ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಲವು ಪಕ್ಷ ಸ್ಥಾಪಿಸಿದ್ದ ಆಚಾರ್ಯ ಕೃಪಲಾನಿ

Last Updated 25 ಮಾರ್ಚ್ 2014, 19:30 IST
ಅಕ್ಷರ ಗಾತ್ರ

ತತ್ವ ಸಿದ್ಧಾಂತಕ್ಕೆ ಹೆಸರಾದ ಅನೇಕ ಸಂಸದರಲ್ಲಿ ಜೆ.ಬಿ.­ಕೃಪಲಾನಿ ಪ್ರಮುಖರು. ಅವರು ಈಗ ಪಾಕಿ­ಸ್ತಾನದ ಭಾಗವಾಗಿರುವ ಹೈದರಾ­ಬಾದ್‌ ಪ್ರಾಂತ್ಯದಲ್ಲಿ ಜನಿಸಿದರು. ಅಂದಿನ ಮುಂಬೈ ವಿವಿಯಿಂದ ಪದವೀಧರರಾದ ಅವರು ಸುಚೇತಾ ಕೃಪಲಾನಿ ಅವರನ್ನು ಮದುವೆಯಾದರು. ಸುಚೇತಾ ಕೂಡ ರಾಜಕೀಯ­ದಲ್ಲಿ ಸಕ್ರಿಯ­ರಾಗಿದ್ದರು. 

ಖಾದಿ, ಗ್ರಾಮೋದ್ಯೋಗದಲ್ಲಿ ದುಡಿದ ಅವರು ಅಪ್ಪಟ ಗಾಂಧಿವಾದಿ­ಯಾಗಿ­ದ್ದರು. ವಿವಿಧ ಬಗೆಯ ವೃತ್ತಿಗಳಲ್ಲಿ ತೊಡಗಿದ್ದ ಅವರನ್ನು ದೇಶ ಆಚಾರ್ಯ ಕೃಪಲಾನಿ ಎಂದು ಕರೆಯಿತು. ಈ ಹೆಸರಿಗೆ ತಕ್ಕಂತೆ ಅವರು ಕೋಲ್ಕತ್ತ ವಿವಿಗೆ ಸೇರಿದ ಬಿಹಾರ್ ಭೂಮಿ­ಕಾರ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದರು. ಮುಂದೆ ಬನಾರಸ್ ಹಿಂದು ವಿವಿಯಲ್ಲಿ, ಗುಜರಾತ್ ವಿದ್ಯಾಪೀಠದಲ್ಲಿ ಸೇವೆ ಸಲ್ಲಿಸಿದರು. ಭಾರತ ರಾಷ್ಟ್ರೀಯ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಅವರು ಭಾರತ ಸ್ವತಂತ್ರವಾಗುವ ವೇಳೆಗೆ ಅದರ ಅಧ್ಯಕ್ಷರಾಗಿದ್ದರು.

‘ವಿಜಿಲ್’ ಎಂಬ ರಾಜಕೀಯ ಪತ್ರಿಕೆ ನಡೆಸಿದ ಅವರು  ನೆಹರೂ ಜತೆ ಭಿನ್ನಾಭಿಪ್ರಾಯ ಬಂದು ಕಾಂಗ್ರೆಸ್ ತ್ಯಜಿಸಿ 1951­ರಿಂದ ಕಾಂಗ್ರೆಸ್  ಡೆಮಾಕ್ರಟಿಕ್ ಫ್ರಂಟ್ ಸ್ಥಾಪಿಸಿ­ದರು. ಅನೇಕ ರಾಜಕೀಯ ಪಕ್ಷಗಳ ಸ್ಥಾಪನೆಗೆ ಕಾರಣರಾದ ಅವರು ಕಿಸಾನ್ ಮಜ್ದೂರ್ ಪ್ರಜಾ ಪಾರ್ಟಿ, ಪ್ರಜಾ ಸೋಷಿಯಲಿಸ್ಟ್ ಪಾರ್ಟಿಯಲ್ಲಿ ಮುಖಂಡರಾಗಿ ಸೇವೆ ಸಲ್ಲಿಸಿದರು. ಮಹಾತ್ಮ ಗಾಂಧಿಯವರಿದ್ದಾಗ ಭಾರತದ ಭಾವಿ ಪ್ರಧಾನಿ ಯಾರಾಗ­ಬೇಕೆಂದು ಮತ­ಯಾಚನೆ ನಡೆದಾಗ ಮೊದಲ ಹೆಸರು ಬಂದದ್ದು ಸರ್ದಾರ್ ಪಟೇಲ್ ಅವರದು, ಎರಡನೇ ಹೆಸರು ಕೃಪಲಾನಿಯ­ವರದಿತ್ತು. ಸ್ವಾರಸ್ಯವೆಂದರೆ ನೆಹರೂ ಹೆಸರು ಮೂರನೇ ಸ್ಥಾನದಲ್ಲಿತ್ತು, ಆದರೆ, ಗಾಂಧೀಜಿ ಅವರ ಸೂಚನೆಯಂತೆ ಪಟೇಲ್, ಕೃಪಲಾನಿ ಹಿಂದಕ್ಕೆ ಸರಿದಿದ್ದರು.

3 ಬಾರಿ ಲೋಕಸಭೆಗೆ ಕ್ರಮವಾಗಿ 1952–57,1957–62,1963–67ರಲ್ಲಿ ಸಂಸದ­ರಾಗಿ ಕಾರ್ಯ­ನಿರ್ವಹಿಸಿದರು. ಅವರು ಸದನದಲ್ಲಿ ಇರುವುದು ಸಂಸತ್ತಿನ ಘನತೆ ಹೆಚ್ಚಿಸುತ್ತದೆ ಎಂದು ಡಾ.ರಾಮ ಮನೋಹರ ಲೋಹಿಯಾ ಒಮ್ಮೆ ನುಡಿದಿದ್ದರು. ಶಿಕ್ಷಣ, ಆರ್ಥಿಕತೆ, ರಾಜಕೀಯ ಕುರಿತೂ ಇವರು ಪ್ರಬುದ್ಧ  ಬರಹಗಳನ್ನು ಬರೆದಿದ್ದಾರೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT