ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಗರಣ: ಬಹಿರಂಗ ಚರ್ಚೆಗೆ ಮೇಯರ್ ಬರಲಿ- ಪ್ರತಿಪಕ್ಷ

Last Updated 23 ಫೆಬ್ರುವರಿ 2011, 20:20 IST
ಅಕ್ಷರ ಗಾತ್ರ

ಬೆಂಗಳೂರು: ‘ಮೇಯರ್ ಅವಧಿ ಇನ್ನೆರಡು ತಿಂಗಳಲ್ಲಿ ಮುಗಿಯಲಿದ್ದು, ಹಲವಾರು ಹಗರಣಗಳನ್ನು ತಡೆಗಟ್ಟಲು ತಮ್ಮ ಅಧಿಕಾರವಧಿಯುದ್ದಕ್ಕೂ ಅವರು ವಿಫಲರಾಗಿದ್ದಾರೆ. ಈ ಕುರಿತು ನಾನು ಬರೆದ ಪತ್ರಗಳಿಗೂ ಉತ್ತರ ನೀಡದ ಮೇಯರ್ ಬಹಿರಂಗ ಚರ್ಚೆಗೆ ಬರಲಿ’ ಎಂದು ಬಿಬಿಎಂಪಿ ವಿರೋಧ ಪಕ್ಷದ ನಾಯಕ ಎಂ.ನಾಗರಾಜ್ ಬುಧವಾರ ಇಲ್ಲಿ ಸವಾಲು ಹಾಕಿದರು.

 ತಾವು ಬರೆದಿದ್ದ ಪತ್ರಗಳನ್ನು ಪತ್ರಕರ್ತರೆದುರು ತೋರಿಸಿ, ‘ನನಗೂ ಪತ್ರ ಬರೆದೂ ಬರೆದೂ ಸಾಕಾಗಿ ಹೋಗಿದೆ. ಜನಸಾಮಾನ್ಯರ ತೆರಿಗೆ ಹಣದಿಂದ ಪಾಲಿಕೆ ನಡೆಯುತ್ತಿದ್ದು, ಜನರೇ ಪತ್ರ ಬರೆದು ಈ ಬಗ್ಗೆ ಪ್ರಶ್ನಿಸಬೇಕು ಎನ್ನುವ ಉದ್ದೇಶದಿಂದ ಮೇಯರ್ ವೈಫಲ್ಯಗಳನ್ನು ಜನತಾ ನ್ಯಾಯಾಲಯದ ಮುಂದಿಡುತ್ತೇನೆ’ ಎಂದು ಪ್ರಕಟಿಸಿದರು.

 ಕೆಲ ಹಗರಣಗಳನ್ನು ಪ್ರಸ್ತಾಪಿಸಿದ ಅವರು, ಮೇಯರ್ ಅವರೇ ನೇಮಕ ಮಾಡಿದ ತಾಂತ್ರಿಕ ವಿಚಕ್ಷಣಾ ಘಟಕ (ಟಿವಿಸಿಸಿ)ವು ನೀಡಿದ ವರದಿಯಂತೆ ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ವಿಫಲವಾಗಿರುವುದೇಕೆ. ವಿವಿಧ ಹಗರಣಗಳಲ್ಲಿ ಸಿಲುಕಿ 75  ಅಧಿಕಾರಿಗಳು ಜೈಲಿಗೆ ಹೋಗಬೇಕಿದ್ದರೂ, ಕೇವಲ 22 ಜನರನ್ನು ಅಮಾನತು ಮಾಡಿರುವುದರ ಹಿಂದಿನ ಉದ್ದೇಶವೇನು ಎಂದು ಪ್ರಶ್ನಿಸಿದರು.

 ಮಂತ್ರಿಮಾಲ್ ಹಗರಣ: ಮಲ್ಲೇಶ್ವರದಲ್ಲಿ ಮಂತ್ರಿ ಮಾಲ್ ನಿರ್ಮಾಣಕ್ಕೆ ಬಿಬಿಎಂಪಿ ವಿಧಿಸಿದ್ದ 21 ಷರತ್ತುಗಳಲ್ಲಿ ಒಂದನ್ನೂ ಪೂರೈಸಿಲ್ಲ. ಅಲ್ಲದೇ ಅನಧಿಕೃತವಾಗಿ ಪಾಲಿಕೆಗೆ ಸೇರಿದ ಜಾಗವನ್ನು ಆಕ್ರಮಿಸಿ ಕಟ್ಟಡ ನಿರ್ಮಿಸಲಾಗಿದೆ. ಈ ಕ್ರಮವನ್ನು ವಿರೋಧಿಸಿ ‘ಬೆಂಗಳೂರು ಉಳಿಸಿ ಸಮಿತಿ’ ನೇತೃತ್ವದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಸಾಹಿತಿ ಡಾ.ಯು.ಆರ್.ಅನಂತಮೂರ್ತಿ ಸೇರಿ ಅನೇಕ ನಾಗರಿಕರು ಪ್ರತಿಭಟನೆ ನಡೆಸಿದ್ದರು. ಇದನ್ನು ಗಮನಿಸಿಯೂ ಕ್ರಮ ಕೈಗೊಳ್ಳದ ಮೇಯರ್ ಹಾಗೂ ಆಯುಕ್ತ ಸಿದ್ದಯ್ಯ ಅವರ ಕ್ರಮ ಖಂಡನೀಯ. ಈ ಹಗರಣದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕೈವಾಡವಿದೆ ಎಂದು ಆರೋಪಿಸಿದರು.

ಕಟ್ಟಾ ಅಮಾನತು ಮಾಡಿಲ್ಲ
 ಕೆರೆ ಅಭಿವೃದ್ಧಿ ಪ್ರಾಧಿಕಾರದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ.ಯು.ವಿ.ಸಿಂಗ್ ಮೇಲೆ ಹಲ್ಲೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಬಿಬಿಎಂಪಿ ಕಾಂಗ್ರೆಸ್ ಸದಸ್ಯ ಎನ್.ಚಂದ್ರ ಅವರನ್ನು ಕಾಂಗ್ರೆಸ್‌ನಿಂದ ಅಮಾನತು ಮಾಡಲಾಗಿದೆ. ಆದರೆ ಲಂಚ ಪ್ರಕರಣದಲ್ಲಿ ಸಿಲುಕಿಕೊಂಡು ಜೈಲಿಗೂ ಹೋಗಿದ್ದ ಬಿಜೆಪಿ ಸದಸ್ಯ ಕಟ್ಟಾ ಜಗದೀಶ್‌ರನ್ನು ಇನ್ನೂ ಅಮಾನತು ಮಾಡಿಲ್ಲ. ಸ್ವತಃ ಮುಖ್ಯಮಂತ್ರಿ ವಿರುದ್ಧವೇ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ. ಅವರೇ ರಾಜೀನಾಮೆ ನೀಡಿಲ್ಲ. ಇನ್ನು ಪಾಲಿಕೆ ಸದಸ್ಯರೆಲ್ಲಿ ರಾಜೀನಾಮೆ ನೀಡುತ್ತಾರೆ ಎಂದು ಅವರು ವ್ಯಂಗ್ಯವಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT