ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಗಲು-ರಾತ್ರಿ ಪರೀಕ್ಷಾರ್ಥ ಸಂಚಾರ

Last Updated 2 ಮಾರ್ಚ್ 2011, 19:30 IST
ಅಕ್ಷರ ಗಾತ್ರ


ಬೆಂಗಳೂರು: ‘ನಮ್ಮ ಮೆಟ್ರೊ’ ರೈಲು ಪರೀಕ್ಷಾರ್ಥ ಸಂಚಾರ ಇದೇ ಮೊದಲ ಬಾರಿಗೆ ಅನಿಲ್ ಕುಂಬ್ಳೆ ವೃತ್ತದವರೆಗೆ ಬುಧವಾರ ಮಧ್ಯಾಹ್ನದಿಂದ ರಾತ್ರಿಯವರೆಗೂ ನಡೆಸಿತು.

ಮೆಟ್ರೊ ರೈಲಿನ ವಾಣಿಜ್ಯ ಸಂಚಾರ ಏಪ್ರಿಲ್ 4ರಿಂದ ಆರಂಭವಾಗಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಘೋಷಿಸಿರುವ ಹಿನ್ನೆಲೆಯಲ್ಲಿ ಪರೀಕ್ಷಾರ್ಥ ರೈಲು ಸಂಚಾರ ಆರಂಭವಾಗಿತ್ತು. ಈ ಮೊದಲು ಬೈಯಪ್ಪನಹಳ್ಳಿಯಿಂದ ಎಂ.ಜಿ.ರಸ್ತೆ ನಿಲ್ದಾಣದವರೆಗೆ ಮಾತ್ರ ರೈಲು ಸಂಚರಿಸುತ್ತಿತ್ತು. ಆದರೆ ಬುಧವಾರ ಅನಿಲ್ ಕುಂಬ್ಳೆ ವೃತ್ತದವರೆಗೂ ರೈಲು ಯಶಸ್ವಿಯಾಗಿ ಸಂಚರಿಸಿತು.

‘ಹಳಿಯ ವಿದ್ಯುದೀಕರಣ ಕಾರ್ಯ ಮತ್ತು ಇತರೆ ಸಿವಿಲ್ ಎಂಜಿನಿಯರಿಂಗ್ ಕೆಲಸಗಳು ಪೂರ್ಣಗೊಂಡಿವೆ. ಹಾಗಾಗಿ ಕುಂಬ್ಳೆ ವೃತ್ತದವರೆಗೂ ಪರೀಕ್ಷಾರ್ಥ ರೈಲು ಸಂಚಾರ ನಡೆಸಲಾಯಿತು’ ಎಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಎನ್.ಶಿವಶೈಲಂ ತಿಳಿಸಿದರು.

‘ ಇನ್ನು ಮುಂದೆ ಬೈಯಪ್ಪನಹಳ್ಳಿಯಿಂದ ಕುಂಬ್ಳೆ ವೃತ್ತದವರೆಗೆ ಪರೀಕ್ಷಾರ್ಥ ರೈಲು ಸಂಚಾರ ನಡೆಸಲಾಗುವುದು’ ಎಂದು ಬಿಎಂಆರ್‌ಸಿಎಲ್ ಮೂಲಗಳು ತಿಳಿಸಿವೆ.

‘ಸುಮಾರು 2,500ರಿಂದ 3,000 ಕಿ.ಮೀ ನಷ್ಟು ಪರೀಕ್ಷಾರ್ಥ ಸಂಚಾರ ಪೂರ್ಣಗೊಳಿಸಿದ ನಂತರ ರೈಲ್ವೆ ಸುರಕ್ಷತಾ ಇಲಾಖೆಯ ಕಮಿಷನರ್ ಅವರು ರೈಲು ಹಳಿಯ ಸುರಕ್ಷತಾ ಪ್ರಮಾಣ ಪತ್ರ ನೀಡಲಿದ್ದಾರೆ’ ಎಂದು ಮೂಲಗಳು ಹೇಳಿವೆ.

ಬೈಯಪ್ಪನಹಳ್ಳಿಯಿಂದ ಎಂ.ಜಿ.ರಸ್ತೆಯ ರೀಚ್-1ರ ಮಾರ್ಗವನ್ನು ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಲು ಇನ್ನು ಕೇವಲ ನಾಲ್ಕು ವಾರಗಳಿರುವ ಹಿನ್ನೆಲೆಯಲ್ಲಿ ಕಾಮಗಾರಿ ಭರದಿಂದ ಸಾಗಿದೆ. ಅಲ್ಲದೇ ಇತರೆ ರೀಚ್‌ಗಳಲ್ಲೂ ಕೆಲಸ ಪ್ರಗತಿಯಲ್ಲಿದೆ.

ಮಾಗಡಿ ರಸ್ತೆಯಿಂದ ಮೈಸೂರು ರಸ್ತೆವರೆಗಿನ ರೀಚ್- 2ರ ಮಾರ್ಗದಲ್ಲಿ ಶೇ 94ರಷ್ಟು ಮೆಟ್ರೊ ಕಾಮಗಾರಿ ಪೂರ್ಣಗೊಂಡಿದ್ದು, 1,004 ಕಂಬಗಳನ್ನು ಅಳವಡಿಸಲಾಗಿದೆ. ಇನ್ನು 100 ಕಂಬಗಳನ್ನು ಮಾತ್ರ ಅಳವಡಿಸಬೇಕಿದೆ.

ಈಗಾಗಲೇ 880 ಸೆಗ್ಮೆಂಟ್‌ಗಳನ್ನು ಹಾಕಲಾಗಿದ್ದು, 2,106 ಸೆಗ್‌ಮೆಂಟ್‌ಗಳನ್ನಷ್ಟೇ ಅಳವಡಿಸಬೇಕಿದೆ.
ಸ್ವಸ್ತಿಕ್ ವೃತ್ತದಿಂದ ಯಶವಂತಪುರವರೆಗಿನ ರೀಚ್-3ರ ಕುವೆಂಪು ರಸ್ತೆ, ರಾಜಾಜಿನಗರ ಮತ್ತು ಮಲ್ಲೇಶ್ವರ ನಿಲ್ದಾಣಗಳ ನಿರ್ಮಾಣ ಕಾಮಗಾರಿಯು ಶೇ 44.5ರಷ್ಟು ಪೂರ್ಣಗೊಂಡಿದ್ದು, 961 ಕಂಬಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ.

ರೀಚ್-3ಎ (ಯಶವಂತಪುರದಿಂದ ಪೀಣ್ಯವರೆಗೆ) 378 ಕಂಬಗಳ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಲಾಗಿದ್ದು, 284 ಸೆಗ್‌ಮೆಂಟ್‌ಗಳನ್ನು ಅಳವಡಿಸಲಾಗಿದೆ.

ಸಿಟಿ ಮಾರುಕಟ್ಟೆಯಿಂದ ಆರ್.ವಿ.ರಸ್ತೆವರೆಗಿನ ಮಾರ್ಗದಲ್ಲಿ 563 ಕಂಬಗಳನ್ನು ಅಳವಡಿಸಲಾಗಿದೆ. ಕೆ.ಆರ್.ರಸ್ತೆ, ಲಾಲ್‌ಬಾಗ್ ಮತ್ತು ಸೌತ್‌ಎಂಡ್ ವೃತ್ತದ ನಿಲ್ದಾಣಗಳ ನಿರ್ಮಾಣ ಕಾಮಗಾರಿ ಶೇ 48ರಷ್ಟು ಮುಗಿದಿದೆ. ಆರ್.ವಿ.ರಸ್ತೆ ಮತ್ತು ಜಯನಗರ ನಿಲ್ದಾಣಗಳ ಕಾಮಗಾರಿಯನ್ನು ಶೇ 57ರಷ್ಟು ಪೂರ್ಣಗೊಳಿಸಲಾಗಿದೆ. ಹಾಗೆಯೇ ಆರ್.ವಿ.ರಸ್ತೆಯಿಂದ ಪುಟ್ಟೇನಹಳ್ಳಿವರೆಗಿನ ರೀಚ್ 4ಎ ನಲ್ಲಿ 237 ಕಂಬಗಳನ್ನು ಅಳವಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT