ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂರಿನ ನಿರೀಕ್ಷೆಯಲ್ಲಿ ದಿನ ದೂಡುತ್ತಿರುವ ಈಜೀಪುರ ಕೊಳಗೇರಿ ನಿವಾಸಿಗಳು

Last Updated 16 ಜುಲೈ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಮತ್ತೊಂದು ಮಳೆಗಾಲ ಆರಂಭವಾಗಿದೆ. ಆದರೆ ಇನ್ನೂ ನಮಗೆ ಮನೆ ನಿರ್ಮಿಸಿಕೊಡುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಈ ತಗಡಿನ ಜೋಪಡಿಗಳಲ್ಲಿ ಇನ್ನೂ ಅದೆಷ್ಟು ದಿನ ಬದುಕಬೇಕೋ ಗೊತ್ತಿಲ್ಲ. ನಮ್ಮ ಕಾಲಕ್ಕೇ ಇಲ್ಲಿ ಮನೆಗಳು ನಿರ್ಮಾಣವಾದರೆ ಅದೇ ನಮ್ಮ ಪುಣ್ಯ...~

ನಗರದ ಈಜೀಪುರ ಕೊಳೆಗೇರಿಯ ಮಹಿಳೆ ಶೋಭಾ ತನ್ನ ಜೋಪಡಿಯ ಹೊಸ್ತಿಲಲ್ಲಿ ಕುಳಿತು ಹೇಳಿದ ಮಾತಿದು. ಐದು ವರ್ಷಗಳಿಂದಲೂ ತಮಗೆ ಒಂದು ಒಳ್ಳೆಯ ಮನೆ ಸಿಗಬಹುದೇನೋ ಎಂದು ಕಾಯುತ್ತಿರುವ ಇಲ್ಲಿನ ಸಾವಿರಾರು ಜನರಲ್ಲಿ ಈಕೆಯೂ ಒಬ್ಬರು.

ಕೋರಮಂಗಲ 50 ಅಡಿ ರಸ್ತೆ ಬಳಿಯ ಈಜೀಪುರ ಕೊಳೆಗೇರಿಯ ಆರ್ಥಿಕ ದುರ್ಬಲ ವರ್ಗದ ಜನರಿಗೆ ಹೊಸದಾಗಿ ಮನೆಗಳನ್ನು ನಿರ್ಮಿಸಿಕೊಡುವ ಯೋಜನೆಗೆ ಐದು ವರ್ಷಗಳು ಕಳೆದರೂ ಇನ್ನೂ ಈ ಜಾಗದಲ್ಲಿ ಮನೆಗಳ ನಿರ್ಮಾಣ ಆಗಿಲ್ಲ. ಯೋಜನೆಯ ಟೆಂಡರ್‌ಗೆ ಸಂಬಂಧಿಸಿದ ಕಾನೂನಿನ ತೊಡಕು ಇಲ್ಲಿನ ಬಡ ಜನರಿಗೆ ಸೂರನ್ನು ಒದಗಿಸುವ ಯೋಜನೆಯ ವಿಳಂಬಕ್ಕೆ ಕಾರಣವಾಗಿದೆ.

ಯೋಜನೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ 2006ರಲ್ಲಿ ಟೆಂಡರ್ ಕರೆದಿತ್ತು. ಒಟ್ಟು 15.8 ಎಕರೆ ವಿಸ್ತೀರ್ಣದ ಕೊಳೆಗೇರಿಯ ಜಾಗದ 7.6 ಎಕರೆ ಪ್ರದೇಶದಲ್ಲಿ ವಾಣಿಜ್ಯ ಸಂಕೀರ್ಣ ಮತ್ತು 1,640 ಮನೆಗಳ ವಸತಿ ಸಮುಚ್ಚಯಗಳ ನಿರ್ಮಾಣದ ಉದ್ದೇಶದಿಂದ ಟೆಂಡರ್ ಕರೆಯಲಾಗಿತ್ತು. ಟೆಂಡರ್‌ಅನ್ನು ಮೇವರಿಕ್ ಹೋಲ್ಡಿಂಗ್ಸ್ ಅಂಡ್ ಇನ್ವೆಸ್ಟ್‌ಮೆಂಟ್ ಪ್ರೈವೇಟ್ ಲಿಮಿ    ಟೆಡ್‌ಗೆ ನೀಡಲಾಗಿತ್ತು.

ಆದರೆ ಈ ಟೆಂಡರ್ ಪ್ರಕ್ರಿಯೆ ಸರಿಯಾಗಿ ನಡೆದಿಲ್ಲ ಎಂದು ಆರೋಪಿಸಿ, ಇದೇ ಟೆಂಡರ್‌ನ ಬಿಡ್‌ನಲ್ಲಿ ಪಾಲ್ಗೊಂಡಿದ್ದ ಮುಂಬೈ ಮೂಲದ ಆಕೃತಿ ನಿರ್ಮಾಣ ಸಂಸ್ಥೆಯು ಮೇವರಿಕ್ ಸಂಸ್ಥೆಯ ವಿರುದ್ಧ ಹೈಕೋರ್ಟ್‌ನಲ್ಲಿ ದಾವೆ ಹೂಡಿತ್ತು. ದೀರ್ಘ ಕಾನೂನು ಹೋರಾಟದ ನಂತರ 2011ರ ಏಪ್ರಿಲ್‌ನಲ್ಲಿ ಪ್ರಕರಣದ ಅರ್ಜಿ ಹೈಕೋರ್ಟ್‌ನಲ್ಲಿ ತಿರಸ್ಕೃತಗೊಂಡಿತ್ತು.
 
ಆನಂತರ 400 ಕೋಟಿ ರೂಪಾಯಿ ಅಂದಾಜು ವೆಚ್ಚದ ಯೋಜನೆಯ ಕಾಮಗಾರಿಗೆ ಈ ವರ್ಷದ ಜನವರಿಯಲ್ಲಿ ಬಿಬಿಎಂಪಿ ಮತ್ತು ಮೇವರಿಕ್ ಸಂಸ್ಥೆಯ ನಡುವೆ ಒಪ್ಪಂದ ಆಗಿತ್ತು. ಆದರೆ ಯೋಜನೆಯ ಉದ್ದೇಶಿತ ಪ್ರದೇಶದಲ್ಲಿ ಕಾಮಗಾರಿ ಆರಂಭಕ್ಕೆ ಜಾಗ ಖಾಲಿ ಮಾಡಿಸಿಕೊಡಲು ಬಿಬಿಎಂಪಿ ವಿಳಂಬ ಮಾಡುತ್ತಿದೆ ಎಂದು ಮೇವರಿಕ್ ಸಂಸ್ಥೆ ಹೇಳಿದೆ.

`ಕಾಮಗಾರಿ ಆರಂಭಿಸಲು ಜೋಪಡಿಗಳನ್ನು ಸ್ಥಳಾಂತರ ಮಾಡಿಸಿಕೊಡುವಂತೆ ಇದುವರೆಗೂ ಎಂಟು ಬಾರಿ ಬಿಬಿಎಂಪಿಗೆ ಪತ್ರ ಬರೆಯಲಾಗಿದೆ. ಆದರೆ ಇದಕ್ಕೆ ಬಿಬಿಎಂಪಿ ಸರಿಯಾಗಿ ಸ್ಪಂದಿಸುತ್ತಿಲ್ಲ. ಕಾಮಗಾರಿ ಆರಂಭವಾದರೆ ಎರಡು ವರ್ಷದೊಳಗೆ ನಿರ್ಮಾಣ ಪೂರ್ಣಗೊಳಿಸಲಾಗುವುದು~ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಉದಯ್ ಗರುಡಾಚಾರ್ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.

ಇನ್ನೆಷ್ಟು ವರ್ಷ ಕಾಯಬೇಕು : `ಯೋಜನೆಗೆ ಟೆಂಡರ್ ಕರೆದು ಐದು ವರ್ಷಗಳಾದರೂ ಇನ್ನೂ ಹೊಸ ಮನೆಗಳ ಕನಸು ಕನಸಾಗಿಯೇ ಉಳಿದುಕೊಂಡಿದೆ. ಬೇರೆ ಕಡೆ ಜಾಗ ಕೊಟ್ಟರೆ, ಕಾಮಗಾರಿಗಾಗಿ ನಾವು ಈ ಜಾಗ ಖಾಲಿ ಮಾಡಲು ಸಿದ್ಧರಿದ್ದೇವೆ. ಆದರೆ ಬಿಬಿಎಂಪಿ ಅಧಿಕಾರಿಗಳು ಬೇರೆ ಕಡೆ ಜಾಗ ಗುರುತಿಸಿಲ್ಲ ಎಂದು ಹೇಳುತ್ತಿದ್ದಾರೆ. ಹೊಸ ಮನೆಗಳಿಗಾಗಿ ಇನ್ನೆಷ್ಟು ವರ್ಷ ಕಾಯಬೇಕೋ ಗೊತ್ತಿಲ್ಲ~ ಎಂದು ಕೊಳೆಗೇರಿಯ ಡಾ.ಬಿ.ಆರ್.ಅಂಬೇಡ್ಕರ್ ಸಮಾಜ ಸೇವಾ ಸಂಘಟನೆಯ ಅಧ್ಯಕ್ಷ ಲಿವಿಸ್ `ಪ್ರಜಾವಾಣಿ~ ಜೊತೆ ತಮ್ಮ ಅಳಲು ತೋಡಿಕೊಂಡರು.

`ಆದಷ್ಟು ಬೇಗ ಬಿಬಿಎಂಪಿ ಸ್ಥಳ ಗುರುತಿಸಿ ಕಾಮಗಾರಿ ಆರಂಭಕ್ಕೆ ಅನುವು ಮಾಡಿಕೊಡಬೇಕು. ಇಲ್ಲಿನ 15.8 ಎಕರೆ ಪ್ರದೇಶ ಬಿಬಿಎಂಪಿಗೆ ಸೇರಿದ್ದು, ಈ ಜಾಗವನ್ನು ಕಬಳಿಸಲು ಹಲವರು ಸಂಚು ಹೂಡಿದ್ದಾರೆ. ಇಲ್ಲಿನ ಜೋಪಡಿ ಮನೆಗಳನ್ನೂ ಕಡು ಬಡವರಿಗೆ ಬಾಡಿಗೆಗೆ ಕೊಟ್ಟು ಕೆಲವರು ಬಾಡಿಗೆ ವಸೂಲಿ ಮಾಡುತ್ತಿದ್ದಾರೆ. ಇದೆಲ್ಲವನ್ನೂ ಅಧಿಕಾರಿಗಳು ತಪ್ಪಿಸಬೇಕು. ನಿಜವಾದ ಬಡವರಿಗೆ ಅನ್ಯಾಯವಾಗದಂತೆ ಮನೆಗಳ ವಿತರಣೆಯಾಗಬೇಕು~ ಎಂದು ಸಂಘಟನೆಯ ಕಾರ್ಯದರ್ಶಿ ಸುರೇಶ್ ತಿಳಿಸಿದರು.

`ಇಲ್ಲಿನ ಜಾಗದ ಮೇಲೆ ಕೆಲವು ದುಷ್ಕರ್ಮಿಗಳು ಕಣ್ಣು ಹಾಕಿದ್ದಾರೆ. ಇಲ್ಲಿನ ಜಾಗ ಮತ್ತು ಯೋಜನೆಯ ಬಗ್ಗೆ ಕೆಲವರು ವಿನಾಕಾರಣ ವಿವಾದ ಸೃಷ್ಟಿಸುತ್ತಿದ್ದಾರೆ. ಯೋಜನೆ ಶೀಘ್ರವಾಗಿ ಮುಗಿದು ಬಡಜನರಿಗೆ ಮನೆಗಳು ಸಿಗಬೇಕು. ಆದಷ್ಟು ಬೇಗ ಜಾಗವನ್ನು ಹುಡುಕುವಂತೆ ಅಧಿಕಾರಿಗಳ ಮೇಲೆ ಒತ್ತಡ ತರಲಾಗುತ್ತಿದೆ~ ಎಂದು ಶಾಂತಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಎನ್.ಎ.ಹ್ಯಾರಿಸ್ ಹೇಳಿದ್ದಾರೆ.

ಕಸದ ಗುಂಡಿಯಾಗಿದ್ದ ಜಾಗ : `ಕೊಳೆಗೇರಿಯ ಈ ಜಾಗ ಮೊದಲು ಬೇರೆಡೆಯಿಂದ ಕಸವನ್ನು ತಂದು ಸುರಿಯುತ್ತಿದ್ದ ಕಸದ ಗುಂಡಿಯಾಗಿತ್ತು. 1985ರಲ್ಲಿ ಈ ಜಾಗದಲ್ಲಿ ಪೊಲೀಸ್ ಇಲಾಖೆಗಾಗಿ ಲೋಕೋಪಯೋಗಿ ಇಲಾಖೆಯಿಂದ 42 ವಸತಿ ಸಮುಚ್ಚಯಗಳನ್ನು ಈ ಜಾಗದಲ್ಲಿ ನಿರ್ಮಿಸಲಾಗಿತ್ತು. ಕಟ್ಟಡಗಳ ಗುಣಮಟ್ಟ ಕಳಪೆಯಾಗಿದೆ ಎಂಬ ಕಾರಣಕ್ಕೆ ಪೊಲೀಸ್ ಇಲಾಖೆ ಈ ಮನೆಗಳನ್ನು ಪಡೆದಿರಲಿಲ್ಲ.
 
ನಂತರ ಈ ಸಮುಚ್ಚಯದ ಮನೆಗಳನ್ನು ಆರ್ಥಿಕವಾಗಿ ದುರ್ಬಲರಾಗಿರುವ ಜನರಿಗೆ ನೀಡಲಾಗಿತ್ತು. 2003ರಲ್ಲಿ ಸಮುಚ್ಚಯದ 13ನೇ ಬ್ಲಾಕ್ ಕುಸಿದು ಬಿದ್ದಿತ್ತು. 2007 ಮತ್ತು 2008 ರಲ್ಲಿ ಕೆಲವು ಸಮುಚ್ಚಯಗಳು ಕುಸಿದು ಬಿದ್ದಿದ್ದವು. ಆನಂತರ ಬಿಬಿಎಂಪಿ ವಸತಿ ಸಮುಚ್ಚಯಗಳನ್ನು ಒಡೆದು ನಂತರ ತಾತ್ಕಾಲಿಕ ತಗಡಿನ ಜೋಪಡಿಗಳನ್ನು ನಿರ್ಮಿಸಿಕೊಟ್ಟಿತ್ತು~ ಎಂದು ಲಿವಿಸ್ ಅವರು ತಿಳಿಸಿದರು.

`ಸ್ಥಳಾಂತರಕ್ಕೆ ಜಾಗದ ಕೊರತೆ~
`ಕೊಳೆಗೇರಿಯ 1,512 ಜೋಪಡಿಗಳ ಸುಮಾರು ಆರು ಸಾವಿರ ಜನರನ್ನು ಸ್ಥಳಾಂತರ ಮಾಡಲು ಸೂಕ್ತವಾದ ಜಾಗ ಸಿಗುತ್ತಿಲ್ಲ. ಅಷ್ಟೂ ಜನರಿಗೆ ಹೊಸದಾಗಿ ಮೂಲ ಸೌಕರ್ಯ ಒದಗಿಸುವುದು ಸುಲಭದ ಕೆಲಸವಲ್ಲ. ಕೊಳೆಗೇರಿ ಜನರ ಸ್ಥಳಾಂತರ ಮತ್ತು ಪುನರ್ವಸತಿಗೆ ಕನಿಷ್ಠ ಮೂರು ಎಕರೆ ಜಾಗವಾದರೂ ಬೇಕು.

ಪಾಲಿಕೆಯ ಅಧಿಕಾರಿಗಳು ಸೂಕ್ತ ಸ್ಥಳದ ಹುಡುಕಾಟದಲ್ಲಿ ತೊಡಗಿದ್ದಾರೆ. ಕೆಲವೇ ದಿನಗಳಲ್ಲಿ ಸ್ಥಳಾಂತರ  ನಡೆಯಲಿದೆ. ಮನೆಗಳು ಅನರ್ಹರ ಪಾಲಾಗಬಾರದು ಎಂಬ ಉದ್ದೇಶದಿಂದ ಬಯೊಮೆಟ್ರಿಕ್ ಕಾರ್ಡ್‌ಗಳನ್ನು ವಿತರಿಸಲು ಬೆರಳಚ್ಚು ಗುರುತು ಪಡೆಯಲಾಗಿದೆ~
 - ಎಂ.ಕೆ.ಶಂಕರಲಿಂಗೇಗೌಡ, ಆಯುಕ್ತರು, ಬಿಬಿಎಂಪಿ

`ಕಾಮಗಾರಿ ಆರಂಭಿಸಲು ಸಿದ್ಧ~

`ಕಾನೂನಿನ ತೊಡಕುಗಳೆಲ್ಲಾ ನಿವಾರಣೆಯಾಗಿ, ಒಪ್ಪಂದಕ್ಕೆ ಸಹಿ ಹಾಕಿ ಇಲ್ಲಿಗೆ ಆರು ತಿಂಗಳು ಕಳೆದಿವೆ. ಕಾಮಗಾರಿ ಆರಂಭಿಸುವ ಮೊದಲು ಆ ಪ್ರದೇಶದಲ್ಲಿರುವ ಜನರನ್ನು ಮೊದಲು ಬೇರೆ ಕಡೆಗೆ ಸ್ಥಳಾಂತರ ಮಾಡಬೇಕು. ಆದರೆ ಸ್ಥಳಾಂತರದ ಜಾಗವನ್ನು ಬಿಬಿಎಂಪಿ ಇನ್ನೂ ಗುರುತಿಸಿಲ್ಲ. ಇದು ಕಾಮಗಾರಿ ವಿಳಂಬಕ್ಕೆ ಮುಖ್ಯ ಕಾರಣ. ಬಿಬಿಎಂಪಿಯು ಕೊಳೆಗೇರಿಯ ಜಾಗವನ್ನು ಖಾಲಿ ಮಾಡಿಸಿಕೊಟ್ಟ ತಕ್ಷಣವೇ ಕಾಮಗಾರಿ ಆರಂಭಿಸಲು ಸಿದ್ಧವಿದ್ದೇವೆ~.
-ಉದಯ್ ಗರುಡಾಚಾರ್,
ವ್ಯವಸ್ಥಾಪಕ ನಿರ್ದೇಶಕ,
ಮೇವರಿಕ್ ಹೋಲ್ಡಿಂಗ್ಸ್ ಅಂಡ್ ಇನ್ವೆಸ್ಟ್‌ಮೆಂಟ್ ಪ್ರೈವೇಟ್ ಲಿಮಿಟೆಡ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT