ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೊರಬದ ಕಳಪೆ ಸಾಧನೆ: ಕೆಪಿಸಿಸಿಗೆ ವರದಿ

Last Updated 6 ಜನವರಿ 2011, 9:25 IST
ಅಕ್ಷರ ಗಾತ್ರ

ಶಿವಮೊಗ್ಗ: ಚುನಾವಣಾ ಫಲಿತಾಂಶ ಸಮಾಧಾನ ತಂದಿದೆ. ಆದರೆ, ಸೊರಬದಲ್ಲಿ ಪಕ್ಷದ ಕಳಪೆ ಸಾಧನೆ ಕುರಿತಂತೆ ಕೆಪಿಸಿಸಿಗೆ ವರದಿ ಕಳುಹಿಸಲಾಗಿದೆ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷಆರ್. ಪ್ರಸನ್ನಕುಮಾರ್ ತಿಳಿಸಿದರು. ಪಕ್ಷದ ಮೇಲೆ ವಿಶ್ವಾಸವಿಟ್ಟು ಜನ ಆಶೀರ್ವಾದ ಮಾಡಿದ್ದಾರೆ. ಮುಖ್ಯಮಂತ್ರಿ ತವರು ಜಿಲ್ಲೆಯಲ್ಲಿ ಕಳೆದ ಬಾರಿಗಿಂತ ಒಂದು ಹೆಚ್ಚಿನ ಸ್ಥಾನವನ್ನು ಕಾಂಗ್ರೆಸ್ ಪಡೆದಿದೆ. ಅಲ್ಲದೇ, ಜಿಲ್ಲಾ ಪಂಚಾಯ್ತಿಯಲ್ಲಿ ಕಾಂಗ್ರೆಸ್ 1,94,617 ಮತ ಪಡೆದಿದೆ. ಬಿಜೆಪಿಗೂ ಕಾಂಗ್ರೆಸ್‌ಗೂ ಕೇವಲ 10 ಸಾವಿರ ಮಾತ್ರ ಅಂತರ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕೊನೆ ಗಳಿಗೆಯಲ್ಲಿ ಬಂಗಾರಪ್ಪ ಪಕ್ಷ ಬಿಟ್ಟಿದ್ದು, ಸೊರಬದಲ್ಲಿ ಕುಮಾರ ಬಂಗಾರಪ್ಪ ವಿಫಲರಾಗಿದ್ದು, ಕಾಂಗ್ರೆಸ್‌ಗೆ ಕೆಲ ಕ್ಷೇತ್ರಗಳಲ್ಲಿ ತೊಂದರೆಯಾಯಿತು ಎಂದು ಒಪ್ಪಿಕೊಂಡ ಅವರು, ಈ ಬಗ್ಗೆ ತಾವು ಕೆಪಿಸಿಸಿಗೆ ವರದಿ ನೀಡಿದ್ದು, ಬೆಂಗಳೂರಿನಲ್ಲಿ ಗುರುವಾರ ನಡೆಯಲಿರುವ ಕೆಪಿಸಿಸಿ ಸಭೆ ತೀರ್ಮಾನ ಕೈಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸೊರಬದಲ್ಲಿ ಜೆಡಿಎಸ್ ಗೆಲ್ಲುತ್ತದೆಂಬ ನಿರೀಕ್ಷೆ ಇತ್ತು. ಅಲ್ಲಿ ಕಾಗೋಡು ತಿಮ್ಮಪ್ಪ ಸೇರಿದಂತೆ ತಮ್ಮನ್ನೂ ಪ್ರಚಾರ ಕಾರ್ಯದಲ್ಲಿ ಕುಮಾರ ಬಂಗಾರಪ್ಪ ತೊಡಗಿಸಿಕೊಳ್ಳುವಲ್ಲಿ ವಿಫಲರಾದರು. ಅಲ್ಲಿ ಪಕ್ಷದ ನಾಯಕರು ಕೆಲಸ ಮಾಡಿದ್ದರೆ ಒಂದೆರಡು ಸ್ಥಾನಗಳನ್ನು ಪಡೆದುಕೊಳ್ಳಬಹುದಾಗಿತ್ತು ಎಂದು ಅಭಿಪ್ರಾಯಪಟ್ಟರು.

ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ಕಾಗೋಡು ತಿಮ್ಮಪ್ಪ ಅವರದೇ ನೇತೃತ್ವ. ಕೆಪಿಸಿಸಿ ಚುನಾವಣೆ ಸಂದರ್ಭದಲ್ಲಿ ಕುಮಾರ ಬಂಗಾರಪ್ಪಗೆ ಸಾರಥ್ಯ ನೀಡಿತ್ತು ಎನ್ನುವುದು ತಮಗೆ ತಿಳಿಯದ ವಿಚಾರ ಎಂದರು. ಪಕ್ಷ ಹಣವಂತರಿಗೆ ಟಿಕೆಟ್ ನೀಡಿಲ್ಲ. ನಿಷ್ಠಾವಂತರಿಗೆ ನೀಡಿದೆ. ಹಣ, ಹೆಂಡ ಹಂಚದೆ 13 ಸ್ಥಾನಗಳನ್ನು ಪಕ್ಷ ಗೆದ್ದಿದೆ ಎಂದರು.

ಪಕ್ಷದಲ್ಲಿ ಗುಂಪುಗಾರಿಕೆ, ಒಳಜಗಳ ಮತ್ತಿತರ ಸಮಸ್ಯೆಗಳು ಬಗೆಹರಿಯುವ ಕಾಲ ಹತ್ತಿರ ಬಂದಿದೆ. ಸದ್ಯದಲ್ಲೇ ಇವು ಬಗೆಹರಿಯಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಬಿಜೆಪಿ ವಿರುದ್ಧ ಒಗ್ಗಟ್ಟು: ಅತಂತ್ರವಾದ ತಾ.ಪಂ.ಗಳಲ್ಲಿ ಬಿಜೆಪಿ ವಿರುದ್ಧವಾಗಿ ಒಗ್ಗಟ್ಟಾಗಲಿದ್ದೇವೆ. ಬಿಜೆಪಿಯನ್ನು ಹೊರಗಿಟ್ಟು ಅಧಿಕಾರದ ಸೂತ್ರ ಹಿಡಿಯಲಿದ್ದೇವೆ ಎಂದರು. ಸುದ್ದಿಗೋಷ್ಠಿಯಲ್ಲಿ ಜಿ.ಪಂ. ನೂತನ ಸದಸ್ಯ ಕಲಗೋಡು ರತ್ನಾಕರ, ಪದಾಧಿಕಾರಿಗಳಾದ ಎಸ್.ಪಿ. ದಿನೇಶ, ರಾಮೇಗೌಡ, ಹಾಲಪ್ಪ, ರುದ್ರೇಶ್, ಸತ್ಯನಾರಾಯಣ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT