ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇವಾಲಾಲ್ ಜನ್ಮಸ್ಥಳದಲ್ಲಿ ಇಂದು ಜಾತ್ರೆ ಸಡಗರ

Last Updated 15 ಫೆಬ್ರುವರಿ 2011, 9:20 IST
ಅಕ್ಷರ ಗಾತ್ರ

ನ್ಯಾಮತಿ: ಬಂಜಾರ (ಲಂಬಾಣಿ) ಜನಾಂಗದ ಗುರು ಶ್ರೀಸೇವಾಲಾಲರ ಜನ್ಮಸ್ಥಳ ಸೂರಗೊಂಡನಕೊಪ್ಪದಲ್ಲಿ ಮಂಗಳವಾರ ಸೇವಾಲಾಲರ 272ನೇ ಜಾತ್ರೆ ನಡೆಯಲಿದೆ.
ಹೊನ್ನಾಳಿ ತಾಲ್ಲೂಕಿನಲ್ಲಿರುವ ಸೂರಗೊಂಡನಕೊಪ್ಪಕ್ಕೆ ದೇಶದ ಮೂಲೆ ಮೂಲೆಯಿಂದ ಸೇವಾಲಾಲರ ಭಕ್ತರು ಆಗಮಿಸಲಿದ್ದಾರೆ.ಬಂಜಾರ ಸಮೂಹಕ್ಕೆ ಇದೊಂದೇ ಪವಿತ್ರ ಧಾರ್ಮಿಕ ಕ್ಷೇತ್ರ. ಪ್ರತಿ ವರ್ಷದಂತೆ ಈ ವರ್ಷವೂ ಅದ್ದೂರಿಯಾಗಿ ಸೇವಾಲಾಲ್ ಮತ್ತು ಮರಿಯಮ್ಮ ದೇವಿ ಜಾತ್ರಾ ಮಹೋತ್ಸವ ಆಚರಿಸಲು ಸಿದ್ಧತೆ ನಡೆದಿದೆ.

ಫೆ. 15ರಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜಾತ್ರೆಗೆ ಚಾಲನೆ ನೀಡಲಿದ್ದು, ಮಹಾರಾಷ್ಟ್ರ ಪೌರಾದೇವಿ ಮಠದ ರಾಮರಾವ್ ಮಹಾರಾಜ್ ಸ್ವಾಮೀಜಿ ನೇತೃತ್ವದಲ್ಲಿ ವಿವಿಧ ಸ್ವಾಮೀಜಿಗಳು ಭಾಗವಹಿಸುವರು. ಬೋಗ್ ಉದ್ಘಾಟನೆಯನ್ನು ಅಬಕಾರಿ ಸಚಿವ ಎಂ.ಪಿ. ರೇಣುಕಾಚಾರ್ಯ ನೆರವೇರಿಸುವರು. ಬಂಜಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ. ಬಸವರಾಜ ನಾಯ್ಕ ಅಧ್ಯಕ್ಷತೆ ವಹಿಸುವರು.

ಈ ಕ್ಷೇತ್ರ ತನ್ನದೇ ಆದ ಐತಿಹ್ಯ ಹೊಂದಿದೆ, ರಾಜಸ್ತಾನದಿಂದ ವ್ಯಾಪಾರಕ್ಕಾಗಿ ವಲಸೆ ಬಂದ ಲಂಬಾಣಿ ತಾಂಡಾದ ನಾಯಕ ಭೀಮನಾಯ್ಕ, ಒಂದು ಕಾಲದಲ್ಲಿ ಗುತ್ತಿ ಬಳ್ಳಾರಿಯೆಂದೇ ಹೆಸರಾಗಿದ್ದ ಈಗಿನ ಬೆಳಗುತ್ತಿ ಹೋಬಳಿ ಚಿನ್ನಿಕಟ್ಟೆ (ಚೀನಾ ಪಟ್ಟಣ)ಯಲ್ಲಿ ಬೀಡು ಬಿಟ್ಟರು. ನಂತರ ದಟ್ಟ ಅರಣ್ಯದಿಂದ ಕೂಡಿದ್ದ ಈಗಿನ ಸೂರಗೊಂಡನ ಕೊಪ್ಪದಲ್ಲಿ ಬಿಡಾರ ಹೂಡಿದರು.
ಹಟ್ಟಿ ಮುಖಂಡ ಭೀಮನಾಯ್ಕನಿಗೆ ಮದುವೆಯಾಗಿ 12 ವರ್ಷವಾದರೂ ಮಕ್ಕಳಾಗಲಿಲ್ಲ. ಆಗ ಶಿರಸಿಯ ಮಾರಿಕಾಂಬೆ ಕುರಿತು ಕಠೋರ ತಪಸ್ಸು ಮಾಡಿ ಪ್ರಾರ್ಥಿಸಿದ ಫಲವಾಗಿ ಆಕೆಯ ವರದಿಂದ ಸೇವಾಲಾಲ್, ಭೀಮನಾಯ್ಕ ಮತ್ತು ಧರ್ಮಿಣಿ ಮಾತಾ ದಂಪತಿಗೆ ಪ್ರಥಮ ಪುತ್ರನಾಗಿ ಜನಿಸಿದರು.

ಬಾಲಕ ಸೇವಾಲಾಲ್ ಬೆಳೆಯುತ್ತ ಅನೇಕ ಪವಾಡಗಳನ್ನು ತೋರಿದರು. ಕೊಳಲು ಬಳಸಿ ಗೋವುಗಳನ್ನು ಕರೆಯುವುದು, ಬಂಡೆಯನ್ನು ನಗಾರಿಯನ್ನಾಗಿ ಬಾರಿಸುವುದು, ಮುತ್ತುಗದ ಎಲೆಗಳನ್ನು ಜಾಂಜ್ ಮಾಡುವುದು, ಕೆಸರನ್ನು ಪಾಯಸ, ನೀರನ್ನು ತುಪ್ಪ ಮಾಡಿ, ತಾಳ-ಮೇಳ ಮಂಗಳವಾದ್ಯ ಸೃಷ್ಟಿಸಿ ಯಜ್ಞ ಮಾಡುತ್ತಿದ್ದರು.ಅವರ ಬಳಿ ತೋಳರಾಮ ಎಂಬ ಕುದುರೆ, ಗರಾಸ್ಯ ಎಂಬ ಹೋರಿ ಇತ್ತು, ಈ ಹೋರಿಯ ವೈಶಿಷ್ಟ್ಯ ಎಂದರೆ ಅದು ಇಡೀ ದನಗಳ ಹಿಂಡಿಗೆ ನಾಯಕನಂತಿತ್ತು, ಮೇವು, ನೀರು, ನೆರಳು ಸಿಗುವ ಕಡೆ ಕರೆದೊಯ್ಯುತ್ತಿತ್ತು. ಅಪಾಯದ ಸ್ಥಳಗಳಿಗೆ ಹೋಗುವುದನ್ನು ತಡೆಯುತ್ತಿತ್ತು. ಸೇವಾಲಾಲರ ತೇಜಸ್ಸು, ಸದ್ಗುಣ ಮತ್ತು ಪವಾಡ ತಿಳಿದ ಶಿರಸಿಯ ಮಾರಿಕಾಂಬೆ ತನ್ನ ಭಕ್ತನಾಗುವಂತೆ ಸೂಚಿಸಿದ ಕೋರಿಕೆಯನ್ನು ನಿರಾಕರಿಸಿದ ಸೇವಾಲಾಲ್ ಅವರ ಕುಟುಂಬಕ್ಕೂ ತೊಂದರೆ ಕೊಡಲಾರಂಭಿಸಿದಳು. ಕಡೆಗೆ ಸೇವಾಲಾಲರು ಮಾರಿಕಾಂಬೆಯ ಭಕ್ತನಾಗಲು ಒಪ್ಪಿದಾಗ ಮಾರಿಕಾಂಬೆಯು ಸೇವಾಲಾಲ್ ನಾಲಿಗೆಯ ಮೇಲಿರುವುದಾಗಿ ವರ ನೀಡಿದಳು, ಇದರಿಂದ ಸೇವಾಲಾಲರ ಪವಾಡ ಇನ್ನಷ್ಟು ವೃದ್ಧಿಯಾಯಿತು. ಸೇವಾಲಾಲರು ಬರಿಗಾಲಲ್ಲೇ ನಡೆದಾಡುತ್ತ ಜನರ ಸಂಕಷ್ಟ ಪರಿಹರಿಸುತ್ತಿದ್ದರು ಎನ್ನುವುದು ಐತಿಹ್ಯ.

ಸೇವಾಲಾಲ್ ಅವರು ಮಹಾರಾಷ್ಟ್ರದ ಕಡೆ ಪ್ರಯಾಣ ಬೆಳೆಸಿದಾಗ, ಶಿರಸಿ ಮಾರಿಕಾಂಬೆಯ ಒತ್ತಡಕ್ಕೆ ಮಣಿದು ದೇವಲೋಕಕ್ಕೆ ಹೊರಡುತ್ತಾರೆ. ದೇಹವು ಬೇವಿನ ಎಲೆಯ ಆಧಾರರಹಿತ ಮಂಟಪದಲ್ಲಿದ್ದು, ಆತ್ಮ ಹಿಂದಿರುಗಿ ಬರುವವರೆಗೆ ಯಾರೂ ದೇಹ ಸ್ಪರ್ಶ ಮಾಡಬಾರದೆಂದು ಕಟ್ಟಳೆ ವಿಧಿಸಿದ್ದಳು, ಆದರೆ, ತಾಯಿ ಧರ್ಮಿಣಿ ಪುತ್ರ ವಾತ್ಸಲ್ಯದಿಂದ ದೇಹ ಸ್ಪರ್ಶ ಮಾಡಿದ್ದರಿಂದ ಆತ್ಮವು ದೇಹಕ್ಕೆ ಪ್ರವೇಶಿಸಲಿಲ್ಲ. ಈ ರೀತಿಯಾಗಿ ಸೇವಾಲಾಲ್ ದೇಹಾಂತ್ಯವಾಗಿದ್ದು, ಮಹಾರಾಷ್ಟ್ರದ ಪೌರಾದೇವಿಯಲ್ಲಿ ಇಂದಿಗೂ ಸೇವಾಲಾಲ್ ಅವರ ಸಮಾಧಿಯು ಪವಿತ್ರ ಸ್ಥಳವಾಗಿ ಜಗತ್ಪ್ರಸಿದ್ಧವಾಗಿದೆ. ಸೇವಾಲಾಲ್ ವಂಶಸ್ಥರಾದ ಶ್ರೀರಾಮರಾವ್ ಮಹಾರಾಜ್ ಅಲ್ಲಿ ನೆಲೆಸಿದ್ದಾರೆ.

ಬಗರ್‌ಖಾನ್ ಪ್ರಸಾದ: ಸೇವಾಲಾಲ್ ಮತ್ತು ಮರಿಯಮ್ಮ ದೇವಿ ಜಾತ್ರೆ ಮಹೋತ್ಸವಕ್ಕೆ ಆಗಮಿಸಲಿರುವ ಭಕ್ತರಿಗೆ ಗೋಧಿ ಪಾಯಸ ಮತ್ತು ವಿಶೇಷವಾಗಿ ತಯಾರಿಸಿರುವ ಬಗರ್‌ಖಾನ್ (ತರಕಾರಿ ಪಲಾವ್) ವ್ಯವಸ್ಥೆ ಮಾಡಲಾಗಿದೆ.ಸಚಿವ ಎಂ.ಪಿ. ರೇಣುಕಾಚಾರ್ಯ ಅವರ ಸಹಕಾರದೊಂದಿಗೆ ಹಗರಿಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ನೇಮಿರಾಜ್ ನಾಯ್ಕ ಪ್ರಸಾದ ವ್ಯವಸ್ಥೆ ವಹಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT