ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಡುಹೊಳೆಯಲಿ `ಚಂದ್ರ'ಬಿಂಬ

Last Updated 24 ಜನವರಿ 2013, 19:59 IST
ಅಕ್ಷರ ಗಾತ್ರ

ಬೆಂಗಳೂರಿನ ಚೌಡಯ್ಯ ಸ್ಮಾರಕ ಭವನದ ಪರಿಸರದಲ್ಲಿ ರೇಷ್ಮೆ ಸೀರೆಗಳ ಹೊಳಪು ತುಂಬಿಕೊಂಡಿತ್ತು. ಹೆಂಗಳೆಯರು ನಗು ಸೂಸುತ್ತಾ ಹೂ ಹಿಡಿದು ಬಾಗಿಲ ಬಳಿ ನಿಂತಿದ್ದರು. ಅದು `ಚಂದ್ರ' ಸಿನಿಮಾದ ಗೀತೆಗಳ ಧ್ವನಿಸುರುಳಿ ಬಿಡುಗಡೆ ಸಮಾರಂಭ. ಪರಿಸರದ ತುಂಬ ಬೆಳದಿಂಗಳನ್ನೇ ಹರಡಿದಂತಹ ಸಂಭ್ರಮ.

ನಾಗೇಂದ್ರ ಪ್ರಸಾದ್ ಲೇಖನಿಯಲ್ಲಿ ಮೂಡಿದ `ಓಂಕಾರದಲಿ ಝೇಂಕಾರ ಇವನು' ಹಾಡಿನ ತುಣುಕು ಶುರುವಾದಾಗ ತುಂಬಿದ ಸಭಾಂಗಣವೇ ತಲೆದೂಗಿದಂತಿತ್ತು. ಹಾಡು ಮುಗಿದರೂ ಅದರ ಗುಂಗು ಅನುರಣಿಸುತ್ತಿತ್ತು. ಆ ಅನುರಣನದ ಬೆನ್ನಿಗೇ ಇಡೀ ವೇದಿಕೆಯನ್ನು ಕತ್ತಲು ಆವರಿಸಿಕೊಂಡಿತು. ಮುಂದೇನು ಎಂದು ಕಣ್ಣುಗಳು ಹುಡುಕುತ್ತಿರುವಾಗಲೇ, ವೇದಿಕೆಯ ಮೇಲೆ ಬೆಕ್ಕಿನ ಹೆಜ್ಜೆ ಇಟ್ಟು ತುಸು ನಡು ಬಳುಕಿಸುತ್ತಾ ಬಂದರು ರೂಪದರ್ಶಿಗಳು. ಹಾಡು ಹಬ್ಬಕ್ಕೆ `ಮಿಸ್ ಕರ್ನಾಟಕ' ಫ್ಯಾಷನ್ ಶೋ ಜೊತೆಯಾಗಿತ್ತು.

ಪುಟಾಣಿ ಮಕ್ಕಳೊಂದಿಗೆ ಬಂದ ರೂಪದರ್ಶಿಗಳು ಕೈಯಲ್ಲಿ ಆರತಿ ತಟ್ಟೆ, ಕಲಶ ಹಿಡಿದು ನಿಂತಿದ್ದರು. ಇವರ ಸರದಿ ಆದ ನಂತರ ಶ್ಯಾಡೋ ನೃತ್ಯ ತಂಡ ವೇದಿಕೆ ಆವರಿಸಿಕೊಂಡಿತು.

ರೂಪಾ ಅಯ್ಯರ್ `ಚಂದ್ರ' ಸಿನಿಮಾದ ನಿರ್ದೇಶಕಿ. `ಇದು ನನ್ನ ಕನಸಿನ ಸಿನಿಮಾ. ವಿಭಿನ್ನತೆ ತರುವ ಉದ್ದೇಶದಿಂದ ನಾನು ಈ ಸಿನಿಮಾ ಮಾಡಿದ್ದು. ಪ್ರೇಮ್ ನಾಯಕನಟರಾಗಿ ನನ್ನ ಮೊದಲ ಆಯ್ಕೆಯಾಗಿದ್ದರು. ನನಗೆ ಸಮಸ್ಯೆಯಾಗಿದ್ದೇ ನಟಿ ಯಾರಾಗಬೇಕೆಂದು. ಕೊನೆಗೆ ಶ್ರೇಯಾ ಶರಣ್ ಸೂಕ್ತ ನಟಿ ಎಂದೆನಿಸಿತು' ಎಂದರು. ಅಂದಹಾಗೆ, ಅವರ ಚಂದ್ರನಿಗೆ ಸ್ಫೂರ್ತಿ `ಕವಿರತ್ನ ಕಾಳಿದಾಸ' ಚಿತ್ರವಂತೆ!

`ರಸ್ತೆ ಬದಿಯಲ್ಲಿ ಸಾಗುವಾಗ ಕೆಲವು ಪೋಸ್ಟರ್ ನೋಡಿದರೆ ಸಿನಿಮಾ ನೋಡಬೇಕು ಎನಿಸುವುದಿಲ್ಲ. ಆದರೆ ಈ ಚಿತ್ರದ ಪೋಸ್ಟರ್‌ಗಳೇ ತುಂಬಾ ಸುಂದರವಾಗಿದೆ. ಜತೆಗೆ ಸಂಗೀತ ಕೂಡ ತುಂಬಾ ಚೆನ್ನಾಗಿದೆ. ಹೆಣ್ಮಕ್ಳೇ ಸ್ಟ್ರಾಂಗೂ ಗುರೂ' ಎಂದು ತನ್ನ ಎಂದಿನ ಶೈಲಿಯಲ್ಲಿ ಮಾತನಾಡಿದರು ಯೋಗರಾಜ್ ಭಟ್.

ಇವರೆಲ್ಲರ ಮಾತು ಮುಗಿದ ನಂತರ ಎಲ್ಲರ ಕಣ್ಣು ನಟ ಪ್ರೇಮ್ ಅವರತ್ತ ಹೊರಳಿತ್ತು. `ಪೌರಾಣಿಕ ಸಿನಿಮಾ ಮಾಡಬೇಕೆನ್ನುವುದು ನನ್ನ ಕನಸಾಗಿತ್ತು. ರೂಪಾ ಅಯ್ಯರ್ ಅವರಿಂದ ನನ್ನ ಕನಸು ಅರ್ಧ ನೆರವೇರಿತು. ರೂಪಾ ನನ್ನಿಂದ ಕತ್ತಿ ವರಸೆ ಮಾಡಿಸಿದರು, ಈ ಸಿನಿಮಾಗೆ ಸಿಕ್ಸ್ ಪ್ಯಾಕ್ ಬೇಕಿತ್ತು ಎಂದು ಅದನ್ನೂ ಮಾಡಿಸಿದರು. ನಟನಾಗಿ ಇವರ ಕೈಯಲ್ಲಿ ಪಳಗಿದ್ದೇನೆ' ಎಂದು ಪ್ರೇಮ್ ಹೇಳಿದರು.

`ಸುಂದರಿ ನಟಿಯನ್ನು ನನಗೆ ನಾಯಕಿಯಾಗಿ ನೀಡಿದ್ದಾರೆ. ನಾನು ಶ್ರೇಯಾ ಶರಣ್ ಅವರ ಅಭಿಮಾನಿಯೂ ಹೌದು. ಶ್ರೇಯಾ ಶರಣ್ ಅವರನ್ನು ನೋಡಲೆಂದೇ ಅವರ ಸಿನಿಮಾಗಳಿಗೆ ಎರಡೆರಡು ಸಲ ಹೋಗುತ್ತಿದ್ದೆ' ಎನ್ನುವಾಗ ಪ್ರೇಮ್ ಮುಖದಲ್ಲಿ ನಗೆ ಬೆಳದಿಂಗಳು.

`ಚಂದ್ರ' ಸಿನಿಮಾಕ್ಕೆ ಸಂಗೀತ ನೀಡಿದವರು ಗೌತಮ್ ಶ್ರೀವತ್ಸ. ರೂಪಾ ಅಯ್ಯರ್ ಆ್ಯಕ್ಷನ್ ಕಟ್ ಜತೆಗೆ ಎರಡು ಹಾಡುಗಳನ್ನೂ ಬರೆದಿದ್ದಾರೆ. ಇನ್ನೆರಡು ಹಾಡಿಗೆ ಜಯಂತ್ ಕಾಯ್ಕಿಣಿ ಅವರ ಸಾಹಿತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT