ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದಿನ ಪ್ರಳಯದ ದಿನಗಳು

Last Updated 19 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

1910 ಹ್ಯಾಲಿ ಬಂತು ಜತಗೆ ಪ್ರಳಯವೂ ಬಂತೂ...
ಬಾಹ್ಯಾಕಾಶದಲ್ಲಿ ಘಟಿಸುವ ಉಲ್ಕಾಪಾತ ಆಗಿಂದಾಗ್ಗೆ ಕಾಣಿಸಿಕೊಳ್ಳುವ ಧೂಮಕೇತುಗಳು ಹಾಗೂ ಗ್ರಹಣಗಳ ಬಗ್ಗೆ ಏನೋ ಒಂದು ತರಹದ ವಿಚಿತ್ರ ಭಯ. ಧೂಮಕೇತುಗಳು ಭಾರತದಲ್ಲಿ ಮಾತ್ರವಲ್ಲ ವಿದೇಶಗಳಲ್ಲೂ ಮನುಷ್ಯ ಪ್ರಾಣಿಯನ್ನು ಹೆದರಿಸಿ, ಬೆದರಿಸಿವೆ.

ಮುಖ್ಯವಾಗಿ 1910ರಲ್ಲಿ ಕಾಣಿಸಿಕೊಳ್ಳುವ ಹ್ಯಾಲಿ ಧೂಮಕೇತುವಿನ ಬಾಲದಿಂದ ಬರುವ ವಿಷಾನಿಲದಿಂದಾಗಿ ಭೂಮಿ ಪ್ರಳಯವಾಗುತ್ತದೆ ಎಂದು ಎಲ್ಲೆಡೆ ಪ್ರಚಾರ ಮಾಡಲಾಯಿತು. ಅಮೆರಿಕ, ಇಂಗ್ಲೆಂಡ್ ಸೇರಿದಂತೆ ಜಗತ್ತಿನ ಅನೇಕ ದಿನಪತ್ರಿಕೆಗಳಲ್ಲಿ ಇದೇ ಬಹುದೊಡ್ಡ ಸುದ್ದಿಯಾಗಿತ್ತು. ಜನರೂ ಆತಂಕಗೊಂಡಿದ್ದರು. ಆದರೆ 1910ರಲ್ಲಿ ಆಗಸದಲ್ಲಿ ಹ್ಯಾಲಿ ಏನೋ ಬಂತು. ಆದರೆ ವಿಷಾನಿಲ ಬಾರದೆ ಜನರೆಲ್ಲಾ ಉಳಿದುಕೊಂಡರು.

1961 : ಅಷ್ಟಗ್ರಹ ಕೂಟ ಹಾಗೂ ಪ್ರಳಯ
1961ರಲ್ಲಿ ಜ್ಯೋತಿಷಿಗಳು ನುಡಿದ ಅಷ್ಟಗ್ರಹ ಕೂಟದ ಭವಿಷ್ಯ ಸಂಪ್ರದಾಯವಾದಿಗಳಲ್ಲಿ ಆತಂಕದ ಬೀಜವನ್ನು ಬಿತ್ತಿತ್ತು. ಆದರೆ ಇದರಿಂದ ಒಳ್ಳೆಯ ಫಸಲು ತೆಗೆದದ್ದು ಮಾತ್ರ ಡೋಂಗಿ ಪುರೋಹಿತರು.ಒಟ್ಟು 8 ಗ್ರಹಗಳು ಮಕರ ರಾಶಿಯಲ್ಲಿ ಒಂದೇ ಸಾಲಿನಲ್ಲಿದ್ದಾಗ ಪ್ರಳಯ ಸಂಭವಿಸಲಿದೆ ಎಂದು ಹೇಳಲಾಯಿತು. ಇದಕ್ಕೆ ಸ್ವತಃ ಅಂದಿನ ಪ್ರಧಾನಿ ಪಂಡಿತ ನೆಹರೂ ಅವರು ಇವುಗಳನ್ನು ನಂಬದಿರಿ ಎಂದು ಹೇಳಿದ್ದನ್ನು ನಂಬದ ಅಂದಿನ ಜನತೆ  ಹೋಮ-ಹವನ, ಯಜ್ಞ-ಯಾಗಾದಿಗಳು, ವಿಶೇಷ ಪೂಜೆ ಪುನಸ್ಕಾರಗಳನ್ನು ಕೈಗೊಂಡರು. ಆದರೆ ಇದರಿಂದ ಜೇಬು ತುಂಬಿದ್ದು ಮಾತ್ರ ಜ್ಯೋತಿಷಿಗಳಿಗೆ!

1997: ಹೇಲ್‌ಬಾಪ್ ಜತೆಗೆ ಹಾರುವ ತಟ್ಟೆಯೂ ಬರಲಿದೆ...
ಹೇಲ್‌ಬಾಪ್ ಎಂಬ ಧೂಮಕೇತು 1997ರಲ್ಲಿ ಬರಲಿದೆ ಎಂಬುದು ವಿಜ್ಞಾನಿಗಳ ಖಚಿತ ಭವಿಷ್ಯವಾಗಿತ್ತು. ಆದರೆ ಕೆಲವು ಸಂಪ್ರದಾಯವಾದಿಗಳು ಹಾಗೂ ಬುದ್ಧಿಹೀನರು ಇದರ ಹಿಂದೆಯೇ ಅವಿತಿಟ್ಟುಕೊಂಡು ಹಾರುವ ತಟ್ಟೆಯೂ ಬರಲಿದ್ದು ಪ್ರಳಯ ಉಂಟು ಮಾಡಲಿದೆ ಎಂದು ಭಯ ಹುಟ್ಟಿಸಿದರು. ಇದು ಅಮೆರಿಕದಲ್ಲಿ ಸಾಕಷ್ಟು ಭೀತಿ ಜತೆಗೆ ಸಮೂಹ ಸನ್ನಿಗೂ ಕಾರಣವಾಗಿತ್ತು. 39 ಜನರು ಈ ಧೂಮಕೇತು ಕಾಣಿಸಿಕೊಂಡ ದಿನ ಧೂಮಕೇತು ಜತೆಗೆ ಬರುವ ಹಾರುವತಟ್ಟೆಯೊಂದಿಗೆ ತಮ್ಮ ಆತ್ಮಗಳು ಪರಲೋಕಕ್ಕೆ ಹೋಗಲಿ ಎಂದು ಅಮೆರಿಕದಲ್ಲಿ ಆತ್ಮಹತ್ಯೆ ಮಾಡಿಕೊಂಡರು. ಧೂಮಕೇತು ಏನೋ ತನ್ನ ಪಾಡಿಗೆ ತಾನು ಕಾಣಿಸಿಕೊಂಡು ಮುಂದೆ ಸಾಗಿತು. ಆದರೆ ಹಾರುವ ತಟ್ಟೆ ಬರಲೇ ಇಲ್ಲ. ಭಯಗ್ರಸ್ತ ಜನ ಮಾತ್ರ ಕತ್ತಲ ಕೋಣೆಯಲ್ಲಿ ಕಳೆಯುವಂತಾಯಿತು.


2000ರಲ್ಲಿ ಪ್ರಳಯ
1999ರ ಅಂತ್ಯದ ಜತೆಗೆ ಜಗತ್ತು ಅಂತ್ಯವಾಗುತ್ತದೆ. ಇದಕ್ಕೆ ಎರಡು ಸಾವಿರದಲ್ಲಿನ ಮೂರು ಶೂನ್ಯಗಳು ಕಾರಣ ಎಂಬ ಭಯ ಎಲ್ಲೆಡೆ ಆವರಿಸಿತ್ತು. 2000ದ ಇಸವಿಯಲ್ಲಿ ಧ್ರುವಗಳು ಕರಗಲಿದ್ದು, ಸಮುದ್ರದ ಮಟ್ಟ ಏರಿ ಭೂಮಿ ಎಲ್ಲಾ ಅದರಲ್ಲಿ ಮುಳುಗಲಿದೆ ಎಂದು ಮಾಸಿಕ ಪತ್ರಿಕೆಗಳು ಪುಂಖಾನುಪುಂಖವಾಗಿ ವರದಿಗಳನ್ನು ಪ್ರಕಟಿಸಿ ಜನರಲ್ಲಿ ಭೀತಿ ಮೂಡಿಸಿತ್ತು.ಪತ್ರಿಕೆಗಳೆನೋ ಬಿಸಿ ದೋಸೆಯಂತೆ ಖರ್ಚಾಯಿತು ನಿಜ. ಆದರೆ 2000 ಇಸವಿ ಬಂದಾಗ ಎಲ್ಲಾ ಭವಿಷ್ಯಗಳು ತಲೆಕೆಳಕಾದದ್ದು ಎಲ್ಲರಿಗೂ ಗೊತ್ತಿರುವ ಸಂಗತಿ.

2012 ಮಹಾಪ್ರಳಯ
2012 ಡಿಸೆಂಬರ್ 21 ಅಂದರೆ ನಾಳೆ ಮಹಾ ಪ್ರಳಯ ಸಂಭವಿಸಲಿದೆ ಎಂಬುದಕ್ಕೆ ಪ್ರಮುಖ ಆಧಾರ ಮಾಯನ್ ಕ್ಯಾಲೆಂಡರ್. ಅಮೆರಿಕದ ಪುರಾತನ ನಾಗರಿಕತೆ ಮಾಯನ್ ಜನರು ರೂಪಿಸಿರುವ ಚಕ್ರಾಕಾರದ ಕ್ಯಾಲೆಂಡರ್‌ನಲ್ಲಿ ದಿನ ಕೊನೆಗೊಳ್ಳುವುದು ಡಿಸೆಂಬರ್ 21, 2012ಕ್ಕೆ ಎಂದಷ್ಟೆ ಅವರೇನೂ ಎಲ್ಲೂ ಪ್ರಳಯವಾಗಲಿದೆ ಎಂದು ಬರೆದಿಲ್ಲ. ಡಿಸೆಂಬರ್ 31 ಕೊನೆಗೊಂಡ ನಂತರ ಜನವರಿ 1 ಮತ್ತೆ ಬರುವಂತೆ ಕ್ಯಾಲೆಂಡರ್‌ನ ದಿನಗಳು ಮತ್ತೆ ಪುನರಾವರ್ತನೆ ಆಗಲಿವೆ ಎಂಬ ಸಾಮಾನ್ಯ ತಿಳಿವಳಿಕೆಯೂ ಇಲ್ಲದೆ ಜಗತ್ತು ಪ್ರಳಯವಾಗಲಿದೆ ಎಂದರೆ ತಮ್ಮ ನಾಗರಿಕತೆಯ ಅಂತ್ಯವನ್ನೇ ಮುಂಗಾಣದ ಮಾಯನ್ನರು ಪಾಪ ಏನು ಮಾಡಿಯಾರು ಅಲ್ಲವೇ ?

ಇನ್ನು ಇದೇ ದಿನ ನಿಬಿರು ಗ್ರಹ ಬಡಿಯಲಿದೆ ಎಂಬುದು ಕೆಲವು ಅರೆ-ಬರೆ ವಿಜ್ಞಾನಿಗಳ ಆಂಬೋಣ. ಸ್ವತಃ ನಾಸಾ `ನಿಯರ್' ಹೆಸರಿನ ಯೋಜನೆ ಹಾಕಿಕೊಂಡಿದ್ದು, ಇದರಲ್ಲಿ ವಿಜ್ಞಾನಿಗಳು ಮುಂದಿನ 5 ವರ್ಷಗಳಲ್ಲಿ ಭೂಮಿಯ ಸಮೀಪ ಹಾದುಹೋಗುವ ಆಕಾಶಕಾಯಗಳ ವಿವರಗಳನ್ನು ಕಲೆ ಹಾಕುತ್ತಾರೆ. ಅವರೇ ನಿಬಿರು ಎಂಬುದು ಬರೇ ಕಪೋಲಕಲ್ಪಿತ ಎಂದು ಹೇಳಿರುವುದು ಮಾತ್ರ ಬಹುಜನರಿಗೆ ತಿಳಿದಿಲ್ಲ. ಹಾಗಾಗಿ 2012ರ ಮಹಾ ಪ್ರಳಯ ಎಂಬ ಸಮೂಹಸನ್ನಿಯನ್ನು 2013ರಲ್ಲಿ ನಾವು ಇತಿಹಾಸವಾಗಿ ಖಚಿತವಾಗಿ ಓದಬಹುದು.

1999- ನಾಸ್ಟ್ರಡಾಮಸ್‌ನ ಭವಿಷ್ಯ
1503ರಡಿಸೆಂಬರ್‌ನಲ್ಲಿ ಫ್ರಾನ್ಸ್‌ನಲ್ಲಿ ಹುಟ್ಟಿದ ಈತ ಒಬ್ಬ ಔಷಧ ವ್ಯಾಪಾರಿ ಹಾಗೂ ಕಾಲಜ್ಞಾನಿ. ಮುಖ್ಯವಾಗಿ ಪ್ಲೇಗ್ ರೋಗದ ವಿರುದ್ಧ ಹೋರಾಡಿದವ. ಅದಕ್ಕೆ ಔಷಧಿಯನ್ನು ಕಂಡು ಹಿಡಿಯುವ ಯತ್ನದಲ್ಲೂ ಈತ ಭಾಗಿ. ಅಲ್ಲದೆ ಜಲಕ್ಷಾಮದ ಅವಧಿಯಲ್ಲಿ ಡೂರೆನ್ಸ್ ನದಿಯಿಂದ ನೀರು ಪೂರೈಕೆ ಮಾಡುವ ಯೋಜನೆಗೂ ಸಹಾಯ ಮಾಡಿದ್ದ. ಆದರೆ ಈತ ಮನುಕುಲದ ಕಲ್ಯಾಣಕ್ಕೆ ಮಾಡಿದ ಕೆಲಸಗಳನ್ನು ಬಿಟ್ಟು ಈತ ಹೇಳಿದ ಕಾಲಜ್ಞಾನಕ್ಕೆ ಎಲ್ಲಿಲ್ಲದ ಪ್ರಚಾರ ನೀಡಲಾಯಿತು. ಅದರಂತೆ 09-09-1999ರಂದು ಪ್ರಳಯ ಸಂಭವಿಸಲಿದೆ ಎಂದು ಈತ ಬರೆದಿದ್ದಾನೆಂದು ಹೇಳಲಾದ ಒಂದು ಭಾಷಾಂತರ ಪುಸ್ತಕ ವಿಶ್ವಾದ್ಯಂತ ಬಹಳಷ್ಟು ಹೆದರಿಕೆ ಮೂಡಿಸಿತ್ತು. ಆದರೆ ಆ ದಿನ ಬಂತು, ಆದರೆ ಪ್ರಳಯ ಮಾತ್ರ ಆಗಲಿಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT