ್ಯದ ವಿರುದ್ಧ ಜನಾಂದೋಲನ

Last Updated 17 ಅಕ್ಟೋಬರ್ 2012, 9:30 IST
ಅಕ್ಷರ ಗಾತ್ರ

ಸಾಗರ: ರಾಜ್ಯ ಸರ್ಕಾರ ಸಾರಾಯಿ ಅಂಗಡಿಗಳನ್ನು ರದ್ದುಗೊಳಿಸಿದ್ದರೂ, ಗ್ರಾಮೀಣ ಭಾಗದಲ್ಲಿ ಕದ್ದುಮುಚ್ಚಿ ಕಳ್ಳಬಟ್ಟಿ ತಯಾರಿಸುವ ಹಾಗೂ ಪೇಟೆಯ ಅಂಗಡಿಗಳಿಂದ ಮದ್ಯದ ಬಾಟಲುಗಳನ್ನು ಕೊಂಡೊಯ್ದು ಮಾರಾಟ ಮಾಡುವ ವಹಿವಾಟು ಇನ್ನೂ ನಡೆಯುತ್ತಲೇ ಇದೆ.

ಇಂತಹ ಅಕ್ರಮ ಮದ್ಯ ಮಾರಾಟದ ವಿರುದ್ಧ ತಾಲ್ಲೂಕಿನ ಹೆಗ್ಗೋಡು ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಜನಾಂದೋಲನ ನಡೆಯುತ್ತಿದ್ದು, ತನ್ಮೂಲಕ ಮದ್ಯ ಮಾರಾಟ ಮಾಡುವವರ ಮತ್ತು ಸೇವಿಸುವವರ ಮನಃಪರಿವರ್ತನೆ ಮಾಡುವ ಕಾರ್ಯ ಸದ್ದಿಲ್ಲದೇ ನಡೆಯುತ್ತಿದೆ.

ಕೆಲವು ತಿಂಗಳ ಹಿಂದೆ ಹೆಗ್ಗೋಡು ಗ್ರಾಮದಲ್ಲಿ ಮದ್ಯ ಮಾರಾಟ ಮಳಿಗೆಯನ್ನು ಆರಂಭಿಸಬೇಕು ಎಂದು ಉದ್ಯಮಿಯೊಬ್ಬರು ಮುಂದಾಗಿದ್ದರು. ಗ್ರಾಮ ಪಂಚಾಯ್ತಿ ಅದಕ್ಕೆ ನಿರಾಕ್ಷೇಪಣಾ ಪತ್ರವನ್ನೂ ನೀಡಿತ್ತು. ಆದರೆ, ಒಬ್ಬ ಗ್ರಾಮ ಪಂಚಾಯ್ತಿ ಸದಸ್ಯರೊಬ್ಬರು ಅದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.

ನಂತರ, ಗ್ರಾಮ ಪಂಚಾಯ್ತಿ ನಿರಾಕ್ಷೇಪಣಾ ಪತ್ರ ನೀಡಿರುವ ವಿಷಯ ಗ್ರಾಮದ ಜನರಿಗೆ ಗೊತ್ತಾಗಿ ಅವರು ಪಂಚಾಯ್ತಿಯ ವಿರುದ್ಧವೇ ತಿರುಗಿ ಬಿದ್ದರು. ಗ್ರಾಮ ಸಭೆಯಲ್ಲಿ ಯಾವುದೇ ಕಾರಣಕ್ಕೂ ನಮ್ಮ ಹಳ್ಳಿಗೆ ಮದ್ಯ ಮಾರಾಟ ಮಳಿಗೆ ಬರುವುದು ಬೇಡ ಎನ್ನುವ ತೀರ್ಮಾನ ಕೈಗೊಂಡಿದ್ದರಿಂದ ಪಂಚಾಯ್ತಿ ಅನಿವಾರ್ಯವಾಗಿ ತಾನು ನೀಡಿದ್ದ ನಿರಾಕ್ಷೇಪಣಾ ಪತ್ರವನ್ನು ರದ್ದುಪಡಿಸಬೇಕಾಯಿತು.

ಅಧಿಕೃತವಾದ ಮದ್ಯ ಮಾರಾಟ ಮಳಿಗೆ ಬರುವುದನ್ನು ತಡೆದಿರಿ, ಆದರೆ, ಎಷ್ಟೋ ಹಳ್ಳಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ನಡೆಯುತ್ತಿದೆಯಲ್ಲ ಎಂಬ ಪ್ರಶ್ನೆಯನ್ನು ಕೆಲವರು ಮುಂದಿಟ್ಟರು. ಈ ಪ್ರಶ್ನೆಯನ್ನು ಸವಾಲಾಗಿ ಸ್ವೀಕರಿಸಿದ ಗ್ರಾಮದ ಜನತೆ ಅಕ್ರಮ ಮದ್ಯ ಮಾರಾಟದ ವಿರುದ್ಧ ಸದ್ದಿಲ್ಲದೇ ಜನಾಂದೋಲನ ಆರಂಭಿಸಿದರು.

ಒಂದು ಮೂಲದ ಪ್ರಕಾರ ಹೆಗ್ಗೋಡು, ಪುರಪ್ಪೆಮನೆ, ಭೀಮನಕೋಣೆ ಸುತ್ತಮುತ್ತಲ ಗ್ರಾಮಗಳಲ್ಲಿ ಪ್ರತಿನಿತ್ಯ ರೂ 8ರಿಂದ 10 ಸಾವಿರವರೆಗೆ ಅಕ್ರಮ ಮದ್ಯದ ಮಾರಾಟದ ವಹಿವಾಟು ನಡೆಯುತ್ತಿತ್ತು. ಗ್ರಾಮದ ಕೆಲವು ಹೋಟೆಲ್, ದಿನಸಿ ಅಂಗಡಿ, ಬೀಡಾ ಅಂಗಡಿಗಳಲ್ಲಿ ಈ ಮಾರಾಟ ಅವ್ಯಾಹತವಾಗಿ ಸಾಗಿತ್ತು.

ಹೀಗೆ ಗ್ರಾಮದಲ್ಲಿ ಎಲ್ಲಿ ಮದ್ಯ ಮಾರಾಟವಾಗುತ್ತದೆ ಎಂಬುದು ಬಹುತೇಕ ಎಲ್ಲರಿಗೂ ಗೊತ್ತಿರುವ ವಿಷಯವೇ ಆಗಿತ್ತು. ಹಾಗೆಂದು ಎಲ್ಲಿ ಮದ್ಯ ಮಾರಾಟವಾಗುತ್ತಿದೆ. ಆ ಅಂಗಡಿಯ ಎದುರು ಪ್ರತಿಭಟನೆ ಅಥವಾ ಧರಣಿ ನಡೆಸಿದರೆ ತಾತ್ಕಾಲಿಕವಾಗಿ ಮಾರಾಟ ನಿಲ್ಲಬಹುದು, ಮಾತ್ರವಲ್ಲ ಗ್ರಾಮದಲ್ಲಿ ದ್ವೇಷದ ವಾತಾವರಣ ಸೃಷ್ಟಿಯಾಗಬಹುದು ಎನ್ನುವ ಕಾರಣಕ್ಕೆ ಗ್ರಾಮಸ್ಥರು ಈ ಮಾರ್ಗ ಕೈಬಿಟ್ಟರು.

ಬದಲಾಗಿ ಪ್ರತಿ ಗ್ರಾಮದಲ್ಲೂ ಅಕ್ರಮ ಮದ್ಯ ಮಾರಾಟದಿಂದ ಆಗುತ್ತಿರುವ ಅನಾಹುತಗಳ ಕುರಿತು ಜನಜಾಗೃತಿ ಸಭೆ ನಡೆಸಿದರು. ಮದ್ಯ ಮಾರುವವರಿಗೆ, ಸೇವಿಸುವವರಿಗೆ ಕಿವಿಮಾತು ಹೇಳಿದರು. ಅಬಕಾರಿ ಇಲಾಖೆಯವರನ್ನೂ ಸಭೆಗೆ ಕರೆಸಿದರು. ಇದರ ಪರಿಣಾಮ ನಿಧಾನವಾಗಿ ಅಕ್ರಮ ಮದ್ಯ ಮಾರಾಟದ ಪಿಡುಗು ಕಡಿಮೆಯಾಗುತ್ತಿದೆ.

ಈ ಹಿಂದೆ ಹಳ್ಳಿಗಳಲ್ಲಿ ಹಬ್ಬ ಮತ್ತಿತರ ವಿಶೇಷ ಸಂದರ್ಭಗಳಲ್ಲಿ ಗ್ರಾಮಸ್ಥರೇ ಸಾರಾಯಿ ತಯಾರಿಸಿ ಸೇವಿಸುತ್ತಿದ್ದರು. ಆದರೆ, ನಂತರ ಅದು ಅಭ್ಯಾಸವಾಗಿ ಪೇಟೆಯ ಅಂಗಡಿಯಿಂದ ತಂದು ನಿರಂತರವಾಗಿ ಕುಡಿಯುವಂತಾಗಿದೆ. ಹೀಗಾಗಿ, ಕುಡಿಯುವವರ ಕುಟುಂಬದ ಆರ್ಥಿಕ ವ್ಯವಸ್ಥೆ ಹಾಳಾಗುವ ಜತೆಗೆ ಹಳ್ಳಿಯ ದುಡ್ಡು ಹೇಗೆ ಪೇಟೆಗೆ ಸೇರುತ್ತಿದೆ ಎಂಬುದನ್ನು ಆಂದೋಲನದ ಮುಂಚೂಣಿಯಲ್ಲಿ ಇರುವವರು ಮನವರಿಕೆ ಮಾಡಿಕೊಡುತ್ತಿದ್ದಾರೆ.

ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳು ಹೆಚ್ಚಿನಸಂಖ್ಯೆಯಲ್ಲಿ ಜನಜಾಗೃತಿ ಸಭೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ನಮ್ಮ ಹಳ್ಳಿಯನ್ನು ನಾವೇ ಚೆನ್ನಾಗಿಟ್ಟುಕೊಳ್ಳಬೇಕು. ಹೊರಗಡೆ ಯವರು ಬಂದು ಅದನ್ನು ಸರಿ ಮಾಡಲು ಸಾಧ್ಯವಿಲ್ಲ ಎಂಬ ಅಂಶ ಅವರಿಗೆ ಅರಿವಾಗುತ್ತಿದೆ.

ಬರುವ ನವೆಂಬರ್‌ನಲ್ಲಿ ಮಳವಳ್ಳಿಯಿಂದ ಭೀಮನ ಕೋಣೆಯವರೆಗೆ ಅಕ್ರಮ ಮದ್ಯ ಮಾರಾಟ ವಿರೋಧಿಸಿ ಜಾಥಾ ನಡೆಸಲು ತೀರ್ಮಾನಿಸಲಾಗಿದೆ. ಹಳ್ಳಿಯ ಸಮಸ್ಯೆ ದಿಲ್ಲಿಯ ಸಮಸ್ಯೆಯಾಗಬೇಕೇ ವಿನಾ ದಿಲ್ಲಿಯ ಸಮಸ್ಯೆ ಹಳ್ಳಿಯ ಸಮಸ್ಯೆ ಆಗಬಾರದು ಎಂಬ ನಂಬಿಕೆ ಈ ಚಳವಳಿಯ ಹಿಂದೆ ಕೆಲಸ ಮಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT