ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚುವರಿ ಡಿಸಿ ಅಧಿಕಾರ ಮೊಟಕು

Last Updated 14 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಇನ್ನು ಮುಂದೆ ಬೆಂಗಳೂರು ನಗರ ಜಿಲ್ಲೆಯ ವಿಶೇಷ ಜಿಲ್ಲಾಧಿಕಾರಿ ಹುದ್ದೆಗೆ ಬೇಡಿಕೆ ಕಡಿಮೆ ಆಗಬಹುದು! ಇದು ಅಚ್ಚರಿ ಅಂದರೂ ಸತ್ಯ.

ಇದುವರೆಗೂ ಜಿಲ್ಲಾಧಿಕಾರಿಗಿಂತ ಹೆಚ್ಚು `ಪವರ್‌ಫುಲ್~ ಆಗಿದ್ದ ವಿಶೇಷ ಜಿಲ್ಲಾಧಿಕಾರಿಯ ಅಧಿಕಾರವನ್ನು ಮೊಟಕುಗೊಳಿಸಿ ರಾಜ್ಯ ಸರ್ಕಾರ ಸೋಮವಾರ ಆದೇಶ ಹೊರಡಿಸಿದೆ.

ಭೂ ಪರಿವರ್ತನೆ, ಭೂಸ್ವಾಧೀನ, ಭೂ ಕಂದಾಯ ಸೇರಿದಂತೆ ಭೂ ವಿಚಾರಗಳಿಗೆ ಸಂಬಂಧಿಸಿದ ಎಲ್ಲ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದ ವಿಶೇಷ ಜಿಲ್ಲಾಧಿಕಾರಿಗೆ ಈಗ ಧಾರ್ಮಿಕ ದತ್ತಿ ಸೇರಿದಂತೆ ಇತರ ಪ್ರಮುಖವಲ್ಲದ ಜವಾಬ್ದಾರಿಗಳನ್ನು ನೀಡಲಾಗಿದೆ.

ಹೀಗಾಗಿಯೇ ಇನ್ನು ಮುಂದೆ ಈ ಹುದ್ದೆಗೆ ಬೇಡಿಕೆ ಕಡಿಮೆಯಾಗಬಹುದು. ಅತಿ ಹೆಚ್ಚು ಬೆಲೆಗೆ `ಹರಾಜು~ ಆಗುತ್ತಿದ್ದ ಈ ಹುದ್ದೆಗೆ ಬರಲು ಕೆ.ಎ.ಎಸ್ ಅಧಿಕಾರಿಗಳಲ್ಲಿ ಭಾರಿ ಪೈಪೋಟಿಯೇ ನಡೆಯುತ್ತಿತ್ತು. ರಾಜಕೀಯ ಪ್ರಭಾವ ಇರುವ ಅಥವಾ ಮುಖ್ಯಮಂತ್ರಿಯ ಆಶೀರ್ವಾದ ಇರುವವರು ಮಾತ್ರ ಈ ಹುದ್ದೆಗೇರಲು ಸಾಧ್ಯ ಇತ್ತು. ಹೀಗಾಗಿ ಅದರ ಅಧಿಕಾರಕ್ಕೆ ಕತ್ತರಿ ಹಾಕಲಾಗಿದೆ.

ಈ ರೀತಿಯ ಹುದ್ದೆ ಇಡೀ ರಾಜ್ಯದಲ್ಲಿ ಇರುವುದೇ ಒಂದು. ಬೆಂಗಳೂರು ನಗರ ಜಿಲ್ಲೆ ಬಿಟ್ಟರೆ ಬೇರೆಲ್ಲೂ ಈ ರೀತಿಯ ವ್ಯವಸ್ಥೆ ಇಲ್ಲ.

ಭೂಸುಧಾರಣೆ ಕಾಯ್ದೆ ಜಾರಿಗೂ ಮುನ್ನ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಈ ಹುದ್ದೆ ಇತ್ತು. ಭೂವಿವಾದ ಸೇರಿದಂತೆ ಪ್ರಮುಖ ಕೆಲಸಗಳನ್ನು ಆ ಹುದ್ದೆಯಲ್ಲಿದ್ದವರೇ ಮಾಡುತ್ತಿದ್ದರು. ಭೂಸುಧಾರಣಾ ಕಾಯ್ದೆ ಜಾರಿ ನಂತರ ಅದನ್ನು ಐಎಎಸ್ ಲಾಬಿ ರದ್ದುಪಡಿಸಿತ್ತು. ಆದರೆ, ರಾಜಕೀಯ ಕಾರಣಕ್ಕಾಗಿ ಬೆಂಗಳೂರು ನಗರ ಜಿಲ್ಲೆಯಲ್ಲಿ ಮಾತ್ರ ಆ ಹುದ್ದೆಯನ್ನು ಉಳಿಸಿಕೊಳ್ಳಲಾಗಿತ್ತು ಎನ್ನುತ್ತವೆ ಕಂದಾಯ ಇಲಾಖೆ ಮೂಲಗಳು.

ಈ ಹುದ್ದೆಯಲ್ಲಿದ್ದವರೇ ನಗರ ರಾಜಕಾರಣವನ್ನೂ ನಿಯಂತ್ರಿಸುತ್ತಿದ್ದರು ಎನ್ನುವ ದೂರುಗಳು ವ್ಯಾಪಕವಾಗಿದ್ದವು. ಹೀಗಾಗಿ ಆ ಹುದ್ದೆಯ ಅಧಿಕಾರವನ್ನು ಮೊಟಕುಗೊಳಿಸಿ, ಇತರ ಜಿಲ್ಲೆಗಳಲ್ಲಿ ಇರುವಂತೆ ಎಲ್ಲ ಅಧಿಕಾರವನ್ನೂ ಜಿಲ್ಲಾಧಿಕಾರಿಗೇ ವಹಿಸಲಾಗಿದೆ.

ಜಿಲ್ಲಾಧಿಕಾರಿ ಅಧೀನದಲ್ಲೇ ವಿಶೇಷ ಜಿಲ್ಲಾಧಿಕಾರಿ ಕರ್ತವ್ಯ ನಿರ್ವಹಿಸಬೇಕು. ಎಲ್ಲ ಜವಾಬ್ದಾರಿಗಳ ಉಸ್ತುವಾರಿ ಇನ್ನು ಮುಂದೆ ಜಿಲ್ಲಾಧಿಕಾರಿಯದ್ದೇ. ಆಡಳಿತದ ನೇರ ನಿಯಂತ್ರಣ ಕೂಡ ಅವರದ್ದೇ ಆಗಿರುತ್ತದೆ. ವಿಶೇಷ ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ಯಾವುದೇ ಪತ್ರ ವ್ಯವಹಾರ ಮಾಡಿದರೂ ಅದು ಜಿಲ್ಲಾಧಿಕಾರಿಗಳ ಮೂಲಕವೇ ಆಗಬೇಕು ಎನ್ನುವ ಷರತ್ತನ್ನೂ ಸರ್ಕಾರಿ ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಹೀಗಾಗಿಯೇ ಇನ್ನು ಮುಂದೆ ಜಿಲ್ಲಾಧಿಕಾರಿ ಪವರ್‌ಫುಲ್ ಆಗಲಿದ್ದಾರೆ. ಜಿಲ್ಲಾಧಿಕಾರಿಗೆ ಕಾನೂನು ಸುವ್ಯವಸ್ಥೆ ಮತ್ತು ಇತರ ನ್ಯಾಯಿಕ ವಿಚಾರಗಳು, ಭೂಸ್ವಾಧೀನ, ಕಂದಾಯ ವಸೂಲಿ, ಭೂ ಪರಿಹಾರ, ಭೂ ಪರಿವರ್ತನೆ, ಮುದ್ರಾಂಕ ಶುಲ್ಕ ಮತ್ತು ನೋಂದಣಿ, ಅಬಕಾರಿ, ಚುನಾವಣೆ, ಪೌರಾಡಳಿತ, ಆಹಾರ ಮತ್ತು ನಾಗರಿಕ ಸರಬರಾಜು ಇತ್ಯಾದಿ ಎಲ್ಲ ಪ್ರಮುಖ ಕೆಲಸಗಳನ್ನೂ ವಹಿಸಲಾಗಿದೆ.

ವಿಶೇಷ ಜಿಲ್ಲಾಧಿಕಾರಿಗೆ ಧಾರ್ಮಿಕ ದತ್ತಿ ಸಂಸ್ಥೆಗಳಿಗೆ ಸಂಬಂಧಿಸಿದ ಎಲ್ಲ ವಿಷಯಗಳು, ಜಾನುವಾರು ಸೇರಿದಂತೆ ಕೃಷಿ ಸಂಬಂಧಿ ಗಣತಿ, ಜನಗಣತಿ, ಅರಣ್ಯ, ಬಾಡಿಗೆ ನಿಯಂತ್ರಣ ಕಾಯ್ದೆ, ನೀರಾವರಿ ಮತ್ತು ಜಿಲ್ಲಾಧಿಕಾರಿ ಸೂಚಿಸಿದ ಇತರ ಕರ್ತವ್ಯಗಳು ಎಂದು ನಮೂದಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT