ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಲಭ್ಯ ಕೊರತೆ: ಪ್ರಯಾಣಿಕರ ಗೋಳು

Last Updated 14 ಮೇ 2012, 8:50 IST
ಅಕ್ಷರ ಗಾತ್ರ

ಯಾದಗಿರಿ: ಗುಂತಕಲ್ ವಿಭಾಗದಲ್ಲಿಯೇ ಅತ್ಯಂತ ಹೆಚ್ಚು ಆದಾಯ ಗಳಿಸುವ ರೈಲ್ವೆ ನಿಲ್ದಾಣವಿದು. ನಿತ್ಯವೂ ಮೂರು ಸಾವಿರಕ್ಕೂ ಹೆಚ್ಚು ಪ್ರಯಾಣಿಕರು ಇಲ್ಲಿ ಪ್ರಯಾಣಿಸುತ್ತಾರೆ. ಜನರು ಈ ನಿಲ್ದಾಣದಲ್ಲಿ ರೈಲುಗಳಿಗಾಗಿ ಮುಗಿಬೀಳುತ್ತಾರೆ. ಆದರೆ ಸೌಲಭ್ಯಗಳು ಮಾತ್ರ ಇನ್ನೂ ಮರೀಚಿಕೆಯಾಗಿಯೇ ಉಳಿದಿವೆ.

ಇದು ಯಾದಗಿರಿಯ ರೈಲು ನಿಲ್ದಾಣದ ದುಸ್ಥಿತಿ. ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆದರೆ ಅದಕ್ಕೆ ತಕ್ಕಂತೆ ಸೌಲಭ್ಯಗಳು ಮಾತ್ರ ಸಿಗುತ್ತಿಲ್ಲ ಎಂಬ ಕೊರಗು ಪ್ರಯಾಣಿಕರದ್ದು. ಬೆಳಕು ಹರಿಯುವ ಮೊದಲೇ ಜನರು ಟಿಕೆಟ್‌ಗಾಗಿ ಇಲ್ಲಿ ಸರದಿಯಲ್ಲಿ ನಿಲ್ಲುತ್ತಾರೆ. ಕೌಂಟರ್ ಬಾಗಿಲು ಹಾಕುವುದರೊಳಗಾಗಿ ಟಿಕೆಟ್ ಸಿಗಲಿ ಎಂದು ದೇವರಲ್ಲಿ ಮೊರೆ ಇಡುತ್ತಾರೆ. ಇಂತಹ ಪರಿಸ್ಥಿತಿಯಲ್ಲೂ ಇಲ್ಲಿಯ ರೈಲು ನಿಲ್ದಾಣದ ಆದಾಯ ಮಾತ್ರ ಕಡಿಮೆ ಆಗಿಲ್ಲ.

ಪ್ರಯಾಣಿಕರ ಸಂಖ್ಯೆ ಹೆಚ್ಚಾಗದಂತೆ ಸಾಮಾನ್ಯ ಪ್ರಯಾಣ ಹಾಗೂ ಮುಂಗಡ ಕಾಯ್ದಿರಿಸುವ ಟಿಕೆಟ್ ವಿತರಿಸುವ ಕೌಂಟರ್‌ಗಳನ್ನು ಹೆಚ್ಚಿಸುವಂತೆ ಹಲವಾರು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನ ಆಗಿಯೇ ಇಲ್ಲ. ಕೇವಲ ಜನರಿಂದ ಆದಾಯವನ್ನು ನಿರೀಕ್ಷಿಸುವ ರೈಲ್ವೆ ಇಲಾಖೆ, ತನ್ನ ಜವಾಬ್ದಾರಿಯನ್ನು ಮರೆತು ಕುಳಿತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಪಕ್ಕದ ಆಂಧ್ರಪ್ರದೇಶ ಗಡಿಗೆ ಹೊಂದಿಕೊಂಡಿರುವ ನಾರಾಯಣಪೇಟ್, ಸೈದಾಪುರ, ಗುಲ್ಬರ್ಗ ಜಿಲ್ಲೆಯ ಚಿತ್ತಾಪುರ, ಸೇಡಂ, ಯಾದಗಿರಿ ಜಿಲ್ಲೆಯ ಶಹಾಪುರ, ಸುರಪುರ ಭಾಗದ ಜನರು ರೈಲಿನ ಮೂಲಕ ಪ್ರಯಾಣಿಸುವುದಕ್ಕಾಗಿ ಯಾದಗಿರಿಗೆ ಬರುತ್ತಾರೆ. ದೇಶದ ಎಲ್ಲ ನಗರಗಳಿಗೆ ಸಂಪರ್ಕ ಕಲ್ಪಿಸುವ ರೈಲ್ವೆ ಸೌಲಭ್ಯ ಹೊಂದಿರುವ ಯಾದಗಿರಿ ನಿಲ್ದಾಣದಲ್ಲಿ ಸಹಜವಾಗಿಯೇ ಪ್ರಯಾಣಿಕರ ದಟ್ಟಣೆಯೂ ಹೆಚ್ಚಾಗಿದೆ.

ಹೀಗಾಗಿ ಇರುವ ಒಂದೇ ಟಿಕೆಟ್ ಕೌಂಟರ್‌ನಲ್ಲಿ ನಿತ್ಯವೂ ಪ್ರಯಾಣಿಕರು ಸರದಿಯಲ್ಲಿ  ನಿಲ್ಲುವಂತಾಗಿದೆ.
ಮುಂಗಡ ಟಿಕೆಟ್ ಕಾಯ್ದಿರಿಸಲು ಒಂದೇ ಒಂದು ಕೌಂಟರ್ ಇದ್ದು, ಬೆಳಿಗ್ಗೆ 8 ರಿಂದ ಮಧ್ಯಾಹ್ನ 12 ಗಂಟೆ ಹಾಗೂ ಸಂಜೆ 4 ರಿಂದ ರಾತ್ರಿ 8 ಗಂಟೆಯವರೆಗೆ ಕಾರ್ಯ ನಿರ್ವಹಿಸುತ್ತದೆ.

ಇದರಿಂದಾಗಿ ಮುಂಗಡ ಟಿಕೆಟ್ ಪಡೆಯಲು ಜನರು ಒಂದೆಡೆ ಪರದಾಡುವಂತಾಗಿದ್ದರೆ, ಇನ್ನೊಂದೆಡೆ ಟಿಕೆಟ್ ಬ್ರೋಕರ್‌ಗಳ ಹಾವಳಿಯಿಂದಾಗಿ ಜನಸಾಮಾನ್ಯರು ತತ್ತರಿಸಿ ಹೋಗಿದ್ದಾರೆ. ಮುಂಗಡ ಟಿಕೆಟ್ ಆಗಲಿ ಮತ್ತು ತತ್ಕಾಲ್ ಟಿಕೆಟ್ ಆಗಲಿ ಪಡೆಯಲು ಸಾಮಾನ್ಯ ಪ್ರಯಾಣಿಕರಿಗೆ ಸಾಧ್ಯವೇ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಹೀಗಾಗಿ ಅನಿವಾರ್ಯವಾಗಿ ಟಿಕೆಟ್‌ಗಾಗಿ ಬ್ರೋಕರ್‌ಗಳ ಮೊರೆ ಹೋಗಬೇಕಾಗಿದೆ ಎನ್ನುತ್ತಾರೆ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಎನ್. ಭೀಮುನಾಯಕ. ಮುಂಗಡ ಟಿಕೆಟ್ ಒದಗಿಸುವ ಕೌಂಟರ್ ಅನ್ನು ನಿತ್ಯ 12 ತಾಸು ಕಾರ್ಯನಿರ್ವಹಿಸುವಂತೆ ವ್ಯವಸ್ಥೆ ಮಾಡಬೇಕು. ಅದರ ಜೊತೆಗೆ ಸಾಮಾನ್ಯ ಟಿಕೆಟ್ ಕೌಂಟರ್‌ಗಳ ಸಂಖ್ಯೆಯ ಹೆಚ್ಚಿಸಬೇಕು ಎಂದು ಒತ್ತಾಯಿಸಿದ್ದಾರೆ.

ಗುಲ್ಬರ್ಗ ಸಂಸದ ಹಾಗೂ ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಯಚೂರು ಸಂಸದ ಎಸ್. ಫಕೀರಪ್ಪನವರ ವ್ಯಾಪ್ತಿಯ ಜಿಲ್ಲೆ ಬರುತ್ತಿದ್ದರೂ, ಈವರೆಗೂ ಯಾವುದೇ ಕ್ರಮ ಜರುಗಿಸಿಲ್ಲ. ಅನೇಕ ಬೇಡಿಕೆಗಳನ್ನು ಇವರಿಗೆ ಸಲ್ಲಿಸಿದರೂ ಪ್ರಯತ್ನಿಸುತ್ತೇವೆ ಎಂಬ ಭರವಸೆಯ ಹೊರತು ಯಾವುದೆ ಫಲ ಮಾತ್ರ ಇನ್ನು ಸಿಕ್ಕಿಲ್ಲ.

ಹಲವಾರು ಬಾರಿ ಹೋರಾಟ ಮಾಡಿದರೂ ಯಾವುದೇ ಪ್ರಯೋಜನವಿಲ್ಲ. ಜಿಲ್ಲಾ ಅಭಿವೃದ್ಧಿ ಹೋರಾಟ ಸಮಿತಿ ರಚನೆ ಮಾಡಿ, ಎರಡು ಬಾರಿ ಪ್ರತಿಭಟನೆಯನ್ನೂ ನಡೆಸಲಾಯಿತು. ರೈಲುಗಳ ನಿಲುಗಡೆ, ರೈಲ್ವೆ ನಿಲ್ದಾಣದಲ್ಲಿ ಸೌಲಭ್ಯ ಮುಂತಾದ ಬೇಡಿಕೆಗಳನ್ನು ಈಡಲಾಗಿತ್ತು.

ಆದರೆ ಗರೀಬ್ ರಥ್ ರೈಲು ನಿಲುಗಡೆ ಆಗಿದ್ದು ಬಿಟ್ಟು ಬೇರೇನೂ ಪ್ರಯೋಜನವಾಗಿಲ್ಲ. ಅಸ್ತಿತ್ವಕ್ಕೆ ಬಂದ ವೇಗದಲ್ಲಿಯೇ ಅಭಿವೃದ್ಧಿ ಹೋರಾಟ ಸಮಿತಿಯೂ ಸ್ತಬ್ಧಗೊಂಡಿದ್ದು, ಪ್ರಯಾಣಿಕರ ಗೋಳು ಮಾತ್ರ ತಪ್ಪುತ್ತಿಲ್ಲ. ಜಿಲ್ಲೆಯ ಅಭಿವೃದ್ಧಿಯ ವಿಷಯದಲ್ಲಿ ರಾಜಕಾರಣವೇ ಹೆಚ್ಚಾಗುತ್ತಿದೆಯೇ ಹೊರತು, ನಿಜವಾದ ಅಭಿವೃದ್ಧಿ ಆಗುತ್ತಿಲ್ಲ ಎಂಬ ನೋವು ಈ ಭಾಗದ ಜನರದ್ದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT