ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ನೇಹದ ಕಡಲಲ್ಲಿ ಅಮೃತ ಘಳಿಗೆ

Last Updated 12 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

`ಸ್ನೇಹದ ಕಡಲಲ್ಲಿ ನೆನಪಿನ ದೋಣಿಯಲೀ ಪಯಣಿಗ ನಾನಮ್ಮ~ ಎಂದು ಶುಭಮಂಗಳ  (1975) ಚಿತ್ರದಲ್ಲಿ ಅಂದು ನಾಯಕಿ ಆರತಿಯೊಡನೆ  ಹಾಡುತ್ತಾ ಮೆರೆದಿದ್ದ ಶ್ರೀನಾಥ್ ಮೊನ್ನೆ ಹಳೆಯ ಸಹಪಾಠಿಗಳನ್ನೂ ನೆನಪಿನ ದೋಣಿಯಲ್ಲಿ ಪಯಣಿಗರನ್ನಾಗಿಸಿದರು.

ಅಂದ ಹಾಗೆ ಶ್ರೀನಾಥ್ ಅಂದರೆ ನಾರಾಯಣಸ್ವಾಮಿ ಎಸ್‌ಜೆಪಿಯಲ್ಲಿ ನನ್ನ ಸಹಪಾಠಿ. ಆರತಿ ಕೂಡ ಮಾಧ್ಯಮಿಕ ಶಾಲೆಯಲ್ಲಿ ನನ್ನ ಜೂನಿಯರ್.ಶ್ರೀ ಜಯಚಾಮರಾಜೇಂದ್ರ ಪಾಲಿಟೆಕ್ನಿಕನಲ್ಲಿ 1963 ರಿಂದ 1966ರವರೆಗೆ ರೇಡಿಯೊ, ಸೌಂಡ್, ಸಿನಿಮಾಟೋಗ್ರಫಿ ಎಂಜಿನಿಯರಿಂಗ್ ಡಿಪ್ಲೊಮೊ ಓದಿದ ಹಳೆಯ ವಿದ್ಯಾರ್ಥಿನಿಯರು ಹಾಗೂ ವಿದ್ಯಾರ್ಥಿಗಳು ನಾಲ್ಕೂವರೆ ದಶಕಗಳ ತರುವಾಯ ಮೊನ್ನೆ ಒಟ್ಟಾಗಿ ಸೇರಿ ಹಿಂದಿನದನ್ನು ಮೆಲುಕು ಹಾಕುತ್ತಾ ಸಂಭ್ರಮಿಸಿದೆವು.

ವಿದ್ಯಾರ್ಥಿನಿಯರು ಎಂದು ಏಕೆ ಮೊದಲು ಹೇಳಿದೆ ಅಂದರೆ, ನಮ್ಮ ಬ್ಯಾಚ್‌ನಲ್ಲಿ ಪಾಲಿಟೆಕ್ನಿಕ್‌ನ ಅಂದಿನ ದಿನಗಳಲ್ಲಿ ಅತಿ ಹೆಚ್ಚು ವಿದ್ಯಾರ್ಥಿಯರಿದ್ದುದು.
ಓದಿಗಿಂತ ನಾಟಕಗಳಲ್ಲೆೀ ಹೆಚ್ಚು ಆಸಕ್ತಿ ತೋರುತ್ತಿದ್ದ  `ಪ್ರಣಯರಾಜ~ ನಾರಾಯಣಸ್ವಾಮಿಯೇ ಈ ಸ್ನೇಹದ ಕಡಲಿನ ಅಪೂರ್ವ ಮಧುರಮಿಲನಕ್ಕೆ ಕಾರಣ.

ಹಳಬರೆಲ್ಲಾ ಒಟ್ಟಿಗೆ ಸೇರಬೇಕೆಂಬುದು ಶ್ರೀನಾಥ್ ಅವರ ಬಹುದಿನಗಳ ಹಂಬಲವಾಗಿತ್ತು. ಆದರೆ ಕಾಲ ಕೂಡಿ ಬಂದಿರಲಿಲ್ಲ. ಸಿನೆಮಾಟೊಗ್ರಫಿ ಓದುತ್ತಿದ್ದ ನಮ್ಮ ಗೆಳೆಯ ತಿಪ್ಪೇಸ್ವಾಮಿಗೆ ಈಚೆಗೆ ವನ್ಯಜೀವಿಗಳ ಛಾಯಾಚಿತ್ರಕ್ಕಾಗಿ ಅಮೆರಿಕ ಪೋಟೊಗ್ರಫಿಕ್ ಸೊಸೈಟಿ ಫೆಲೊಷಿಪ್ ಸಿಕ್ಕಿತು.

  ಭಾರತೀಯರೆಲ್ಲಾ ಹೆಮ್ಮೆಪಡುವಂತ ಪ್ರಶಸ್ತಿ, ಈಗಾಗಲೆ ಎಫ್‌ಆರ್‌ಪಿಎಸ್ ಜೊತೆ ಅನೇಕ ಪ್ರಶಸ್ತಿಗಳನ್ನು ಪಡೆದಿರುವ ತಿಪ್ಪೆಸ್ವಾಮಿಗೆ  ಬಂದ ಸಂದರ್ಭವನ್ನು ಶ್ರೀನಾಥ್ ಬಳಸಿಕೊಂಡು ಸುಮಾರು 50 ಹಳೇ ಸ್ನೇಹಿತರನ್ನು 45 ವರ್ಷಗಳ ಹಿಂದಕ್ಕೆ ಕರೆದುಕೊಂಡು ಹೋದರು.

ಇದಕ್ಕೆ ನೆರವಾಗಿ ತೆರೆಯ ಮರೆಯ ಛಾಯಾಗ್ರಹಣದಲ್ಲಿ ಪುಟ್ಟಣ್ಣ ಅವರ ಮೆಚ್ಚುಗೆಗೆ ಪಾತ್ರರಾಗಿದ್ದ ಛಾಯಾಗ್ರಾಹಕ ಬಸವರಾಜ್ ನಮ್ಮೆಲ್ಲರ ವಿಳಾಸ ಪತ್ತೆ ಹಚ್ಚಿ ಒಟ್ಟಿಗೆ ಸೇರಿಸಿದ್ದು. ಅಜ್ಜ ಅಜ್ಜಿಯರೆಲ್ಲಾ ಎಲ್ಲಾ ಜಂಜಾಟವನ್ನೆಲ್ಲ ಮರೆತು ಹದಿಹರೆಯದ ನೆನಪಿನಲ್ಲಿ ತೇಲಾಡಿದರು.

ಇನ್ನೊಂದು ವಿಶೇಷವೆಂದರೆ  ಶ್ರೀನಾಥ ಗುರು ವೀರಣ್ಣ ಕೂಡ ಬಂದು ನಮ್ಮಡನೆ ಬೆರೆತದ್ದು. ಇಲ್ಲಿ ನಾವೆಲ್ಲ ನಮ್ಮ ಗುರುಗಳಾದ ರಾಮರಾವ್, ಶಾಮರಾವ್, ಮುದ್ದುವೀರಪ್ಪ, ಚಂದ್ರಶೇಖರ್, ನಾಗರಾಜ್ (ರೇಡಿಯೊ ಎಂಜಿನಿಯರಿಂಗ್), ರಾಮಮೂರ್ತಿ, ಕೇಶವಮೂರ್ತಿ (ಸೌಂಡ್), ಚಲಂ, ಮರುಳಪ್ಪ (ಸಿನೆಮಾಟೊಗ್ರಫಿ) ಮುಂತಾದವರನ್ನು  ನೆನೆಪಿಸಿಕೊಂಡೆವು. ಮರುಳಪ್ಪ ಅವರ ಬೆದರಿಕೆಗಳು ನಮಗೆ ಈಗ ತಮಾಷೆಯಂತೆ ಕಂಡವು.

ಶ್ರೀನಾಥ್‌ಗೆ ಆಗಲೆ ಸಿನಿಮಾ ಗೀಳು. ಅದನ್ನು ನಮಗೂ ಹಚ್ಚಿಬಿಟ್ಟಿದ್ದರು. ಅಂತಿಮ ವರ್ಷ ವಿದ್ಯಾರ್ಥಿಗಳ ಸಂಘದ ಉಪಾಧ್ಯಕ್ಷನಾಗಿದ್ದ ದೇವನಾಥ್ ಲೆಕ್ಚರರ್‌ಗಳನ್ನು ಗೊಂದಲಕ್ಕೆ ಸಿಕ್ಕಿಸುವಂಥ ಕೀಟಲೆಗಳನ್ನು ಮಾಡುತ್ತಿದ್ದರು. ಅವೆಲ್ಲವೂ ಮತ್ತೆ ಮತ್ತೆ ನೆನಪಿಗೆ ಬಂತು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT