ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನದಲ್ಲಿ ದೇಶದ ಮೊದಲ ಜೈವಿಕ ಇಂಧನ ಬಂಕ್ ಶೀಘ್ರ

Last Updated 5 ಜುಲೈ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು:  `ಹಾಸನ ಜಿಲ್ಲೆಯ ಮಡೆನೂರು ಜೈವಿಕ ಇಂಧನ ಉದ್ಯಾನ ಹಾಗೂ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಆಶ್ರಯದಲ್ಲಿ ಜೈವಿಕ ಇಂಧನದ `ಗ್ರೀನ್ ಫ್ಯೂಯಲ್ ರಿಟೈಲ್ ಔಟ್‌ಲೆಟ್~ ಪೆಟ್ರೋಲ್ ಬಂಕ್ ಜೈವಿಕ ಇಂಧನ ಉದ್ಯಾನದಲ್ಲಿ ಮೂರು ತಿಂಗಳಲ್ಲಿ ಕಾರ್ಯಾರಂಭ ಮಾಡಲಿದೆ.
 
ಈ ಮೂಲಕ ದೇಶದ ಮೊದಲ ಜೈವಿಕ ಇಂಧನದ ಪೆಟ್ರೋಲ್ ಬಂಕ್ ಎಂಬ ಖ್ಯಾತಿಗೆ ಪಾತ್ರವಾಗಲಿದೆ~ ಎಂದು ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಡಾ.ವೈ.ಬಿ.ರಾಮಕೃಷ್ಣ ತಿಳಿಸಿದರು.

ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, `ಪೆಟ್ರೋಲ್ ಬಂಕ್ ನಿರ್ಮಾಣ ಸಂಬಂಧ ಬಿಪಿಸಿಎಲ್ ಜೊತೆಗೆ ಒಡಂಬಡಿಕೆ ಮಾಡಿಕೊಳ್ಳಲಾಗಿತ್ತು. ಕೇಂದ್ರ ಪೆಟ್ರೋಲಿಯಂ ಇಲಾಖೆಯ ತಗಾದೆಯಿಂದಾಗಿ ಬಂಕ್ ಆರಂಭ ಸ್ವಲ್ಪ ಸಮಯ ವಿಳಂಬವಾಯಿತು. ಇದೀಗ ಎಲ್ಲಾ ಸಮಸ್ಯೆಗಳು ನಿವಾರಣೆಯಾಗಿದೆ. ಬಿಪಿಸಿಎಲ್‌ಗೆ ಒಂದು ಎಕರೆ ಜಾಗ ನೀಡಲಾಗಿದ್ದು, ಮೂರು ತಿಂಗಳಲ್ಲಿ ಬಂಕ್ ಕಾರ್ಯಾರಂಭ ಮಾಡಲಿದೆ~ ಎಂದು ವಿಶ್ವಾಸ ವ್ಯಕ್ತಪಡಿಸಿದರು.


`ಜೈವಿಕ ಇಂಧನ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ, ತರಬೇತಿ, ಮೌಲ್ಯವರ್ಧಿತ ಉತ್ಪನ್ನಗಳ ಅಭಿವೃದ್ಧಿಗೆ, ಸಂಶೋಧನೆ ಚಟುವಟಿಕೆಗಾಗಿ 250 ಎಕರೆ ಪ್ರದೇಶದಲ್ಲಿ ಉದ್ಯಾನ ನಿರ್ಮಿಸಲಾಗಿದೆ. ಈ ವರೆಗೆ 2039 ಗ್ರಾಮಗಳಲ್ಲಿ ಮಾಹಿತಿ ಸಂಗ್ರಹಿಸಿ 1,041 ಗ್ರಾಮಗಳಲ್ಲಿ ತರಬೇತಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಜಿಲ್ಲೆಯ 70 ಗ್ರಾಮಗಳನ್ನು ಜೈವಿಕ ಇಂಧನ ಗ್ರಾಮಗಳೆಂದು ಘೋಷಿಸಲಾಗಿದೆ. ಯಾದಗಿರಿ ಜಿಲ್ಲೆಯ ತಿಂತಿಣಿಯಲ್ಲಿ ಹಟ್ಟಿ ಚಿನ್ನದ ಗಣಿ ಕಂಪೆನಿಯ ಒಡೆತನಕ್ಕೆ ಒಳಪಟ್ಟ 41 ಎಕರೆ ಪ್ರದೇಶದಲ್ಲಿ ಜೈವಿಕ ಇಂಧನ ಉದ್ಯಾನ ನಿರ್ಮಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ~ ಎಂದರು.

ಬಯೋ ಡಿಸೇಲ್ ಘಟಕ:  ಪರ್ಯಾಯ ಇಂಧನ ಬಳಕೆಯನ್ನು ಗ್ರಾಹಕರಿಗೆ ತಲುಪಿಸಲು ಮಂಡಳಿಯ ಮಾರ್ಗದರ್ಶನದಲ್ಲಿ ಇಕೋ ಗ್ರೀನ್ ಫ್ಯೂಯಲ್ಸ್ ಸಂಸ್ಥೆಯು ನಗರದ ಪೀಣ್ಯದ ಬಳಿ 3,000 ಲೀಟರ್ ಬಯೋ ಡೀಸೆಲ್ ಉತ್ಪಾದಿಸುವ ಸಾಮರ್ಥ್ಯದ ಘಟಕವನ್ನು ಸ್ಥಾಪಿಸಿದೆ. ಸೌತರ್ನ್ ಬಯೋ ಡೀಸೆಲ್ ಟೆಕ್ನಾಲಜಿಸ್ ಸಂಸ್ಥೆಯು ದೇವನಹಳ್ಳಿ ಸಮೀಪದಲ್ಲಿ ಪ್ರತಿದಿನ 50 ಟನ್ ಬಯೋ ಡೀಸೆಲ್ ಉತ್ಪಾದಿಸುವ ಸಾಮರ್ಥ್ಯವುಳ್ಳ ಘಟಕವೊಂದನ್ನು ಸ್ಥಾಪಿಸುತ್ತಿದೆ.
 
ನಗರದ ಹೋಟೆಲ್‌ಗಳ ಕರಿದ ಎಣ್ಣೆಯ ತ್ಯಾಜ್ಯಗಳನ್ನು ಬಳಸಿ ಬಯೋ ಡೀಸೆಲ್ ಉತ್ಪಾದಿಸಲು ಯೋಜಿಸಲಾಗಿದೆ. ಹಾಗೆಯೇ ಬಯೋ ಡೀಸೆಲ್ ಘಟಕಗಳನ್ನು ಆರಂಭಿಸಲು ಮೂವರು ಉದ್ಯಮಿಗಳು ಆಸಕ್ತಿ ತೋರಿದ್ದಾರೆ~ ಎಂದು ಅವರು ಮಾಹಿತಿ ನೀಡಿದರು.

`ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ನೆಲ ಸಾರಿಗೆ ವಾಹನಗಳಿಗೆ ಬಯೋ ಡಿಸೇಲ್ ಅನ್ನು ಬಳಸುವ ಪ್ರಾಯೋಗಿಕ ಪ್ರಯತ್ನಕ್ಕೆ ಚಾಲನೆ ನೀಡಲಾಗಿದೆ. ಇಲ್ಲಿ 1,400 ಟ್ಯಾಕ್ಸಿಗಳಿಗೆ ಬಯೋ ಡೀಸೆಲ್ ಬಳಸುವ ಬಗ್ಗೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ~ ಎಂದರು.

ಬಸ್‌ಗಳಿಗೆ ಇಥೆನಾಲ್: `ಜೈವಿಕ ಇಂಧನ ಬಳಕೆಯನ್ನು ಪ್ರೋತ್ಸಾಹಿಸಲು ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ತೈಲ ಕಂಪೆನಿಗಳ ಜೊತೆಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಕೆಎಸ್‌ಆರ್‌ಟಿಸಿಯ 2000 ಬಸ್‌ಗಳನ್ನು ಇಥೆನಾಲ್ ಮಿಶ್ರಿತ ಇಂಧನ ಬಳಸಿ ಓಡಿಸಲಾಗುತ್ತಿದ್ದು, ಇದನ್ನು 5000 ಬಸ್‌ಗಳಿಗೆ ಹೆಚ್ಚಿಸಲು ಈ ವರ್ಷದ ಅಂತ್ಯದೊಳಗೆ ಕ್ರಮ ಕೈಗೊಳ್ಳಲಾಗುವುದು~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT