ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಹ್ವಾಗ್ ಸಾಧನೆಗೆ ಮತ್ತೊಂದು ಗರಿ

Last Updated 27 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

 ಅದು 1983ರ ವಿಶ್ವಕಪ್ ಕ್ರಿಕೆಟ್ ಪಂದ್ಯ. ಇದರಲ್ಲಿ ಭಾರತ ಮೊದಲ ಬಾರಿಗೆ ಟ್ರೋಫಿಯನ್ನು ಎತ್ತಿ ಹಿಡಿಯುತ್ತದೆ ಎಂದು ಯಾರೂ ಕೂಡ ಎಣಿಸಿರಲಿಲ್ಲವೇನೋ! ಅದರೆ ಟ್ರೋಫಿಯನ್ನು ಎತ್ತಿ ಹಿಡಿಯಿತು. ಭಾರತದ ಕ್ರಿಕೆಟ್ ಪ್ರೇಮಿಗಳ ಮನದಲ್ಲಿ ಕಪಿಲ್ ದೇವ್ ನಾಯಕತ್ವದ ಪಡೆ ಮಾಡಿದ ಸಾಧನೆಯ ಬಗ್ಗೆ ಹೆಮ್ಮೆ, ಅಭಿಮಾನ ಮನೆ ಮಾಡಿತ್ತು.

1983ರ ವಿಶ್ವಕಪ್‌ನ ಜಿಂಬಾಬ್ವೆ ವಿರುದ್ಧದ ಪಂದ್ಯ. ಮೊದಲು ಅಷ್ಟೇನೂ ಪ್ರಬಲವಲ್ಲದ ತಂಡದ ವಿರುದ್ಧ ಸವಾಲಿನ ಮೊತ್ತದಾಖಲಿಸಬಹುದು ಎನ್ನುವ ಉದ್ದೇಶದೊಂದಿಗೆ ಮೊದಲು ಟಾಸ್ ಗೆದ್ದಿದ್ದ ಕಪಿಲ್‌ದೇವ್ ಬ್ಯಾಟಿಂಗ್ ಆರಿಸಿಕೊಂಡರು. ಆದರೆ ತಂಡದ ಒಟ್ಟು ಮೊತ್ತ 17 ಆಗಿದ್ದಾಗಲೇ ಪ್ರಮುಖ ಐದು ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್‌ನತ್ತ ದಾರಿ ತುಳಿದಿದ್ದರು.

ಭಾರತ 100ರ ಗಡಿಯೊಳಗೆ ಆಲ್‌ಔಟ್ ಆಗಬಹುದು. ಜಿಂಬಾಬ್ವೆ ಸುಲಭವಾಗಿ ಪಂದ್ಯ ಗೆಲ್ಲಬಹುದು ಎಂದು ಎಲ್ಲರೂ ನಿರೀಕ್ಷೆ ಮಾಡಿದ್ದರೇನೋ? ಆದರೆ ನಂತರ ಬಂದ ಕಪಿಲ್ ಅವರ ಅಜೇಯ 175 ರನ್‌ಗಳ ಆಟ ಪಂದ್ಯದ ದಿಕ್ಕನ್ನು ಬದಲಿಸಿತು. ಅಷ್ಟೇ ಅಲ್ಲದೇ ಭರ್ಜರಿ 31 ರನ್‌ಗಳ ಗೆಲುವನ್ನು ತನ್ನದಾಗಿಸಿಕೊಂಡಿತು.

ಭಾರತ ತಂಡದ ಯಾವ ಆಟಗಾರರು ಅಂದಿನ ಪಂದ್ಯದಲ್ಲಿ ವೈಯಕ್ತಿಕ 25 ರನ್‌ಗಳ ಗಡಿ ಮುಟ್ಟಿರಲಿಲ್ಲ. ಇಷ್ಟೆಲ್ಲಾ ಇತಿಹಾಸ ಹೇಳಲು ಒಂದು ಕಾರಣವಿದೆ.ಈ ಸಲದ ವಿಶ್ವಕಪ್ ಕ್ರಿಕೆಟ್‌ನ ಆರಂಭಿಕ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ ಗೆಲುವು ಪಡೆಯಿತು ನಿಜ. ಆದರೆ ತಂಡದ ಗೆಲುವಿನಲ್ಲಿ ‘ಮ್ಯಾನ್ ಆಫ್ ದಿ ಮ್ಯಾಚ್’ ಹೀರೋ ವೀರೇಂದ್ರ ಸೆಹ್ವಾಗ್ ಅವರ ಭರ್ಜರಿ ಆಟದ ಬೆಂಬಲವಿತ್ತು. ಅವರು 140 ಎಸೆತೆಗಳಲ್ಲಿ 14 ಬೌಂಡರಿ ಹಾಗೂ 5 ಅಮೋಘ ಸಿಕ್ಸರ್‌ಗಳೊಂದಿಗೆ 175 ರನ್ ಗಳಿಸಿದ್ದರು.

1983ರ ವಿಶ್ವಕಪ್‌ನಲ್ಲಿ ಕಪಿಲ್‌ದೇವ್ ಗಳಿಸಿದ್ದ 175 ರನ್‌ಗಳಿಗೆ ಸಮನಾಗಿ ಸೆಹ್ವಾಗ್ ಕೂಡ ಅಷ್ಟೇ ರನ್ ಕಲೆ ಹಾಕಿದರು. ಸೆಹ್ವಾಗ್ ಅವರ ಉತ್ತಮ ಬ್ಯಾಟಿಂಗ್ ನೆರವಿನಿಂದ ಭಾರತ 350ರ ಗಡಿ ದಾಟಿತು. ಇಷ್ಟೊಂದು ಬೃಹತ್ ಮೊತ್ತವನ್ನು ಭಾರತ ಪೇರಿಸದಿದ್ದರೆ ಮೊದಲ ಪಂದ್ಯದಲ್ಲಿಯೇ ಸೋಲುವ ಅವಕಾಶವು ಇತ್ತು. ಸದ್ಯದ ಮಟ್ಟಿಗೆ ಬೌಲಿಂಗ್ ವಿಭಾಗದಲ್ಲಿ ಭಾರತ ಅಷ್ಟೇನೂ ಪ್ರಭಾವಿಯಾಗಿಲ್ಲ. ಅದಕ್ಕೆ ಬಾಂಗ್ಲಾದೇಶ ವಿರುದ್ಧದ ಮೊದಲ ಪಂದ್ಯವೇ ಸಾಕ್ಷಿ.
‘ವಿಶ್ವ ರ್ಯಾಂಕಿಂಗ್ ಟೆಸ್ಟ್ ಕ್ರಿಕೆಟ್‌ನಲ್ಲಿ ಅಗ್ರಸ್ಥಾನ ಹಾಗೂ ಏಕದಿನ ಪಂದ್ಯದಲ್ಲಿ ಎರಡನೇ ಸ್ಥಾನದಲ್ಲಿರುವ ಭಾರತಕ್ಕೆ 87 ರನ್‌ಗಳ ಜಯ ದೊರೆತಿದ್ದು ಕೆಲ ಕ್ರಿಕೆಟ್ ಪ್ರೇಮಿಗಳಲ್ಲಿ ನಿರಾಸೆ ಮೂಡಿಸಿತು’ ಎಂದು ಕೆಲವರು ಅಭಿಪ್ರಾಯ ಪಟ್ಟರೆ, ಇನ್ನೂ ಕೆಲವರು ಕೊನೆಯ ವಿಶ್ವಕಪ್‌ನಲ್ಲಿ ಕಂಡ ಸೋಲಿನ ಕಹಿ ಮತ್ತೆ ಮರುಕಳಿಸಲಿಲ್ಲ ಎನ್ನುವ ನೆಮ್ಮದಿ ವ್ಯಕ್ತಪಡಿಸಿದ್ದರು.

ವೀರೇಂದ್ರ ಸೆಹ್ವಾಗ್ ಯಾವಾಗಲೂ ಆಡುವುದು ಸಹಜವಾದ ಆಟ, ಅವರು ಯಾವುದೇ ಒತ್ತಡ, ಸಂದರ್ಭವನ್ನು ಲೆಕ್ಕಿಸದೇ ಎದುರಾಳಿ ಬೌಲರ್‌ಗಳನ್ನು ‘ಚಚ್ಚುವುದಷ್ಟೇ’ ಕಾಯಕ ಎನ್ನುವಂತೆ ಆಡಬಲ್ಲರು. ಅವರು ಬ್ಯಾಟಿಂಗ್ ಮಾಡಲು ಕ್ರೀಸ್‌ಗೆ ಇಳಿದರಂತೂ ಅಕ್ಷರಶಃ ಬಿರುಗಾಳಿ ಬೀಸಿದಂತೆಯೇ! ಎದುರಾಳಿ ಬೌಲರ್‌ಗಳು ಕೈಕೈ ಹಿಸುಕಿಕೊಳ್ಳುವಂತೆ ಮಾಡಬಲ್ಲ ಸಾಮರ್ಥ್ಯ ಸೆಹ್ವಾಗ್ ಅವರಲ್ಲಿದೆ.

ಏಕದಿನ ಕ್ರಿಕೆಟ್‌ನಲ್ಲಿ 35.30 ಸರಾಸರಿ ಹೊಂದಿರುವ ಸೆಹ್ವಾಗ್ 229 ಪಂದ್ಯಗಳನ್ನು ಆಡಿದ್ದಾರೆ. (ಬಾಂಗ್ಲಾ ವಿರುದ್ಧದ ಪಂದ್ಯದವರೆಗೆ) 14 ಶತಕ ಹಾಗೂ 36 ಅರ್ಧಶತಕ ಗಳಿಸಿದ್ದಾರೆ. ಬಾಂಗ್ಲಾ ವಿರುದ್ಧ ಸಿಡಿಸಿದ 175 ರನ್‌ಗಳೇ ಅವರ ವೈಯಕ್ತಿಕ ಹೆಚ್ಚು ರನ್‌ಗಳು. ಟೆಸ್ಟ್ ಕ್ರಿಕೆಟ್‌ನಲ್ಲಿಯೂ 22 ಶತಕ ಹಾಗೂ 27 ಅರ್ಧಶತಕ ಅವರ ಹೆಸರಿನಲ್ಲಿ ಭದ್ರವಾಗಿವೆ. ಒಮ್ಮೊಮ್ಮೆ ಸುಂಟರಗಾಳಿಯಂತೆ ಹಾಗೆ ಬಂದು ಹೀಗೆ ಹೋಗುವ, ಮತ್ತೊಮ್ಮೆ ಹಾಗೆ ಬಂದು ಹೀಗೆ ಈಡೀ ಪಂದ್ಯದುದ್ದಕ್ಕೂ ಬೌಲರ್‌ಗಳನ್ನು ಕಾಡುವ ಸೆಹ್ವಾಗ್ ಅವರ ಸಾಧನೆಗೆ ಮತ್ತೊಂದು ಗರಿ ಈಗ ಸೇರ್ಪಡೆಯಾಗಿದೆ.
                    
    

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT