ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತ್ಯ ರಸಾನುಭವಕ್ಕೆ ಓದು ಅಗತ್ಯ: ದೇಜಗೌ

Last Updated 3 ಫೆಬ್ರುವರಿ 2012, 11:40 IST
ಅಕ್ಷರ ಗಾತ್ರ

ಮೈಸೂರು: `ಕನ್ನಡ ಸಾಹಿತ್ಯವನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ವಿಸ್ತಾರವಾದ ಓದಿನ ಅಗತ್ಯವಿದೆ~ ಎಂದು ನಾಡೋಜ ಡಾ.ದೇ.ಜವರೇಗೌಡ ಗುರುವಾರ ಹೇಳಿದರು.

ಜಯಲಕ್ಷ್ಮಿಪುರಂನಲ್ಲಿರುವ ಶ್ರೀಕುವೆಂಪು ವಿದ್ಯಾ ವರ್ಧಕ ಟ್ರಸ್ಟ್‌ನ ಶ್ರೀವಿವೇಕಾನಂದ ಸಭಾಂಗಣದಲ್ಲಿ ವಿಜಯನಗರ ಸರ್ಕಾರಿ ಮಹಿಳಾ ಕಾಲೇಜು, ಶ್ರೀಕುವೆಂಪು ವಿದ್ಯಾವರ್ಧಕ ಟ್ರಸ್ಟ್ ಹಾಗೂ ಕರ್ನಾ ಟಕ ಸಾಹಿತ್ಯ ಅಕಾಡೆಮಿ ಸಂಯುಕ್ತವಾಗಿ ಏರ್ಪಡಿ ಸಿದ್ದ `ಕನ್ನಡ ಕಾವ್ಯ ಮತ್ತು ನಾಟಕ: ಓದು, ವ್ಯಾಖ್ಯಾನ~ ಕಮ್ಮಟ ಉದ್ಘಾಟಿಸಿ ಮಾತನಾಡಿದರು.

`ಎಲ್ಲ ಪ್ರಕಾರದ ಸಾಹಿತ್ಯ ಕೃತಿಗಳನ್ನು ವಿದ್ಯಾರ್ಥಿಗಳು ಓದಬೇಕು. ರಾಮಾಯಣವನ್ನು ಅರ್ಥ ಮಾಡಿಕೊಳ್ಳಲು ಮನಃಶಾಸ್ತ್ರ ಓದುವುದು ಅವಶ್ಯ. ಇಲ್ಲದೇ ಹೋದರೆ ಮಂಥರೆ, ಮಂಡೋಧರಿ ಪಾತ್ರಗಳನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ. ಇದ ರೊಂದಿಗೆ ಪಾಶ್ಚಾತ್ಯ ತತ್ವಶಾಸ್ತ್ರ ಹೀಗೆ ಸಾಧ್ಯವಾ ದಷ್ಟು ಓದಬೇಕು. ಆಗ ಮಾತ್ರ ಕಾವ್ಯ, ನಾಟಕ ಚೆನ್ನಾಗಿ ಅರ್ಥವಾಗುತ್ತದೆ~ ಎಂದು ಸಲಹೆ ನೀಡಿದರು.

`ಕಾವ್ಯವನ್ನು ಸುಮ್ಮನೆ ಓದುವುದರಿಂದ ಪ್ರಯೋಜನವಿಲ್ಲ. ಕಾವ್ಯದಲ್ಲಿನ ವಾಚ್ಯಾರ್ಥಕ್ಕಿಂತ ವ್ಯಂಗ್ಯಾರ್ಥವನ್ನು ಗ್ರಹಿಸಬೇಕು. ಆಗ ಮಾತ್ರ ಕಾವ್ಯರಸಾನುಭವ ಆಗುತ್ತದೆ~ ಎಂದ ಅವರು, `ಇಂತಹ ಕಮ್ಮಟಗಳನ್ನು ವಿದ್ಯಾರ್ಥಿಗಳಿಂತ ಅಧ್ಯಾಪಕರಿಗೆ ಏರ್ಪಡಿಸಿದ್ದರೆ ಚೆನ್ನಾಗಿರುತ್ತಿತ್ತು~ ಎಂದು ಅಭಿಪ್ರಾಯಪಟ್ಟರು.

ಮುಖ್ಯ ಅತಿಥಿಯಾಗಿದ್ದ ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಪ್ರೊ.ಟಿ.ಎನ್.  ಪ್ರಭಾಕರ ಮಾತನಾಡಿ, `ಹಿಂದೆ ಹಳ್ಳಿಗಳಲ್ಲಿ ರಾತ್ರಿ ವೇಳೆ ವಿದ್ವಾಂಸರು, ಸಾಧಕರು ಜೈಮಿನಿ ಭಾರತವನ್ನು ವಾಚನ ಮಾಡುತ್ತಿದ್ದರು. ಹೀಗಾಗಿ ಹಳ್ಳಿಗರಿಗೂ ಕೂಡ  ಕಾವ್ಯ ಅರ್ಥವಾಗುತ್ತಿತ್ತು. ಆದರೀಗ ಅಂತಹ ಸ್ಥಿತಿ ಇಲ್ಲವಾಗಿದೆ~ ಎಂದು ಬೇಸರ ವ್ಯಕ್ತಪಡಿಸಿದರು.

ವಿಜಯನಗರ ಸರ್ಕಾರಿ ಮಹಿಳಾ ಕಾಲೇಜಿನ ಪ್ರಾಂಶುಪಾಲ ಪ್ರೊ.ಕೆ.ಎಸ್. ಲಕ್ಷ್ಮಣಗೌಡ ಅಧ್ಯಕ್ಷತೆ ವಹಿಸಿದ್ದರು. ಕಮ್ಮಟದ ಸಂಚಾಲಕ ಡಾ.ಪಿ.ಬೆಟ್ಟೇಗೌಡ, ಪ್ರೊ.ರಾಮಸ್ವಾಮಿ ಇದ್ದಾರೆ.

ಸಮಾರೋಪ: `ಇತ್ತೀಚಿನ ವರ್ಷಗಳಲ್ಲಿ ಕಾವ್ಯಾಸಕ್ತಿ ಕುಗ್ಗುತ್ತಿದೆ. ಕಾವ್ಯ ಎಂದರೆ ಕವಿತೆ, ಗದ್ಯ, ನಾಟಕ ಎನ್ನುವ ವಿಶಾಲವಾದ ಅರ್ಥವಿದೆ. ಆದರೆ ಇಂತಹ ವ್ಯಾಪಕವಾದ ಅರ್ಥವನ್ನು ಕುಗ್ಗಿಸಲಾಗು ತ್ತಿದೆ~ ಹಿರಿಯ ಸಾಹಿತಿ ಡಾ.ಸಿಪಿಕೆ ಬೇಸರ ವ್ಯಕ್ತಪಡಿಸಿದರು.

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಸಮಾರೋಪ ಭಾಷಣ ಮಾಡಿದ ಅವರು, `ಜನರು ಹಣದ ಹಿಂದೆ ಬಿದ್ದಿದ್ದಾರೆ. ಆದ್ದರಿಂದ ಕಾವ್ಯವನ್ನು ಹೇಗೆ ಓದಿಕೊಳ್ಳಬೇಕು, ಆಸ್ವಾದಿಸಬೇಕು, ಅರ್ಥ ಗ್ರಹಿಸಬೇಕು ಎನ್ನುವುದು ಸರಿಯಾಗಿ ಗೊತ್ತಿಲ್ಲ. ಈ ದೃಷ್ಟಿಯಲ್ಲಿ ಕಾವ್ಯ ಕಮ್ಮಟ ಉಪಯುಕ್ತವಾಗುತ್ತದೆ~ ಎಂದು ಹೇಳಿದರು.

`ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳಿಗೂ ಮಿಗಿಲಾದ, ಕನ್ನಡ ಸಾಹಿತ್ಯಕ್ಕೆ ಒಂದು ಸಾವಿರಕ್ಕೂ ಅಧಿಕ ಪರಂಪರೆ ಇದೆ. ಆದರೆ ನಮ್ಮವರಿಗೆ ಇಂತಹ ಶ್ರೇಷ್ಠ ಸಾಹಿತ್ಯ ಪರಂಪರೆಯ ಅರಿವು ಇಲ್ಲವಾಗು ತ್ತಿದೆ. ಪರಂಪರೆ ಎನ್ನುವುದು ಅನುವಂಶೀಯವಾಗಿ ಬರುವುದಿಲ್ಲ. ಆಸಕ್ತಿ, ಶ್ರದ್ಧೆಯಿಂದ ಬರುತ್ತದೆ~ ಎಂದ ಅವರು, `ಇಂದಿನ ಪೀಳಿಗೆ ಇಂತಹ ಪರಂಪರೆಯನ್ನು ಅರ್ಥ ಮಾಡಿಕೊಂಡು ವಾರಸುದಾರರಾಗಬೇಕು~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT