ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಮೇಕ್ ಸವಾರಿ

Last Updated 17 ಮೇ 2012, 19:30 IST
ಅಕ್ಷರ ಗಾತ್ರ

ಕೆಟ್ಟ ಸಿನಿಮಾವೊಂದು ಗೆದ್ದರೆ ಅದು ಕೆಲವರಿಗೆ `ಬೆಂಚ್‌ಮಾರ್ಕ್~ ಆಗುತ್ತದೆ. ಅಂತಹದ್ದೇ ಕೆಟ್ಟ ಭಾಷಾ ಪ್ರಯೋಗಗಳುಳ್ಳ ಸಿನಿಮಾಗಳು ಬರತೊಡಗುತ್ತವೆ. ನಾವು ಅಂಥಹದ್ದನ್ನು ಸಂಭಾಳಿಸಬೇಕು...

`ಸವಾರಿ~ ಮತ್ತು `ಪೃಥ್ವಿ~ ಎಂಬೆರಡು ಸಂವೇದನಾತ್ಮಕ ಚಿತ್ರಗಳನ್ನು ಕೊಟ್ಟ ನಿರ್ದೇಶಕ ಜೇಕಬ್ ವರ್ಗೀಸ್ ಮತ್ತೆ `ಸವಾರಿ~ ಹೊರಟಿದ್ದಾರೆ. ಇದು ಕೂಡ ಪ್ರೀತಿಯ ಪಯಣದ ಚಿತ್ರ. ಹೀಗಾಗಿ ಗೆಲುವಿನ ಸವಿ ಉಣಿಸಿದ ಸವಾರಿಯನ್ನು ಮತ್ತೆ ನೆನಪಿಸುವ ಸಲುವಾಗಿ ಚಿತ್ರಕ್ಕೆ ಅವರು ಇಟ್ಟಿರುವ ಹೆಸರು `ಸವಾರಿ-2~.

ತೆಲುಗಿನ ಹಿಟ್ ಚಿತ್ರ `ಗಮ್ಯಂ~ ಅನ್ನು `ಸವಾರಿ~ಯಾಗಿ ಕನ್ನಡಕ್ಕೆ ತಂದ ವರ್ಗೀಸ್ ಮೊದಲ ಚಿತ್ರದಲ್ಲೇ ಯಶಸ್ವಿಯಾಗಿದ್ದರು. ಈ ಯಶಸ್ಸಿನ ಅಲೆಗೆ ಮುಖವೊಡ್ಡಿದ ಅವರಿಗೆ ಅದು ಮತ್ತೊಂದು ಪಯಣದ ಕಥೆಗೆ ಪ್ರೇರಣೆ ನೀಡಿದೆ. ರೀಮೇಕ್ ಚಿತ್ರದ ಗೆಲುವಿನ ಖುಷಿಯಲ್ಲಿ ಸ್ವತಃ ಪೆನ್ನು ಕೈಗೆತ್ತಿಕೊಂಡು ಕಥೆಯೊಂದನ್ನು ಹೆಣೆದಿದ್ದಾರೆ.
 
ಗಣಿಗಾರಿಕೆಯಂತಹ ಸಮಕಾಲೀನ ಸಮಸ್ಯೆಯನ್ನು ಬಿಂಬಿಸುವ `ಪೃಥ್ವಿ~ ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆಯೂ ಅವರಲ್ಲಿ ಹೊಸ ಚೈತನ್ಯ ತುಂಬಿದೆ. `ಸಿನಿಮಾ ರಂಜನೆ~ಯೊಂದಿಗೆ ಮಾತಿಗಿಳಿದ ಅವರಲ್ಲಿ `ಸವಾರಿ~ಗಿಂತಲೂ ಈ ಚಿತ್ರ ಜನರಿಗೆ ಹೆಚ್ಚು ಇಷ್ಟವಾಗುತ್ತದೆ ಎಂಬ ಆತ್ಮವಿಶ್ವಾಸವಿತ್ತು.

`ಸವಾರಿ~ಯಲ್ಲಿ ಕೆಲಸ ಮಾಡಿದ ಚಿತ್ರತಂಡವೇ ಜೇಕಬ್‌ರ ಹೊಸ ಚಿತ್ರದಲ್ಲೂ ತೊಡಗಿಕೊಳ್ಳುತ್ತಿರುವುದು ವಿಶೇಷ. ಆದರೆ ಪಾತ್ರವರ್ಗದಲ್ಲಿ ಕೆಲವು ಬದಲಾವಣೆಗಳು ಆಗುತ್ತಿವೆ. `ಸವಾರಿ~ಯಲ್ಲಿ ಕಚಗುಳಿಯಿಟ್ಟಿದ್ದ ಶ್ರೀನಗರ ಕಿಟ್ಟಿ ಇಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಅವರದು ವಿಭಿನ್ನ ಪಾತ್ರ. ಇನ್ನು ನಾಯಕಿಯ ಸ್ಥಾನದಲ್ಲಿ ರಮ್ಯಾ ಸವಾರಿ ನಡೆಸುವುದು ಬಹುತೇಕ ಖಚಿತವಾಗಿದೆ.

ನಾಯಕನ ಪಾತ್ರದಲ್ಲಿ ಹಿಂದೆ ರಘು ಮುಖರ್ಜಿ ನಟಿಸಿದ್ದರು. ಈ ಹೊಸ ಪಯಣಕ್ಕೆ ಅವರೇ ಬರುತ್ತಾರೆಯೇ ಅಥವಾ ಬೇರೊಬ್ಬರೇ ಎಂಬುದಿನ್ನೂ ಖಾತರಿಯಾಗಿಲ್ಲ. ಅಲ್ಲದೆ ಇಲ್ಲಿ ಪಾತ್ರವರ್ಗದ ವ್ಯಾಪ್ತಿಯೂ ವಿಸ್ತಾರವಾಗಿದೆ.

`ಸವಾರಿ~ ಗೆಲುವಿನಲ್ಲಿ ಹಾಡುಗಳ ಪಾತ್ರ ಹಿರಿದು. ಹೀಗಾಗಿ ಈ ಬಾರಿಯೂ ಜನ ಮೆಲುಕು ಹಾಕುವಂತಹ ಹಾಡುಗಳನ್ನು ನೀಡಬೇಕೆಂಬ ಉದ್ದೇಶದಿಂದ ವರ್ಗೀಸ್ ಈಗಾಗಲೇ ಮಣಿಕಾಂತ್ ಕದ್ರಿ ಅವರಿಂದ ಸಂಗೀತ ಹೆಣೆಯುವ ಕಾರ್ಯ ಶುರುಮಾಡಿಸಿದ್ದಾರೆ.

ಹೆಸರು `ಸವಾರಿ-2~ ಆಗಿದ್ದರೂ ಇದು ಮೊದಲ ಚಿತ್ರ `ಸವಾರಿ~ಗಿಂತ ವಿಭಿನ್ನ ಚಿತ್ರ. ಆ ಸವಾರಿಯಂತೆ ಇಲ್ಲೂ ಪ್ರೀತಿಯ ಪಯಣವಿದೆ. ಹಾಸ್ಯ, ಮನರಂಜನೆಗೆ ಕೊರತೆಯಿಲ್ಲ. ಇಂದಿನ ಪೀಳಿಗೆಗೆ ಸಿನಿಮಾದಲ್ಲಿ ಸಂದೇಶಗಳನ್ನು ತೋರಿಸಹೊರಟರೆ ಅವರದನ್ನು ಒಪ್ಪುವುದಿಲ್ಲ. ಹೀಗಾಗಿ ಮನರಂಜನೆ ಮೂಲಕವೇ ಅವರ ಮನಮುಟ್ಟುವ ಸಂದೇಶವನ್ನು ಈ ಚಿತ್ರದ ಮೂಲಕ ನೀಡುತ್ತಿದ್ದೇನೆ ಎನ್ನುತ್ತಾರೆ ವರ್ಗೀಸ್.

`ಸವಾರಿ~ ಗೆಲ್ಲಲು ನನಗಿಂತ ಚಿತ್ರತಂಡದ ಉಳಿದವರ ಶ್ರಮ ಕಾರಣ ಎಂದು ಶ್ರೇಯಸ್ಸನ್ನು ತಮ್ಮ ಜೊತೆಗಾರರಿಗೆ ಅರ್ಪಿಸುವ ವರ್ಗೀಸ್‌ಗೆ ಮತ್ತೆ ಕರೆದಾಗ ಆ ಚಿತ್ರತಂಡದ ಎಲ್ಲರೂ ಕ್ಷಣಕಾಲವೂ ಯೋಚಿಸದೆ ಓಗೊಟ್ಟಿರುವುದು ಖುಷಿ ತಂದಿದೆ. ಒಂದು ಗೆಲುವು ತಂಡವೊಂದನ್ನು ಹೇಗೆ ಕಟ್ಟಿಕೊಡಬಲ್ಲದು ಎಂಬುದಕ್ಕೆ ಇದೊಂದು ನಿದರ್ಶನ ಎನ್ನುತ್ತಾರೆ ಅವರು.

ಈ ಹಿಂದೆ ಜನ ಸಿನಿಮಾ ಚೆನ್ನಾಗಿಲ್ಲದಿದ್ದರೆ ಕೊಟ್ಟ ಕಾಸು ವ್ಯರ್ಥವಾಯಿತು ಎನ್ನುತ್ತಿದ್ದರು. ಆದರೀಗ ದುಡ್ಡಿಗಿಂತ ಸಮಯದ ಬೆಲೆ ಜಾಸ್ತಿ. ಮೂರು ಗಂಟೆ ವ್ಯರ್ಥವಾಯಿತು ಎನ್ನುತ್ತಾರೆ. ಅವರಿಗೆ ಬೇಕಿರುವುದು ಪರಿಪೂರ್ಣ ಮನರಂಜನೆ.

ಹಾಗೆಂದು ದ್ವಂದ್ವಾರ್ಥದ ಸಿನಿಮಾ ಮಾಡುವುದು ತಪ್ಪು. ಕೆಟ್ಟ ಸಿನಿಮಾವೊಂದು ಗೆದ್ದರೆ ಅದು ಕೆಲವರಿಗೆ `ಬೆಂಚ್‌ಮಾರ್ಕ್~ ಆಗುತ್ತದೆ. ಅಂತಹದ್ದೇ ಕೆಟ್ಟ ಭಾಷಾ ಪ್ರಯೋಗಗಳುಳ್ಳ ಸಿನಿಮಾಗಳು ಬರತೊಡಗುತ್ತವೆ. ನಾವು ಅಂಥಹದ್ದನ್ನು ಸಂಭಾಳಿಸಬೇಕು. ಜನರಿಗೆ ಮನರಂಜನೆ ಸಿಗಬೇಕು. ಜೊತೆಗೆ ಒಳ್ಳೆ ಸಂದೇಶವೂ ಇರಬೇಕು. ಎರಡನ್ನೂ ನೀಡುವುದು ನನ್ನ ಉದ್ದೇಶ ಎನ್ನುತ್ತಾರೆ.

`ಪೃಥ್ವಿ~ ಮಾಡುವಾಗ ಪುನೀತ್ ರಾಜ್‌ಕುಮಾರ್ ಇಮೇಜ್ ನನ್ನ ಮನಸ್ಸಲ್ಲಿ ಇರಲಿಲ್ಲ. ಅಲ್ಲಿದ್ದದ್ದು ಚಿತ್ರಕಥೆ ಮಾತ್ರ. ನಟರಲ್ಲಿ ಜನರನ್ನು ಸೆಳೆಯುವ ಪಾಸಿಟಿವ್ ಗುಣಗಳು ಹೇಗಿರುತ್ತವೆಯೂ ಹಾಗೆಯೇ ಕೆಲವು ಸನ್ನಿವೇಶವನ್ನು ನಿರ್ವಹಿಸಲಾಗದ ನೆಗೆಟಿವ್ ಅಂಶಗಳೂ ಇರುತ್ತವೆ. ಅಂಥ ಸನ್ನಿವೇಶಗಳಲ್ಲಿ ಅದನ್ನು ನಿಭಾಯಿಸುವುದು ನಿರ್ದೇಶಕನ ಕರ್ತವ್ಯ.

ಪುನೀತ್ ಇಮೇಜ್‌ಗೆ ಕಥೆ ಅಲ್ಲ ಎನಿಸಿದರೂ ಈ ರೀತಿ ನೆಗೆಟಿವ್ ಅಂಶಗಳಿಲ್ಲದ ಪುನೀತ್ ಅದ್ಭುತವಾಗಿ ನಟಿಸಿದರು. ಆದರೆ ಕನ್ನಡದ ಎಲ್ಲಾ ನಾಯಕರಲ್ಲೂ ಈ ಗುಣವಿಲ್ಲ. ಕೆಲವು ನಟರಿಗೆ ಕಥೆ ಮನವರಿಕೆ ಮಾಡುವುದಕ್ಕೇ ಹರಸಾಹಸ ಪಡಬೇಕಾಗುತ್ತದೆ. ಕನ್ನಡ ಚಿತ್ರರಂಗದ ದೊಡ್ಡ ಸಮಸ್ಯೆಯಿದು ಎಂಬ ಬೇಸರ ಅವರದು.

`ಸವಾರಿ~ಯ ಎರಡನೇ ಭಾಗದ ಆರಂಭಕ್ಕೆ ವರ್ಗೀಸ್ ಸಕಲ ತಯಾರಿ ನಡೆಸಿದ್ದಾರೆ. ಹಾಡುಗಳನ್ನು ಹೊರತುಪಡಿಸಿ ಚಿತ್ರೀಕರಣವನ್ನೆಲ್ಲಾ ಕರ್ನಾಟಕದಲ್ಲೇ ನಡೆಸುವುದು ಅವರ ಉದ್ದೇಶ. ಜೂನ್ ಅಥವಾ ಜುಲೈನಲ್ಲಿ ಚಿತ್ರೀಕರಣಕ್ಕಾಗಿ ಚಿತ್ರತಂಡದ ಸವಾರಿಯೂ ಶುರುವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT