ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುತಾತ್ಮ ಸೈನಿಕರ ಮಕ್ಕಳ ದೇಶಾಭಿಮಾನ

Last Updated 24 ಡಿಸೆಂಬರ್ 2013, 19:51 IST
ಅಕ್ಷರ ಗಾತ್ರ

ಬೆಂಗಳೂರು: ಮಕ್ಕಳ ಕಲರವ, ಏನಾದರೂ ಸಾಧಿಸುತ್ತೇವೆ ಎಂಬ ವಿಶ್ವಾಸ, ಒಬ್ಬೊಬ್ಬರಲ್ಲೂ ಒಂದೊಂದು ಕನಸು.. ತಂದೆಯಂತೆ ಸೈನಿಕನಾಗುತ್ತೇನೆ ಎಂದು ಹೆಮ್ಮೆಯಿಂದ ನುಡಿದ ಹಲವು ಚಿಣ್ಣರು... ‘ವಸಂತರತ್ನ ಫೌಂಡೇಷನ್‌ ಫಾರ್ ಆರ್ಟ್‌’ ಗೌರಿಬಿದನೂರು ತಾಲ್ಲೂಕಿನ ಪೆಗಾಸಸ್‌ ಇನ್‌ಸ್ಟಿಟ್ಯೂಟ್‌ ಫಾರ್‌ ಎಕ್ಸಲೆನ್ಸ್‌ (ಮಿಲಿಟರಿ ಕ್ಯಾಂಪ್‌)ನಲ್ಲಿ ಹುತಾತ್ಮ ಸೈನಿಕರ ಮಕ್ಕಳು ಮತ್ತು ಪತ್ನಿಯರಿಗಾಗಿ ಆಯೋಜಿಸಿದ್ದ ‘ಔಟ್‌­ಬೌಂಡ್‌ ಲರ್ನಿಂಗ್‌ ಕ್ಯಾಂಪ್ ‘ರಿಫ್ಲೆಕ್ಷನ್ಸ್‌­–2013’ರ ಸಮಾರೋಪ­ದಲ್ಲಿ ಚಿಣ್ಣರಾಡಿದ ಮಾತುಗಳಿವು.

‘ಶಿಬಿರದಲ್ಲಿ ದೇಶ, ಭಾಷೆಯ ಬಗ್ಗೆ ಅಭಿಮಾನ ಮೂಡಿಸುವಂತಹ ವಿಷಯ­ಗಳನ್ನು ಕಲಿತೆ. ನಮ್ಮ ದೇಶದ ಇತಿಹಾಸ ಎಷ್ಟು ಮಹತ್ವವಾದುದ್ದು ಎಂಬುದನ್ನು ಇಲ್ಲಿ ನಾನು ತಿಳಿದೆ. ದೇಶಕ್ಕಾಗಿ ಏನಾದರೂ ಮಾಡುತ್ತೇನೆ’ ಎಂದು ನುಡಿದದ್ದು ಪಿಯುಸಿ ಮೊದಲ ವರ್ಷದ ವಿದ್ಯಾರ್ಥಿ ಕೆ.ಬಿ.ಭುವನ್‌. ಶಿಬಿರದಲ್ಲಿ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದ ನಿವೃತ್ತ ನ್ಯಾಯಮೂರ್ತಿ ರಾಮಾ ಜೋಯಿಸ್‌, ‘ನಮ್ಮ ದೇಶದ ಶಿಕ್ಷಣ ವ್ಯವಸ್ಥೆಯನ್ನು ಬದಲಾಯಿಸ­ಬೇಕು. ಈಗ ಬರೀ ಇಂಗ್ಲಿಷ್‌ ಶಿಕ್ಷಣ­ವಾಗಿದೆ. ಮಕ್ಕಳಲ್ಲಿ ಮಾನವೀಯತೆ­ಯನ್ನು ಬೆಳೆಸುವ, ಒಳ್ಳೆಯ ಗುಣವನ್ನು ಅಳವಡಿಸಿಕೊಳ್ಳುವ ಶಿಕ್ಷಣವನ್ನು ಜಾರಿಗೆ ತರಬೇಕಾದ ಅಗತ್ಯವಿದೆ’ ಎಂದರು.

‘ಸ್ವಾತಂತ್ರ್ಯ ಚಳವಳಿಯಲ್ಲಿ  ಭಗತ್‌ಸಿಂಗ್‌, ರಾಜಗುರು, ಸುಖದೇವ್‌ ಅವರು ದೇಶಕ್ಕಾಗಿ ತಮ್ಮ ಜೀವ, ಜೀವನ­ವನ್ನೇ ತ್ಯಾಗ ಮಾಡಿದವರು. ಆದರೆ, ಇಂದಿನ ಯುವಜನತೆಯಲ್ಲಿ ಅದೆಲ್ಲಾ ಎಲ್ಲೋ ಕಳೆದುಹೋಗಿದೆ’ ಎಂದರು. ಪ್ಯಾರಾಲಿಂಪಿಕ್ಸ್‌ ಅಥ್ಲೀಟ್‌ ಮಾಲತಿ ಕೆ.ಹೊಳ್ಳ ಅವರು, ‘ಸೈನಿಕರ ತ್ಯಾಗ, ಬಲಿದಾನ ಎಂದಿಗೂ ಅವಿಸ್ಮರಣೀಯ. ಅವರು ದೈಹಿಕವಾಗಿ ನಮ್ಮಿಂದ ದೂರ­ವಿರಬಹುದು. ಆದರೆ, ಮಾನಸಿಕವಾಗಿ ನಮ್ಮ ಜತೆಯೇ ಇದ್ದಾರೆ. ಪತಿ ಹುತಾತ್ಮ­ರಾದರೆಂದು ಪತ್ನಿ ಹತಾಶಳಾಗ­ಬಾರದು’ ಎಂದು ಹೇಳಿದರು.

‘ತಂದೆಯ ಸ್ಥಾನವನ್ನು ತಾಯಿಯೇ ತುಂಬಿ, ಮಕ್ಕಳಿಗೆ ಒಳ್ಳೆಯ ಭವಿಷ್ಯವನ್ನು ಕಲ್ಪಿಸಬೇಕು. ಆಗ, ಹುತಾತ್ಮರಾದ ಸೈನಿಕರಿಗೆ ಗೌರವ ಸಲ್ಲಿಸಿದಂತಾಗುತ್ತದೆ’ ಎಂದು ಭಾವ ತುಂಬಿ ನುಡಿದರು. ‘ಆತ್ಮವಿಶ್ವಾಸ, ನಂಬಿಕೆಯೇ ಸಾಧ­ನೆಗೆ ಮುನ್ನುಡಿಯಾಗುತ್ತದೆ. ನಾವು ಎಂದಿಗೂ ಧನಾತ್ಮಕವಾಗಿ ಯೋಚಿಸ­ಬೇಕು. ನಾನು ದೈಹಿಕ ನೋವು ಪಟ್ಟಷ್ಟು ಮಾನಸಿಕವಾಗಿ ಬಲವಾಗಿದ್ದೇನೆ. ನೋವು ನಮ್ಮನ್ನು ಬಲಿಷ್ಠರನ್ನಾಗಿ ಮಾಡುತ್ತದೆ.  ಪ್ರತಿ  ಕ್ಷಣದ ಜೀವನ­ವನ್ನು ಅನುಭವಿಸಬೇಕು’ ಎಂದರು.

‘ಶಿಬಿರದಲ್ಲಿ ಭಾಗವಹಿಸಿ ತುಂಬಾ ಸಂತಸವೆನಿಸಿತು. ನಮ್ಮ ಎಲ್ಲಾ ಕಷ್ಟಗಳನ್ನು ಮರೆತು ಇಲ್ಲಿಗೆ ಬಂದಿದ್ದು ಒಂದು ಹೊಸ ಅನುಭವವನ್ನು ನೀಡಿದೆ. ಕಷ್ಟಗಳನ್ನು ಎದುರಿಸಿ ನಿಲ್ಲಬೇಕು ಎಂಬ ವಿಶ್ವಾಸ ಮೂಡಿದೆ’ ಎಂದು ಬೆಳಗಾವಿ­ಯಿಂದ ಬಂದಿದ್ದ ಗೃಹಿಣಿ ಪಾರ್ವತಿ ಅಶೋಕ್‌ ಕರೋಷಿ ಹೇಳಿದರು.

 ವಸಂತರತ್ನ ಫೌಂಡೇಷನ್‌ ಫಾರ್ ಆರ್ಟ್‌ನ ಸಂಸ್ಥಾಪಕಿ ಸುಭಾಷಿಣಿ ವಸಂತ, ‘ಹುತಾತ್ಮರಾದ ಸೈನಿಕರ ಮಕ್ಕಳು, ಪತ್ನಿಯರಿಗಾಗಿ ನಮ್ಮ ಸಂಸ್ಥೆ ಕೆಲಸ ಮಾಡುತ್ತಿದೆ. ಅದರ ಅಂಗವಾಗಿ ಹುತಾತ್ಮರಾದ ಸೈನಿಕರ ಪತ್ನಿಯರಿಗೆ ಆತ್ಮವಿಶ್ವಾಸ ಬೆಳೆಸಿ, ಅವರಿಗೆ ಸ್ವ ಉದ್ಯೋಗಕ್ಕೆ ಪ್ರೇರಣೆ ನೀಡಲು ಈ ಶಿಬಿರ ಆಯೋಜಿಸಲಾಗಿದೆ’ ಎಂದರು. ‘ಶಿಬಿರದಲ್ಲಿ 8 ರಿಂದ 18 ವರ್ಷದ ಒಟ್ಟು 48 ಮಕ್ಕಳು, 26 ಮಹಿಳೆಯರು ಭಾಗವಹಿಸಿದ್ದಾರೆ’ ಎಂದು ತಿಳಿಸಿದರು.

‘ಅಪ್ಪನಂತೆ ನಾನು ಸೈನಿಕನಾಗುತ್ತೇನೆ’
ಶಿಬಿರದಲ್ಲಿ ನಾಲ್ಕು ದಿನ ಕಳೆದದ್ದೇ ತಿಳಿಯಲಿಲ್ಲ. ಇಲ್ಲಿ ಪಾಠದ ಜತೆಗೆ ಆಟವೂ ಇತ್ತು. ಇಲ್ಲಿ ನನಗೆ ಎಲ್ಲರೂ ಸ್ನೇಹಿತರಾದರು. ಮುಂದೆ ಅಪ್ಪನಂತೆ ನಾನು ಸೈನಿಕನಾಗಿ ದೇಶದ ಗಡಿ ಕಾಯುತ್ತೇನೆ.
– ಹರೀಶ್‌,  5 ನೇ ತರಗತಿ ವಿದ್ಯಾರ್ಥಿ.

‘ಕಷ್ಟವನ್ನು ಆತ್ಮವಿಶ್ವಾಸದಿಂದ ಎದುರಿಸಬೇಕು’
ಜೀವನದಲ್ಲಿ ಆತ್ಮವಿಶ್ವಾಸ ಮೂಡಿತು. ನಮ್ಮ ಮುಂದೆ ನಮ್ಮ ಮಕ್ಕಳಿದ್ದಾರೆ. ಅವರ ಭವಿಷ್ಯವನ್ನು ನಿರ್ಮಿಸಬೇಕು. ಮಗನ ತಂದೆಯ ತ್ಯಾಗ, ಬಲಿದಾನ ಎಂದಿಗೂ ನಿರರ್ಥಕವಾಗಬಾರದು. ಜೀವನದಲ್ಲಿನ ಕಷ್ಟವನ್ನು ಆತ್ಮವಿಶ್ವಾಸದಿಂದ ಎದುರಿಸಬೇಕು.
   –ಗೃಹಿಣಿ ಲಕ್ಷ್ಮಿಬಾಯಿ, ಇಳಕಲ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT