ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈನಿಕ–ಸಂಸದ ಮಹಾವೀರ್ ತ್ಯಾಗಿ

Last Updated 27 ಮಾರ್ಚ್ 2014, 19:30 IST
ಅಕ್ಷರ ಗಾತ್ರ
ADVERTISEMENT

ಸೈನ್ಯದಲ್ಲಿದ್ದು ಸಂಸದರಾಗಿದ್ದವರು ನಮ್ಮ ದೇಶದಲ್ಲಿ ಕೆಲವರಿದ್ದಾರೆ.  ಅವರಲ್ಲಿ ಮಹಾವೀರ್ ತ್ಯಾಗಿ ಬಹಳ ಸ್ವಾರಸ್ಯಕರ ಬದುಕು ನಡೆಸಿದವರು. ಅವರು 1899ರಲ್ಲಿ ಜನಿಸಿದ ಅವರು  ಉತ್ತರಪ್ರದೇಶದ ಮೀರಠ್‌ನಲ್ಲಿ ವಿದ್ಯಾಭ್ಯಾಸ ನಡೆಸಿ ಬ್ರಿಟಿಷ್‌ ಸೈನ್ಯ ಸೇರಿದರು. 1919ರ ಕುಪ್ರಸಿದ್ಧ ಜಲಿಯನ್‌ವಾಲಾಬಾಗ್‌ ಹತ್ಯೆಯ ಬಳಿಕ ಅವರು ಬ್ರಿಟಿಷ್‌ ಸೈನ್ಯದ ಹುದ್ದೆಗೆ ರಾಜೀನಾಮೆ ನೀಡಿದರು. ರೈತರ ಪ್ರಗತಿಯಲ್ಲಿ ಆಸಕ್ತಿ ತಳೆದ ಅವರು 1920ರಲ್ಲಿ ಅಂದಿನ ಕಾಂಗ್ರೆಸ್‌ ಸೇರಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದರು. ಜೈಲಿಗೆ ಹೋದಾಗ ಅವರು ಮೋತಿಲಾಲ್ ನೆಹರೂ ಅವರ ಸಂಪರ್ಕಕ್ಕೆ ಬಂದರು.  ಮಹಮದ್ ಕಿದ್ವಾಯಿ ಅವರ ಶಿಷ್ಯನಾಗಿ ಗುರುತಿಸಿ ಕೊಂಡಿದ್ದರಿಂದ ಜನ ಅವರನ್ನು ‘ರಫಿಯಾನ್’ ಎಂದು ಕರೆದರು.

ಸ್ವಾತಂತ್ರ್ಯ ಪೂರ್ವದಲ್ಲಿ ತ್ಯಾಗಿ ಅವರು, ಉತ್ತರ ಪ್ರದೇಶ ವಿಧಾನ ಪರಿಷತ್ತಿನ ಸದಸ್ಯರಾಗಿ ಚುನಾಯಿತ­ರಾದರು. ಕಾಂಗ್ರೆಸ್‌ನಲ್ಲಿದ್ದರೂ ಅವರಿಗೆ ಶಚೀಂದ್ರನಾಥ್ ಸನ್ಯಾಲ್, ಪ್ರೇಮ ಕೃಷ್ಣ ಖನ್ನಾ, ವಿಷ್ಣು ಶರಣ್‌ ಮುಂತಾದ ಕ್ರಾಂತಿಕಾರಿಗಳೊಡನೆ ಸಂಪರ್ಕವಿತ್ತು. ಮೊದಲ ಲೋಕಸಭೆಗೆ ಅವರು ಆಯ್ಕೆಯಾದರು. ನೇರ ಮಾತಿಗೆ ಹೆಸರುವಾಸಿಯಾಗಿದ್ದ ಅವರು ಕೆಲವೊಮ್ಮೆ ಪ್ರಧಾನಿ ನೆಹರೂ ಅವರನ್ನೂ ಟೀಕಿಸದೆ ಬಿಡುತ್ತಿರಲಿಲ್ಲ.

ಕಾಂಗ್ರೆಸ್‌ನಲ್ಲಿ ಇಂದಿರಾಗಾಂಧಿ ಅವರ ಹೆಸರು  ನಾಗಪುರದ ಕಾಂಗ್ರೆಸ್ ಅಧಿವೇಶನದಲ್ಲಿ  ಮೊದಲ ಸಲ ಪ್ರಸ್ತಾಪವಾದಾಗ ತ್ಯಾಗಿ ನೆಹರೂ ಅವರಿಗೆ ಒಂದು ಪತ್ರ ಬರೆದರು. ‘ಮೊಗಲ್ ದೊರೆಗಳ ಕಾಲದಲ್ಲಿ ಮಹಾರಾಜರ ಪಾದಗಳನ್ನು ಚುಂಬಿಸುವ ಚರಣ ಚುಂಬಕರಿ­ರುತ್ತಿದ್ದರು. ಆಗ ಮಂತ್ರಿಗಳು ನವಾಬರ ಮಕ್ಕಳೊಡನೆ ಆಟ ಆಡುತ್ತಿದ್ದರು. ಈಗ ನಿಮ್ಮನ್ನು ಇವರೆಲ್ಲಾ ಪೂಜಿಸುತ್ತಿರು­ವುದರಿಂದ ಮುಗ್ಧೆಯಾದ ಇಂದುವಿನ ಹೆಸರನ್ನು  ಕಾಂಗ್ರೆಸ್ ಅಧ್ಯಕ್ಷರ ಸ್ಥಾನಕ್ಕೆ ಪ್ರಸ್ತಾಪಿಸಿದ್ದಾರೆ. ನೀವು ಅದನ್ನು ಕಣ್ಣು ಮುಚ್ಚಿಕೊಂಡು ಒಪ್ಪಿದ್ದೀರ’ ಎಂದು  ಟೀಕಿಸಿದ್ದರು. ಈ ಪತ್ರ ಬರೆಯಲು ಒದ್ದಾಡಿ ತಾವು ಹದಿನೈದು ರಾತ್ರಿ ನಿದ್ದೆ ಮಾಡಿಲ್ಲ ಎಂದೂ ಅವರು ಬರೆದಿದ್ದರು!

ಸಂವಿಧಾನ ಸಭೆಯ ಸದಸ್ಯರಾಗಿದ್ದ ಅವರು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಮೂಲಭೂತ ಹಕ್ಕುಗಳು ರದ್ದಾಗುತ್ತವೆ ಎಂಬ ನಿಲುವನ್ನು ಬಹಿರಂಗವಾಗಿ ಖಂಡಿಸಿದ್ದರು. ಅಪಾರ ಧೈರ್ಯಶಾಲಿ­ಯಾಗಿದ್ದ ಅವರು ಭಾರತ ವಿಭಜನೆಯ ಸಂದರ್ಭದಲ್ಲಿ ಪ್ರಾಣದ ಹಂಗು ತೊರೆದು ಅಪಾಯದಲ್ಲಿದ್ದ ಮುಸ್ಲಿಂರನ್ನು ಕಾಪಾಡಿದ್ದರು.

ನೆಹರೂ ಸಂಪುಟದಲ್ಲಿ ಮಂತ್ರಿಯಾಗಿ­ದ್ದಾಗ ಅವರು ಭಾಷಾವಾರು ರಾಜ್ಯಗಳ ವಿಂಗಡಣೆ  ವಿರೋಧಿಸಿದ್ದರು. ರಾಜಕೀಯ ನಾಯಕರ ಕಾಲು ಮುಟ್ಟಿ ನಮಸ್ಕಾರ ಮಾಡುವುದನ್ನು ಅವರು ವಿರೋಧಿಸುತ್ತಿದ್ದರು.

ಭಾರತ ಚೀನಾ ಯುದ್ಧದ ಸಂದರ್ಭದಲ್ಲಿ ಅಕ್ಸಾಯ್ ಚಿನ್‌ ಭಾಗದಲ್ಲಿ ಒಂದು ಹುಲ್ಲು ಕಡ್ಡಿಯೂ ಬೆಳೆಯದು ಎಂದು ನೆಹರೂ ಹೇಳಿದಾಗ, ಮಹಾವೀರ್ ತಮ್ಮ ತಲೆಯನ್ನು ಮುಟ್ಟಿಕೊಂಡು ‘ಇಲ್ಲಿ ಏನೂ ಆಗಿಲ್ಲ ಎಂದರೆ,......ಇದನ್ನು ಕತ್ತರಿಸಬೇಕೆ ಅಥವಾ ಬೇರೆಯವರಿಗೆ ಕೊಟ್ಟು ಬಿಡಬೇಕೆ? ಎಂದೂ ಪ್ರಶ್ನಿಸಿದ್ದರು.
ಅವರು ಎರಡು ಸಲ ಲೋಕಸಭೆಗೆ ಮತ್ತೊಂದು ಸಲ ರಾಜ್ಯ ಸಭೆಗೆ ಆಯ್ಕೆಯಾಗಿದ್ದರು. ಜೆ.ಪಿ ಚಳವಳಿ ಮತ್ತು 1975 ರ ತುರ್ತು ಪರಿಸ್ಥಿತಿ ಎರಡನ್ನೂ ವಿರೋಧಿಸಿದ್ದ ತ್ಯಾಗಿ ಅವರು ಒಬ್ಬ ದಿಟ್ಟ ಸಂಸದರಾಗಿ ಕೊನೆ ತನಕ ತಮ್ಮ ಪಾತ್ರ ನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT