ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುತ್ತವ ಬಡಿದರೆ...

Last Updated 10 ಜನವರಿ 2012, 19:30 IST
ಅಕ್ಷರ ಗಾತ್ರ

`ವರ್ಗಾವಣೆಗೆ ರಾಜಕೀಯ ಒತ್ತಡ ತರುವ ಪೊಲೀಸ್ ಅಧಿಕಾರಿಗಳ ವರ್ತನೆಯನ್ನು ಸಹಿಸುವುದಿಲ್ಲ~ ಎಂಬ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡರ ಎಚ್ಚರಿಕೆ ಸರ್ಕಾರದ ಆಡಳಿತದ ಚುಕ್ಕಾಣಿ ಹಿಡಿದಿರುವ ನಾಯಕನಿಗೆ ಸೂಕ್ತವಾದದ್ದೇ. ಆದರೆ, ಪೊಲೀಸ್ ಅಧಿಕಾರಿಗಳ ವರ್ಗಾವಣೆ ಹೇಗೆ ನಡೆಯುತ್ತಿದೆ ಎಂಬ ವಸ್ತುಸ್ಥಿತಿಯ ಅರಿವು ಇದ್ದವರಿಗೆ ಮುಖ್ಯಮಂತ್ರಿಗಳ ಈ ಎಚ್ಚರಿಕೆ ಎಷ್ಟು ನಗೆಪಾಟಲಿನದು ಎಂದು ಗೊತ್ತಾಗುತ್ತದೆ.

ವರ್ಗಾವಣೆಗೆ ಸರ್ಕಾರ ರೂಪಿಸಿದ ನಿಯಮಗಳು ಹೆಚ್ಚಿನ ಪ್ರಮಾಣದಲ್ಲಿ ಉಲ್ಲಂಘನೆ ಆಗುತ್ತಿರುವುದೇ ಪೊಲೀಸ್ ಅಧಿಕಾರಿಗಳ ವಿಷಯದಲ್ಲಿ ಎಂಬುದು, ಐದು ತಿಂಗಳಿನಿಂದ ವಿಧಾನಸೌಧದಲ್ಲಿನ ಆಡಳಿತ ವಿದ್ಯಮಾನಗಳನ್ನು ಹತ್ತಿರದಿಂದ ನೋಡುತ್ತಿರುವ ಸದಾನಂದಗೌಡರಿಗೆ ಇಷ್ಟರಲ್ಲಿಯೇ ಗೊತ್ತಾಗಿರಬೇಕು. 

ಪೊಲೀಸ್ ಅಧಿಕಾರಿಗಳು ಮಾತ್ರವಲ್ಲ, ರಾಜ್ಯದಲ್ಲಿ ಎಲ್ಲ ಇಲಾಖೆಗಳ ಅಧಿಕಾರಿಗಳ ವರ್ಗಾವಣೆಯೂ ರಾಜಕೀಯ ಪ್ರಭಾವದಿಂದ ಮುಕ್ತವಾಗಿಲ್ಲ. ಹಣ ಮತ್ತು ಪ್ರಭಾವ ಇದ್ದವರಿಗೆ ಆಯಕಟ್ಟಿನ ಸ್ಥಾನಗಳಿಗೆ ವರ್ಗವಾಗುತ್ತಿರುವುದು ಹೊಸದೇನೂ ಅಲ್ಲ.

ಅಧಿಕಾರಿಗಳ ವರ್ಗಾವಣೆ ಜನಪ್ರತಿನಿಧಿಗಳ ಅಕ್ರಮ ಆದಾಯ ಮೂಲಗಳಲ್ಲಿ ಒಂದು ಎಂಬುದು ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ಅಸ್ತಿತ್ವದಲ್ಲಿರುವ `ಆಡಳಿತ ನೀತಿ ಸಂಹಿತೆ~. ಕೆಳಹಂತದ ಸಿಬ್ಬಂದಿಯ ಕೋರಿಕೆ ವರ್ಗಾವಣೆಗೆ ಆಯಾ ಪ್ರದೇಶದ ಜನಪ್ರತಿನಿಧಿಯ `ಮಿನಿಟ್~ ಅಗತ್ಯವೆಂಬ ಅಲಿಖಿತ ನಿಯಮ ಜಾರಿಯಲ್ಲಿರುವುದೇ ಇದಕ್ಕೆ ನಿದರ್ಶನ.

ಸರ್ಕಾರಿ ಸಿಬ್ಬಂದಿಯ ವರ್ಗಾವಣೆ `ಒಂದು ದಂಧೆ~ ಎನ್ನುವಷ್ಟರ ಮಟ್ಟಿಗೆ ಕುಖ್ಯಾತಿ ಪಡೆಯುವುದಕ್ಕೆ ಆಡಳಿತದಲ್ಲಿ ಅನಗತ್ಯವಾಗಿ ಮೂಗು ತೂರಿಸುವ ರಾಜಕೀಯ ಪ್ರಭಾವವೇ ಕಾರಣ ಎನ್ನುವುದನ್ನು ಸದಾನಂದಗೌಡರು ಅರ್ಥ ಮಾಡಿಕೊಳ್ಳಬೇಕು.

ಪೊಲೀಸ್ ಅಧಿಕಾರಿಗಳಿಗೂ ಸೇರಿದಂತೆ ಸರ್ಕಾರದ ಎಲ್ಲ ಅಧಿಕಾರಿ- ನೌಕರರಿಗೆ ಸಂಬಂಧಿಸಿದ ಸೇವಾ ನಿಯಮಗಳಲ್ಲಿ ವರ್ಗಾವಣೆಗೆ ನಿರ್ದಿಷ್ಟ ಮಾನದಂಡಗಳಿವೆ.  ಆದರೂ ವರ್ಷದ ಎಲ್ಲ ಕಾಲದಲ್ಲಿಯೂ ಮುಖ್ಯಮಂತ್ರಿ ಅವರ ಕಚೇರಿಯ ನಿರ್ದೇಶನದಂತೆ ವರ್ಗಾವಣೆಗಳು ನಡೆಯುತ್ತಿರುತ್ತವೆ. ಇದರಲ್ಲಿ ಆಡಳಿತದ ಅವಶ್ಯಕತೆಗಿಂತ ರಾಜಕಾರಣಿಗಳ ಹಿತ ರಕ್ಷಣೆಯ ದೃಷ್ಟಿಯೇ ಪ್ರಧಾನವಾಗಿರುತ್ತದೆ.
 
ಬೆಂಗಳೂರು ನಗರದ ಠಾಣೆಗಳಲ್ಲಿಯೇ ತಮ್ಮ ಸೇವಾವಧಿಯನ್ನು ಪೂರ್ಣಗೊಳಿಸಿದ ಕೆಲವು ಪೊಲೀಸ್ ಅಧಿಕಾರಿಗಳ ವಿವರಗಳನ್ನು ಕಲೆ ಹಾಕಿದರೂ ಮುಖ್ಯಮಂತ್ರಿಗಳಿಗೆ ರಾಜಕೀಯ ಪ್ರಭಾವದ ನೈಜ ಪರಿಣಾಮ ಗೊತ್ತಾಗುತ್ತದೆ. ಸರ್ಕಾರ ರೂಪಿಸಿದ ವರ್ಗಾವಣೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಕನಿಷ್ಠ ಬದ್ಧತೆಯನ್ನು ಮುಖ್ಯಮಂತ್ರಿಯವರು ತೋರಿದರೂ ಸಾಕು, ಆಡಳಿತ ಬಿಗಿಯಾಗುತ್ತದೆ.

ಪೊಲೀಸ್ ಅಧಿಕಾರಿಗಳ ವರ್ಗಾವಣೆಯಲ್ಲಿ ಜಾತಿ, ರಾಜಕೀಯ ಒತ್ತಡ ಮತ್ತು ಹಣದ ಪ್ರಭಾವ ಸೇರಿದ ಭ್ರಷ್ಟ ವ್ಯವಸ್ಥೆ ಮುಂದುವರಿದಿರುವುದರಿಂದಲೇ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ; ಅಪರಾಧಿಗಳಿಗೆ ಶಿಕ್ಷೆಯಾಗುವ ಪ್ರಮಾಣ ಕಡಿಮೆಯಾಗುತ್ತಿದೆ.

ಮುಖ್ಯಮಂತ್ರಿ ಅವರಿಗೆ ವರ್ಗಾವಣೆಯನ್ನು ರಾಜಕೀಯ ಹಸ್ತಕ್ಷೇಪದಿಂದ ಮುಕ್ತಗೊಳಿಸಬೇಕು ಎಂಬ ಇರಾದೆ ಇದ್ದರೆ ಯಾವೊಬ್ಬ ಅಧಿಕಾರಿಯ ಪರವಾಗಿ ವಶೀಲಿ ಮಾಡದಂತೆ ಸಚಿವರೂ ಸೇರಿದಂತೆ ಎಲ್ಲ ಜನಪ್ರತಿನಿಧಿಗಳಿಗೆ ಕಟ್ಟುನಿಟ್ಟಿನ ಸೂಚನೆ ಕೊಡಲಿ. ಸಿಬ್ಬಂದಿ ವರ್ಗಾವಣೆ ನಿಯಮ ಪ್ರಕಾರವೇ ನಡೆಯುವಂತೆ ನೋಡಿಕೊಳ್ಳಲಿ. ಆಗ ಇಂಥ ಎಚ್ಚರಿಕೆಗಳಿಗೆ ಬೆಲೆ ಬರುತ್ತದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT