ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಸುರಕ್ಷತೆ' ನೆಪದಲ್ಲಿ ಖಾಸಗಿ ಶಾಲೆಯ ಪಾಲು

ಬಾಲಮಂದಿರದ 40 ಮಕ್ಕಳು ಸರ್ಕಾರಿ ಶಾಲೆಯಿಂದ ವರ್ಗಾವಣೆ
Last Updated 2 ಜುಲೈ 2013, 7:05 IST
ಅಕ್ಷರ ಗಾತ್ರ

ಮಂಡ್ಯ: `ಸಂಖ್ಯೆ' ಕಾರಣ ನೀಡಿ ವಿಲೀನ ಹೆಸರಿನಲ್ಲಿ ಸರ್ಕಾರಿ ಶಾಲೆಗಳಿಗೆ ಬೀಗ ಜಡಿಯುತ್ತಿದ್ದರೆ, `ಇಚ್ಛೆ' ಮತ್ತು `ಸುರಕ್ಷತೆ' ನೆಪವೊಡ್ಡಿ ಸರ್ಕಾರಿ ಶಾಲೆಗೆ ಬರುತ್ತಿದ್ದ ಮಕ್ಕಳನ್ನು ಅಧಿಕಾರಿಗಳೇ `ಖಾಸಗಿ' ಶಾಲೆಗೆ ದಾಖಲಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ನಗರದ ಪೊಲೀಸ್ ಕಾಲೊನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದ ಸರ್ಕಾರಿ ಬಾಲಮಂದಿರದ 40 ಮಕ್ಕಳನ್ನು `ಇಚ್ಛೆ' ಮತ್ತು `ಸುರಕ್ಷತೆ'ಯ ಕಾರಣ ನೀಡಿ ಮರೀಗೌಡ ಬಡಾವಣೆಯ ಖಾಸಗಿ ಶಾಲೆಯೊಂದಕ್ಕೆ ದಾಖಲಿಸಲಾಗಿದೆ.

ಖಾಸಗಿ ಶಾಲೆಗೆ ದಾಖಲಿಸಿರುವ ಸರ್ಕಾರ ಅಧಿಕಾರಿಗಳ ನಡೆ ಚರ್ಚೆಗೆ ಗ್ರಾಸವಾಗಿದೆ. ಮಕ್ಕಳನ್ನು ತಮ್ಮ ಶಾಲೆಯಲ್ಲೇ ಉಳಿಸಿಕೊಳ್ಳಬೇಕು ಎಂದು ಶಿಕ್ಷಕರು ಮಾಡಿದ ಪ್ರಯತ್ನ ವಿಫಲವಾಗಿದೆ. ಸರ್ಕಾರಿ ಶಾಲೆಯ ಮಕ್ಕಳು ಖಾಸಗಿ ಶಾಲೆಗಳ ಪಾಲಾಗಿದ್ದಾರೆ.

ಖಾಸಗಿ ಶಾಲೆಗೆ ಸೇರಿದ ಬಾಲಮಂದಿರದ 40 ಮಕ್ಕಳ ಪೈಕಿ 23 ಬಾಲಕರು ಮತ್ತು 17 ಬಾಲಕಿಯರ ಇದ್ದಾರೆ. ಇವರು 1 ರಿಂದ 7ನೇ ತರಗತಿಯವರೆಗೆ ಓದುತ್ತಿರುವ ವಿದ್ಯಾರ್ಥಿಗಳಾಗಿದ್ದಾರೆ.

ಚುರುಕಾಗಿ ನಡೆದ ಪತ್ರ ವ್ಯವಹಾರ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಬಾಲಕಿಯರ ಬಾಲಮಂದಿರ ಅಧೀಕ್ಷಕರು ಖಾಸಗಿ ಶಾಲೆಯ ಮುಖ್ಯ ಶಿಕ್ಷಕರಿಗೆ ಪತ್ರ ಬರೆದು, `ಬಾಲಕಿಯರ ಬಾಲಮಂದಿರ ಮಂಡ್ಯ ಸಂಸ್ಥೆಯ ಮಕ್ಕಳು, ತಮ್ಮ ಶಾಲೆಯಲ್ಲಿ ಓದಲು ಇಚ್ಛೆ ಪಡುತ್ತಿದ್ದಾರೆ. ಆದ್ದರಿಂದ ಪಟ್ಟಿಯಲ್ಲಿ ಲಗತ್ತಿಸಿರುವ ಮಕ್ಕಳನ್ನು ತಮ್ಮ ಶಾಲೆಯಲ್ಲಿ ವ್ಯಾಸಂಗ ಮಾಡಲು ಅವಕಾಶ ಕಲ್ಪಿಸಿಕೊಡಿ....' ಎಂದು ವಿನಂತಿಸುತ್ತಾರೆ !

ಬಾಲಮಂದಿರ ಅಧೀಕ್ಷಕರು ಜೂನ್ 6ರಂದು ಈ ರೀತಿ ಪತ್ರ ಬರೆದರೆ, ಜೂನ್  7ರಂದೇ ಖಾಸಗಿ ಶಾಲೆಯ ಮುಖ್ಯ ಶಿಕ್ಷಕರು ಅಧೀಕ್ಷಕರ ಹೇಳಿಕೆ ಉಲ್ಲೇಖಿಸಿ, ಪೊಲೀಸ್ ಕಾಲೊನಿ ಶಾಲೆಗೆ ಪತ್ರ ಬರೆಯುತ್ತಾರೆ. ತಕ್ಷಣವೇ ಮಕ್ಕಳ ವರ್ಗಾವಣೆ ಪತ್ರ ನೀಡಿ ಎಂದು ಕೋರುತ್ತಾರೆ.

ಜೂನ್ 15ರಂದು ಪೊಲೀಸ್ ಕಾಲೊನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕರಿಗೆ ಪತ್ರ ಬರೆಯುವ
ಬಾಲಕರ ಬಾಲಮಂದಿರ ಅಧೀಕ್ಷಕರು, `ತಮ್ಮ ಶಾಲೆಯು ಬಾಲಮಂದಿರದಿಂದ ದೂರದಲ್ಲಿದ್ದು, ಮಕ್ಕಳ ರಕ್ಷಣೆಯ ಸಮಸ್ಯೆ ಇರುತ್ತದೆ. ಆದ, ಕಾರಣ ಬಾಲಕರ ಬಾಲಮಂದಿರದ ಮಕ್ಕಳನ್ನು ಮರೀಗೌಡ ಬಡಾವಣೆ ಅಲ್ಲಿರುವ ಖಾಸಗಿ ಶಾಲೆಗೆ ಮುಂದಿನ ವ್ಯಾಸಂಗಕ್ಕಾಗಿ ದಾಖಲಿಸಲಾಗಿದೆ. ಆದ್ದರಿಂದ ವರ್ಗಾವಣೆ ಪತ್ರವನ್ನು ನೇರವಾಗಿ ನಮ್ಮ ಕಚೇರಿಗೆ ತಲುಪಿಸಬೇಕು..' ಎನ್ನುತ್ತಾರೆ.

ಬಾಲಕಿಯರ ಮತ್ತು ಬಾಲಕರ ಬಾಲಮಂದಿರದ ಅಧೀಕ್ಷಕರು ಬರೆದಿರುವ ಪತ್ರಗಳಲ್ಲಿ `ಕಾರಣ'ಗಳು ಬೇರೆ ಬೇರೆ ಇರುವುದು ಅನುಮಾನಕ್ಕೆ ಕಾರಣವಾಗಿದೆ.

ಕಚೇರಿಗೆ ಅಲೆದರೂ ಮಕ್ಕಳು ಉಳಿಯಲಿಲ್ಲ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಎಸ್.ಶಿವಚಿದಂಬರ್ `ಪ್ರಜಾವಾಣಿ'ಯೊಂದಿಗೆ ಮಾತನಾಡಿ,  `ಮಕ್ಕಳನ್ನು ನಮ್ಮ ಶಾಲೆಯಲ್ಲೇ ಉಳಿಸಿಕೊಳ್ಳಲು ಬಾಲಮಂದಿರ ಅಧೀಕ್ಷಕರು, ಮಕ್ಕಳ ಕಲ್ಯಾಣ ಸಮಿತಿ, ಕ್ಷೇತ್ರ ಶಿಕ್ಷಣ ಅಧಿಕಾರಿಗಳೊಂದಿಗೆ ಸಾಕಷ್ಟು ಬಾರಿ ಮಾತನಾಡಿದೆ. ಮಕ್ಕಳನ್ನು ವಾಪಸ್ಸು ಕಳುಹಿಸುವ `ಭರವಸೆ' ನೀಡಿದರು. ಆದರೆ, ಯಾವುದೇ ಪ್ರಯೋಜನವಾಗಲಿಲ್ಲ. ಇಷ್ಟೊಂದು ಸಂಖ್ಯೆಯಲ್ಲಿ ಮಕ್ಕಳು ಹೊರಹೋಗಿದ್ದು, ನಮಗೆ ಬಾರಿ ನಷ್ಟ. ಸಾಕಷ್ಟು ಬೇಸರವನ್ನೂ ಉಂಟು ಮಾಡಿದೆ' ಎಂದರು.

`ಕಳೆದ ಏಳೆಂಟು ವರ್ಷಗಳಿಂದ ನಮ್ಮ ಶಾಲೆಗೆ ಬರುತ್ತಿದ್ದಂತಹ ಮಕ್ಕಳನ್ನು `ಕಿತ್ತುಕೊಂಡು' ಏಕಾಏಕೀ ಬೇರೆಡೆ ದಾಖಲಿಸಿರುವುದರಲ್ಲಿ ಅರ್ಥವಿಲ್ಲ. ಅನೇಕ ಸೌಲ್ಯಭಗಳಿರುವ ನಮ್ಮ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣವನ್ನೂ ನೀಡುತ್ತಿದ್ದೇವೆ. ಆದಾಗ್ಯೂ, ಈ ಕ್ರಮ ಏಕೆ? ಎಂದು ಬೇಸರ ವ್ಯಕ್ತಪಡಿಸಿದರು.

ಬಾಲಮಂದಿರದ ಅಧೀಕ್ಷಕರಿಂದ ವರ್ಗಾವಣೆ ಪತ್ರ ನೀಡಿ ಎಂದು ಒತ್ತಡ ಹೆಚ್ಚಿದ್ದರಿಂದ ಅನಿವಾರ್ಯವಾಗಿ ಟಿಸಿ ನೀಡಬೇಕಾಯಿತು. ಈಗಲೂ ಹಿರಿಯ ಅಧಿಕಾರಿಗಳು ಮನಸ್ಸು ಮಾಡಿದರೆ ನಮ್ಮ ಶಾಲೆಗೆ ಮಕ್ಕಳನ್ನು ಕರೆ ತರಬಹುದು ಎನ್ನುತ್ತಾರೆ.

ಸರ್ಕಾರಿ ಶಾಲೆಗೆ ಮಕ್ಕಳನ್ನು ಸೆಳೆಯಲು ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುತ್ತಿದ್ದರೇ, ಈ ಪ್ರಕರಣದಲ್ಲಿ ಸರ್ಕಾರಿ ಅಧಿಕಾರಿಗಳೇ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸಿರುವುದು ಅಚ್ಚರಿಗೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT