ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾನಿಕಾರಕ ಔಷಧಗಳಿಂದ ಮುಕ್ತಿ ಎಂದು?

Last Updated 5 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಹಾನಿಕಾರಕ ಎಂದು ನಿಷೇಧಕ್ಕೆ ಒಳಗಾದ ಔಷಧಗಳು ತಿಂಗಳೊಳಗೆ ಸುರಕ್ಷಿತ ಔಷಧಗಳೆಂಬ ಬಿರುದು ಪಡೆದು ಮತ್ತೆ ಮಾರುಕಟ್ಟೆಯಲ್ಲಿ ಜಮಾಯಿಸಿದ್ದಾದರೂ ಹೇಗೆ?

ನಮ್ಮ ರಾಷ್ಟ್ರದ ಔಷಧ ನಿಯಂತ್ರಣಾಧಿಕಾರಿಗಳು ಇತ್ತೀಚೆಗೆ ಪಿಯೋಗ್ಲಿಟಾಸೋನ್ ಮತ್ತು ಅನಾಲ್ಜಿನ್ ಎಂಬ ಎರಡು ಔಷಧಗಳ ತಯಾರಿಕೆ ಮತ್ತು ಮಾರಾಟವನ್ನು ನಿಷೇಧಿಸಿದರು. ಈ ಔಷಧಗಳು ಮನುಷ್ಯನಿಗೆ ಹಾನಿಕಾರಕ ಎಂಬ ಕಾರಣ ನೀಡಿ ಅವುಗಳನ್ನು ನಿಷೇಧಿಸಲಾಗಿತ್ತು. ವಿಚಿತ್ರವೆಂದರೆ ತಿಂಗಳೊಳಗಾಗಿ ಆ ನಿಷೇಧವನ್ನು ಅಧಿಕಾರಿಗಳು ಹಿಂತೆಗೆದುಕೊಂಡರು. ಹಾನಿಕಾರಕವೆಂದು ನಿರ್ಣಯವಾದ ಔಷಧಗಳು ತಿಂಗಳೊಳಗೆ ಸುರಕ್ಷಿತ ಔಷಧಗಳೆಂಬ ಬಿರುದು ಪಡೆದು ಮತ್ತೆ ಮಾರುಕಟ್ಟೆಯಲ್ಲಿ ಜಮಾಯಿಸಿದ್ದಾದರೂ ಹೇಗೆ?

ಅನಾಲ್ಜಿನ್ ಔಷಧವು ಹಾನಿಕಾರಕವೆಂದು ಸಾಬೀತಾಗಿ ದಶಕಗಳೇ ಕಳೆದಿದೆ. ಅನೇಕ ದೇಶಗಳಲ್ಲಿ ಅದು ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ಅದು ಹಾನಿಕಾರಕ, ನಮ್ಮ ದೇಶದಲ್ಲೂ ನಿಷೇಧಿಸಬೇಕು ಎಂದು ಬಹಳ ಹಿಂದಿನಿಂದಲೂ ಒತ್ತಾಯವಿದ್ದರೂ ಔಷಧ ನಿಯಂತ್ರಣಾಧಿಕಾರಿಗಳು ನಿಷೇಧಿಸಿರಲಿಲ್ಲ.

ಮಾನವನ ರಕ್ತದಲ್ಲಿ ರೋಗದೊಂದಿಗೆ ಹೋರಾಡಬಲ್ಲ ಬಿಳಿಯ ರಕ್ತಕಣಗಳೇ ಇಲ್ಲವಾಗುವ ಎಗ್ರಾನ್ಯುಲೋಸೈಟೋಸಿಸ್ ಎಂಬ ಪರಿಸ್ಥಿತಿಯನ್ನು ಉಂಟುಮಾಡಬಲ್ಲ ಅಪಾಯಕಾರಿ ಔಷಧವಿದು. 1970ಕ್ಕಿಂತ ಮೊದಲೇ ಅನಾಲ್ಜಿನ್‌ನ ಹಾನಿಕಾರಕ ಗುಣ ಬಗ್ಗೆ ಪತ್ತೆಯಾಗಿತ್ತು. ನೂರೆಂಟು ನೆವಗಳನ್ನು ಹೇಳಿಕೊಂಡು ಇನ್ನೂ ಪೇಟೆಯಲ್ಲೇ ಉಳಿದುಕೊಂಡಿದ್ದ ಅನಾಲ್ಜಿನ್ ಕಡೆಗೂ ನಿರ್ಗಮಿಸುವಂತಾಯಿತಲ್ಲ ಎಂದು ಸಂತಸಪಡುವಷ್ಟರಲ್ಲಿಯೇ ನಿಷೇಧವನ್ನು ಹಿಂತೆಗೆದುಕೊಂಡ ವರದಿ ಪ್ರಕಟವಾಗಿ ಎಲ್ಲರನ್ನೂ ಚಕಿತಗೊಳಿಸಿದ್ದು ಸುಳ್ಳಲ್ಲ.

ಪಿಯೋಗ್ಲಿಟಾಸೋನ್, ವಯಸ್ಕರ ಮಧುಮೇಹಕ್ಕೆ ಔಷಧವಾಗಿ ಇತ್ತೀಚೆಗೆ ಬಳಕೆಯಾಗುತ್ತಿದೆ. ಜನರ ಕೈಗೆಟಕುವ ಬೆಲೆಯಲ್ಲಿ ಸಿಗುವ ಈ ಔಷಧವನ್ನು, ವೈದ್ಯರ ಲಿಖಿತ ಸಲಹೆ ಇಲ್ಲದೆ ಕೊಳ್ಳಬಾರದು. ಯಾಕೆಂದರೆ ಸುದೀರ್ಘ ಕಾಲದ ಬಳಕೆಯಿಂದ ಅಡ್ಡ ಪರಿಣಾಮಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಹೃದಯಾಘಾತಕ್ಕೆ ಕಾರಣವಾಗಬಹುದು ಅಥವಾ ಮೂತ್ರ ಕೋಶದ ಕ್ಯಾನ್ಸರನ್ನೂ ಉಂಟುಮಾಡಬಹುದು. ಈ ಔಷಧ ತೆಗೆದುಕೊಳ್ಳುತ್ತಿರುವ ರೋಗಿಯ ಮೇಲೆ ವೈದ್ಯರ ನಿಗಾ ಅವಶ್ಯಕತೆ ಇದೆ.

ದುರದೃಷ್ಟವೆಂದರೆ ಔಷಧ ತಯಾರಿಕೆಯ ಕಂಪೆನಿಗಳು ಒಳ್ಳೆಯ ಮತ್ತು ದುಷ್ಪರಿಣಾಮ ಬೀರಬಲ್ಲ ಈ ಔಷಧವನ್ನು ಇನ್ನೂ ಬೇರೆ ಬೇರೆಯ ಮಧುಮೇಹದ ಔಷಧಗಳೊಂದಿಗೆ ಸೇರಿಸಿ ಸಂಯುಕ್ತಗಳನ್ನು ಮಾರಾಟ ಮಾಡುತ್ತಿದ್ದಾರೆ. ಇಂದು ಮಧುಮೇಹಕ್ಕೆ ಸಂಬಂಧಪಟ್ಟ ಔಷಧಗಳ ಮಾರಾಟ 700 ಕೋಟಿ ರೂಪಾಯಿಗಳ ವಹಿವಾಟು. ಅದರಲ್ಲಿ ಪಿಯೋಗ್ಲಿಟಾಸೋನ್ ಪಾಲು ರೂ 100 ಕೋಟಿಯಷ್ಟು. ಉಳಿದವುಗಳಲ್ಲಿ ಸಂಯುಕ್ತ ಔಷಧಗಳದ್ದೇ ಪಾಲು. ತೀರಾ ಅವೈಜ್ಞಾನಿಕ ಸಂಯುಕ್ತಗಳಿವು.

ಅನವಶ್ಯಕವಾದ ಪಿಯೋಗ್ಲಿಟಾಸೋನ್ ಸಂಯುಕ್ತಗಳನ್ನು ನಿಷೇಧಿಸುವ ಬಗ್ಗೆ ಔಷಧ ನಿಯಂತ್ರಣಾಧಿಕಾರಿಗಳು ತೀರ್ಮಾನಿಸಿಲ್ಲವೇಕೆ? ಸ್ವಲ್ಪ ನಿಗಾ ವಹಿಸಿ ತೆಗೆದುಕೊಳ್ಳುತ್ತಿದ್ದರೆ ಕೈಗೆಟಕುವ ಔಷಧವೆಂದರೆ ಪಿಯೋಗ್ಲಿಟೊಸೋನ್ ಮಾತ್ರ. ಇದರ ಮೇಲೆಯೇ ಅವರ ವಕ್ರ ದೃಷ್ಟಿ ಬಿತ್ತು ಹೇಗೆ? ಅವರು ಕೊಡುವ ಕಾರಣಗಳನ್ನಾದರೂ ನೋಡಿ: ಒಬ್ಬ ವೈದ್ಯ, ಔಷಧ ನಿಯಂತ್ರಣಾಧಿಕಾರಿಗೆ ಪಿಯೋಗ್ಲಿಟೊಸೋನ್ ಬಳಸುತ್ತಿದ್ದ ತನ್ನ ಆರು ರೋಗಿಗಳಿಗೆ ಮೂತ್ರಕೋಶದ ಕ್ಯಾನ್ಸರ್  ಬಂತು ಎಂದು ಬರೆದರಂತೆ. ಯಾವುದೇ ಔಷಧದ ನಿಯಂತ್ರಣಕ್ಕೆ ಮುನ್ನ ಪರೀಕ್ಷೆ ಮಾಡಿ ವರದಿ ನೀಡಬೇಕಾಗಿದ್ದ, `ಔಷಧ ತಾಂತ್ರಿಕ ಸಲಹಾ ಮಂಡಳಿ'ಯ ಸಲಹೆ ಇದಲ್ಲ. ಕೇವಲ ಒಬ್ಬ ವೈದ್ಯನ ಅನುಭವ! ಅದನ್ನು ಕೇಳಿ ತೆಗೆದುಕೊಂಡ ನಿರ್ಣಯವಿದು.

ಅತಿಯಾದ ತಂಬಾಕು ಬಳಕೆಯಿಂದಲೂ ಕೂಡ ಮೂತ್ರ ಕೋಶದ ಕ್ಯಾನ್ಸರ್ ಬರುವ ಸಾಧ್ಯತೆ ಇದೆ. ಈ ವೈದ್ಯ ಹೇಳಿದ್ದ ರೋಗಿಗಳಲ್ಲಿ ತಂಬಾಕು ಸೇವನೆಯಿಂದ ಈ ಕಾಯಿಲೆ ಬಂತೇ ಎಂದು ಪರೀಕ್ಷೆ ಮಾಡಿ ಖಚಿತಪಡಿಸಿಕೊಳ್ಳದೆ ನಿರ್ಧಾರಕ್ಕೆ ಬರಲಾಯಿತು. 
ಇಡೀ ದೇಶದ ಔಷಧ ರಂಗವನ್ನು ನಿಯಂತ್ರಿಸುವ ಜವಾಬ್ದಾರಿ ಹೊಂದಿದ ಅಧಿಕಾರಿಯೊಬ್ಬರು ತೆಗೆದುಕೊಂಡ ಈ ನಿರ್ಣಯ ಬಹುಜನರ ಹುಬ್ಬೇರುವಂತೆ ಮಾಡಿತು. ಬಹಳ ಜವಾಬ್ದಾರಿಯುತ ಹುದ್ದೆ ಅದು. ಕೋಟ್ಯಂತರ ಜೀವಗಳ ಮೇಲೆ ಪ್ರಭಾವ ಬೀರಬಲ್ಲ ನಿರ್ಧಾರಗಳಿವು. ಇಡೀ ಜಗತ್ತಿನ ಔಷಧ ಕ್ಷೇತ್ರದ ಮೇಲೆ ಲಕ್ಷ್ಯವಿಟ್ಟು ಏನೇನು ಹೊಸ ಸಂಶೋಧನೆ ನಡೆದಿದೆ, ಯಾವ ಔಷಧ ಯಾವ ದೇಶದಲ್ಲಿ, ಯಾವ ಕಾರಣಕ್ಕಾಗಿ ನಿಷೇಧಗೊಂಡಿತು ಎಂಬ ವಿಚಾರಗಳ ಮೇಲೆ ಸತತವಾಗಿ ಗಮನ ಇಟ್ಟು ನಮ್ಮ ದೇಶದ ಜನರಿಗೆ ಎಂಥ ಔಷಧಗಳು ದೊರಕಬೇಕು ಎಂಬುದರ ಬಗ್ಗೆ ಒಂದು ಗಟ್ಟಿಯಾದ ನಿಲುವು ಇಟ್ಟುಕೊಳ್ಳಬೇಕಾಗಿರುವಂಥ ಅಧಿಕಾರದಲ್ಲಿ ಇರುವವರು ಅವರು. ಒಂದು ಔಷಧವನ್ನು ನಿಷೇಧ ಮಾಡಲಿಕ್ಕೂ ಸರಿಯಾದ ವೈಜ್ಞಾನಿಕವಾದ ಕಾರಣ ಇರಲೇಬೇಕು, ನಿಷೇಧವನ್ನು ಹಿಂತೆಗೆದುಕೊಂಡರೆ ಅದಕ್ಕೂ ಸ್ಪಷ್ಟವಾದ ವೈಜ್ಞಾನಿಕ ಕಾರಣ ಅವರ ಬಳಿ ಇರಲೇಬೇಕು.

2012 ರಲ್ಲಿ ಸಂಸತ್ತಿನ ಔಷಧಕ್ಕೆ ಸಂಬಂಧಪಟ್ಟ ಸ್ಥಾಯಿ ಸಮಿತಿಯ ನಿರ್ಧಾರವನ್ನು ಆರೋಗ್ಯ ಸಚಿವಾಲಯವು ಈ ರೀತಿಯಾಗಿ ಪ್ರಕಟಿಸುತ್ತದೆ:  ಅಮೆರಿಕ, ಜಪಾನ್, ಇಂಗ್ಲೆಂಡ್‌ಗಳಂಥ ದೇಶಗಳಲ್ಲಿ ಯಾವುದೇ ಔಷಧದ ತಯಾರಿಕೆ ಮತ್ತು ಮಾರಾಟ ನಿಷೇಧ ಆದ ತಕ್ಷಣವೇ ಆ ಔಷಧದ ಆಮದು, ಉತ್ಪಾದನೆ ಮತ್ತು ಮಾರಾಟವನ್ನು ಆ ದೇಶಗಳಲ್ಲಿ ಅದು ಸುರಕ್ಷಿತವಾದದ್ದು ಎಂದು ಸಾಬೀತಾಗುವವರೆಗೂ ತಡೆಹಿಡಿಯಲಾಗುತ್ತದೆ.

ಅನಾಲ್ಜಿನ್ ನೂರಾರು ಕೋಟಿ ವ್ಯಾಪಾರದ ಔಷಧವೆಂದು ನಿಷೇಧವನ್ನು ಹಿಂತೆಗೆದುಕೊಳ್ಳಲಾಯಿತೇ?
1960ರಲ್ಲಿ ಅಮೆರಿಕದ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಶನ್ (ಎಫ್.ಡಿ.ಎ.)ನಲ್ಲಿ ಫ್ರಾನ್ಸಿಸ್ ಕೆಸ್ಲೇ ಎಂಬ ಆಡಳಿತಾಧಿಕಾರಿ ಇದ್ದರು. ಥೆಲಿಡೋಮೈಡ್ ಎಂಬ ಔಷಧವನ್ನು ಔಷಧ ತಯಾರಿಕಾ ಕಂಪೆನಿಯು ಗರ್ಭಿಣಿಯರ ಮುಂಜಾವಿನ ವಾಕರಿಕೆ ಲಕ್ಷಣಗಳನ್ನು ನಿವಾರಿಸಲು ಒಳ್ಳೆಯ ಔಷಧವೆಂದು ಮಾರುಕಟ್ಟೆಗೆ ಬಿಡುಗಡೆ ಮಾಡಲು ಹವಣಿಸಿತ್ತು. ಕಂಪೆನಿಯವರು ಅದೆಷ್ಟೇ ಒತ್ತಡ ಹಾಕಿದರೂ ಕೆಸ್ಲೇಯವರು ಇದಕ್ಕೆ ಮಣಿಯಲಿಲ್ಲ. ಔಷಧದ ಅಡ್ಡಪರಿಣಾಮಗಳು ಏನಿವೆ, ಇದರಿಂದ ತೊಂದರೆಗಳು ಏನಾದರೂ ಇವೆಯೇ  ಎಂದು ಕೇಳುತ್ತಲೇ ಹೋದರು.

ಪೂರ್ತಿಯಾಗಿ ಅಡ್ಡ ಪರಿಣಾಮಗಳ ಬಗ್ಗೆ ತಿಳಿದುಕೊಳ್ಳದ ಹೊರತು ತಾನು ಔಷಧಕ್ಕೆ ಪರವಾನಗಿ ಕೊಡುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತರು. ಅಷ್ಟೊತ್ತಿಗಾಗಲೇ ಯುರೋಪಿನಲ್ಲಿ ಗರ್ಭಿಣಿಯರು ಥೆಲಿಡೋಮೈಡ್ ಬಳಸಿದ್ದರಿಂದ ವಿಕೃತ ಮಕ್ಕಳು ಜನಿಸಿದ ವರದಿಗಳು ಪ್ರಕಟವಾಗಲಾರಂಭಿಸಿದವು.

ಕೆಸ್ಲೇಯವರ ಬಿಗಿ ತೀರ್ಮಾನದಿಂದ ಅದು ಅಮೆರಿಕವನ್ನು ಪ್ರವೇಶಿಸಲಿಲ್ಲ. ಅವರ ಗಟ್ಟಿ ನಿರ್ಧಾರದಿಂದಾಗಿ, ಒಂದು ವಿಷಯುಕ್ತ ಔಷಧ ಅಮೆರಿಕದಲ್ಲಿ ಮಾರುಕಟ್ಟೆಗೆ ಬಂದು ನೂರಾರು ವಿಕೃತ ಮಕ್ಕಳು ಜನಿಸುವುದು ತಪ್ಪಿತು. ಅವರ ಈ ತೀರ್ಮಾನ ಗುರುತಿಸಿದ ಅಂದಿನ ಅಮೆರಿಕದ ಅಧ್ಯಕ್ಷ ಕೆನಡಿ  `ಅಧ್ಯಕ್ಷರ ವಿಶೇಷ ಪುರಸ್ಕಾರ' ನೀಡಿ ಗೌರವಿಸಿದರು. ಅಮೆರಿಕದ ಇಂಥ ಉದಾಹರಣೆಗಳೇಕೆ ನಮಗೆ ಆದರ್ಶವಾಗುವುದಿಲ್ಲ? ದೇಶದ ಜನತೆಗಿಂತಲೂ ಔಷಧ ಕಂಪೆನಿಗಳ ತಾಕತ್ತೇ ಮಿಗಿಲಾಗುತ್ತವೆ ಯಾಕೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT