ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಯಾಂಪಲ್ ನೆಪದಲ್ಲಿ ರೇಷ್ಮೆಗೂಡು ಮಾಯ !

Last Updated 5 ಮೇ 2012, 5:45 IST
ಅಕ್ಷರ ಗಾತ್ರ

ಶಿಡ್ಲಘಟ್ಟ: `ಸ್ಯಾಂಪಲ್~ ಎಂಬ ನೆಪದಲ್ಲಿ ಶಿಡ್ಲಘಟ್ಟದ ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಪ್ರತಿನಿತ್ಯ ನೂರಾರು ಕೆಜಿ ಗೂಡು ಮಾಯವಾಗುತ್ತಿದೆ.  ಗೂಡಿನ ಗುಣಮಟ್ಟ ಪರಿಶೀಲನೆಗೆ ಒಯ್ಯುತ್ತೇವೆಂದು ಹೇಳಿ ಒಬ್ಬೊಬ್ಬರೂ ಕನಿಷ್ಠ ಕಾಲು ಕೆಜಿ ಕೊಂಡುಯ್ಯುತ್ತಾರೆ.  ಕಾಲು ಕೆಜಿ ದರಕ್ಕೆ ಸುಮಾರು 50 ರೂಪಾಯಿ ಬೆಲೆ.

ಈ ರೀತಿ ಮಾರುಕಟ್ಟೆಯಿಂದ ದಿನನಿತ್ಯ ನೂರಾರು ಕೆ.ಜಿ. ಗೂಡು ಹೊರಕ್ಕೆ ಸಾಗಿಸಲ್ಪಡುತ್ತಿದೆ. ಈ ನೆಪದಲ್ಲಿ ಕೆಲವರು ಗೂಡು ಕದಿಯುವುದನ್ನೇ ವೃತ್ತಿಯನ್ನಾಗಿಸಿಕೊಂಡಿದ್ದರೆ, ಇನ್ನು ಕೆಲವರು ಇಂತಹವರಿಂದ ಕಡಿಮೆ ಬೆಲೆಗೆ ಕೊಳ್ಳುವುದನ್ನೇ ಕಾಯಕವನ್ನಾಗಿಸಿಕೊಂಡಿದ್ದಾರೆ.

 `ಮಾರುಕಟ್ಟೆ ಪ್ರವೇಶ ದ್ವಾರದಲ್ಲಿ ಕಾವಲುಗಾರರಿದ್ದರೂ ಏನೂ ಪ್ರಶ್ನಿಸುವುದಿಲ್ಲ.  ದಿನವೊಂದಕ್ಕೆ ಒಂದು ಕೋಟಿ ರೂಪಾಯಿ ವಹಿವಾಟನ್ನು ನಡೆಸುವ ಗೂಡಿನ ಮಾರುಕಟ್ಟೆಗೆ ಆಂಧ್ರಪ್ರದೇಶ ಹಾಗೂ ಗಡಿ ಭಾಗಗಳ ರೈತರು ಗೂಡನ್ನು ತರುತ್ತಾರೆ.

ದೂರದ ಊರಿನಿಂದ ಆಗಮಿಸುವ ರೈತರ ಗೂಡಿನಲ್ಲಿ ಸ್ಯಾಂಪಲ್ ಹೆಸರಿನಲ್ಲಿ ಕೆಜಿ ಗಟ್ಟಲೆ ಗೂಡು ಸಾಗಿಸಲಾಗುತ್ತದೆ. ಹೊರ ರಾಜ್ಯದವರ ಬಾಕ್ಸ್‌ಗಟ್ಟಲೇ ಗೂಡು ಕಳ್ಳತನವಾದ ಘಟನೆಗಳೂ ನಡೆದಿವೆ~ ಎನ್ನುತ್ತಾರೆ ರೈತರೊಬ್ಬರು.

 `ಹಿಂದೆ ಸುರಕ್ಷತೆಗಾಗಿ ಬಿಎಸ್‌ಎಫ್ ನಿಯೋಜಿಸಲಾಗಿತ್ತು. ಆಗ ಮಾರುಕಟ್ಟೆಯಿಂದ ಗೂಡು ಹೊರಕ್ಕೆ ಹೋಗದಂತೆ ತಡೆಯಲಾಗುತ್ತಿತ್ತು. ಆದರೆ ಈಗ ಮಾರುಕಟ್ಟೆಯಲ್ಲಿ ಬಿಗಿಯಿಲ್ಲ.ರೀಲರ್‌ಗಳಲ್ಲದವರು ಹಲವರು ಬರುತ್ತಾರೆ. ಕೆಲವರಂತೂ ಕೆಜಿಗಟ್ಟಲೆ ಗೂಡನ್ನು ಅಂಗಿಯ ಒಳಗೆ ತುಂಬಿಕೊಂಡು ಹೋಗುತ್ತಾರೆ.
 
ಮಾರುಕಟ್ಟೆ ಉಪನಿರ್ದೇಶಕರು ಬಿಗಿ ಬಂದೋಬಸ್ತ್ ಅನ್ನು ಮಾಡಬೇಕು. ಸ್ಯಾಂಪಲ್ ಹೆಸರಿನಲ್ಲಿ ನಡೆಯುವ ಕಳ್ಳತನವನ್ನು ತಡೆದು ರೈತರ ಲಕ್ಷಾಂತರ ಹಣ ಉಳಿಸಿಕೊಡಬೇಕು~ ಎನ್ನುವುದು ಇಲ್ಲಿನ ರೈತರ ವಿನಮ್ರ ಕೋರಿಕೆ.

 `ಈಗಲೇ ಸರ್ಕಾರದ ನೀತಿಗಳಿಂದ ರೈತರು ಕಂಗಾಲಾಗಿದ್ದಾರೆ. ಹೀಗಿರುವಾಗ ಮಾರುಕಟ್ಟೆಗೆ ರೈತರು ಕಷ್ಟಪಟ್ಟು ಬೆಳೆದು ತರುವ ಗೂಡು ಕಳ್ಳರ ಪಾಲಾದರೆ ರೈತರನ್ನು ಕಾಪಾಡುವವರ‌್ಯಾರು ? ರೈತರು ಗೂಡು ತಂದ ತಕ್ಷಣ ಅದನ್ನು ತೂಕ ಮಾಡಿ ಬೇಕಿದ್ದರೆ ಗುಣಮಟ್ಟವನ್ನು ಮಾಪನ ಮಾಡಿದ ನಂತರ ರೀಲರ್‌ಗಳು ಕೊಳ್ಳುವಂತೆ ವ್ಯವಸ್ಥೆ ಕೈಗೊಳ್ಳಬೇಕು.

ದೂರದ ಊರುಗಳಿಂದ ಬರುವ ರೈತರ ಶೋಷಣೆ ಹೆಚ್ಚಾಗಿದೆ. ಮಾರುಕಟ್ಟೆಯಲ್ಲಿ ಬಿಗಿಯಿಲ್ಲದಂತಾಗಿದೆ~ ಎಂದು ಕರ್ನಾಟಕ ರಾಜ್ಯ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಬೈರೇಗೌಡ `ಪ್ರಜಾವಾಣಿ~ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT