ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾನುಭವಿಗಳ ‘ಹುಡುಕಾಟ’ದ ಚಿತ್ರಗಳು

Last Updated 5 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ನಿಸರ್ಗವನ್ನು ಆಪೋಶನ ತೆಗೆದುಕೊಂಡು ಎದ್ದುನಿಂತ ಅಪಾರ್ಟ್‌ಮೆಂಟ್‌ಗಳ ಕೃತಕತೆ, ಮರದ ತುಂಡಿನ ಮೇಲೆ ವಿವಿಧ ಬಣ್ಣದಲ್ಲಿ ಮೈದಳೆದ ಕಲಾಕೃತಿಗಳ ಸೊಗಡು, ಹಂಚಿಕಡ್ಡಿಯ ದೊಡ್ಡ ಪಿಂಡಿಯೊಂದು ಚೆಲ್ಲಾಪಿಲ್ಲಿಯಾಗಿ ಬಿದ್ದಂತೆ ತೋರುವ ಗೆರೆಗಳಲ್ಲಿ ಮೂಡಿಬಂದಿರುವ ಅಮೂರ್ತ ಕಲಾಕೃತಿಗಳ ಸೊಬಗು, ಬ್ರಿಟಿಷರ ಕಾಲದ ಪೋಸ್ಟ್‌ಕಾರ್ಡ್‌ಗಳನ್ನು ಸಂಗ್ರಹಿಸಿ ಅವುಗಳ ಮೇಲೆ ವೇದಾಂತ ಹೇಳುವ ವಿಭಿನ್ನ ಕಲಾಕೃತಿಗಳು... ಹೀಗೆ ಒಬ್ಬೊಬ್ಬ ಕಲಾವಿದರ ಕಲಾಕೃತಿಗಳು ಬಗೆಬಗೆಯ ಕಥೆಗಳನ್ನು ಹೇಳುತ್ತವೆ. ವೀಕ್ಷಕರನ್ನು ಚಿಂತನೆಗೆ ಹಚ್ಚುತ್ತವೆ.

ಉದಯೋನ್ಮುಖ ಕಲಾವಿದರಾದ ಎನ್‌.ವಿ.ಆರ್‌. ಸುನೀಲ್‌ ವರ್ಮಾ, ವಿಜಯ್‌ ಪಿಚುಮಣಿ, ವೀರೇಶ್‌ ಎಂ.ರುದ್ರಸ್ವಾಮಿ, ಎಸ್‌.ಪೋತರಸನ್‌, ಶ್ರೀನಿವಾಸ ರೆಡ್ಡಿ ಎನ್‌, ಶಿನೋಜ್‌ ಚೊರನ್‌, ಜಿ.ಗುರುನಾಥನ್‌, ಅವಿನಾಶ್‌ ಅವರ ಅಪರೂಪದ ಕಲಾಕೃತಿಗಳ ಪ್ರದರ್ಶನ ವೆಂಕಟಪ್ಪ ಆರ್ಟ್‌ ಗ್ಯಾಲರಿಯಲ್ಲಿ ನಡೆಯುತ್ತಿದೆ. ಪ್ರದರ್ಶನದ ಹೆಸರು ‘ಎ ಸರ್ಚ್‌’.

ಕಲಾವಿದ ವೀರೇಶ್‌ ರುದ್ರಸ್ವಾಮಿ ಅವರ ಕಲಾಕೃತಿಗಳೆಲ್ಲವೂ ಮನುಷ್ಯ ಸಂಬಂಧಗಳನ್ನು ಬಿಂಬಿಸುವಂಥವು. ‘ನನ್ನ ಎಲ್ಲ ಕಲಾಕೃತಿಗಳು ಪ್ರಸ್ತುತ ದಿನದಲ್ಲಿನ ಕಾಂಕ್ರೀಟ್‌ ಕಾಡಿನ ಬದುಕು ಬವಣೆಯನ್ನು ಕಟ್ಟಿಕೊಡುವಂಥವು. ಹಳ್ಳಿಯಲ್ಲಿ ಹುಟ್ಟಿ ಬೆಳೆದ ನಾನು ಪ್ರಕೃತಿಯ ಮಡಿಲಲ್ಲಿ ಆಡಿ ಬೆಳೆದವನು. ಹಳ್ಳಿಯಿಂದ ನಗರಕ್ಕೆ ಬಂದು ನೋಡಿದರೆ ಸಹಜತೆ ಮರೆಯಾಗಿ ಎಲ್ಲೆಲ್ಲೂ ಕೃತಕತೆ ತುಂಬಿಕೊಂಡಿರುವುದನ್ನು ಕಂಡೆ.

ಹಸಿರು ಗಿಡ–ಮರಗಳನ್ನು ಅಪೋಶನ ತೆಗೆದುಕೊಂಡು ಎದ್ದು ನಿಂತ ಬೃಹತ್‌ ಮಹಡಿಯ ಅಪಾರ್ಟ್‌ಮೆಂಟ್‌ಗಳು ನನಗೆ ಕೃತಕವೆಂಬಂತೆ ಕಂಡವು. ಅಪಾರ್ಟ್‌ಮೆಂಟ್‌ಗಳಲ್ಲಿ ಈಗ ಪುಟ್ಟ ಪ್ಲಾಸ್ಟಿಕ್‌ ಕುಂಡಗಳಲ್ಲಿ ಸಣ್ಣಪುಟ್ಟ ಗಿಡಗಳನ್ನು ಅಲಂಕಾರಕ್ಕೆಂದು ಬೆಳೆಸುತ್ತಾರೆ. ಜೀವದಾಯಿ ಮರಗಳನ್ನು ಕೊಂದು ಕೃತಕತೆಯ ಮೋಹದಲ್ಲಿ ಮೆರೆಯುತ್ತಿರುವ ನಗರಿಗರ ಜೀವನ ಬಿಂಬಿಸುವುದೇ ನನ್ನ ಕಲಾಕೃತಿಗಳ ಉದ್ದೇಶ’ ಎನ್ನುತ್ತಾರೆ ವೀರೇಶ್‌. 

ಕಲಾವಿದ ವಿಜಯ್‌ ಪಿಚುಮಣಿ ಅವರ ಕಲಾಕೃತಿಗಳು ಈ ಪ್ರದರ್ಶನದ ಮತ್ತೊಂದು ವಿಶೇಷ. ವುಡ್‌ಕಟ್‌ ಕಲೆಯಲ್ಲಿ ಮೂಡಿಬಂದಿರುವ ‘ಎಕ್ಸೆಂಪ್ಶನ್‌’, ‘ಟುಗೆದರ್‌’, ‘ಟ್ರಾವೆಲ್‌’  ಕಲಾಕೃತಿಗಳ ಸೊಬಗು ನವಿರಾಗಿದೆ. ವುಡ್‌ಕಟ್‌ನಲ್ಲಿ ರೂಪಿಸಿರುವ ಇವರ ‘ಇನ್‌ಸ್ಟಿಂಕ್ಟ್’ ಕಲಾಕೃತಿ ಪಕ್ಷಿಗಳ ಸ್ನೇಹಪರತೆಯನ್ನು ಬಿಂಬಿಸುತ್ತದೆ. ‘ನಾನು ವಾಸವಿದ್ದ ಹಳ್ಳಿಯಲ್ಲಿ ಒಂದು ದೊಡ್ಡ ಆಲದ ಮರವಿತ್ತು.

ಆ ಮರದ ಮೇಲೆ ನೂರಾರು ಕಾಗೆಗಳು ವಾಸವಿದ್ದವು. ಯಾವುದೇ ಒಂದು ಕಾಗೆ ಏನಾದರೂ ಆಹಾರ ಕಂಡರೆ ತನ್ನ ಬಳಗವನ್ನೆಲ್ಲಾ ಕರೆದು ಕೂಗುತ್ತಿತ್ತು. ಕಾಗೆಗಳ ಈ ಸ್ನೇಹ, ಪ್ರೀತಿ ನನಗೆ ತುಂಬ ಮೆಚ್ಚುಗೆ ಆಯ್ತು. ಮುಂದೊಂದು ದಿನ ನಾನು ನಗರಕ್ಕೆ ಬಂದೆ, ನಗರವಾಸಿಗಳ ಆಷಾಢಭೂತಿತನ ಕಂಡು ಮನಸ್ಸು ಹೇಳಿತು: ‘ಮನುಷ್ಯರಿಗಿಂತ ಪ್ರಾಣಿ ಪಕ್ಷಿಗಳೇ ಎಷ್ಟೋ ವಾಸಿ’ ಅಂತ.

ವಿಜಯ್‌ ಅವರ ಈ ಕಲಾಕೃತಿ ಪ್ರಾಣಿ ಪಕ್ಷಿಗಳ ಸಹಜ ಒಲವನ್ನು ಬಿಂಬಿಸುತ್ತದೆ. ಅಂದಹಾಗೆ, ವುಡ್‌ಕಟ್‌ನಲ್ಲಿ ಕಲಾಕೃತಿಗಳನ್ನು ರೂಪಿಸುವ ಕಲಾವಿದರು ವಿರಳ. ಇಂಥದ್ದೊಂದು ಅಪಾರ ಶ್ರಮ ಬೇಡುವ ಕಲಾ ಪ್ರಕಾರದಲ್ಲಿ ತಮ್ಮ ಕಲ್ಪನೆಗೆ ಜೀವ ತುಂಬುತ್ತಿರುವುದು ಇವರ ಅಗ್ಗಳಿಕೆ.

ಉಳಿದಂತೆ ಅವಿನಾಶ್‌ ಅವರದು ಸ್ವಾನುಭವಕ್ಕೆ ದಕ್ಕಿದ ಕಲಾಕೃತಿಗಳು. ಸಿನೋಜ್‌ ಅವರು, ಜನರಲ್ಲಿ ಬದಲಾದ ಆಹಾರ ಸಂಸ್ಕೃತಿಗೆ ಕಲಾಕೃತಿಗಳ ಮೂಲಕ ಕನ್ನಡಿ ಹಿಡಿಯುತ್ತಾರೆ. ಮೊದಲೆಲ್ಲಾ ರಾಗಿಮುದ್ದೆ, ಅನ್ನ, ಚಪಾತಿ ಸವಿಯುತ್ತಿದ್ದ ಜನರೀಗ ಪಿಜ್ಜಾ, ಬರ್ಗರ್‌, ಪಾಸ್ತಾಗೆ ಬದಲಾಗಿದ್ದಾರೆ.  

ಸುನೀಲ್‌ ಕುಮಾರ್‌ ಅವರ ಕಲಾಕೃತಿಗಳು ಭಿನ್ನತೆಯಿಂದಾಗಿ ಗಮನ ಸೆಳೆಯುತ್ತವೆ. ಇವರು ತಮ್ಮ ಚಿತ್ರಕಲಾಕೃತಿಗೆ ಪೋಸ್ಟ್‌ಕಾರ್ಡ್‌ಗಳನ್ನು ಬಳಸಿಕೊಂಡಿರುವುದು ಒಂದು ವಿಶೇಷ. ಸುನೀಲ್ ರಚಿಸಿರುವ ‘ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಎನ್ನುವ ಕಲಾಕೃತಿ ವೇದಾಂತವನ್ನು ಹೇಳುತ್ತದೆ. ಚಿನ್ನದ ಸಿಂಹಾಸನದ ಮೇಲಿರುವ ಚಿನ್ನದ ತಟ್ಟೆಯಲ್ಲಿ ಅನ್ನವಿದೆ.

ಅದರ ನಾಲ್ಕು ಬದಿಯಲ್ಲೂ ಅರಸ, ಭೂಗತಪಾತಕಿ, ಸೈನಿಕ, ಮೆಟ್ರೊ ಕಾಮಗಾರಿಯಲ್ಲಿ ನಿರತನಾಗಿರುವ ವ್ಯಕ್ತಿ ಹೀಗೆ ವಿವಿಧ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ ಜನರನ್ನು ಸೂಚ್ಯವಾಗಿ ನಿಲ್ಲಿಸಲಾಗಿದೆ. ಇವರೆಲ್ಲರೂ ಮಾಡುವ ಕೆಲಸವೂ ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಎಂಬ ಜೀವನ ಸಾರ ತಿಳಿಸಿಕೊಡುತ್ತದೆ. ಇವರ ಎಲ್ಲ ಕಲಾಕೃತಿಗಳಿಗೂ ಸಮಕಾಲೀನತೆಯ ಸ್ಪರ್ಶವಿದೆ. ಅಂದಹಾಗೆ, ಈ ಕಲಾಕೃತಿಗಳು ಸೆ. 9ರವರೆಗೆ ಪ್ರದರ್ಶನ ಮತ್ತು ಮಾರಾಟಕ್ಕೆ ಲಭ್ಯವಿದೆ. ಬೆಳಿಗ್ಗೆ 11ರಿಂದ ಸಂಜೆ 6.
–ಕೆ.ಎಂ.ಸತೀಶ್‌ ಬೆಳ್ಳಕ್ಕಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT