ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಪ್ರೀಂನಿಂದ ಮೋದಿ ಪಾರು

Last Updated 12 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ: ಗೋಧ್ರಾ ಹತ್ಯಾಕಾಂಡದ ನಂತರ ಗುಜರಾತ್‌ನಲ್ಲಿ ಕಾಣಿಸಿಕೊಂಡಿದ್ದ ಗಲಭೆಗಳನ್ನು ನಿಯಂತ್ರಿಸುವಲ್ಲಿ ಮುಖ್ಯಮಂತ್ರಿ ನರೇಂದ್ರ ಮೋದಿ ನಿರ್ಲಕ್ಷ್ಯ ತೋರಿದ್ದರು ಮತ್ತು ಪ್ರಚೋದನೆ ನೀಡಿದ್ದರು ಎಂಬ ಆಪಾದನೆ ಬಗ್ಗೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯವೇ ಅಂತಿಮ ನಿರ್ಧಾರ ಕೈಗೊಳ್ಳುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿರುವ ಸುಪ್ರೀಂ ಕೋರ್ಟ್ ಈ ನಿಟ್ಟಿನಲ್ಲಿ ತಾನು ಯಾವುದೇ ಆದೇಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಸುಪ್ರೀಂಕೋರ್ಟಿನ ಈ ನಿಲುವಿನಿಂದಾಗಿ ಮುಖ್ಯಮಂತ್ರಿ ನರೇಂದ್ರ ಮೋದಿ ತಾತ್ಕಾಲಿಕವಾಗಿ ನಿಟ್ಟುಸಿರು ಬಿಡುವಂತಾಗಿದೆ.

ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳ (ಸಿಟ್) ಅಂತಿಮ ವರದಿಯನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಸಲ್ಲಿಸುವಂತೆ ನ್ಯಾಯಮೂರ್ತಿ ಡಿ.ಕೆ. ಜೈನ್ ನೇತೃತ್ವದ ತ್ರಿಸದಸ್ಯ ಪೀಠ ಸೋಮವಾರ ಸೂಚಿಸಿದೆ.

ಮೋದಿ, ಸರ್ಕಾರದ ಹಿರಿಯ ಅಧಿಕಾರಿಗಳೂ ಸೇರಿದಂತೆ 63 ಮಂದಿಯ ವಿರುದ್ಧ ತನಿಖೆ ನಡೆಸಬೇಕೇ ಬೇಡವೇ ಎಂದು ಮ್ಯಾಜಿಸ್ಟ್ರೇಟ್ ತೀರ್ಮಾನಿಸಲಿದ್ದಾರೆ ಎಂದೂ ಪೀಠ ಅಭಿಪ್ರಾಯಪಟ್ಟಿದೆ.

ಮೋದಿ ಹಾಗೂ ಇತರರ ವಿರುದ್ಧ ತನಿಖೆ ಕೈಬಿಡಬೇಕೇ ಅಥವಾ ಬೇಡವೇ ಎನ್ನುವ ಕುರಿತು ಮ್ಯಾಜಿಸ್ಟ್ರೇಟ್ ಕೋರ್ಟ್ ಅಂತಿಮ ನಿರ್ಧಾರ ಕೈಗೊಳ್ಳಲಿದೆ. ಈ ಸಂದರ್ಭದಲ್ಲಿ ಅರ್ಜಿದಾರರಾದ ಝಾಕಿಯಾ ಜಾಫ್ರಿ ಅವರ ವಾದವನ್ನೂ ಪರಿಗಣಿಸಬೇಕು ಎಂದು ನ್ಯಾಯಮೂರ್ತಿಗಳಾದ ಪಿ. ಸದಾಶಿವಂ ಮತ್ತು ಅಫ್ತಾಬ್ ಆಲಂ ಅವರನ್ನು ಒಳಗೊಂಡ ಪೀಠ ಕೆಳ ನ್ಯಾಯಾಲಯಕ್ಕೆ ಸೂಚಿಸಿತು.

ಹಾಗೆಯೇ ಗಲಭೆಯಲ್ಲಿ ಹತ್ಯೆಗೊಳಗಾದ ಕಾಂಗ್ರೆಸ್ ಸಂಸದ ಎಹ್ಸಾನ್ ಜಾಫ್ರಿ ಅವರ ಪತ್ನಿ ಝಾಕಿಯಾ ಜಾಫ್ರಿ ಅವರು ನರೇಂದ್ರ ಮೋದಿ ವಿರುದ್ಧ ಸಲ್ಲಿಸಿರುವ ದೂರನ್ನೂ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಪರಿಶೀಲಿಸಲಿದೆ ಎಂದು ಪೀಠ ಹೇಳಿತು.

ಹತ್ಯಾಕಾಂಡ: ಗೋಧ್ರಾ ನರಮೇಧದ ನಂತರ ಮುಖ್ಯಮಂತ್ರಿ ಮೋದಿ, ಸರ್ಕಾರದ ಹಿರಿಯ ಅಧಿಕಾರಿಗಳು ಗಲಭೆ ನಿಯಂತ್ರಿಸಲು ಸೂಕ್ತ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಗುಲ್‌ಬರ್ಗ್ ಗೃಹ ನಿರ್ಮಾಣ ಸೊಸೈಟಿಯಲ್ಲಿ 2002 ರ ಫೆಬ್ರುವರಿ 28 ರಂದು ತಮ್ಮ ಪತಿ  ಹಾಗೂ ಇತರ 69 ಮಂದಿಯ ಹತ್ಯೆ ನಡೆದಿತ್ತು ಎಂದು ದೂರಿ ಝಾಕಿಯಾ ಜಾಫ್ರಿ ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ನ್ಯಾಯಾಲಯ ಸೂಕ್ತ ತನಿಖೆಗೆ ಆದೇಶಿಸಬೇಕು ಎಂದೂ ಅವರು ಕೋರಿದ್ದರು.

ಝಾಕಿಯಾ ಆರೋಪದ ಬಗ್ಗೆ ತನಿಖೆ ನಡೆಸುವಂತೆ ಸುಪ್ರಿಂ ಕೋರ್ಟ್ ಸಿಬಿಐನ ಮಾಜಿ ಮುಖ್ಯಸ್ಥ ಆರ್.ಕೆ. ರಾಘವನ್ ನೇತೃತ್ವದಲ್ಲಿ ವಿಶೇಷ ತನಿಖಾ ದಳ (ಸಿಟ್) ನೇಮಕ ಮಾಡಿತ್ತು.

ತನಿಖೆ ನಡೆಸಿದ `ಸಿಟ್~ ತನ್ನ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸುಪ್ರೀಂ ಕೋರ್ಟಿಗೆ ಸಲ್ಲಿಸಿತ್ತು. ಈ ವರದಿಯನ್ನು ಅಧ್ಯಯನ ಮಾಡಿ ಗೋಪ್ಯ ವರದಿ ಸಲ್ಲಿಸುವಂತೆ ನ್ಯಾಯಾಲಯದ ಸಂಧಾನಕಾರ ಹಾಗೂ ಹಿರಿಯ ವಕೀಲ ರಾಜು ರಾಮಚಂದ್ರನ್ ಅವರಿಗೆ ಸುಪ್ರೀಂ ಕೋರ್ಟ್ ಸೂಚಿಸಿತ್ತು.

ರಾಮಚಂದ್ರನ್ ಸಲ್ಲಿಸಿದ ವರದಿ ಹಾಗೂ ಸಿಟ್ ಸಲ್ಲಿಸಿದ ಎರಡೂ ವರದಿಗಳನ್ನು ಪರಾಮರ್ಶಿಸಿದ ನ್ಯಾಯಪೀಠ, ಮುಂದಿನ ಕ್ರಮದ ಬಗ್ಗೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯವೇ ತೀರ್ಮಾನಿಸಲಿದ್ದು, ತಾನು ಯಾವುದೇ ಆದೇಶ ಹೊರಡಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಸಿಟ್ ತನ್ನ ಅಂತಿಮ ವರದಿ, ಸಾಕ್ಷ್ಯಗಳ ಹೇಳಿಕೆ ಮತ್ತು ರಾಮಚಂದ್ರನ್ ಅವರ ವರದಿಯನ್ನು ಕೆಳ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಪೀಠ ಸೂಚಿಸಿತು.

ಮೋದಿಗೆ ಸಂದ ಜಯ- ಬಿಜೆಪಿ: ಗುಜರಾತ್ ಗಲಭೆ ನಿಯಂತ್ರಣ ನಿರ್ಲಕ್ಷ್ಯಕ್ಕೆ ಸಂಬಂಧಿಸಿದಂತೆ ಅಹಮದಾಬಾದ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವೇ ತೀರ್ಮಾನ ಕೈಗೊಳ್ಳಲಿದೆ ಎನ್ನುವ ಸುಪ್ರೀಂ ಕೋರ್ಟ್ ಸೂಚನೆ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ಸಂದ ಜಯ ಎಂದು ಬಿಜೆಪಿ ಬಣ್ಣಿಸಿದೆ.

ಸುಪ್ರೀಂ ಕೋರ್ಟಿನ ಈ ತೀರ್ಮಾನ ಕೇವಲ ಮೋದಿಗೆ ಮಾತ್ರವೇ ನಿರಾಳವಲ್ಲ. ಇದು ಬಿಜೆಪಿಗೆ ಸಿಕ್ಕಿರುವ ಜಯ ಎಂದೂ ಪಕ್ಷದ ವಕ್ತಾರ ಬಲ್ಬೀರ್ ಕೆ.ಪುಂಜ್ ಹೇಳಿದ್ದಾರೆ.


 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT