ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳೆಯ ನೆನಪು, ಹೊಸ ಹುರುಪು...

Last Updated 8 ಜನವರಿ 2012, 19:30 IST
ಅಕ್ಷರ ಗಾತ್ರ

`ಅಂದು ವಯಸ್ಸಿತ್ತು. ಸಮಯದ ಪರಿವಿಲ್ಲದೇ ಅಲೆದಾಡುವ ಉತ್ಸಾಹವಿತ್ತು. ಮೈ ಗಟ್ಟಿಯಾಗಿತ್ತು. ಈಗ ಅದ್ಯಾವುದೂ ಇಲ್ಲ. ಆದರೆ, ಕ್ರೀಡಾ ಕ್ಷೇತ್ರದ ಬಗ್ಗೆ ಆಸಕ್ತಿ ಒಂದಿಷ್ಟು ಕಡಿಮೆಯಾಗಿಲ್ಲ...~

-ಹೀಗೆ ಉತ್ಸಾಹದ ಧ್ವನಿಯಲ್ಲಿ `ಪ್ರಜಾವಾಣಿ~ಯೊಂದಿಗೆ ಮಾತನಾಡಿದ್ದು, ದೇಹದಾರ್ಢ್ಯ ಪಟು ವಿ. ನಾಗರಾಜ್. ಅವರು ಹಳೆಯ ನೆನಪುಗಳ ಪರಿಧಿಯಲ್ಲಿ ಹೊಸ ಬದುಕಿನ ಉತ್ಸಾಹವನ್ನು ಹುಡುಕುತ್ತಿದ್ದಾರೆನೋ ಎನ್ನಿಸುತ್ತಿತ್ತು ಮುಖಭಾವ. ವಯಸ್ಸು 77. ಆದರೂ, ಮಾತಿನಲ್ಲಿ ಸ್ಪಷ್ಟತೆ. ಅಷ್ಟೇ ನಿರರ್ಗಳ. ಆದರೆ, ಮೇಲೇಳಲು ಆಗದ ಅಸಹಾಯಕತೆ.

ನಾಗರಾಜ್ ಅವರು ಕರ್ನಾಟಕ ರಾಜ್ಯ ವೇಟ್ ಲಿಫ್ಟಿಂಗ್ ಸಂಸ್ಥೆಯ ಕಾರ್ಯದರ್ಶಿಯಾಗಿ, ಉಪಾಧ್ಯಕ್ಷರಾಗಿ ಹೀಗೆ ಹಲವು ಹುದ್ದೆಗಳನ್ನು ನಿಭಾಯಿಸಿದವರು. ಸ್ವತಃ ದೇಹದಾರ್ಢ್ಯ ಪಟುವಾಗಿ ಕ್ರೀಡೆಯ `ಸವಿ~ಯನ್ನು ಅನುಭವಿಸಿದವರು. ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಥಮ ದರ್ಜೆಯ ರೆಫರಿ ಸಹ ಆಗಿದ್ದರು.      ಒಲಿಂಪಿಕ್ಸ್‌ನಲ್ಲೂ ರೆಫರಿಯಾಗಿ ಕಾರ್ಯ ನಿರ್ವಹಿಸಲು ಅರ್ಹತೆ ಪಡೆದಿದ್ದರು.

`ಮಿಸ್ಟರ್ ಮೈಸೂರು~ ಗೌರವ ಪಡೆದಿದ್ದ ನಾಗರಾಜ್ ಅವರ ಮನೆಗೆ ತೆರಳಿದಾಗಿ ನೆನಪಿನ ಬುತ್ತಿಯ ಸ್ಮರಣೀಯ ಕ್ಷಣಗಳನ್ನು ಹಂಚಿಕೊಂಡರು.       ನಿನ್ನೆ-ಮೊನ್ನೆ ನಡೆದ ಘಟನೆಗಳೆನೋ ಎನ್ನುವಂತೆ 40-45 ವರ್ಷಗಳ ಹಿಂದಿನ ನೆನಪುಗಳನ್ನು ಮೆಲಕು ಹಾಕಿದರು.

1981ರಲ್ಲಿ ಬ್ರಿಸ್ಪೇನ್‌ನಲ್ಲಿ ನಡೆದ ಮಿನಿ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ತಂಡದ ಮ್ಯಾನೇಜರ್ ಆಗಿ, ಭಾರತ ವೇಟ್‌ಲಿಫ್ಟಿಂಗ್ ಫೆಡರೇಷನ್‌ನ ಪ್ರಚಾರ ಸಮಿತಿಯ ಅಧ್ಯಕ್ಷರಾಗಿ, ಜಕಾರ್ತದಲ್ಲಿ ನಡೆದ 20ನೇ ವಿಶ್ವ ಜೂನಿಯರ್ ಚಾಂಪಿಯನ್‌ಷಿಪ್ ರೆಫರಿ ಆಗಿ ಕೆಲಸ ನಿರ್ವಹಿಸಿದ್ದಾರೆ.

`ರಾಜ್ಯ ವೇಟ್ ಲಿಫ್ಟಿಂಗ್ ಸಂಸ್ಥೆಯ ಉಪಾಧ್ಯಕ್ಷರಾಗಿದ್ದ ಎಚ್.ವಿ.       ಸತ್ಯನಾರಾಯಣ ಅವರ ಜೊತೆಗೂಡಿ ನಾನು ಕಾರ್ಯದರ್ಶಿಯಾಗಿ ಕೆಲಸ ಮಾಡಿದೆ. ಈ ಅವಧಿಯಲ್ಲಿ ಮಾಡಿದ ಕಾರ್ಯ ಹೆಚ್ಚು ತೃಪ್ತಿ ನೀಡಿದೆ~ ಎಂದು  ನೆನಪಿಸಿಕೊಂಡರು.

ದೇಹದಾರ್ಢ್ಯದ ಬಗ್ಗೆ ಅವರಿಗೆ ಸಾಕಷ್ಟು ಆಸಕ್ತಿ. ಹಾಗೆಯೇ ಎತ್ತರ  ವಿಭಾಗವೆಂದರೇ ತುಂಬಾ ಇಷ್ಟ. ಇದರಲ್ಲಿ ಸಾಕಷ್ಟು ಪ್ರಶಸ್ತಿಗಳು ಸಹ ಬಂದಿವೆ. ಮನೆಯಲ್ಲಿ ಸಂಗ್ರಹಿಸಿಟ್ಟಿರುವ ವೇಟ್ ಲಿಫ್ಟಿಂಗ್‌ಗೆ ಸಂಬಂಧಿಸಿದ ದಾಖಲೆಗಳು, ಛಾಯಾಚಿತ್ರಗಳ ರಾಶಿಗಳಿವೆ. ಇದು ಅವರ ಕ್ರೀಡಾ ಪ್ರೇಮಕ್ಕೆ ಸಾಕ್ಷಿ.

ನಾಗರಾಜ್ ಅವರಿಗೆ ದೇಹದಾರ್ಢ್ಯ ಬಗ್ಗೆ ಆಸಕ್ತಿ ಮೂಡಲು ಅವರ ಸೋದರ ಮಾವ ದಿವಂಗತ ವೆಂಕಟಸುಬ್ಬಯ್ಯನವರ ಬೆಂಬಲ ಕಾರಣ. ಚಿಕ್ಕವರಿರುವಾಗಲೇ ವ್ಯಾಯಾಮ ಮಾಡುವುದನ್ನು ರೂಢಿ ಮಾಡಿಕೊಟ್ಟರು. ಖ್ಯಾತ ದೇಹದಾರ್ಢ್ಯ ಪಟು ಮಾಧವರಾವ್ ನಾಯುಡು ಅವರ ಬೆಂಬಲವೂ ದೊರೆಯಿತು. ಇದರಿಂದಲೇ ಮುಂದೆ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯವಾಯಿತು.

ಜೀವ ವಿಮಾ ನಿಗಮದಲ್ಲಿ ಉದ್ಯೋಗದಲ್ಲಿದ್ದ ನಾಗರಾಜ್ ಅವರಿಗೆ ಕಲೆ, ಸಾಹಿತ್ಯ, ಛಾಯಾಗ್ರಹಣ, ನಾಟಕಗಳನ್ನು ಆಡುವುದು ಹವ್ಯಾಸವಾಗಿತ್ತು.

ಒಂದು ಕಾಲದಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ತಿರುಗಾಡಿದ ಅವರು ಕಳೆದ 11 ವರ್ಷಗಳಿಂದ ಮನೆಯಲ್ಲಿಯೇ ಇದ್ದಾರೆ. ಅವರಿಗೆ ಪಾರ್ಶ್ವವಾಯುವಾಗಿದೆ. ಆದ್ದರಿಂದ ಮೇಲೆಳಲು ಆಗದಷ್ಟು ಅಸಹಾಯಕತೆ ಇದೆ. ಆದರೆ ಜೀವನ ಪ್ರೀತಿಗೆ, ಬದುಕಿನ ಶಿಸ್ತಿಗೆ ಇದು ಸ್ವಲ್ಪವೂ ಅಡ್ಡಿಯಾಗಿಲ್ಲ. ಹಳೆಯ ಮಧುರ ನೆನಪುಗಳೊಂದಿಗೆ ಹೊಸ ಹುರುಪನ್ನು ತುಂಬಿಕೊಂಡು ಬದುಕಿನ ಬಂಡಿ ಸಾಗಿಸುತ್ತಿದ್ದಾರೆ...!

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT