ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಸೈನಿಕರ ಸೇವೆಗೆ ಬೆಲೆ ಕಟ್ಟಲಾಗದು'

Last Updated 16 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಬೆಂಗಳೂರು: `ದೇಶಕ್ಕಾಗಿ ಪ್ರಾಣದ ಹಂಗು ತೊರೆದು ಹೋರಾಡುವ ಸೈನಿಕರ ಸ್ಮರಣೆ ನಮ್ಮೆಲ್ಲರ ಕರ್ತವ್ಯ' ಎಂದು ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ಹೇಳಿದರು.

ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯು ನಗರದ ಇಂದಿರಾಗಾಂಧಿ ಸಂಗೀತ ಕಾರಂಜಿ ಉದ್ಯಾನದಲ್ಲಿ ಭಾನುವಾರ ಆಯೋಜಿಸಿದ್ದ ವಿಜಯ ದಿವಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

`ಸೈನಿಕರು ತಮ್ಮ ಮನೆಗಳಿಂದ ದೂರಾಗಿ, ದೇಶದ ಭದ್ರತೆಗಾಗಿ ಗಡಿಗಳಲ್ಲಿ ಹಗಲಿರುಳು ಕಾವಲು ಕಾಯುತ್ತಿರುತ್ತಾರೆ. ಸೈನಿಕರ ಈ ಸೇವೆಗೆ ಬೆಲೆ ಕಟ್ಟಲಾಗುವುದಿಲ್ಲ. ಅವರ ಸೇವೆಯನ್ನು ಸ್ಮರಿಸುವುದೇ ನಾವು ಅವರಿಗೆ ಸಲ್ಲಿಸುವ ಗೌರವ' ಎಂದು ಅವರು ನುಡಿದರು.
`ಪಾಕಿಸ್ತಾನದ ವಿರುದ್ಧ 1971ರಲ್ಲಿ ಭಾರತದ ಸೈನಿಕರು ವೀರಾವೇಷದಿಂದ ಹೋರಾಡಿದರು. ಈ ಸಂದರ್ಭದಲ್ಲಿ ಹಲವು ಸೈನಿಕರು ತಮ್ಮ ಪ್ರಾಣ ತೆತ್ತರು. ಡಿಸೆಂಬರ್ 16ರಂದು ಯುದ್ಧ ಅಂತ್ಯಗೊಂಡು ಭಾರತ ಜಯಗಳಿಸಿತು. ಆ ವಿಜಯದ ಸ್ಮರಣಾರ್ಥ ಪ್ರತಿ ವರ್ಷ ಡಿಸೆಂಬರ್ 16ರಂದು ವಿಜಯ ದಿವಸವನ್ನು ಆಚರಿಸಲಾಗುತ್ತದೆ' ಎಂದು ಅವರು ತಿಳಿಸಿದರು.

`ಬಾಂಗ್ಲಾದೇಶದ ವಿಮೋಚನೆಗಾಗಿ ನಡೆದ ಈ ಯುದ್ಧದ ಸ್ಮರಣಾರ್ಥ ಬಾಂಗ್ಲಾದೇಶದಲ್ಲೂ ಈ ದಿನವನ್ನು ವಿಜಯ ದಿನವನ್ನಾಗಿ ಆಚರಿಸಲಾಗುತ್ತದೆ.

ನೆರೆಯ ರಾಷ್ಟ್ರದ ವಿಮೋಚನೆಗಾಗಿ ಹೋರಾಡಿದ ಮಡಿದ ಹುತಾತ್ಮರ ಬಲಿದಾನ ಇತಿಹಾಸದಲ್ಲಿ ಅಭೂತಪೂರ್ವ ಘಟನೆ' ಎಂದರು.
`ಬಾಂಗ್ಲಾದೇಶ ವಿಮೋಚನಾ ಚಳವಳಿಯ ಸಂದರ್ಭದಲ್ಲಿ ಸಾವಿರಾರು ಜನ ನಿರಾಶ್ರಿತರು ಬಾಂಗ್ಲಾದೇಶ ಮತ್ತು ಪಾಕಿಸ್ತಾನಗಳಿಂದ ಭಾರತಕ್ಕೆ ವಲಸೆ ಬಂದರು. ಆ ಸಂದರ್ಭದಲ್ಲಿ ಬಾಂಗ್ಲಾದೇಶದ ವಿಮೋಚನೆಗಾಗಿ ನಾವು ಕೂಡಾ ದೆಹಲಿಯಲ್ಲಿ ಸತ್ಯಾಗ್ರಹ ಕೂರುವ ಸಂದರ್ಭ ಎದುರಾಗಿತ್ತು. ಆಗ ನಮ್ಮನ್ನು ತಿಹಾರ್ ಜೈಲಿನಲ್ಲಿ ಬಂಧಿಸಿಟ್ಟಿದ್ದರು' ಎಂದು ತಮ್ಮ ನೆನಪುಗಳನ್ನು ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಸೈನಿಕ ಸ್ಮಾರಕಕ್ಕೆ ಪುಷ್ಪಗುಚ್ಚ ಇಟ್ಟು ನಮನ ಸಲ್ಲಿಸಲಾಯಿತು. ಇದೇ ಸಂದರ್ಭದಲ್ಲಿ ಹಲವು ಹಿರಿಯ ಸೈನಿಕರನ್ನು ಸನ್ಮಾನಿಸಲಾಯಿತು. ಸಂಸದ ರಾಜೀವ್ ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು.

ಯುದ್ಧವೆಂದರೆ ಹುಮ್ಮಸ್ಸು
`ಸೇನೆಯಿಂದ ನಿವೃತ್ತನಾಗಿ 30 ವರ್ಷಗಳು ಕಳೆದಿವೆ. ಆ ನಂತರ ಬೇರೆ ಬೇರೆ ಕೆಲಸಗಳನ್ನು ನಿರ್ವಹಿಸಿದ್ದೇನೆ. ಆದರೆ, ಯುದ್ಧ ಎಂದರೆ ನನಗೆ ಈಗಲೂ ಹುಮ್ಮಸ್ಸು. ಕೈಗೆ ಬಂದೂಕು ಸಿಕ್ಕರೆ ಎದುರಾಳಿಗಳ ತಲೆ ಚೆಂಡಾಡುವ ಹುರುಪು ಇಂದಿಗೂ ಕುಂದಿಲ್ಲ. 1971ರ ಯುದ್ಧದಲ್ಲಿ ನೂರಾರು ಜನ ಪಾಕಿಸ್ತಾನಿ ಸೈನಿಕರನ್ನು ಹೊಡೆದುರುಳಿಸಿದ್ದೇನೆ. ಯುದ್ಧ ಎಂಬ ಪದ ಕೇಳಿದರೇ ಇಂದಿಗೂ ಮೈ ರೋಮಾಂಚನಗೊಳ್ಳುತ್ತದೆ'
-ಆರ್.ದೇವರಾಜ್, ಮಾಜಿ ಸೈನಿಕ

ಜ. 26ರೊಳಗೆ ಪೂರ್ಣಗೊಳಿಸಲು ಒತ್ತಾಯ
ಬೆಂಗಳೂರು 
:ನಗರದ ಇಂದಿರಾ ಗಾಂಧಿ ಸಂಗೀತ ಕಾರಂಜಿ ಉದ್ಯಾನದಲ್ಲಿ ನಿರ್ಮಾಣವಾಗುತ್ತಿರುವ ರಾಷ್ಟ್ರೀಯ ಸೈನಿಕ ಸ್ಮಾರಕದ ಕಾಮಗಾರಿಯನ್ನು ಜನವರಿ 26ರ ಒಳಗೆ ಪೂರ್ಣಗೊಳಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್ ಒತ್ತಾಯಿಸಿದರು.

ಬಿಜೆಪಿಯ ಮಾಹಿತಿ ತಂತ್ರಜ್ಞಾನ ಮತ್ತು ಸಂವಹನ ಘಟಕ ಇಲ್ಲಿನ ಆರ್‌ಬಿಎಎನ್‌ಎಂಎಸ್ ಮೈದಾನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ `ವಿಜಯ ದಿವಸ' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದೇಶದಲ್ಲಿಯೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ನಿವೃತ್ತ ಸೈನಿಕರ ಆಸಕ್ತಿಯಿಂದ ರಾಷ್ಟ್ರೀಯ ಸೈನಿಕ ಸ್ಮಾರಕ ನಿರ್ಮಾಣವಾಗುತ್ತಿದೆ. ಈ ಕುರಿತಾಗಿ ಇರುವ ಆಡಳಿತಾತ್ಮಕ ತೊಂದರೆಗಳನ್ನು ಬಗೆಹರಿಸಲು ಸರ್ಕಾರ ಮುಂದಾಗಬೇಕು. ಗಣರಾಜ್ಯ ದಿನದಂದು ಸ್ಮಾರಕ ಉದ್ಘಾಟಿಸಲು ಪ್ರಯತ್ನಿಸಬೇಕು ಎಂದು ಆಗ್ರಹಿಸಿದರು.

ಉಪ ಮುಖ್ಯಮಂತ್ರಿ ಆರ್.ಅಶೋಕ ಮಾತನಾಡಿ, ಸೈನಿಕರು ಜಾತಿ, ಧರ್ಮಗಳ ಎಲ್ಲೆಯನ್ನು ಮೀರಿ ದೇಶದ ಗಡಿ ರಕ್ಷಣೆಯಲ್ಲಿ ತೊಡಗಿದ್ದಾರೆ. ಅಂತಹವರ ಬಗ್ಗೆ ಅಪಾರವಾದ ಪ್ರೀತಿ, ಗೌರವ ಭಾವನೆ ಇರಬೇಕು. ದೇಶವನ್ನು ಕಾಡುತ್ತಿರುವ ಭಯೋತ್ಪಾದನೆ, ನಕ್ಸಲ್ ಸಮಸ್ಯೆಗಳನ್ನು ಹೊಡೆದೋಡಿಸಲು ಪ್ರತಿಯೊಬ್ಬರೂ ಪಣ ತೊಡಬೇಕು ಎಂದರು.

ಬಾಂಗ್ಲಾದೇಶ ವಿಮೋಚನಾ ಯುದ್ಧದಲ್ಲಿ ಭಾಗವಹಿಸಿದ್ದ ಸೈನಿಕರಾದ ಜಪ್ಪು, ವಿ.ಕೆ.ಗುಮ್ಕಾರ್, ವಿಷ್ಣುಮೂರ್ತಿ, ಕೃಷ್ಣಸ್ವಾಮಿ, ಶಿವಶಂಕರಯ್ಯ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ನಿವೃತ್ತ ಲೆಫ್ಟಿನೆಂಟ್ ಜನರಲ್ ಎನ್.ಎಸ್. ನರಹರಿ, ನಿವೃತ್ತ ರಿಯರ್ ಅಡ್ಮಿರಲ್ ಬಿ.ಆರ್.ವಸಂತ, ನಿವೃತ್ತ ಏರ್ ವೈಸ್‌ಮಾರ್ಷಲ್ ಬಿ.ಕೆ.ಮುರಳಿ ಉಪಸ್ಥಿತರಿದ್ದರು.

ವಿವಿಧ ಕಡೆ ಸೈನಿಕ ಸ್ಮರಣೆಯ ಕಾರ್ಯಕ್ರಮ
ಬೆಂಗಳೂರು: ಭಾರತೀಯ ಸೇನೆಯು ಪಾಕಿಸ್ತಾನದ ವಿರುದ್ಧ 1971ರಲ್ಲಿ ಹೋರಾಡಿ ವಿಜಯ ಸಾಧಿಸಿದ ಸ್ಮರಣಾರ್ಥ ವಿಜಯ ದಿವಸವನ್ನು ಭಾನುವಾರ ಆಚರಿಸಲಾಯಿತು. ನಗರದ ವಿವಿಧ ಕಡೆಗಳಲ್ಲಿ ವಿಜಯ ದಿವಸದ ಅಂಗವಾಗಿ ಸೈನಿಕ ಸ್ಮರಣೆಯ ಕಾರ್ಯಕ್ರಮಗಳನ್ನು ಆಯೋಜಿ ಸಲಾಗಿತ್ತು. ನಗರದಲ್ಲಿರುವ ಸೈನಿಕ ತರಬೇತಿ ಶಾಲೆಗಳು ಮತ್ತು ಸೈನಿಕ ಕೇಂದ್ರಗಳಲ್ಲಿ ವೀರ ಸೈನಿಕರಿಗೆ ಗೌರವ ನಮನ ಸಲ್ಲಿಸಲಾಯಿತು.

ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯು ನಗರದ ಇಂದಿರಾಗಾಂಧಿ ಸಂಗೀತ ಕಾರಂಜಿ ಉದ್ಯಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸೈನಿಕ ಸ್ಮಾರಕಕ್ಕೆ ಪುಷ್ಪಗುಚ್ಚ ಇಟ್ಟು ಗೌರವ ನಮನ ಸಲ್ಲಿಸಲಾಯಿತು. ಇದೇ ಸಂದರ್ಭದಲ್ಲಿ ಹಲವು ಹಿರಿಯ ಸೈನಿಕರನ್ನು ಸನ್ಮಾನಿಸಲಾಯಿತು. ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ, ಸಂಸದ ರಾಜೀವ್ ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು.

ಬೆಂಗಳೂರು ದೂರದರ್ಶನ ಕೇಂದ್ರವು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಸಹಯೋಗದೊಂದಿಗೆ ರಾಜಭವನದ ಗಾಜಿನ ಮನೆಯಲ್ಲಿ ಆಯೋಜಿಸಿದ್ದ `ಸ್ಮರಣಾಂಜಲಿ' ಕಾರ್ಯಕ್ರಮದಲ್ಲಿ ಯುದ್ಧದಲ್ಲಿ ಮಡಿದು ಹುತಾತ್ಮರಾದ ಯೋಧರಿಗೆ ಗೀತೆ ಮತ್ತು ನೃತ್ಯಗಳ ಮೂಲಕ ಗೌರವ ಸಲ್ಲಿಸಲಾಯಿತು.

ಸೈನ್ಯದಲ್ಲಿ ಹೋರಾಡಿ ಮಡಿದ ಸೈನಿಕರ ಪತ್ನಿಯರಿಗೆ ರಾಜ್ಯಪಾಲ ಹಂಸರಾಜ ಭಾರದ್ವಾಜ್ ಅವರು ಸ್ಮರಣಿಕೆಗಳನ್ನು ನೀಡಿ ಸನ್ಮಾನಿಸಿದರು.

ಬಿಜೆಪಿಯ ಮಾಹಿತಿ ತಂತ್ರಜ್ಞಾನ ಮತ್ತು ಸಂವಹನ ಘಟಕ ಹಲಸೂರಿನ ಆರ್‌ಬಿಎಎನ್‌ಎಂಎಸ್ ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂಸದ ಅನಂತಕುಮಾರ್, ಉಪಮುಖ್ಯಮಂತ್ರಿ ಆರ್.ಅಶೋಕ ಮತ್ತಿತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT