ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿನಿಮಾ ರಸದೌತಣ: ಅಜಂತಾ ಸೊಸೈಟಿ ಸಿದ್ಧ

Last Updated 16 ಡಿಸೆಂಬರ್ 2013, 6:17 IST
ಅಕ್ಷರ ಗಾತ್ರ

ಬೆಳಗಾವಿ: ಕಳೆದ ಮೂರು ದಶಕಗಳ ಕಾಲ ನಗರದಲ್ಲಿ ಸಿನಿಮಾ ಪ್ರಿಯರಿಗೆ ದೇಶ– ವಿದೇಶಗಳ ಚಲನಚಿತ್ರಗಳ ರಸದೌತಣವನ್ನು ಉಣಬಡಿಸುತ್ತಿದ್ದ ಎಲೆ ಮರೆ ಕಾಯಿಯಂತೆ ಇರುವ ಅಜಂತಾ ಫಿಲ್ಮ್‌ ಸೊಸೈಟಿಯು ಇದೀಗ ಮಿನುಗತೊಡಗಿದೆ. ನಿಯಮಿತವಾಗಿ ಬೆಳ್ಳಿ ತೆರೆಯ ಮೇಲೆ ಸಿನಿಮಾ ಪ್ರದರ್ಶನ ಮಾಡುವ ಮೂಲಕ ಕಲಾರಸಿಕರ ದಾಹವನ್ನು ತಣಿಸಲು ಸಜ್ಜಾಗಿದೆ.

ಸರ್ಕಾರಿ ನೌಕರಸ್ಥರಾಗಿರುವ ಸುಭಾಶ ಚೌಗುಲೆ ಅವರು 1982ರಲ್ಲಿ ಬೆಳಗಾವಿಯಲ್ಲಿ ಸ್ಥಾಪಿಸಿದ ಅಜಂತಾ ಫಿಲ್ಮ್‌ ಸೊಸೈಟಿಗೆ ಚಲನಚಿತ್ರ ಪ್ರದರ್ಶಿಸಲು ಇದುವರೆಗೆ ತನ್ನದೇ ಆದ ಸ್ಥಳ ಇರಲಿಲ್ಲ. ಹೀಗಾಗಿ ನಿಯಮಿತವಾಗಿ ಪ್ರದರ್ಶನ ನಡೆಸಲು ಸಾಧ್ಯವಾಗುತ್ತಿರಲಿಲ್ಲ. ಚೌಗುಲೆ ಅವರ ಅವಿರತ ಶ್ರಮದಿಂದಾಗಿ ಇದೀಗ ವಿಶ್ವೇಶ್ವರಯ್ಯ ನಗರದಲ್ಲಿ ಸೊಸೈಟಿಯ ಅಜಂತಾ ಸಾಂಸ್ಕೃತಿಕ ಕೇಂದ್ರ ಭಾನುವಾರ ಆರಂಭಗೊಂಡಿತು.

16 ಎಂ.ಎಂ. ಫಿಲ್ಮ್‌ ರೋಲ್‌ ಬರುತ್ತಿದ್ದಾಗ ಸಂತ ಮೇರಿಸ್‌ ಹೈಸ್ಕೂಲ್‌ನಲ್ಲಿ ಸೊಸೈಟಿಯು ಮೊದಲಿಗೆ ಪ್ರದರ್ಶನ ಆರಂಭಿಸಿತು. ಬಳಿಕ ಹಂಸ ಟಾಕೀಸ್‌, ಲೋಕಮಾನ್ಯ ಸೊಸೈಟಿಯ ಬ್ಯಾಂಕ್‌ನ ಸಭಾಗೃಹ, ನಗರ ಕೇಂದ್ರ ಗ್ರಂಥಾಲಯ ಸಭಾಂಗಣದಲ್ಲಿ ಎರಡು– ಮೂರು ತಿಂಗಳಿಗೆ ಒಮ್ಮೆ ಚಲನಚಿತ್ರಗಳ ಪ್ರದರ್ಶನವನ್ನು ಏರ್ಪಡಿಸಲಾಗುತ್ತಿತ್ತು.

ಇಪ್ಪತ್ತು ಆಜೀವ ಸದಸ್ಯರು ಹಾಗೂ ಮೂವತ್ತು ಸಾಮಾನ್ಯ ಸದಸ್ಯರನ್ನು ಒಳಗೊಂಡಿರುವ ಸೊಸೈಟಿಗೆ ಸಿನಿಮಾ ಪ್ರದರ್ಶನ ಮಾಡಲು ಸ್ವಂತ ಸಭಾಂಗಣದ ಸೌಲಭ್ಯ ಇರಲಿಲ್ಲ. ಹೀಗಾಗಿ ಚೌಗುಲೆ ಅವರು ಪ್ರದರ್ಶನ ಏರ್ಪಡಿಸಲು ಪಡುತ್ತಿದ್ದ ಶ್ರಮ ಅಷ್ಟಿಷ್ಟಲ್ಲ. ಕರ್ನಾಟಕ ನೀರಾವರಿ ನಿಗಮದ ಸಭಾಂಗಣವು ವಿಶ್ವೇಶ್ವರಯ್ಯ ನಗರದಲ್ಲಿ ಹಾಳುಬಿದ್ದುಕೊಂಡಿತ್ತು. ಇದನ್ನು ಸದ್ಬಳಕೆ ಮಾಡಿಕೊಳ್ಳಲು ಮುಂದಾದ ಚೌಗಲೆ ಅವರು ಸೊಸೈಟಿಗೆ ತಾತ್ಕಾಲಿಕವಾಗಿ ಪಡೆದುಕೊಳ್ಳಲು ಯಶಸ್ವಿಯಾಗಿದ್ದಾರೆ.

‘ಪ್ರದರ್ಶನ ಏರ್ಪಡಿಸಲು ನಮಗೆ ಸ್ವಂತ ಜಾಗ ಇರದೇ ಇರುವುದರಿಂದ ಹೆಚ್ಚೆಚ್ಚು ಸಿನಿಮಾ ತೋರಿಸಲು ಸಾಧ್ಯವಾಗುತ್ತಿರಲಿಲ್ಲ. ಅಲ್ಲದೇ ಹೆಚ್ಚಿನ ಸದಸ್ಯರನ್ನು ಮಾಡಿಕೊಳ್ಳುತ್ತಿರಲಿಲ್ಲ. ಈಗ ₨ 7 ಲಕ್ಷ ವೆಚ್ಚ ಮಾಡಿ ಈ ಸಭಾಂಗಣದಲ್ಲಿ ಸಿನಿಮಾ ಪ್ರದರ್ಶನ ಮಾಡಲು ಅಗತ್ಯ ಸೌಲಭ್ಯವನ್ನು ಕಲ್ಪಿಸಲಾಗಿದೆ. ₨ 2 ಲಕ್ಷದಲ್ಲಿ ಪ್ರಾಜೆಕ್ಟರ್‌, ₨ 70 ಸಾವಿರ ವೆಚ್ಚದಲ್ಲಿ ಸ್ಕ್ರೀನ್‌ ಹಾಕಲಾಗಿದೆ. 90 ಜನರು ಕುಳಿತುಕೊಳ್ಳಲು ಇಲ್ಲಿ ಸೌಲಭ್ಯ ಕಲ್ಪಿಸಲಾಗಿದೆ. ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಫಿರೋಜ್‌ ಸೇಠ್‌ ತಮ್ಮ ಅಭಿವೃದ್ಧಿ ನಿಧಿಯಿಂದ ₨ 4 ಲಕ್ಷ ಅನುದಾನವನ್ನು ನೀಡಿದ್ದಾರೆ’ ಎಂದು ಸೊಸೈಟಿಯ ಸಂಸ್ಥಾಪಕ ಅಧ್ಯಕ್ಷ ಸುಭಾಷ ಚೌಗುಲೆ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಭರತೇಶ ಹೈಸ್ಕೂಲ್‌, ಸರದಾರ್ಸ್‌ ಹೈಸ್ಕೂಲ್‌, ಜ್ಞಾನ ಪ್ರಬೋಧಿನಿ ಹೈಸ್ಕೂಲ್‌ಗಳಲ್ಲಿ ಮಕ್ಕಳಿಗಾಗಿ ನಾವು ಸಿನಿಮಾ ಪ್ರದರ್ಶನ ಏರ್ಪಡಿಸಿದ್ದೇವೆ. ಸೊಸೈಟಿಯಲ್ಲಿ 500 ಸಿನಿಮಾ ಹಾಗೂ 200ಕ್ಕೂ ಹೆಚ್ಚು ಸಿನಿಮಾ ಕುರಿತ ಪುಸ್ತಕ ಮತ್ತು ಮ್ಯಾಗಜಿನ್‌ ಇದೆ. ವಿಶ್ವ ಕನ್ನಡ ಸಮ್ಮೇಳನದ ಸಂದರ್ಭದಲ್ಲಿ ಸೊಸೈಟಿ ನೇತೃತ್ವದಲ್ಲಿ ಜಿಲ್ಲೆಯಲ್ಲಿ 110 ಸಿನಿಮಾಗಳನ್ನು ಪ್ರದರ್ಶಿಸಲಾ­ಗಿತ್ತು. ಇನ್ನು ಮೇಲೆ ಪ್ರತಿ ಶನಿವಾರ ಸಂಜೆ 6 ಗಂಟೆಯಿಂದ ಇಲ್ಲಿ ಕಲಾತ್ಮಕ ಸಿನಿಮಾ ಪ್ರದರ್ಶನ ಮಾಡಲಾಗುವುದು. ಆಜೀವ ಸದಸ್ಯತ್ವ ಶುಲ್ಕ ₨ 10,000 ಹಾಗೂ ವಾರ್ಷಿಕ ಸದಸ್ಯತ್ವ ಶುಲ್ಕ ₨ 1,000 ನಿಗದಿಗೊಳಿಸಲಾಗಿದೆ’ ಎನ್ನುತ್ತಾರೆ ಸುಭಾಷ ಚೌಗಲೆ (ಮೊ: 9611135277).

‘ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಹಾಗೂ ಸದಸ್ಯರನ್ನು ಬೆಂಗಳೂರಿನವರನ್ನೇ ಆಯ್ಕೆ ಮಾಡಲಾಗುತ್ತಿದೆ. ಇದರಿಂದಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಸಿನಿಮಾ ಪ್ರದರ್ಶನಗಳು ಏರ್ಪಡುತ್ತಿಲ್ಲ’ ಎಂದು ವಿಷಾದಿಸಿದ ಅವರು, ‘ಬೆಳಗಾವಿ, ಹುಬ್ಬಳ್ಳಿ, ಗುಲ್ಬರ್ಗ ನಗರಗಳಲ್ಲೂ ಕನಿಷ್ಠ ಪಕ್ಷ ರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಏರ್ಪಡಿಸಬೇಕು’ ಎಂದು ಒತ್ತಾಯಿಸಿದರು.

‘ನಗರದ ಕುಮಾರ ಗಂಧರ್ವ ರಂಗಮಂದಿರ, ಕಲಾಮಂದಿರದಲ್ಲಿ ಪ್ರತಿಧ್ವನಿಸುವ ಸಮಸ್ಯೆ ಇದೆ. ಹೀಗಾಗಿ ಚಲನಚಿತ್ರೋತ್ಸವ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ನಗರದಲ್ಲಿ ಸುಸಜ್ಜಿತ ಅತ್ಯಾಧುನಿಕ ಸಭಾಂಗಣವನ್ನು ನಿರ್ಮಿಸಲು ಜಿಲ್ಲಾಡಳಿತ ಮುಂದಾಗಬೇಕು’ ಎಂದು ಚೌಗುಲೆ ಒತ್ತಾಯಿಸಿದರು.

ಉದ್ಘಾಟನೆ: ಅಜಂತಾ ಸಾಂಸ್ಕೃತಿಕ ಕೇಂದ್ರವನ್ನು ಶಾಸಕ ಫಿರೋಜ್‌ ಸೇಠ್‌ ಉದ್ಘಾಟಿಸಿದರು. ಕೊಲ್ಲಾಪುರದ ಸಿನಿಮಾ ನಿರ್ದೇಶಕ ನಿನಾದ್‌ ಕಾಳೆ ಹಾಗೂ ಮುಂಬೈನ ಫಿಲ್ಮ್‌ ಅಪ್ರಿಸಿಯೇಶನ್‌ ಎಕ್ಸ್‌ಪರ್ಟ್‌ ಶರದ್ ದೇಸಾಯಿ ಮಾತನಾಡಿದರು. ಮಹಾನಗರ ಪಾಲಿಕೆ ಆಯುಕ್ತ ರವಿಕುಮಾರ, ಸೊಸೈಟಿ ಉಪಾಧ್ಯಕ್ಷ ಅಶೋಕ ಯಾಳಗಿ, ಕಾರ್ಯದರ್ಶಿ ರಾಜೇಂದ್ರ ಬೆಳಗಾಂವಕರ ಹಾಜರಿದ್ದರು. ಬಳಿಕ ಅಂತರರಾಷ್ಟ್ರೀಯ ಖ್ಯಾತಿಯ ‘ಬೈಸಿಕಲ್‌ ಥೀಫ್‌’ ಸಿನಿಮಾವನ್ನು ಪ್ರದರ್ಶಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT