ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹವಳಗೆಂಪು ಉಡುಗೆ ಸುಂದರಿಯರ ನಡಿಗೆ

Last Updated 3 ಡಿಸೆಂಬರ್ 2012, 19:30 IST
ಅಕ್ಷರ ಗಾತ್ರ

ಹವಳಗೆಂಪು ಬಣ್ಣದ ಗೌನ್ ತೊಟ್ಟಿದ್ದ ಆ ರೂಪದರ್ಶಿ ಬಳುಕುವ ಬಳ್ಳಿಯಂತೆ ಇದ್ದಳು. ಕ್ಯಾಟ್‌ವಾಕ್‌ಗೆ ಹಾಗೂ ನೀಳಕಾಲುಗಳನ್ನು ತೋರಿಸಲು ಅನುವಾಗುವಂತೆ ವಿನ್ಯಾಸಗೊಂಡಿದ್ದ ಗೌನ್‌ನ ಮಧ್ಯೆ ಸೀಳಿದ್ದ ಅಂಚಿಗೆ ಬೆಳ್ಳಿಯ ಲೇಪವಿತ್ತು.


ಆಕೆ ತುಂಬಿದ ಆತ್ಮವಿಶ್ವಾಸದಿಂದ ರ‌್ಯಾಂಪ್ ಮೇಲೆ ಒಂದು ಸುತ್ತು ಕ್ಯಾಟ್‌ವಾಕ್ ಮಾಡಿ ಸೊಂಟದ ಮೇಲೆ ಕೈಯಿಟ್ಟು ಎದೆಯುಬ್ಬಿಸಿ ನಿಂತಾಗ ಎಲ್ಲರ ಕಣ್ಣುಗಳಲ್ಲೂ ಮೆಚ್ಚುಗೆಯ ನೋಟ. ಸೊಂಟದ ಮೇಲಿದ್ದ ಕೈಯನ್ನು ಒಮ್ಮಮ್ಮೆ ತೆಗೆದು, ಹಣೆಯ ಮೇಲೆ ಲಾಸ್ಯವಾಡುತ್ತಿದ್ದ ಮುಂಗುರುಳನ್ನು ತೀಡಿಕೊಳ್ಳುತ್ತಾ, ತೀರ್ಪುಗಾರರು ಕೇಳಿದ ಪ್ರಶ್ನೆಗಳಿಗೆ ನಾಜೂಕಾಗಿ ಉತ್ತರಿಸಿ ಮೆಚ್ಚುಗೆ ಪಡೆದಾಗಲಂತೂ ಎಲ್ಲರಿಂದ ಕರಾತಾಡನ.

ಮೊದಲೇ ಊಹಿಸಿದಂತೆ ವಿಶಾಖಪಟ್ಟಣದ ಬೆಡಗಿ ಶೋಭಿತಾ ದುಹಿಪಾಲ `ಪಾಂಡ್ಸ್ ಫೆಮಿನಾ ಮಿಸ್ ಇಂಡಿಯಾ ಬೆಂಗಳೂರು 2013~ ಕಿರೀಟ ಮುಡಿಗೇರಿಸಿಕೊಂಡು ಫೈನಲ್ಸ್‌ಗೆ ಲಗ್ಗೆ ಇಟ್ಟರು.

ಹೈದರಾಬಾದ್‌ನವರೇ ಆದ ಪಂಚಮಿ ರಾವ್ ಮೊದಲ ರನ್ನರ್ ಅಪ್ ಹಾಗೂ ದೆಬೋರಾ ಫೆಲ್ ಎರಡನೇ ರನ್ನರ್ ಅಪ್ ಆಗಿ ಆಯ್ಕೆಗೊಂಡರು. ನಗರದ ಶೆರಟಾನ್ ಹೋಟೆಲ್‌ನಲ್ಲಿ ನಡೆದ ಫೆಮಿನಾ ಮಿಸ್ ಇಂಡಿಯಾ ದಕ್ಷಿಣ ವಲಯದ ಫೈನಲ್ಸ್‌ನಲ್ಲಿ ಆಂಧ್ರ `ಅಮ್ಮಾಯಿ~ಗಳದ್ದೇ ಕಾರುಬಾರು. ಇದು ಈ ಶೋನ ಮತ್ತೊಂದು ವಿಶೇಷ.

ದೇಶದ ಪ್ರತಿಷ್ಠಿತ ಫ್ಯಾಶನ್ ಶೋ ಎಂಬ ಅಗ್ಗಳಿಕೆ ಹೊಂದಿರುವ `ಪಾಂಡ್ಸ್ ಫೆಮಿನಾ ಮಿಸ್ ಇಂಡಿಯಾ~ ದಕ್ಷಿಣ ವಲಯದ ಫೈನಲ್ಸ್‌ನಲ್ಲಿ ನಡೆದದ್ದು ಕೇವಲ ರೂಪದರ್ಶಿಯರ ಚೆಲುವಿನ ಮೆರವಣಿಗೆಯಲ್ಲ. ಬದಲಿಗೆ ಅವರ ಇಡೀ ವ್ಯಕ್ತಿತ್ವವನ್ನು ಅಳೆದೂ ತೂಗಿ, ಅದರಲ್ಲಿ ಯಾರು `ದಿ ಬೆಸ್ಟ್~ ಎಂದು ಆಯ್ಕೆ ಮಾಡುವ ಶೋ.

ಮಿಸ್ ಇಂಡಿಯಾ ತಾನಾಗಬೇಕು ಎಂದು ಎಷ್ಟೋ ದಿನಗಳಿಂದ ಕಟ್ಟಿಕೊಂಡಿದ್ದ ರೂಪದರ್ಶಿಯರ ಕನಸಿಗೆ ರೆಕ್ಕೆ ಕಟ್ಟುವ ವೇದಿಕೆ ಇದಾಗಿತ್ತು. ಹಾಗಾಗಿ ಆಡಿಷನ್‌ನಲ್ಲಿ ಪಾಲ್ಗೊಂಡು ಆಯ್ಕೆಯಾಗಿದ್ದ ಹನ್ನೊಂದು ಮಂದಿಗೂ ಇದು ಅತ್ಯಂತ ಕಠಿಣ ಸ್ಪರ್ಧೆ ಒಡ್ಡಿತ್ತು.

ಇಲ್ಲಿ ಪ್ರತಿ ರೂಪದರ್ಶಿ ತನ್ನನ್ನು ತಾನು ತೆರೆದುಕೊಳ್ಳುವ ಜರೂರು ಇತ್ತು. ರೂಪದರ್ಶಿಗಳು ಕ್ಯಾಟ್‌ವಾಕ್‌ನಲ್ಲಿ ಫ್ಯಾಷನ್ ಪಂಡಿತರನ್ನು ಮೆಚ್ಚಿಸುವುದರ ಜತೆಗೆ ಅವರು ಕೇಳಿದ ಪ್ರಶ್ನೆಗಳಿಗೆ ಚುರುಕಿನ ಉತ್ತರ ನೀಡಿ ತಮ್ಮ ಬುದ್ಧಿಮತ್ತೆ, ಆತ್ಮವಿಶ್ವಾಸ, ದೃಢಸಂಕಲ್ಪವನ್ನು ಪ್ರದರ್ಶಿಸಿದರು.

ವಿಜೇತರನ್ನು ಆಯ್ಕೆ ಮಾಡುವುದಕ್ಕೂ ಮುನ್ನ ರೂಪದರ್ಶಿಗಳು ಎರಡು ಸುತ್ತು ರ‌್ಯಾಂಪ್‌ವಾಕ್ ಮಾಡಿದರು. ಪ್ರತಿ ರ‌್ಯಾಂಪ್‌ವಾಕ್‌ನ ಮಧ್ಯೆ ಫ್ಯಾಷನ್‌ಪ್ರಿಯರನ್ನು ರಂಜಿಸಲು ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಅಂದಹಾಗೆ, ಪಾಂಡ್ಸ್ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಗೆ ಈಗ ಸುವರ್ಣ ಮಹೋತ್ಸವದ ಸಂಭ್ರಮ.

ಈ ಖುಷಿಯಲ್ಲಿ ಸಂಯೋಜನೆ ಮಾಡಿದ್ದ `ಐ ಆ್ಯಮ್ ವಿಮೆನ್, ಐ ಆ್ಯಮ್ ಗರ್ಲ್, ದಿಸ್ ಇಸ್ ಮೈ ಸ್ಟೋರಿ~ ಗೀತೆ ಸೆನ್ಸೆಷನಲ್ ಸಿಂಗರ್ ಶಿವಾನಿ ಕಶ್ಯಪ್ ಅವರ ಮಾದಕ ಕಂಠದಲ್ಲಿ ತೇಲಿಬಂತು. ಜತೆಗೆ ದೇಶದ ಟಾಪ್ ಟೆನ್ ಕಾಮಿಡಿಯನ್ಸ್ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿರುವ ಪ್ರವೀಣ್ ಮತ್ತು ಸಂದೀಪ್ ರಾವ್ ಜೋಡಿ ಹಾಸ್ಯದ ಹೊನಲು ಹರಿಸಿತು.

ಆಡಿಷನ್‌ನಲ್ಲಿ ಭಾಗವಹಿಸಿದ್ದ ನೂರು ಸುಂದರಿಯರಲ್ಲಿ ಫೈನಲ್ಸ್‌ಗೆ ಆಯ್ಕೆಯಾದ ಹನ್ನೊಂದು ಚೆಲುವೆಯರು ಈ ಶೋನಲ್ಲಿ ತಮ್ಮ ಝಲಕ್ ತೋರಿದರು. ಶೋಗೂ ನಾಲ್ಕು ದಿನ ಮುಂಚೆ ನಡೆದ ಸಬ್ ಕಾಂಟೆಸ್ಟ್‌ನಲ್ಲೂ ಭಾಗವಹಿಸಿದ್ದರು. ಇವರಿಗೆ ರ‌್ಯಾಂಪ್ ಟ್ರೇನರ್ ಆಗಿದ್ದವರು ಸುಚೇತಾ ಶರ್ಮಾ.

ಈ ಹನ್ನೊಂದು ರೂಪದರ್ಶಿಗಳು ಮೊದಲಿಗೆ ಮ್ಯಾಕ್ಸ್‌ನ ಆಕರ್ಷಕ ದಿರಿಸುಗಳನ್ನು ತೊಟ್ಟು ರ‌್ಯಾಂಪ್‌ವಾಕ್ ಮಾಡಿದರು. `ರನ್‌ವೇ ಅಟ್ ಮ್ಯಾಕ್ಸ್~ನಲ್ಲಿ ಈ ಸುಂದರಿಯರು ತಿದ್ದಿತೀಡಿದಂಥ ತಮ್ಮ ದೇಹದ ಬಾಗು ಬಳುಕುಗಳನ್ನು ತೋರುವಂತಹ ಗಾಢಬಣ್ಣದ ಶಾರ್ಟ್ಸ್, ಟೀ, ಸ್ಕಿನ್‌ಟೈಟ್ ಜೀನ್ಸ್, ಪೆನ್ಸಿಲ್ ಫಿಟ್ ತೊಟ್ಟು ಹೆಜ್ಜೆ ಹಾಕಿದರು.

ಆನಂತರ ರೂಪದರ್ಶಿಗಳೆಲ್ಲಾ ಜಯಾ ಮಿಶ್ರಾ ಅವರ ಬ್ಲಾಕ್ ಕಾಕ್‌ಟೇಲ್ ಡ್ರೆಸ್ ಹಾಗೂ ಹವಳದ ಬಣ್ಣದ ಗೌನ್‌ಗೆ ತಮ್ಮ ಮೈಯೊಡ್ಡಿದ್ದರು. ಹವಳದ ಹಣ್ಣದ ಗೌನ್‌ಗಳು ಮಿನುಗುವ ದೀಪಗಳ ನಡುವೆ ಕಣ್ಣುಕೋರೈಸುವಂತಿದ್ದವು. ನುಣುಪಾದ ಸ್ಯಾಟಿನ್ ವಸ್ತ್ರದಿಂದ ತಯಾರಾಗಿದ್ದ ಈ ಗೌನ್‌ಗಳ ಅಂಚುಗಳಿಗೆಲ್ಲಾ ಬೆಳ್ಳಿಯ ಲೇಪವಿತ್ತು.


ಲೈಕ್ರಾದಿಂದ ತಯಾರಾದ ಬ್ಲಾಕ್ ಕಾಕ್‌ಟೇಲ್ ವಸ್ತ್ರ ತೊಟ್ಟಿದ್ದ ರೂಪದರ್ಶಿಗಳ ಉಡುಗೆಯನ್ನು ದೇಹದ ಮೇಲೆ ಬಂಧಿಸಿಟ್ಟಿದ್ದು ಕತ್ತಿನ ಬಳಿ ನಾಜೂಕಾಗಿ ಇಟ್ಟಿದ್ದ ಬೆಳ್ಳಿಯ ಪದಕ. ಅಂದಹಾಗೆ, ಈ ಚೆಲುವೆಯರ ಅಂದವನ್ನು ಹೆಚ್ಚಿಸಲು ಸೌಂದರ್ಯ ಪ್ರಸಾಧನಗಳನ್ನು ಒದಗಿಸಿದ್ದು ಪಾಂಡ್ಸ್ ಹಾಗೂ ಕೇಶ ವಿನ್ಯಾಸಕ್ಕೆ ಸ್ಟೈಲಿಷ್ ದಿವಾ ಲುಕ್ ಕೊಟ್ಟಿದ್ದು ಟ್ರೆಸ್ಸೆಮಿ.

ನಟಿ, ರೂಪದರ್ಶಿ ರಾಗಿಣಿ ದ್ವಿವೇದಿ, ಬಾಲಿವುಡ್ ನಟಿ ಸಾರಾ ಜೇನ್ ಡಯಾಸ್, ಫ್ಯಾಷನ್ ಫೋಟೋಗ್ರಾಫರ್ ವಸೀಂ ಖಾನ್ ಹಾಗೂ ಸ್ವಿಟ್ಜರ್ಲೆಂಡ್‌ನ ಕಾನ್ಸಲ್ ಜನರಲ್ ರಾಲ್ಫ್ ಫೆರಿ ಶೋಗೆ ತೀರ್ಪುಗಾರರಾಗಿ ಬಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT