ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಐಡಿ ತನಿಖೆಗೆ ಆದೇಶ

ಬಿ.ಇಡಿ ಕಾಲೇಜು ಅವ್ಯವಹಾರ
Last Updated 20 ಏಪ್ರಿಲ್ 2013, 19:52 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ವ್ಯಾಪ್ತಿಯ ಕೆಲವು ಬಿ.ಇಡಿ ಕಾಲೇಜುಗಳು `ಆಫ್ ಕ್ಯಾಂಪಸ್' ಪದ್ಧತಿಯಡಿ ಪ್ರವೇಶ ನೀಡಿ ಅವ್ಯವಹಾರ ಎಸಗಿದ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿ ರಾಜ್ಯ ಸರ್ಕಾರ ಇದೇ 15ರಂದು ಆದೇಶ ಹೊರಡಿಸಿದೆ.

ವಿವಿ ಸಂಯೋಜನೆಗೆ ಒಳಪಟ್ಟ ಬಿ.ಇಡಿ ಕಾಲೇಜುಗಳ ಕಾರ್ಯವೈಖರಿ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಕೆಲವು ಖಾಸಗಿ ಕಾಲೇಜುಗಳು ಪದವಿ ಪ್ರಮಾಣಪತ್ರ ನೀಡುವ ದಂಧೆ ನಡೆಸುತ್ತಿವೆ ಎಂಬ ಆರೋಪ ಕೇಳಿ ಬಂದಿತ್ತು. ಈ ಕಾಲೇಜುಗಳ ಗುಣಮಟ್ಟ ಪರಿಶೀಲನೆಗೆ ಕಾರ್ಯಪಡೆ ರಚಿಸಿ ವರದಿ ಸಲ್ಲಿಸುವಂತೆ ಸೂಚಿಸಲಾಗಿತ್ತು. ಶೇ 50ಕ್ಕೂ ಅಧಿಕ ಬಿ.ಇಡಿ ಕಾಲೇಜುಗಳ ಕಾರ್ಯವೈಖರಿ ಪಾರದರ್ಶಕವಾಗಿಲ್ಲ ಎಂದು ಕಾರ್ಯಪಡೆ ಮಧ್ಯಂತರ ವರದಿಯನ್ನು ಸಲ್ಲಿಸಿತ್ತು. ವಿವಿಯ ಅಕಾಡೆಮಿಕ್ ಕೌನ್ಸಿಲ್ ಸಭೆಯಲ್ಲಿ ಅವ್ಯವಹಾರದ ಬಗ್ಗೆ ಸದಸ್ಯರು ಗಮನ ಸೆಳೆದಿದ್ದರು.

ಈ ಹಿನ್ನೆಲೆಯಲ್ಲಿ ಜನವರಿ 3ರಂದು ಕುಲಪತಿ ಅವರು ಉನ್ನತ ಶಿಕ್ಷಣ ಇಲಾಖೆಗೆ ಪತ್ರ ಬರೆದು ಸಿಇಡಿ ತನಿಖೆಗೆ ಆದೇಶ ನೀಡುವಂತೆ ಆಗ್ರಹಿಸಿದ್ದರು. `ಕೆಲವು ಬಿ.ಇಡಿ ಕಾಲೇಜುಗಳು ವಿವಿಯ ಲಾಂಛನವನ್ನು ವೆಬ್‌ಸೈಟ್‌ಗಳಲ್ಲಿ ದುರುಪಯೋಗ ಮಾಡಿಕೊಂಡು ಹೊರರಾಜ್ಯಗಳ ದಲ್ಲಾಳಿಗಳ ಮೂಲಕ ಸುಳ್ಳು ಭರವಸೆ ನೀಡಿ ಆಫ್ ಕ್ಯಾಂಪಸ್ ಪದ್ಧತಿಯಡಿ ಅಭ್ಯರ್ಥಿಗಳಿಗೆ ಪ್ರವೇಶ ನೀಡುತ್ತಿವೆ. ಈ ಕಾಲೇಜುಗಳು ಅನೇಕ ಅಕ್ರಮಗಳಲ್ಲಿ ಭಾಗಿಯಾಗಿವೆ' ಎಂದು ಪತ್ರದಲ್ಲಿ ಗಂಭೀರ ಆರೋಪ ಮಾಡಿದ್ದರು.

ಈ ಸಂಬಂಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿತ್ತು. ಈ ಪ್ರಸ್ತಾವವನ್ನು ರಾಜ್ಯ ಸರ್ಕಾರ ಕೂಲಂಕಷವಾಗಿ ಪರಿಶೀಲಿಸಿ ಸಿಐಡಿ ತನಿಖೆಗೆ ಆದೇಶ ಹೊರಡಿಸಿದೆ. ಸಿಐಡಿ ತಂಡವು ಶೀಘ್ರದಲ್ಲಿ ತನಿಖೆಯನ್ನು ಪೂರ್ಣಗೊಳಿಸಿ ವರದಿಯನ್ನು ಸಲ್ಲಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.   

`2004-05ರಿಂದ 2012-13ರ ಅವಧಿಯಲ್ಲಿ ಕೆಲವು ಬಿ.ಇಡಿ ಹಾಗೂ ಎಂ.ಇಡಿ ಕಾಲೇಜುಗಳಲ್ಲಿ ಲಕ್ಷಾಂತರ ರೂಪಾಯಿ ವಸೂಲಿ ಮಾಡಿ ಆಫ್ ಕ್ಯಾಂಪಸ್ ಮೂಲಕ ಅನ್ಯ ರಾಜ್ಯದ ವಿದ್ಯಾರ್ಥಿಗಳಿಗೆ ನಕಲಿ ಪ್ರಮಾಣಪತ್ರ ನೀಡಲಾಗಿದೆ. 82 ಬಿ.ಇಡಿ ಕಾಲೇಜುಗಳು ವಿವಿಧ ಬಗೆಯ ಅವ್ಯವಹಾರದಲ್ಲಿ ಭಾಗಿಯಾಗಿರುವ ಬಗ್ಗೆ ಮಧ್ಯಂತರ ವರದಿಯಲ್ಲಿ ಬೆಳಕು ಚೆಲ್ಲಲಾಯಿತು. ಈ ಸಂಬಂಧ ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಲಾಗಿತ್ತು. ಸರ್ಕಾರದ ಆದೇಶದಿಂದ ಈ ವರದಿಗೆ ನ್ಯಾಯ ಸಿಕ್ಕಿದೆ' ಎಂದು ಕಾರ್ಯಪಡೆಯ ಅಧ್ಯಕ್ಷ ಎಚ್. ಕರಣ್ ಕುಮಾರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT